Mysore
27
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಬದುಕಿನ ರಗಳೆಗಳಿಗೆ ದಸರೆಯ ತಂಗಾಳಿ

*ಪ್ರತಿಭಾ ನಂದಕುವಾರ್

‘‘ನವರಾತ್ರಿ ಬಂತು, ಅಟ್ಟದ ಮೇಲಿಂದ ಗೊಂಬೆ ಪೆಟ್ಟಿಗೆ ಇಳಿಸಬೇಕು, ಪಟ್ಟದ ಗೊಂಬೆಗೆ ಹೊಸ ಅಲಂಕಾರ ಮಾಡಬೇಕು, ಗೊಂಬೆ ನೋಡಲು ಬರುವ ಮಕ್ಕಳಿಗೆ ಗೊಂಬೆ ಬಾಗಿನ ರೆಡಿ ಮಾಡಬೇಕು, ಬರುವ ನೆಂಟರಿಗೆ ವ್ಯವಸ್ಥೆ ಮಾಡಬೇಕು …’’

ನವರಾತ್ರಿ ಬಂತೆಂದರೆ ಜನಗಳಿಗೆ ಸಡಗರ. ಆಯುಧ ಪೂಜೆ, ವಾಹನಗಳ ಪೂಜೆ, ಸರಸ್ವತಿ ಪೂಜೆ, ದುರ್ಗಾ ಪೂಜೆ ಕೊನೆಗೆ ವಿಜಯದಶಮಿ. ಗೊಂಬೆ ಕೂರಿಸುವುದರಲ್ಲಿ ಅಕ್ಕಪಕ್ಕದವರನ್ನು ಮೀರಿಸುವ ಹುಮ್ಮಸ್ಸು. ತಮ್ಮ ಕೈಚಳಕವನ್ನು ಮೆರೆಸುವ ಅದ್ಭುತ ಅವಕಾಶ. ಆ ಗೊಂಬೆ ಸಂಗ್ರಹವೇ ದೊಡ್ಡ ಜಗತ್ತು. ಕಾಲಾಂತರದಲ್ಲಿ ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು ಥರಥರದ ಆಟೋಮ್ಯಾಟಿಕ್ ಚಲನೆಯ ಪ್ರಯೋಗಗಳು. ಈ ಸಲ ಗೆಳತಿಯರು ತಮ್ಮ ಮನೆಯಲ್ಲಿ ಚಂದ್ರಯಾನ ೩ ರ ಉಡಾವಣೆಯ ಥೀಮ್ ಇಟ್ಟುಕೊಂಡು ಗೊಂಬೆ ಕೂರಿಸುವುದಾಗಿ ಕೊಚ್ಚಿಕೊಂಡರು.

ಒಂದು ತಿಂಗಳಿಂದ ತಯಾರಿ ಶುರುವಾಗಿದೆ. ಸಾವಿರಾರು ರೂಪಾಯಿ – ಕೆಲವರು ಲಕ್ಷ- ಖರ್ಚು. ಒಬ್ಬರಂತೂ ದಸರಾ ಗೊಂಬೆ ಕೂರಿಸಲು ಸ್ಪೆಷಲ್ ಇವೆಂಟ್ ಮಾಡುವವರನ್ನೇ ನೇಮಿಸಿಕೊಂಡು ಇಡೀ ಮನೆಯನ್ನೇ ಒಂದು ಪ್ರದರ್ಶನವಾಗಿಸಿದ್ದಾರೆ. ಅದಕ್ಕೊಂದು ಆಹ್ವಾನ ಪತ್ರಿಕೆಯನ್ನೂ ಮುದ್ರಿಸಿ ಮದುವೆಗೆ ಕರೆದಂತೆ ಕರೆದಿದ್ದಾರೆ. ಅವರ ಗೊಂಬೆ ಬಾಗಿನದ ಬಗ್ಗೆ ಎಲ್ಲರಿಗೂ ಕುತೂಹಲ.ಇವರ ಅತೀ ಅಬ್ಬರದ ಸಂಭ್ರಮಕ್ಕೆ ವಿರುದ್ಧವಾಗಿ ಇನ್ನೊಂದು ರೀತಿಯ ಜನರಿದ್ದಾರೆ.

