Mysore
19
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಪ್ರತಿಷ್ಠಿತ ಪ್ರಶಸ್ತಿ ಪುರಸ್ಕೃತರಾದ ಗಡಿ ಜಿಲ್ಲೆಯ ಪ್ರಥಮ ಹಿರಿಯ ಕವಿ

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಕವಿ  ಮೂಡ್ನಾಕೂಡು ಚಿನ್ನಸ್ವಾಮಿ ಭಾಜನ

ಚಾಮರಾಜನಗರ ಗಡಿ ಜಿಲ್ಲೆಯ ದಲಿತ ಕವಿ ಹಾಗೂ ಬರಹಗಾರರಾದ ಮೂಡ್ನಾಕೂಡು ಚಿನ್ನಸ್ವಾಮಿ ಅವರು ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮೊದಲ ಬಾರಿಗೆ ಜಿಲ್ಲೆಯ ಹಿರಿಯ ಕವಿಯೊಬ್ಬರು ಈ ಪ್ರಶಸ್ತಿ ಪುರಸ್ಕೃತರಾದ ಕೀರ್ತಿಗೆ ಪಾತ್ರರಾಗಿದ್ದಾರೆ.

ಮತ್ತೊಬ್ಬ ದಲಿತ ಸಾಹಿತಿ ದೇವನೂರು ಮಹದೇವ ಅವರಿಗೆ ಈ ಪ್ರಶಸ್ತಿ ದೊರೆತ 32 ವರ್ಷಗಳ ನಂತರ ಸೂಕ್ಷ ಸಂವೇದನಾಶೀಲ ಕವಿ ಮೂಡ್ನಾಕೂಡು ಚಿನ್ನಸ್ವಾಮಿ ಅವರಿಗೆ ಲಭ್ಯವಾಗಿದೆ. ಕಳೆದ ವರ್ಷ ಇದೇ ಜಿಲ್ಲೆಯ ಕಿರಿಯ ಬರಹಗಾರ ಸ್ವಾಮಿಪೊನ್ನಾಚಿ ಅವರಿಗೆ ಕೇಂದ್ರ ಸಾಹಿತ್ಯ ಯುವ ಪ್ರಶಸ್ತಿ ಲಭಿಸಿತ್ತು.

ಗದಗದ ಲಡಾಯಿ ಪ್ರಕಾಶನವು ಪ್ರಕಟಿಸಿರುವ ಚಿನ್ನಸ್ವಾಮಿ ಅವರ ‘ಬಹುತ್ವದ ಭಾರತ ಮತ್ತು ಬೌದ್ದ ತಾತ್ವಿಕತೆ’ ಎಂಬ ವಿವಿಧ ಪ್ರಬಂಧಗಳ ಸಂಕಲನಕ್ಕೆ ಪ್ರಶಸ್ತಿ ದೊರಕಿದೆ. 1 ಲಕ್ಷ ರೂ. ನಗದು ಮತ್ತು ಪ್ರಶಸ್ತಿ ಫಲಕ ಹೊಂದಿರುತ್ತದೆ. 2023ರ ಮಾರ್ಚ್‌ನಲ್ಲಿ ದೆಹಲಿಯಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಬುದ್ದ, ಬಸವ, ಅಂಬೇಡ್ಕರ್ ಅವರ ವಿಚಾರಧಾರೆಗಳಿಂದ ಪ್ರೇರಿತರಾಗಿ ಮೂಡ್ನಾಕೂಡು ಚಿನ್ನಸ್ವಾಮಿ ಎಂಬ ಕಾವ್ಯನಾಮದಲ್ಲಿ ಕವಿತೆ, ಗದ್ಯ ಬರೆದಿದ್ದಾರೆ. ಚಾಮರಾಜನಗರ ತಾಲ್ಲೂಕಿನ ಮೂಡ್ನಾಕೂಡು ಗ್ರಾಮದ ಪೊಲೀಸ್ ಪೇದೆಯವರ ಮಗನಾದ ಚಿನ್ನಸ್ವಾಮಿ ಅವರು ಪ್ರಾಥಮಿಕ ಶಿಕ್ಷಣವನ್ನು ಮೂಡ್ನಾಕೂಡು, ದೊಡ್ಡರಾಯಪೇಟೆಯಲ್ಲಿ, ಪ್ರೌಢಶಿಕ್ಷಣವನ್ನು ಚಾ.ನಗರದಲ್ಲಿ ಪೂರೈಸಿದರು. ಮೈಸೂರಿನ ಡಿ.ಬನುಮಯ್ಯ ಕಾಲೇಜಿನಲ್ಲಿ ವಾಣಿಜ್ಯ ಪದವಿ ಪಡೆದಿದ್ದಾರೆ.

ನಂತರ ಮೈಸೂರಿನಲ್ಲಿಯೇ ಎಂ.ಕಾಂ., ಎಂ.ಎ. (ಕನ್ನಡ), ಡಿ.ಲಿಟ್. ಪದವೀಧರರಾದ ಇವರು ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ಹಿರಿಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿ 2014ರ ಮಾರ್ಚ್‌ನಲ್ಲಿ ನಿವೃತ್ತಿ ಹೊಂದಿದ್ದಾರೆ. 68 ವರ್ಷದ ಇವರು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಪತ್ನಿ, ಇಬ್ಬರು ಪುತ್ರರ ಜೊತೆ ವಿಶ್ರಾಂತ ಬದುಕು ಸಾಗಿಸುತ್ತಿದ್ದಾರೆ.

