Mysore
23
broken clouds

Social Media

ಬುಧವಾರ, 10 ಡಿಸೆಂಬರ್ 2025
Light
Dark

ಚಲನಚಿತ್ರ ಪ್ರಪಂಚದ ಪ್ರತಿಷ್ಠಿತಿ ಕಾನ್‌ ಚಿತ್ರೋತ್ಸವದಲ್ಲಿ….

khan film festival

ಸಿನಿಮಾ ಲೋಕದ ಅತಿ ಪ್ರತಿಷ್ಠಿತ ಉತ್ಸವ, ಕಾನ್ ಚಿತ್ರೋತ್ಸವದ 78ನೇ ಆವೃತ್ತಿ ಮೊನ್ನೆ 13ರಂದು ಆರಂಭವಾಗಿದೆ. ಅಗಲಿದ ಚಿತ್ರರಂಗದ ಚೇತನಗಳಿಗೆ ಶ್ರದ್ಧಾಂಜಲಿ, ಪ್ರಜಾಪ್ರಭುತ್ವ ಮತ್ತು ಕಲೆಯನ್ನು ಎತ್ತಿ ಹಿಡಿಯಲು ಕರೆ.

ಜಾಗತಿಕ ಸವಾಲುಗಳ ನಡುವೆ ಸಿನಿಮಾಕ್ಕಿರುವ ಶಕ್ತಿಯನ್ನು ಹೇಳಿದ ಸಮಾರಂಭದಲ್ಲಿ ನಟ ರಾಬರ್ಟ್ ಡಿ’ನಿರೋ ಅವರಿಗೆ ಗೌರವ ಪಾಮ್ ಡಿ’ಓರ್ ಪ್ರಶಸ್ತಿಯನ್ನು ನೀಡಲಾಯಿತು. ದೇಶ-ವಿದೇಶಗಳ ಸಿನಿಮಾ ಮತ್ತು ಮನರಂಜನೋದ್ಯಮಗಳ ಗಣ್ಯರು, ಆಸಕ್ತರು ಈ ಉತ್ಸವದಲ್ಲಿ ಪಾಲ್ಗೊಂಡಿದ್ದಾರೆ.

ಈ ಚಿತ್ರೋತ್ಸವದಲ್ಲಿ ಸ್ಪರ್ಧೆ ಮತ್ತು ಇತರ ವಿಭಾಗಗಳಿರುತ್ತವೆ. ಮಾರುಕಟ್ಟೆ ವಿಭಾಗ ಬೇರೆ. ಮುಖ್ಯಸ್ಪರ್ಧೆ, ಅನ್ಸರ್ಟನ್ ರಿಗಾರ್ಡ್, ಸಿನೆ ಫೌಂಡೇಶನ್ ಮತ್ತು ಕಿರುಚಿತ್ರ ಸ್ಪರ್ಧೆ, ಕ್ಯಾಮರಾಡಿ’ ಓರ್, ಇಮ್ಮರ್ಸಿವ್ ಸ್ಪರ್ಧೆ, ಲಾ’ಒಲ್ ಡಿ’ಓರ್, ಕ್ರಿಟಿಕ್ಸ್ ವೀಕ್, ಕ್ವೀರ್ ಪಾಮ್ – ಹೀಗೆ ಎಂಟು ವಿವಿಧ ಸ್ಪರ್ಧಾ ವಿಭಾಗಗಳು ಅಲ್ಲದೆ ಸ್ಪರ್ಧೇತರ, ಕಾನ್ ಪ್ರೀಮಿಯರ್, ವಿಶೇಷ ಪ್ರದರ್ಶನ, ಕಾನ್ ಕ್ಲಾಸಿಕ್ಸ್, ಸಿನಿಮಾ ಕುರಿತ ಸಾಕ್ಷ್ಯ ಚಿತ್ರಗಳು, ರೆಸ್ಟಾರ್ಡ್ ಪ್ರಿಂಟ್ಸ್, ಡೈರೆಕ್ಟರ್ಸ್ ಫೋರ್ಟ್‌ರೈಟ್ ವಿಭಾಗಗಳಲ್ಲಿ ಸುಮಾರು ೨೨೫ಕ್ಕೂ ಹೆಚ್ಚು ಚಿತ್ರಗಳನ್ನು ಚಿತ್ರೋತ್ಸವ ಸಮಿತಿ ಆಯ್ಕೆ ಮಾಡಿಕೊಳ್ಳುತ್ತದೆ.