‘‘ಅಯ್ಯೋ… ನಾವು ಅದನ್ನೆಲ್ಲಾ ಬಿಟ್ಟುಬಿಟ್ಟಿದ್ದೀವಪ್ಪಾ … ಸುಮ್ನೆ ರೇಜಿಗೆ… ಹಬ್ಬ ಮಾಡದಿದ್ರೆ ಏನೀಗ? ನಮ್ಮನೇಲಿದ್ದ ಗೊಂಬೆಗಳನ್ನೆಲ್ಲ ಕೊಟ್ಟುಬಿಟ್ವಿ… ಅದನ್ನ ಇಡಕ್ಕೆ ಜಾಗ ಎಲ್ಲಿದೆ?’’
‘‘ಆಂ?!! ಕೊಟ್ಟುಬಿಟ್ರಾ?! ಇನ್ನೂರು ವರ್ಷದ ದಂತದ ಗೊಂಬೆ ಎಲ್ಲ ಇತ್ತಲ್ರಿ ನಿಮ್ಮನೇಲಿ?‘
‘ಅದಾ… ಅದ್ನ ನನ್ನ ಮಗ ಅಮೆರಿಕದಲ್ಲಿ ಹೆರಿಟೇಜ್ ಆಕ್ಷನ್‌ನಲ್ಲಿ ಮಾರಿಬಿಟ್ಟ? ನಾಲ್ಕು ಲಕ್ಷಕ್ಕೆ ಯಾರೋ ತಗೊಂಡ್ರು…’’
ಹೀಗೆ ಯೋಚಿಸುವ ಒಂದು ಗುಂಪಿನ ಜನರು ವೇದಿಕೆಯ ಮೇಲಿಂದ ಸಂಸ್ಕೃತಿ ರಕ್ಷಣೆ ಬಗ್ಗೆ ಭಾಷಣ ಬಿಗಿಯುತ್ತಾರೆ. ಆದರೆ ಒಂದೇ ಒಂದು ಸಣ್ಣ ಆಚರಣೆಯನ್ನೂ ಉಳಿಸಿಕೊಳ್ಳಲು ಸಿದ್ಧರಿಲ್ಲ. ಬೇರೆಯವರಿಗೆ ಬೇಕಾದರೆ ಲೆಕ್ಚರ್ ಕೊಡುತ್ತಾರೆ, ತಾವು ಮಾತ್ರ ಯಾವುದೇ ‘ತೊಂದರೆ’ಗೆ ಸಿಕ್ಕಿ ಹಾಕಿಕೊಳ್ಳಲು ಇಷ್ಟಪಡುವುದಿಲ್ಲ. ಆ ದೊಡ್ಡ ‘ತೊಂದರೆ’ ಎನ್ನುವುದು ಮಾರ್ಕೆಟ್‌ಗೆ ಹೋಗಿ ಮಾವಿನ ಸೊಪ್ಪು, ಹೂ, ಹಣ್ಣು ತರುವುದೇ ಆಗಿರಲಿ ಅದನ್ನೂ ಮಾಡಲು ರೆಡಿ ಇರುವುದಿಲ್ಲ ಇವರು. ಆದರೆ ಎದುರು ಮನೆಯವರ ಪ್ಲಾಸ್ಟಿಕ್ ತೋರಣದ ಬಗ್ಗೆ ಮಾತ್ರ ಆಡಿಕೊಂಡು ಟೀಕಿಸಿ ಮೂಗೆಳೆಯುತ್ತಾರೆ. ತೋರಣ ಕಟ್ಟುವುದು ಸಂಸ್ಕೃತಿ – ಅದು ಪ್ಲಾಸ್ಟಿಕ್ಕಿನದ್ದಾಗಿರಲಿ ಕಾಗದದ್ದಾಗಿರಲಿ ಸೊಪ್ಪಿನದೇ ಆಗಿರಲಿ. ತೋರಣವನ್ನು ಯಾಕೆ ಕಟ್ಟಬೇಕು, ರಂಗೋಲಿ ಯಾಕೆ ಬಿಡಿಸಬೇಕು, ಗೊಂಬೆ ಯಾಕೆ ಕೂರಿಸಬೇಕು, ಜಂಬೂಸವಾರಿ ಯಾಕೆ ಬೇಕು ಎಂದು ಪ್ರಶ್ನಿಸುತ್ತಾ ಎಲ್ಲವನ್ನೂ ಕೈಬಿಟ್ಟು ತಾವು ಕಂದಾಚಾರವನ್ನು ಪಾಲಿಸದ ಮಹಾ ಪ್ರಗತಿಪರರೆಂದು ಭ್ರಮಿಸುತ್ತಾ ಕಂಟಕರಾಗಿರುತ್ತಾರೆ. ಇವರು ಸೋಷಿಯಲ್ ಮೀಡಿಗಯಾ ಆಕ್ಟಿವಿಸ್ಟ್‌ಗಳ ಥರ. ಸಂವಿಧಾನದಲ್ಲಿ ಸರ್ಕಾರವು ಧಾರ್ಮಿಕ ಆಚರಣೆಗಳನ್ನು ಮಾಡುವಂತಿಲ್ಲ ಎಂದು ಹೇಳಿದೆ ಎನ್ನುವುದನ್ನು ಎತ್ತಿ ಹಿಡಿದು ದಸರಾ ಹಬ್ಬವನ್ನು ಸರ್ಕಾರ ನಾಡಹಬ್ಬವಾಗಿ ಆಚರಿಸಬಾರದು ಎಂದು ಪ್ರತಿಪಾದಿಸುತ್ತಾರೆ. ಆದರೆ ಅದು ಪ್ರವಾಸಿಗರನ್ನು ಸೆಳೆಯುವ ನಾಡಹಬ್ಬವಾಗಿ ರಾಜ್ಯಕ್ಕೆ ಆದಾಯ ತರುತ್ತದೆ ಎನ್ನುವುದನ್ನು ಲೆಕ್ಕಿಸುವುದಿಲ್ಲ. ಅರಮನೆಗೆ ಹಾಕುವ ವಿದ್ಯುತ್ ದೀಪದಿಂದ ಕರೆಂಟ್ ವೇಸ್ಟು ಅನ್ನುತ್ತಾರೆ. ಜಂಬೂಸವಾರಿಗೆ ಆನೆಗಳನ್ನು ತಂದು ಪ್ರಾಣಿ ಹಿಂಸೆ ಮಾಡುತ್ತಾರೆ ಅನ್ನುತ್ತಾರೆ. ಸ್ಥಳೀಯ ಕಲಾವಿದರು ಕಳಪೆ ಅನ್ನುತ್ತಾರೆ. ಆದರೆ ಧಾರಾಳ ದುಡ್ಡುಕೊಟ್ಟು ಹೊರಗಿನಿಂದ ಕಲಾವಿದರನ್ನು ಕರೆಸಬಾರದಿತ್ತು ಅನ್ನುತ್ತಾರೆ. ಎಲ್ಲದರ ಕುರಿತೂ ಇವರಿಗೆ ಸಮಸ್ಯೆ ಇದೆ.

