– ಡಿ. ಉಮಾಪತಿ
ಮಚ್ಛುೂ ನದಿಯ ಮೇಲೆ ಬ್ರಿಟಿಷರು ನಿರ್ಮಿಸಿದ್ದ ಗುಜರಾತಿನ ಮೋರ್ಬಿ ತೂಗುಸೇತುವೆ145 ವರ್ಷಗಳಷ್ಟು ಹಳೆಯದು.
ಭಾರೀ ಜನಪ್ರಿಯ ವಿಹಾರ ಕೇಂದ್ರ. ಬ್ರಿಟಿಷರ ಕಾಲದ ಎಂಜಿನಿಯರಿಂಗ್ ಬೆರಗು ಎಂದು ಖುದ್ದು ಗುಜರಾತ್ ರಾಜ್ಯ ಸರ್ಕಾರವೇ ಈ ಸೇತುವೆಯನ್ನು ಬಣ್ಣಿಸಿದೆ. ಇಂತಹ ಬೆರಗಿನ ನಿರ್ವಹಣೆಯನ್ನು ಖಾಸಗಿಯವರಿಗೆ ಒಪ್ಪಿಸಲಾಯಿತು.
ಸೇತುವೆಯ ತುಕ್ಕು ಹಿಡಿದ ಲೋಹದ ಹಗ್ಗಗಳು ಹರಿದು ವಿಹಾರಕ್ಕೆಂದು ಸೇತುವೆಯ ಮೇಲೆ ನೆರೆದಿದ್ದ ನೂರಾರು ಮಂದಿ ಯಾತ್ರಿಗಳು ನದಿ ನೀರಿನ ಪಾಲಾಗಿದ್ದಾರೆ. ಈ ಪೈಕಿ ಪತ್ತೆಯಾದ ಮೃತದೇಹಗಳು 135. ಶೋಧ ಕಾರ್ಯವನ್ನು ನಿಲ್ಲಿಸಿದ ಕಾರಣ ಈ ಸಂಖ್ಯೆ 135ಕ್ಕೇ ನಿಂತಿದೆ.
ಈ ಸೇತುವೆಯ ನಿರ್ವಹಣೆಯನ್ನು ವಹಿಸಿಕೊಂಡಿರುವ ಒರೇವ ಕಂಪನಿಯು ಮುಖ್ಯವಾಗಿ ಗೋಡೆ ಗಡಿಯಾರ ತಯಾರಿಕೆಗೆ ಹೆಸರಾದದ್ದು. ಸೇತುವೆಯನ್ನು ನಿರ್ವಹಿಸುವ ಕೌಶಲ್ಯ ಅನುಭವ ಕಂಪನಿಗೆ ಇಲ್ಲವೇ ಇಲ್ಲ. ಒರೇವ ಮಾಲೀಕ ಜೈಸುಖ್ ಅವರ ಪ್ರಕಾರ ಹಿಟ್ಲರನೊಬ್ಬ ದೇಶ ಆಳಬೇಕು. ಮೀಸಲಾತಿ ವ್ಯವಸ್ಥೆ ಅಂತ್ಯಗೊಳ್ಳಬೇಕು.
135 ಕುಟುಂಬಗಳನ್ನು ಶೋಕದ ಮಡುವಿಗೆ ನೂಕಿರುವ ಈ ದುರಂತದ ಹೊಣೆ ಹೊರಬೇಕಿರುವ ಜೈಸುಖ್ ಭಾಯಿ ಪಟೇಲ್ ಮತ್ತು ಆತನ ಕುಟುಂಬದ ಸದಸ್ಯರು ಈವರೆಗೆ ನಾಪತ್ತೆಯಾಗಿದ್ದಾರೆ. ಜೈಸುಖ್ ಈ ತನಕ ಸಂತಾಪದ ಒಂದು ನುಡಿಯನ್ನೂ ಆಡಿಲ್ಲ, ಇನ್ನು ತಪ್ಪೊಪ್ಪಿಗೆಯ ಮಾತು ದೂರವೇ ಉಳಿಯಿತು. ಇಬ್ಬರು ಮ್ಯಾನೇಜರುಗಳು, ಇಬ್ಬರು ಟಿಕೆಟ್ ಗುಮಾಸ್ತರು ಹಾಗೂ ಮೂವರು ಸೆಕ್ಯೂರಿಟಿ ಗಾರ್ಡುಗಳನ್ನು ಮಾತ್ರ ಬಂಧಿಸಲಾಗಿದೆ. ಎಂದಿನಂತೆ ದೊಡ್ಡ ಕುಳಗಳ ಕೂದಲು ಕೂಡ ಕೊಂಕಿಲ್ಲ.