ಎಲ್ಲ ಸ್ಪರ್ಧೆಗಳಿಗೂ ಹೆಸರಾಂತ ತೀರ್ಪುಗಾರರಿರುತ್ತಾರೆ
ಕಳೆದ ವರ್ಷ ಮುಖ್ಯ ಸ್ಪರ್ಧೆಯಲ್ಲಿದ್ದ ತಮ್ಮ ಚಿತ್ರಕ್ಕೆ ಪ್ರಶಸ್ತಿ ಪಡೆದ ನಿರ್ದೇಶಕಿ ಫಾಯಲ್ ಕಪಾಡಿಯಾ ಈ ಬಾರಿ ಆ ಸ್ಪರ್ಧೆಯ ತೀರ್ಪುಗಾರರಲ್ಲಿ ಒಬ್ಬರು. ಮುಖ್ಯ ಸ್ಪರ್ಧೆಯಲ್ಲಿ ಭಾರತದ ಯಾವುದೇ ಚಿತ್ರಗಳಿಲ್ಲ. ಅನ್ಸರ್ಟನ್ ರಿಗಾರ್ಡ್ ನಲ್ಲಿ ನೀರಜ್ ಘಯ್ವಾನ್ ನಿರ್ದೇಶನದ ‘ಹೋಮ್ ಬೌಂಡ್’ ಚಿತ್ರ ಇದೆ. ಕಳೆದ ಬಾರಿ ಸಿನೆ ಫೌಂಡೇಶನ್ ಸ್ಪರ್ಧೆಯಲ್ಲಿ ಮೈಸೂರಿನ ಚಿದಾನಂದ ನಾಯಕ್ ಅವರು, ಪೂನಾದಲ್ಲಿ ಸಿನಿಮಾ ಶಿಕ್ಷಣ ಪಡೆಯುವ ವೇಳೆ ನಿರ್ದೇಶಿಸಿದ ‘ಸೂರ್ಯಕಾಂತಿ ಹೂವಿಗೆ ಮೊದಲು ಗೊತ್ತಾಗಿದ್ದು’ ವಿದ್ಯಾರ್ಥಿ ಚಿತ್ರಸ್ಪರ್ಧೆಗೆ ಆಯ್ಕೆಯಾಗಿ ಮೊದಲ ಪ್ರಶಸ್ತಿಯನ್ನು ಪಡೆದಿತ್ತು. ಈ ಬಾರಿ ಆ ವಿಭಾಗದಲ್ಲಿ ಕೊಲ್ಕತ್ತಾದ ಸತ್ಯಜಿತ್ ರೇ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯಲ್ಲಿ ಅಭ್ಯಾಸ ಮಾಡುತ್ತಿದ್ದ ಆಫ್ರಿಕಾ ಮೂಲದ ಸಿನಿಮಾ ವಿದ್ಯಾರ್ಥಿ ಕೊಕೊಬ್ಗೆ ಬ್ರೆಹವೇರಿಯಟೆಸ್ಛೇ ನಿರ್ದೇಶಿಸಿದ ‘ಏ ಡಾಲ್ ಮೇಡ್ ಅಪ್ ಆಫ್ ಕ್ಲೇ’ ಚಿತ್ರ ಸ್ಪರ್ಧೆಯಲ್ಲಿದೆ. ಸತ್ಯಜಿತ್ ರೇ ನಿರ್ದೇಶನದ ‘ಅರಣ್ಯೇರ್ ದಿನ್ ರಾತ್ರಿ’ ಕಾನ್ ಕ್ಲಾಸಿಕ್ಸ್ ವಿಭಾಗದಲ್ಲಿ ಪ್ರದರ್ಶನ ಆಗಲಿದೆ. ಅದನ್ನು ಹೊರತು ಪಡಿಸಿದರೆ ಮುಖ್ಯ ವಿಭಾಗದಲ್ಲಿ ಭಾರತೀಯ ಚಿತ್ರಗಳಿಲ್ಲ.

