Mysore
26
haze

Social Media

ಗುರುವಾರ, 25 ಡಿಸೆಂಬರ್ 2025
Light
Dark

ಸಂಘರ್ಷದ ನಡುವೆ ಅಭಿಮಾನಕ್ಕೂ ಕಾರಣವಿದೆ..!

ಹುಲಿ, ಚಿರತೆ, ಆನೆಗಳ ಸಂಖ್ಯೆಯಲ್ಲಿ ಕರುನಾಡು ಮುಂಚೂಣಿಯಲ್ಲಿ

ಲೋಕೇಶ್ ಕಾಯರ್ಗ

ರಾಜ್ಯದಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ಹೆಚ್ಚುತ್ತಲೇ ಸಾಗಿದೆ. ಹಳೇ ಮೈಸೂರು ಮತ್ತು ಕೊಡಗು ಭಾಗಗಳಲ್ಲಿ ಆನೆ, ಹುಲಿ, ಚಿರತೆಗಳ ದಾಳಿ ಪ್ರತಿದಿನವೂ ಘಟಿಸುತ್ತಿವೆ. ಇದೇ ರೀತಿ ಈ ವನ್ಯಪ್ರಾಣಿಗಳು ಸೆರೆಯಾದ, ಅಕಾಲಿಕ ಸಾವು ಕಂಡ ಪ್ರಕ ರಣಗಳೂ ಹೆಚ್ಚುತ್ತಿವೆ. ಕಾಡು ಕಿರಿದಾಗಿ ಮನುಷ್ಯರ ನೆಲೆ ವಿಸ್ತರಣೆಯಾಗಿರುವುದು ಇದಕ್ಕೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಆದರೆ ರಾಜ್ಯದಲ್ಲಿ ಕಳೆದ ಒಂದು ದಶಕದಲ್ಲಿ ಈ ವನ್ಯಮೃಗಗಳ ಸಂತತಿ ಹೆಚ್ಚಾಗಿದೆ. ಇದೂ ಸಂಘರ್ಷದ ಕಾರಣಗಳಲ್ಲೊಂದು. ಕರ್ನಾಟಕ ಈ ಮೂರು ವನ್ಯಮೃಗಗಳ ಪ್ರಮುಖ ನೆಲೆಯಾಗಿರುವುದು ನೋವಿನ ನಡುವೆಯೂ ಅಭಿಮಾನಪಡುವ ಸಂಗತಿ.

ದೇಶದ ಶೇ.22ರಷ್ಟು ಆನೆಗಳು, ಶೇ.18 ರಷ್ಟು ಹುಲಿ ಮತ್ತು ಶೇ.14ರಷ್ಟು ಚಿರತೆಗಳಿಗೆ ಕರ್ನಾಟಕ ಆಸರೆಯಾಗಿ ನಿಂತಿದೆ. ಉಳಿದ ಯಾವ ರಾಜ್ಯಗಳಲ್ಲೂ ಕರ್ನಾಟಕದಲ್ಲಿ ರುವಷ್ಟು ವನ್ಯಪ್ರಭೇದವಿಲ್ಲ ಎನ್ನುವುದು ಕನ್ನಡಿಗರೆಲ್ಲರೂ ಅಭಿಮಾನಪಡುವ ಸಂಗತಿ.ವಿಶ್ವದ ಶೇ.75ರಷ್ಟು ಹುಲಿಗಳು ಇರುವುದು ಭಾರತ ದಲ್ಲಿ. ಈ ಪೈಕಿ ಅತಿ ಹೆಚ್ಚು ಹುಲಿಗಳಿರುವುದು ಮಧ್ಯ ಪ್ರದೇಶ ಮತ್ತು ಕರ್ನಾಟಕದಲ್ಲಿ. ಇದೇ ರೀತಿ ಅತಿ ಹೆಚ್ಚು ಚಿರತೆಗಳಿರುವುದೂ ಮಧ್ಯಪ್ರದೇಶ ಮತ್ತು ಕರ್ನಾಟಕ ದಲ್ಲಿ. ಇನ್ನು ದೇಶದಲ್ಲಿಯೇ ಅತಿ ಹೆಚ್ಚು ಆನೆಗಳಿರುವುದು ಕರುನಾಡಿನ ಹೆಗ್ಗಳಿಕೆ.

ಇತ್ತೀಚಿನ ವರದಿ ಪ್ರಕಾರ ಇಡೀ ವಿಶ್ವದಲ್ಲಿರುವ ಹುಲಿ ಗಳ ಸಂಖ್ಯೆ ಕೇವಲ 4500. ಹೀಗಾಗಿ ಹುಲಿಯನ್ನು ಅವ ನತಿಯ ಅಂಚಿನಲ್ಲಿರುವ ಪ್ರಾಣಿ ಎಂದು ಗುರುತಿಸಲಾ ಗಿದೆ. ಈ ಪೈಕಿ ಶೇ.75ರಷ್ಟು ಅಂದರೆ ಸುಮಾರು 3000 ಹುಲಿಗಳು ಭಾರತದಲ್ಲಿವೆ. 2022ರ ಹುಲಿ ಗಣತಿ ಪ್ರಕಾರ ಮಧ್ಯಪ್ರದೇಶದಲ್ಲಿ 526 ಹುಲಿಗಳಿದ್ದರೆ ಕರ್ನಾಟಕದಲ್ಲಿ 524 ಹುಲಿಗಳಿವೆ. ಮುಂದಿನ ವರ್ಷ ರಾಜ್ಯ ಮೊದಲ ಸ್ಥಾನ ದಲ್ಲಿ ನಿಲ್ಲುವುದು ಎಂಬ ವಿಶ್ವಾಸ ವನ್ಯಪ್ರೇಮಿಗಳಲ್ಲಿದೆ.