ಇವೆರಡರ ನಡುವೆ ಇರುವ ಗುಂಪು ಖಡಕ್ ನಂಬಿಕೆಯವರು. ತಮ್ಮ ಪಾಡಿಗೆ ತಾವು ಸಂಪ್ರದಾಯವನ್ನೂ ಪಾಲಿಸಬೇಕು ಆದರೆ ಅದು ನಮ್ಮನ್ನು ಉಸಿರುಗಟ್ಟಿಸಲೂಬಾರದು ಎಂದು ನಂಬಿರುವವರು. ನವರಾತ್ರಿಯಲ್ಲಿ ಒಂಬತ್ತು ದಿನಗಳ ಕಾಲ ಅಖಂಡ ದೀಪ ಹಚ್ಚಿರುವುದು, ಶ್ರೀ ದೇವಿ ಮಹಾತ್ಮೆಯ ಪಠಣ ಅಥವಾ ಚಂಡೀಪಾಠ, ಸಪ್ತಶತೀ ಪಾಠ, ದೇವಿಭಾಗವತ, ಬ್ರಹ್ಮಾಂಡ ಪುರಾಣದಲ್ಲಿನ ಲಲಿತೋಪಾಖ್ಯಾನವನ್ನು ಕೇಳುವುದು, ಲಲಿತಾ ಪೂಜೆ, ಸರಸ್ವತಿ ಪೂಜೆ, ಉಪವಾಸ, ಜಾಗರಣೆ ಮುಂತಾಗಿ ಆಚರಿಸುವುದು. ಪ್ರತಿ ದಿನ ಬೇರೆ ಬೇರೆ ರೀತಿಯ ಸಿಹಿ ಮತ್ತು ಖಾರ ತಿಂಡಿಗಳನ್ನು ಜೊತೆಗೆ ಹಬ್ಬದ ಅಡಿಗೆ ಮಾಡುವುದು. ಗೊಂಬೆ ನೋಡಲು ಬರುವ ಮಕ್ಕಳಿಗೆ ಕೊಡಲು ಗೊಂಬೆ ಬಾಗಿನ ಸಿದ್ಧಪಡಿಸುವುದು.