ಈ ಚಿತ್ರೋತ್ಸವದಲ್ಲಿ ಮಾರುಕಟ್ಟೆಯ ವಿಭಾಗ ಬಹಳ ದೊಡ್ಡದು. ಮುಖ್ಯ ಚಿತ್ರಮಂದಿರಗಳಲ್ಲಿ ವಿವಿಧ ವಿಭಾಗಗಳಿಗೆ ಆಯ್ಕೆಯಾಗುವ ಚಿತ್ರಗಳು ಪ್ರದರ್ಶನ ಕಂಡರೆ, ಮಾರುಕಟ್ಟೆ ವಿಭಾಗದಲ್ಲಿ ದೇಶ ವಿದೇಶಗಳ ೧,೨೦೦ಕ್ಕೂ ಹೆಚ್ಚು ಚಿತ್ರಗಳು ಪ್ರದರ್ಶನ ಕಾಣುತ್ತವೆ. ಅಲ್ಲಿ ಸಿನಿಮಾ ಹಂಚಿಕೆ, ವ್ಯವಹಾರಗಳ ಮಾತು ಕತೆಗಳಿರುತ್ತವೆ. ಅವುಗಳ ಪ್ರದರ್ಶನಕ್ಕೆಂದೇ ಮುಖ್ಯಚಿತ್ರಮಂದಿರದ ಪಕ್ಕದಲ್ಲಿ ಕಡಿಮೆ ಆಸನಗಳ ಚಿತ್ರಮಂದಿರಗಳಿವೆ.

ಈ ಭಾಗದಲ್ಲೇ ಬೇರೆಬೇರೆ ದೇಶಗಳ ಸಿನಿಮಾ ಸಂಬಂಧಿತ ಸ್ಟಾಲ್ ಗಳಿರುತ್ತವೆ. ಭಾರತದ ಪರವಾಗಿ ಈ ವ್ಯವಸ್ಥೆಯನ್ನು ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ನಿರ್ವಹಿಸುತ್ತದೆ. ಕಾನ್ ಚಿತ್ರೋತ್ಸವದಲ್ಲಿ ಇಂತಹ ಮಳಿಗೆಯ ಮೂಲಕ ಮಹಾರಾಷ್ಟ್ರ ಸರ್ಕಾರ ಹಿಂದಿ ಮತ್ತು ಮರಾಠಿ ಚಿತ್ರ ಗಳಿಗೆ ಉತ್ತೇಜನ ನೀಡುತ್ತದೆ. ಅಲ್ಲಿನ ಚಿತ್ರನಗರಿ ಮತ್ತು ಸರ್ಕಾರ ನೀಡುವ ಸೌಲಭ್ಯಗಳನ್ನು ಇತರ ದೇಶಗಳ ಮಂದಿಗೆ ತಿಳಿಸುವ ಪ್ರಯತ್ನ ಅಲ್ಲಿ ಆಗುತ್ತದೆ.