ಸೇತುವೆಯ ನವೀಕರಣ “ಫುಲ್ ಅಂಡ್ ಫೈನಲ್”. ಇನ್ನೂ 15-20 ವರ್ಷಗಳ ಕಾಲ ನಿಶ್ಚಿಂತೆಯಿಂದಿರಬಹುದು ಎಂದು ಜೈಸುಖ್ ಭಾಯಿ ಪಟೇಲ್ ಅಕ್ಟೋಬರ್ 26ರಂದು ಬಹಿರಂಗವಾಗಿ ಘೋಷಿಸಿದ್ದ.
ಮೋರ್ಬಿ ನಗರಪಾಲಿಕೆ ಮತ್ತು ಒರೇವ ಕಂಪನಿಯ ನಡುವೆ ಏರ್ಪಟ್ಟಿರುವ ಗುತ್ತಿಗೆ ಕರಾರಿನಲ್ಲಿ ಮುಂದಿನ ಹದಿನೈದು ವರ್ಷಗಳ ಕಾಲ ತೂಗುಸೇತುವೆಗೆ ಬರುವ ಜನ ಖರೀದಿಸಬೇಕಿರುವ ಟಿಕೆಟುಗಳ ದರ ನಿಗದಿ ಮತ್ತು ಕಾಲ ಕಾಲಕ್ಕೆ ಈ ದರಗಳ ಏರಿಕೆಯ ಪ್ರಸ್ತಾಪ ಇದೆಯೇ ವಿನಾ ಸುರಕ್ಷತೆ ಮತ್ತು ನಿರ್ವಹಣೆಯ ಯಾವ ಪ್ರಸ್ತಾಪವೂ ಇಲ್ಲ.
ದುರಸ್ತಿಯನ್ನೇ ಮಾಡದ ಸೇತುವೆಯನ್ನು ಸುರಕ್ಷತೆಯ ಕಾಯಿದೆ ಕಾನೂನುಗಳನ್ನು ಗಾಳಿಗೆ ತೂರಿ ಸಾರ್ವಜನಿಕರಿಗೆ ತೆರೆದು ಟಿಕೆಟುಗಳ ಹಣ ಸಂಗ್ರಹಿಸಿದ ಈ ಹಂತಕನನ್ನು ಆಳುವವರು ಈವರೆಗೆ ರಕ್ಷಿಸಿರು ವ ಸೂಚನೆಗಳಿವೆ. ಸಾರ್ವಜನಿಕ ಪ್ರತಿಭಟನೆಗಳ ಸೊಲ್ಲಿಲ್ಲ. ವಿಧಾನಸಭಾ ಚುನಾವಣೆಗಳಲ್ಲಿ ಪುನಃ ‘ಮುಸ್ಲಿಮ್ ಖಳನಾಯಕ’ನನ್ನು ಮತದಾರರ ಮುಂದೆ ಹಿಡಿದು ಬೆಂಬಲ ಬಾಚಲು ಸಿದ್ಧವಾಗಿದೆ ಆಳುವ ಪಕ್ಷ. ಈ ದುರಂತದಲ್ಲಿ ಮಕ್ಕಳೂ ಸೇರಿದಂತೆ 85 ಮಂದಿಯ ಪ್ರಾಣ ಉಳಿಸಿರುವ ನಯೀಮ್ ಶೇಖ್, ಹುಸೇನ್ ಪಠಾಣ್ ಹಾಗೂ ತೌಫೀಕ್ ಭಾಯಿ ಅವರಸೇವೆ ಸಾಹಸವನ್ನು ಗುರುತಿಸುವವರು ದಿಕ್ಕಿಲ್ಲ. ಸರ್ಕಾರ ಮತ್ತು ಬಹುತೇಕ ಮೀಡಿಯಾ ಈ ಕುರಿತು ತುಟಿ ಹೊಲಿದುಕೊಂಡಿದೆ.