ವಾಸ್ತವವಾಗಿ ಹಿಂದೆಂದಿಗಿಂತ ಇಂದು ಧಾರ್ಮಿಕ ಆಚರಣೆಗಳ ಬಗ್ಗೆ ವಿಪರೀತ ಹುಚ್ಚು ಉಂಟಾಗಿದೆ. ದೇವಸ್ಥಾನಗಳಲ್ಲಿ ವಿಶೇಷ ದಿನಗಳಲ್ಲಿ ಕಂಡುಬರುವ ನೂಕುನುಗ್ಗಲು ನೋಡಿದರೆ ದಿಗ್ಭ್ರಮೆ ಆಗುತ್ತದೆ. ರಥೋತ್ಸವಗಳಲ್ಲಿ ಬರುವ ಜನರ ಸುನಾಮಿ ನೋಡಿದರೆ ಮಾತ್ರ ನಂಬುವಂತಹದು. ಇನ್ನು ‘ದೇವಮಾನವರು’ಗಳು ಏರ್ಪಡಿಸುವ ‘ಇವೆಂಟ್’ಗಳಂತೂ ಮಿಂಚಿನಂತೆ ಬುಕ್ ಆಗುತ್ತವೆ. ಟೆಕ್ಕಿಗಳು ಇವುಗಳಿಗೆ ಮುಗಿಬಿದ್ದು ಹೋಗುವುದೇನು, ಭಾಗವಹಿಸಿದ ‘ವರ್ಕ್ ಶಾಪ್’ಗಳ ಬಗ್ಗೆ, ನಡೆಸಿಕೊಡುವ ಗುರುಗಳ ಬಗ್ಗೆ ಅತಿ ಅಭಿಮಾನ ಗರ್ವದಿಂದ ಹೇಳಿಕೊಳ್ಳುವುದೇನು..! ನಾವು ಯಾವ ಯುಗದಲ್ಲಿದ್ದೇವೆ ಎಂದು ಭ್ರಮೆಯಾಗುವಷ್ಟು ಅಪ್ಪಟ ವಾಸ್ತವ.

ಇದಕ್ಕೆ ಕಾರಣವೇನು ಎಂದು ಪರಿಶೀಲಿಸಿದರೆ ತಿಳಿಯುತ್ತದೆ: ಅವರಿಗೆ ಅದೊಂದು ಸಪೋರ್ಟ್ ಸಿಸ್ಟಮ್. ಕಂಗಾಲಾದ ಬದುಕಿಗೆ ಎಲ್ಲೋ ಒಂದು ಕಡೆ ಸಾಂತ್ವನ ನೀಡುವ, ಭರವಸೆ ಮೂಡಿಸುವ, ಬೆನ್ನು ತಟ್ಟಿ ಪ್ರೋತ್ಸಾಹಿಸುವ ಆಸರೆಯಾಗಿದೆ ಈ ನಂಬಿಕೆ. ಇಂದಿನ ಜನರ ಈ ಅಗತ್ಯವನ್ನು ಪೂರೈಸಲೆಂದೇ ಇಂದಿನ ಧಾರ್ಮಿಕ ಆಚರಣೆಯ ವ್ಯವಸ್ಥೆ ಹಗಲಿರುಳು ಕಾರ್ಯನಿರತವಾಗಿರುತ್ತದೆ. ನವರಾತ್ರಿಯೂ ಅದಕ್ಕೆ ಹೊರತಲ್ಲ. ಹಾಗಾಗಿ ದಸರೆುಂಲ್ಲಿ ದೇವಿುಂ ಕೃಪೆಗೆ ಪಾತ್ರರಾಗಿರಿ, ನಿಶ್ಚಿಂತರಾಗಿರಿ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