ಮಾರುಕಟ್ಟೆ ವಿಭಾಗದಲ್ಲಿ ಸುಮಾರು ೬೦೦ಕ್ಕೂ ಹೆಚ್ಚು, ಬೇರೆ ಬೇರೆ ದೇಶಗಳ ಮಳಿಗೆಗಳಿವೆ. ಸಿನಿಮಾ ತಂತ್ರಜ್ಞಾನದ ಹೊಸ ಹೊಸ ಅನ್ವೇಷಣೆಗಳು, ಕೃತಕ ಬುದ್ಧಿಮತ್ತೆಯ ಬಳಕೆ, ಡಬ್ಬಿಂಗ್ ತಂತ್ರಜ್ಞಾನದಲ್ಲಿ ಅದರ ಬಳಕೆಯೇ ಮೊದಲಾಗಿ, ನೂರಾರು ವಿಷಯಗಳ ಕುರಿತು ತಜ್ಞರಿಂದ ಉಪನ್ಯಾಸ, ವಿಚಾರ ವಿನಿಮಯ ಮುಂತಾಗಿ ಮಾರುಕಟ್ಟೆಯ ವಿವಿಧ ವೇದಿಕೆಗಳಲ್ಲಿ ನಡೆದಿವೆ. ಅಲ್ಲಿನ ಮುಖ್ಯವೇದಿಕೆಯಲ್ಲಿ ‘ಭಾರತದ ಸೃಜನಶೀಲ ಆರ್ಥಿಕತೆ: ಸಿನಿಮಾ ಮತ್ತು ಅದರಾಚೆ’ ಕುರಿತ ವಿಚಾರ ವಿನಿಮಯ ಕಾರ್ಯಕ್ರಮ ಇತ್ತು. ಭಾರತದ ಸೃಜನಶೀಲ ಆರ್ಥಿಕತೆಯನ್ನು ನಾವು ಆರೆಂಜ್ ಆರ್ಥಿಕತೆ ಎಂದು ಮುಂಬೈ ನಲ್ಲಿ ನಡೆದ ವೇವ್ ಶೃಂಗದಲ್ಲಿ ಹೇಳಲಾಗಿತ್ತು. ಈ ಆರ್ಥಿಕತೆ, ಕೇವಲ ಸಿನಿಮಾವನ್ನು ಮಾತ್ರವಲ್ಲದೆ ಡಿಜಿಟಲ್, ಗೇಮಿಂಗ್, ಅನಿಮೇಷನ್, ಫ್ಯಾಷನ್, ಸಂಗೀತ ಮತ್ತು ಇತರ ಮಾಧ್ಯಮ ಮತ್ತು ಮನರಂಜನಾ ಉದ್ಯಮದ ಇತರ ವಲಯಗಳನ್ನು ಒಳಗೊಂಡಿದೆ.

ಮಾರುಕಟ್ಟೆ ವಿಭಾಗದ ಹೊಣೆ ಸಿಐಐಯದಾದರೆ, ಭಾರತ ಪೆವಿಲಿಯನ್ ಹೊಣೆ ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಘಗಳ ಒಕ್ಕೂಟ (ಫಿಕ್ಕಿ)ಯದು. ಫಿಕ್ಕಿ ಮತ್ತು ರಾಷ್ಟ್ರೀಯ ಚಲನಚಿತ್ರೋದ್ಯಮ ಅಭಿವೃದ್ಧಿ ನಿಗಮ ಜಂಟಿಯಾಗಿ ಪೆವಿಲಿಯನ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ. ಮೊನ್ನೆ ಬುಧವಾರ ಪೆವಿಲಿಯನ್ ಉದ್ಘಾಟನೆ ಆಯಿತು. ಗೋವಾದಲ್ಲಿ ನವೆಂಬರ್ ನಲ್ಲಿ ನಡೆಯಲಿರುವ ಭಾರತದ ೫೬ನೇ ಅಂತಾರಾಷ್ಟ್ರೀಯ ಚಿತ್ರೋತ್ಸವದ ಲಾಂಛನ ಬಿಡುಗಡೆ, ಭಾರತದ ವಿವಿಧ ರಾಜ್ಯಗಳು ಚಲನಚಿತ್ರಗಳಿಗೆ ನೀಡುವ ಪ್ರೋತ್ಸಾಹದ ವಿವರ ನೀಡುವ ಪುಸ್ತಕ ಅಲ್ಲಿ ಬಿಡುಗಡೆ ಆಯಿತು.