2016ರಲ್ಲಿ ಕೊಲ್ಕತ್ತಾದಲ್ಲಿ ಸೇತುವೆಯೊಂದು ಕುಸಿದು ಬಿದ್ದಿತ್ತು. ಆಗ ಪ್ರಧಾನಿ ಮೋದಿ ಅವರು ಆಡಿದ ಮಾತುಗಳು ಅವರ ಸ್ಥಾನಮಾನಕ್ಕೆ ಶೋಭಿಸುವಂತಹವಲ್ಲ. “ಸೇತುವೆ ಕುಸಿತವು ದೇವರೇ ನಡೆಸಿರುವ ಕೃತ್ಯ. ಚುನಾವಣೆ ವೇಳೆ ನಡೆದಿರುವ ಈ ಕೃತ್ಯವು ಮಮತಾ ಬ್ಯಾನರ್ಜಿಯ ದುರಾಡಳಿತಕ್ಕೆ ದೇವರೇ ಕನ್ನಡಿ ಹಿಡಿ ದು ಮತದಾರರಿಗೆ ಸಂದೇಶ ನೀಡಿದ್ದಾನೆ. ಇಂದು ಸೇತುವೆ ಕುಸಿದಿದೆ, ನಾಳೆ ಈಕೆ ಇಡೀ ಬಂಗಾಳವನ್ನು ನಿರ್ನಾಮ ಮಾಡಿಬಿಡುತ್ತಾಳೆ. ಬಂಗಾಳವನ್ನು ಉಳಿಸಬೇಕೆಂಬುದು ದೇವರು ನಿಮಗೆಲ್ಲರಿಗೆ ನೀಡಿರುವ ಸಂದೇಶ” ಎಂದಿದ್ದರು ಮೋದಿ. ಈಗ ಗುಜರಾತಿನಲ್ಲೂ ಚುನಾವಣೆಗಳು ನಡೆಯುತ್ತಿವೆ. ದುರಸ್ತಿಗೆಂದು ಆರು ತಿಂಗಳ ಕಾಲ ಮುಚ್ಚಲಾಗಿದ್ದ ಮೋರ್ಬಿ ಸೇತುವೆಯನ್ನು ರಿಪೇರಿಯೇ ಇಲ್ಲದೆ ಪುನಃ ತೆರೆದು 135 ಜೀವಗಳ ಬಲಿ ಪಡೆಯಲಾಗಿದೆ. ಆರು ವರ್ಷಗಳ ಹಿಂದೆ ಬಂಗಾಳದ ಜನತೆಗೆ ಸಂದೇಶ ಕಳಿಸಿದ್ದ ಅದೇ ದೇವರು ಇದೀಗ ಗುಜರಾತಿನ ಜನತೆಗೆ ಯಾವ ಸಂದೇಶ ನೀಡಿದ್ದಾನೆಂದು ಪ್ರಧಾನಿ ಈವರೆಗೆ ತುಟಿ ಬಿಚ್ಚಿಲ್ಲ.
ಈ ದುರದೃಷ್ಟಕರ ಘಟನೆಯು ದೇವರೇ ಆಗು ಮಾಡಿರುವ ಕೃತ್ಯ ಎಂದು ಒರೇವ ಕಂಪನಿಯ ಮ್ಯಾನೇಜರ್ ದೀಪಕ್ ಪಾರೇಖ್ ನ್ಯಾಯಾಲಯಕ್ಕೆ ನಿವೇದಿಸಿಕೊಂಡಿರುವುದು ನಾಚಿಕೆಗೇಡು. ಈ ದುರಂತವು ನಗರ ನಕ್ಸಲೀಯರ ಸಂಚು ಎಂಬ ಭಕ್ತರ ಪ್ರಲಾಪ ಮತ್ತು ಸೇತುವೆಯ ಮೇಲೆ ಕಿಕ್ಕಿರಿದು ಸೇರಿದ ಜನರೇ ಈ ದುರಂತದ ನಿಜ ಅಪರಾಧಿಗಳು ಎಂಬಆತ್ಮವಂಚನೆಯ ವಾಟ್ಸ್ಯಾಪ್ ವಿಶ್ವವಿದ್ಯಾಲಯದ ಪ್ರಚಾರ ಬಹು ದೊಡ್ಡ ವಿಡಂಬನೆ.