ಕೆಎಸ್‌ಆರ್‌ಟಿಸಿಯಲ್ಲಿ ಲೆಕ್ಕಾಧಿಕಾರಿಯಾಗಿದ್ದ ಇವರ ಪ್ರವೃತ್ತಿ ಸಾಹಿತ್ಯ, ಸಂಸ್ಕೃತಿ, ಸಮಾಜ ಸೇವೆ ಮತ್ತು ರಂಗಭೂಮಿ ಕ್ಷೇತ್ರಗಳಲ್ಲಿ ಚಾಚಿಕೊಂಡಿದೆ. ಇವರ ಪ್ರಮುಖ ಆಸಕ್ತಿ ಕವಿತೆಯಾದರೂ ಕತೆ, ನಾಟಕ, ಅನುವಾದ, ಸಂಪಾದನೆ ಸೇರಿದಂತೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ದುಡಿದು ಇದುವರೆಗೆ 40  ಪುಸ್ತಕಗಳನ್ನು ಹೊರತಂದಿದ್ದಾರೆ.

ಮತ್ತೆ ಮಳೆ ಬರುವ ಮುನ್ನ, ನಾನೊಂದು ಮರವಾಗಿದ್ದರೆ, ಚಪ್ಪಲಿ ಮತ್ತು ನಾನು, ಬುದ್ಧ ಬೆಳದಿಂಗಳು, ಪ್ರಮುಖ ಕವಿತಾ ಸಂಕಲನಗಳು. ಮೋಹದ ದೀಪ, ಪಾಪಪ್ರಜ್ಞೆ ಕಥೆಗಳು, ಕೆಂಡ ಮಂಡಲ, ಬಹುರೂಪಿ-ನಾಟಕಗಳು ಹಾಗೂ ವೈಚಾರಿಕ ಬರಹಗಳು, ಅಪರಿಮಿತದ ಕತ್ತಲೆ, ಬಹುತ್ವದ ಭಾರತ ಮತ್ತು ಬೌದ್ಧ ತಾತ್ವಿಕತೆ ಇವರ ಪ್ರಮುಖ ಗದ್ಯ ಕೃತಿಗಳು.

ಇವರ ಕವಿತೆಗಳು ಅನೇಕ ಭಾರತೀಯ ಭಾಷೆಗಳೂ ಸೇರಿದಂತೆ ಇಂಗ್ಲೀಷ್, ಸ್ಪ್ಯಾನಿಷ್, ಫ್ರೆಂಚ್ ಹಾಗೂ ಹೀಬ್ರೂ ಭಾಷೆಗಳಿಗೆ ಅನುವಾದಗೊಂಡು ಕೊಲಂಬಿಯಾ, ಇಸ್ರೇಲ್ ಹಾಗೂ ಆಸ್ಟ್ರಿಯಾ ದೇಶಗಳ ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ. ವೆನೆಜುಯೇಲಾ ದೇಶದ ಸರ್ಕಾರ 2005 ರಲ್ಲಿ ವಿಶ್ವ ಕಾವ್ಯ ಮಾಲೆ ಅಡಿಯಲ್ಲಿ ‘ಪೊಯೆಮಾಸ್ – ಮೂಡ್ನಾಕೂಡು’ ಎಂಬ ಇವರ ಸ್ಪ್ಯಾನಿಷ್ ಅನುವಾದಿತ ಕವಿತೆಗಳನ್ನು ಪ್ರಕಟಿಸಿದೆ. ಸ್ಪ್ಯಾನಿಷ್ ಭಾಷೆಗೆ ಗ್ರಂಥರೂಪದಲ್ಲಿ ಪ್ರಕಟಗೊಂಡ ಮೊದಲ ಕನ್ನಡ ಕವಿ ಎಂಬ ಹೆಗ್ಗಳಿಕೆ ಇವರದ್ದಾಗಿದೆ.

ಲಭ್ಯವಾದ ಪ್ರಶಸ್ತಿಗಳು : ಇವರಿಗೆ ಮಾರಂಬಳ್ಳಿ ಕಾವ್ಯ ಶಿರಸಂಗಿ ಲಿಂಗರಾಜ ಸಾಹಿತ್ಯ, ಬೇಂದ್ರೆ ಕಾವ್ಯ, ಪೆರಿಯಾರ್ ಪ್ರಶಸ್ತಿಗಳು ಸೇರಿ ಹಲವು ಪ್ರಶಸ್ತಿ, ಪುರಸ್ಕಾರಗಳೂ ಸಂದಿವೆ. 2009 ರಲ್ಲಿ ಪ್ರತಿಷ್ಠಿತ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಹಾಗೂ 2014 ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

2010ರ ಫೆಬ್ರವರಿಯಲ್ಲಿ ಚಾಮರಾಜನಗರ 2 ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ, ಏಪ್ರಿಲ್ 2011 ರಲ್ಲಿ ಭಾಲ್ಕಿಯಲ್ಲಿ ನಡೆದ ಕಲ್ಯಾಣ ನಾಡಿನ ಶರಣ ಸಮ್ಮೇಳನದಲ್ಲಿ ಮತ್ತು ಜೂನ್ 2011 ರಲ್ಲಿ ಕೊಪ್ಪಳದಲ್ಲಿ ನಡೆದ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಸರ್ವಾಧ್ಯಕ್ಷರಾಗಿ ಗೌರವಿಸಲ್ಪಟ್ಟಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