ಅಂತಾರಾಷ್ಟ್ರೀಯ ಚಿತ್ರೋತ್ಸವಗಳ ಕುರಿತ ವಿಚಾರಗೋಷ್ಠಿ, ವೇವ್ಸ್ ಸಾಧ್ಯತೆಗಳ ಪರಿಚಯ, ಚಲನಚಿತ್ರ ಪ್ರದರ್ಶನಗಳು ಚಿತ್ರಮಂದಿರದಿಂದ ಒಟಿಟಿಗೆ, ಅದರಾಚೆಗೆ ಹೊರಳುತ್ತಿರುವುದರ ಪರಿಣಾಮ. ಇವೇ ಮುಂತಾದ ವಿಷಯಗಳ ಚರ್ಚೆ ಮೊನ್ನೆ ನೆನ್ನೆ ನಡೆಯಿತು. ೫೬ನೇ ಚಿತ್ರೋತ್ಸವದ ಸಿದ್ಧತೆಯ ಕುರಿತು, ಚಿತ್ರೋತ್ಸವ ನಿರ್ದೇಶಕ ಶೇಖರ್ ಕಪೂರ್ ಅವರ ಮಾತಿತ್ತು. ಹತ್ತಾರು ಚಿತ್ರಗಳ ಟ್ರೇಲರ್ ಮತ್ತು ಭಿತ್ತಿಪತ್ರ ಬಿಡುಗಡೆ ಈ ಬಾರಿ ಅಲ್ಲಿ ನಡೆಯಲಿದೆ ಎನ್ನುವುದು ಕಾರ್ಯಕ್ರಮದ ಪಟ್ಟಿಯಲ್ಲಿ ವೇದ್ಯ. ಇವತ್ತು ನಡೆಯಲಿರುವ ಗೋಷ್ಠಿಯೊಂದು ಪ್ರಭಾವಿ(ಇನ್-ಯೆನ್ಸ್ )ಗಳದು. ಕನ್ನಡದ ಜನಪ್ರಿಯ ಕರ್ತೃ ಮತ್ತು ಪ್ರಾದೇಶಿಕ ದನಿ, ದಿಶಾ ಮದನ್ ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.

ಮಧ್ಯಾಹ್ನದ ನಂತರ ಗೋವಾ, ಕರ್ನಾಟಕ, ಮತು ಮಹಾರಾಷ್ಟ್ರ ಗೋಷ್ಠಿ ಗಳಿವೆ. ಮಹಾರಾಷ್ಟ್ರ ಸರ್ಕಾರ ಮಾರುಕಟ್ಟೆ ವಿಭಾಗದಲ್ಲಿ ಪ್ರದರ್ಶಿಸಲು ಆಯ್ಕೆ ಮಾಡಿದ ‘ಸ್ನೋಫ್ಲವರ್’, ಸ್ಥಳ, ಖಾಲಿದ್ ಕಾಶಿವಾಜಿ, ‘ ಮತುಜುನಾ ಫರ್ನಿಚರ್’ ಚಿತ್ರಗಳ ಟ್ರೈಲರ್ ಬಿಡುಗಡೆ ಇದೆ. ಇದು ಅಲ್ಲಿನ ಸರ್ಕಾರ ಆಯ್ಕೆಮಾಡಿ ಕಳುಹಿಸಿದ ಚಿತ್ರಗಳು. ಅನುಪಮ್ ಖೇರ್ ನಿರ್ದೇಶನದ ತನ್ವಿದ ಗ್ರೇಟ್ ಚಿತ್ರದ ಪ್ರೀಮಿಯರ್ ಪ್ರದರ್ಶನ ಮಾರುಕಟ್ಟೆ ವಿಭಾಗದಲ್ಲಿ ನಡೆಯಲಿದೆ. ರಾಷ್ಟ್ರೀಯ ಚಲನಚಿತ್ರೋದ್ಯಮ ಅಭಿವೃದ್ಧಿ ನಿಗಮ, ಕಾನ್ ಚಿತ್ರೋತ್ಸವದ ವೇಳೆ ಅಲ್ಲಿ ಚಿತ್ರಗಳ ಪ್ರದರ್ಶನ, ಭಿತ್ತಿಪತ್ರ, ಬಿಡುಗಡೆಗೆ ಆಸಕ್ತರಿಗೆ ಕರೆ ನೀಡಿತ್ತು. ಅಲ್ಲಿನ ಸರ್ಕಾರವೂ ಕೆಲವು ವರ್ಷಗಳಿಂದ ಸಕ್ರಿಯವಾಗಿ ತೊಡಗಿಕೊಳ್ಳುತ್ತಿದೆ. ನಟಿ ಪ್ರಣೀತಾ ಸುಭಾಷ್ ಅವರ ಜೊತೆ ಹರಟೆ, ಭಾರತ ಪವಿಲಿಯನ್‌ನ ಅಧಿಕೃತ ಕಾರ್ಯಕ್ರಮದ ಪಟ್ಟಿಯಲ್ಲಿದೆ.