ಇದೇ ರೀತಿ ವಿಶ್ವದ ಶೇ.60 ರಷ್ಟು ಏಷ್ಯಾ ಮೂಲದ ಆನೆಗಳಿಗೆ ಭಾರತ ತಾಣವಾಗಿದೆ. ಈ ಪೈಕಿ ಶೇ.22ರಷ್ಟು ಆನೆಗಳಿಗೆ ಕರ್ನಾಟಕ ನೆಲೆಯಾಗಿದೆ. ದೇಶದಲ್ಲಿರುವ ಸುಮಾರು 27662 (2017ರ ಗಣತಿ) ಆನೆಗಳ ಪೈಕಿ ಅತಿ ಹೆಚ್ಚು ಅಂದರೆ 6049 ಆನೆಗಳು ಕರ್ನಾಟಕದಲ್ಲಿವೆ.

ಇನ್ನು ಈಗ ಅತಿ ಹೆಚ್ಚು ಸುದ್ದಿಯಲ್ಲಿರುವ ಚಿರತೆಗಳ ಸಂಖ್ಯೆಯಲ್ಲಿ  ಕರ್ನಾಟಕಕ್ಕೆ ಎರಡನೇ ಸ್ಥಾನ.  2014 ರಲ್ಲಿ ರಾಜ್ಯದಲ್ಲಿ 1131ಚಿರತೆಗಳಿದ್ದವು. 2018ರ ವೇಳೆಗೆ ಅದು 1783 ದಾಟಿದೆ.  ಅತಿ ಹೆಚ್ಚು ಚಿರತೆಗಳಿರುವ  ಮಧ್ಯಪ್ರದೇಶದಲ್ಲಿ 2014ರ ವೇಳೆಗೆ 1817 ಚಿರತೆಗಳಿ ದ್ದವು. ಈಗ ಅದು 3421 ದಾಟಿದೆ. ಕರ್ನಾಟಕ ಮತ್ತು ಮಧ್ಯ ಪ್ರದೇಶದಲ್ಲಿ 2014ರಿಂದ 2018ರ ನಡುವೆ ಚಿರತೆಯ ಸಂಖ್ಯೆ ಶೇ.50ಕ್ಕಿಂತ ಹೆಚ್ಚಾಗಿರುವುದು ವಿಶೇಷ.ಆದರೆ  2014ರ ವೇಳೆಗೆ 1355 ಚಿರತೆಗಳೊಂದಿಗೆ 2ನೇ ಸ್ಥಾನದಲ್ಲಿದ್ದ ಗುಜರಾತ್‌ನಲ್ಲಿ ಚಿರತೆಗಳ ಸಂಖ್ಯೆ ಇಷ್ಟೊಂದು  ಪ್ರಮಾಣದಲ್ಲಿ ಏರಿಕೆ ಆಗಿಲ್ಲ. 2018ರ ಗಣತಿ ವೇಳೆಗೆ ಅಲ್ಲಿ  1395 ಚಿರತೆಗಳಿದ್ದು, ಕೇವಲ 40 ಚಿರತೆಗಳು ಸೇರ್ಪಡೆಯಾಗಿವೆ. 2014 ಮತ್ತು 2018ರ ಮಧ್ಯೆ ಮಧ್ಯಪ್ರದೇಶದಲ್ಲಿ ಚಿರತೆ ಸಂಖ್ಯೆ 1604ರಷ್ಟು ಏರಿಕೆ ಕಂಡರೆ ಕರ್ನಾಟಕದಲ್ಲಿ ಚಿರತೆ ಸಂತತಿ 650ಕ್ಕೂ ಹೆಚ್ಚು ಏರಿಕೆಯಾಗಿವೆ.

ಗುಜರಾತಿನಲ್ಲಿ ಇದೇ ಪ್ರಮಾಣದಲ್ಲಿ ಏರಿಕೆ ಕಾಣದಿರಲು ಕಾರಣವಿದೆ. ಈಗ ಕರ್ನಾಟಕದಲ್ಲಿ ಚಿರತೆ ಹಾವಳಿ ಕಾಣಿಸಿರುವಂತೆ  ಗುಜರಾತಿನಲ್ಲೂ ಚಿರತೆ ಉಪಟಳ ವ್ಯಾಪಕವಾಗಿದೆ. ಚಿರತೆಗಳನ್ನು ಹಿಡಿದು ಸಂತಾನ ಹರಣ ಚಿಕಿತ್ಸೆ ನಡೆಸಬೇಕೆಂಬ ಆಗ್ರಹದ ನಡುವೆ ಅಲ್ಲಿ  ಚಿರತೆಗಳ ಸಂತತಿ ಏರಿಕೆಗೂ ಕಡಿವಾಣ ಬಿದ್ದಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!