ಈ ಸೇತುವೆಯ ದುರಸ್ತಿಗೆ ಸರ್ಕಾರದಿಂದ ಎರಡು ಕೋಟಿ ರುಪಾಯಿ ಬಿಡುಗಡೆಯಾಗಿತ್ತು. ಒರೇವ ಕಂಪನಿಯು ಕಾಮಗಾರಿಯನ್ನು ಉಪಗುತ್ತಿಗೆಗೆ ನೀಡಿತು. ಎರಡು ಕೋಟಿ ರುಪಾಯಿಯಲ್ಲಿ ವಾಸ್ತವವಾಗಿ ವೆಚ್ಚ ಮಾಡಿದ್ದು ಕೇವಲ ಹನ್ನೆರಡು ಲಕ್ಷ ರುಪಾಯಿ.ಉಪಗುತ್ತಿಗೆ ಪಡೆದ ದೇವಪ್ರಕಾಶ್ ಸಲ್ಯೂಷನ್ಸ್ ಎಂಬ ಕಂಪನಿ ಕೂಡ ಇಂತಹ ಕಾಮಗಾರಿಯನ್ನು ನಿರ್ವಹಿಸುವ ಅರ್ಹತೆಗಳನ್ನು ಹೊಂದಿರಲಿಲ್ಲ ಎಂದು ಪೊಲೀಸರು ನ್ಯಾಯಾಲಯದ ಮುಂದೆ ನಿವೇದಿಸಿಕೊಂಡಿದ್ದಾರೆ. ಉಪಗುತ್ತಿಗೆದಾರ ಮಾಡಿದ್ದು ಕೇವಲ ಬಣ್ಣ ಬಳಿದದ್ದು ಮತ್ತು ಗ್ರೀಸ್ ಮೆತ್ತಿದ್ದು. ಸೇತುವೆಯನ್ನು ಬಲಪಡಿಸುವ ಯಾವ ಕೆಲಸವೂ ನಡೆಯಲಿಲ್ಲ. ಇನ್ನು ತುಕ್ಕು ಹಿಡಿದಿದ್ದ ಕಬ್ಬಿಣದ ಹಗ್ಗಗಳನ್ನು (ಕೇಬಲ್ ) ಬದಲಾಯಿಸುವ ಮಾತಂತೂ ದೂರವೇ ಉಳಿಯಿತು.
ಒರೇವ ಮಾಲೀಕ ಜೈಸುಖ್ ಭಾಯಿ ತನ್ನನ್ನು ಮೋದಿಯವರ ಸಮೀಪವರ್ತಿ ಎಂದು ಗುರುತಿಸಿಕೊಳ್ಳುತ್ತಾನೆ.
ಭಾರತ ಎದುರಿಸುತ್ತಿರುವ ಸವಾಲುಗಳು ಮತ್ತು ಜನತಂತ್ರ ವ್ಯವಸ್ಥೆಯ ಕುರಿತು ಈತನ ಅಭಿಪ್ರಾಯಗಳು ಅಧ್ಯಯನ ಯೋಗ್ಯ. ಮೋದಿ ಆಡಳಿತಕ್ಕೆ ಐದು ವರ್ಷಗಳ ತುಂಬಿದ ನಂತರ 2019ರಲ್ಲಿ ಬರೆದಿರುವ 189 ಪುಟಗಳ ಈ ಗುಜರಾತಿ ಪುಸ್ತಕದ ಶೀರ್ಷಿಕೆ’ ಸಮಸ್ಯೆಗಳು ಮತ್ತು ಸಮಾಧಾನ’.
ಭ್ರಷ್ಟಾಚಾರದ ಸಮಸ್ಯೆಯಿಂದ ಭಾರತಕ್ಕೆ ಬಿಡುಗಡೆ ಸಿಗಬೇಕಿದ್ದರೆ ಸರ್ವಾಧಿಕಾರಿ ಆಡಳಿತವೇ ಇರಬೇಕು. ಕಾಯಿದೆ ಕಾನೂನಿನ ಆಡಳಿತದ ಬದಲಾಗಿ ಸರ್ವಾಧಿಕಾರ ಇರಬೇಕು ಎನ್ನುತ್ತಾನೆ ಜೈಸುಖ್ ಭಾಯಿ. ಚುನಾವಣೆಗಳ ಕುರಿತು ಪ್ರತ್ಯೇಕ ಅಧ್ಯಾಯವೊಂದನ್ನು ಬರೆದಿದ್ದಾನೆ. ಚುನಾವಣೆಗಳಿಂದ ಸಮಯ ಮತ್ತು ಹಣ ಪೋಲಾಗುತ್ತದೆ. ಚುನಾವಣೆ ವ್ಯವಸ್ಥೆಯನ್ನೇ ರದ್ದು ಮಾಡಿಬಿಡಬೇಕು. ಚೀನಾ ದೇಶದ ರೀತಿ ಒಬ್ಬನೇ ನಾಯಕನಿಗೆ ಹದಿನೈದು ಇಪ್ಪತ್ತು ವರ್ಷ ಕಾಲ ಸತತ ಅಧಿಕಾರ ನೀಡಬೇಕು. ಹಾಗಾದಲ್ಲಿ ಮಾತ್ರವೇ ಅಭಿವೃದ್ಧಿ ಸಾಧ್ಯ. ಜನತಂತ್ರವೆಂಬುದು ನಮ್ಮ ದೇಶದ ಪಾಲಿಗೆ ಚಿಕಿತ್ಸೆಯೇ ಇಲ್ಲದ ಕ್ಯಾನ್ಸರ್ ವ್ಯಾಧಿಯಂತೆ.