ಈ ಬಾರಿ ಚಿತ್ರೋತ್ಸವಕ್ಕೆ ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಬಿ. ಬಿ. ಕಾವೇರಿ, ಆಯುಕ್ತರಾದ ಹೇಮಂತ್ ನಿಂಬಾಳ್ಕರ್, ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸಾಧುಕೋಕಿಲ, ರಿಜಿಸ್ಟ್ರಾರ್ ಹಿಮಂತರಾಜು ತೆರಳಿದ್ದಾರೆ. ಎಂದಿನಂತೆ, ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಕಲಾತ್ಮಕ ನಿರ್ದೇಶಕ ವಿದ್ಯಾಶಂಕರ್ ಅಲ್ಲಿದ್ದಾರೆ. ಮೊನ್ನೆ ಅವರು ಸಿಐಐ ಮಳಿಗೆ ಮತ್ತು ಮಹಾರಾಷ್ಟ್ರ ಸರ್ಕಾರದ ಮಳಿಗೆಗಳಿಗೆ ಭೇಟಿ ನೀಡಿದ್ದರು. ಕರ್ನಾಟಕ ಸರ್ಕಾರ ಚಿತ್ರೋದ್ಯಮಕ್ಕೆ ನೀಡುತ್ತಿರುವ ಉತ್ತೇಜನ, ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಗಳ ಕುರಿತಂತೆ ಚರ್ಚಿಸಿದ್ದಾರೆ.

ಮುಂದಿನ ದಿನಗಳಲ್ಲಿ ಕನ್ನಡ ಚಿತ್ರೋದ್ಯಮವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಲು, ಸರ್ಕಾರ ಒತ್ತಾಸೆಯಾಗಲು ಮತ್ತು ಚಿತ್ರೋತ್ಸವದ ಗುಣಮಟ್ಟ ಉತ್ತಮವಾಗಿಸಲು ಇಂತಹ ಬೆಳವಣಿಗೆ ಅಗತ್ಯ. ಅದರಲ್ಲೂ, ಚಿತ್ರೋದ್ಯಮದ ಕುರಿತಂತೆ ಆಸಕ್ತಿ ಇರುವ ಅಧಿಕಾರಿಗಳಿಗೆ ಈ ಅನುಭವ ಪೂರಕವಾಗಬಲ್ಲದು.

ಸರ್ಕಾರದಲ್ಲಿ ವರ್ಗಾವಣೆ ಸಾಮಾನ್ಯವಾಗಿ ಇಂತಹವರ ಉತ್ಸಾಹಕ್ಕೆ ತಣ್ಣೀರೆರಚುವುದಿದೆ. ಕಳೆದ ವರ್ಷ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರು ಕಾನ್ ಚಿತ್ರೋತ್ಸವಕ್ಕೆ ತೆರಳಿದ್ದರು. ಹಿಂದಿರುಗಿದ ಕೆಲವೇ ದಿನಗಳಲ್ಲಿ ಅವರ ವರ್ಗವಾಗಿತ್ತು. ಕರ್ನಾಟಕ ಮಾಹಿತಿ ತಂತ್ರಜ್ಞಾನದಲ್ಲಿ ದೇಶದಲ್ಲೇ ಮುಂದಿರುವ ರಾಜ್ಯ. ಸಿನಿಮಾ ಡಿಜಿಟಲ್ ಮಾಧ್ಯಮಕ್ಕೆ ಹೊರಳಿ ವರ್ಷಗಳಾಗಿವೆ. ಸೆಲ್ಯುಲಾಯಿಡ್ ದಿನಗಳಲ್ಲಿ ಮುಂಬೈ ಸಿನಿಮಾ ರಾಜಧಾನಿಯಾಗಿತ್ತು. ಆದರೆ ಅದೇ ಮಾತು ಡಿಜಿಟಲ್ ದಿನಗಳಿಗೆ ಅನ್ವಯಿಸಬೇಕೆಂದೇನೂ ಇಲ್ಲ. ಸಂಬಂಧಪಟ್ಟವರ ಇಚ್ಛಾಶಕ್ತಿ ಬೇಕು ಅಷ್ಟೇ. ಅಂತಹದೊಂದು ಬದಲಾವಣೆಗೆ ಬೆಂಗಳೂರು ತೆರೆದುಕೊಳ್ಳುವುದೇ ಎನ್ನುವುದನ್ನು ಮುಂದಿನ ದಿನಗಳು ಹೇಳಲಿವೆ.

ಕಾನ್ ಚಿತ್ರೋತ್ಸವದಲ್ಲಿ ಕೆಂಪು ಹಾಸಿನ (ರೆಡ್ ಕಾರ್ಪೆಟ್) ಮೇಲೆ ನಡೆಯುವುದು ಸಿನಿಮಂದಿಯ ಪ್ರತಿಷ್ಠೆ. ನಟಿಯರಂತೂ ಚಿತ್ರ ವಿಚಿತ್ರ ಉಡುಪುಗಳಲ್ಲಿ ನಡೆಯುವ ಚಿತ್ರಗಳು ಛಾಯಾಗ್ರಾಹಕರಿಗೆ ಹಬ್ಬ. ಆದರೆ ಈ ಬಾರಿ ಅದಕ್ಕೊಂದು ನಿಯಂತ್ರಣ ಹೇರಲಾಗಿದೆ. ಭಾರೀ ಗಾತ್ರದ ಬಟ್ಟೆಗಳನ್ನು ಧರಿಸಿಕೊಂಡು ಬರುವಂತಿಲ್ಲ. ನಗ್ನತೆಯ ಮೈಯೆಲ್ಲ ಕಾಣುವ ಪಾರದರ್ಶಕ ಉಡುಪುಗಳನ್ನು ಧರಿಸಿಬರುವುದನ್ನು ನಿಷೇಧಿಸಲಾಗಿದೆ. ಭಾರೀ ಗಾತ್ರದ ಉಡುಪುಗಳನ್ನು ಧರಿಸಿಬರುವುದರಿಂದ ಇತರ ಅತಿಥಿಗಳಿಗೆ ಬರುವ ದಾರಿಯಲ್ಲಿ ತೊಂದರೆಯಾಗುತ್ತದೆ ಎಂದು ಅಲ್ಲಿನ ಅಧಿಕೃತ ಮೂಲಗಳು ಈ ಕುರಿತು ಹೇಳಿವೆ. ಈ ನಿಯಮವನ್ನು ಮೀರುವವರಿಗೆ ಪ್ರವೇಶ ನಿಷೇಧಿಸುವ ಮಾತೂ ಇದೆ.

Tags:
error: Content is protected !!