ನಾವೆಲ್ಲ ಸರ್ವಾಧಿಕಾರೀ ಆಡಳಿತಕ್ಕೇ ಲಾಯಕ್ಕು. ಗುಲಾಮಗಿರಿ ಎಂಬುದು ನಮ್ಮ ರಕ್ತದಲ್ಲೇ ಹರಿದು ಬಂದಿದೆ. ಚೀನಾದಲ್ಲಿ ಪ್ರಜಾಪ್ರಭುತ್ವ ಇಲ್ಲ, ಚುನಾವಣೆಗಳೂ ಇಲ್ಲ. ಹೀಗಾಗಿ ಅನಗತ್ಯ ಖರ್ಚುಗಳೂ ಅಲ್ಲಿಲ್ಲ. ಜನ ಅನುಶಾಸನ ಪಾಲಿಸುತ್ತಾರೆ.
ಕ್ರಿಕೆಟ್ ನಂತರ ನಮ್ಮ ದೇಶದಲ್ಲಿ ಅತಿ ಹೆಚ್ಚು ಸಮಯ ಹಾಳು ಮಾಡುವವರು ಧಾರ್ಮಿಕ ಮುಖಂಡರು, ಮುರಾರಿ ಬಾಪೂ, ಸ್ವಾಮಿ ನಿತ್ಯಾನಂದ, ಆಸಾರಾಮ್ ಬಾಪೂ, ರಾಮ ರಹೀಮ್, ಶ್ರೀಶ್ರೀ ರವಿಶಂಕರ್, ಬಾಬಾ ರಾಮದೇವ್, ರಮೇಶ್ ಭಾಯಿ ಓಝಾ ಅವರಂತಹ ಆಚಾರ್ಯರು ಮತ್ತು ಮಹಾತ್ಮರು. ಇವರ ಸಭೆಗಳು ಪ್ರವಚನಗಳು ದಿನಗಟ್ಟಲೆ ನಡೆಯುತ್ತಿರುತ್ತವೆ. ಜನರ ಸಮಯ ವ್ಯರ್ಥವಾಗುತ್ತಿರುತ್ತದೆ. 370ನೆಯ ವಿಧಿಯನ್ನು ಸಮಾಪ್ತಗೊಳಿಸುವುದೇ ಕಾಶ್ಮೀರದ ಸಮಸ್ಯೆಗೆ ಪರಿಹಾರ. ಅಲ್ಲಿನ ಸಮೂಹ ಮಾಧ್ಯಮಗಳ ಮೇಲೆ ಒಂದು ವರ್ಷ ಕಾಲ ಸೆನ್ಸಾರ್ಶಿಪ್ ಹೇರಬೇಕು. ಕಾಶ್ಮೀರಕ್ಕೆ ಭೋಜನ ಮತ್ತು ಔಷಧಗಳ ಪೂರೈಕೆಯನ್ನು ನಿಲ್ಲಿಸಿಬಿಡಬೇಕು. ಇದ್ಯಾವುದನ್ನೂ ಮಾಡುವುದು ಆಗದಿದ್ದರೆ ಕಾಶ್ಮೀರವನ್ನು ನಾವು ಬಿಟ್ಟುಬಿಡಬೇಕು. ಕಾಶ್ಮೀರದ ಜನ ಪಾಕಿಸ್ತಾನದ ಜೊತೆಗೆ ಸೇರಬೇಕೋ, ಸ್ವತಂತ್ರವಾಗಿ ಉಳಿಯಬೇಕೋ ತೀರ್ಮಾನಿಸಿಕೊಳ್ಳಲಿ. ಹೀಗೆ ಮಾಡಿದರೆ ವರ್ಷ ವರ್ಷ ಕಾಶ್ಮೀರದಲ್ಲಿ ಮಿಲಿಟರಿ ಮೇಲೆ ಮಾಡಲಾಗುವ ಸಾವಿರಾರು ಕೋಟಿ ರುಪಾಯಿ ವೆಚ್ಚವನ್ನು ಉಳಿಸಬಹುದು. ನಮ್ಮ ಯೋಧರು ಹುತಾತ್ಮರಾಗುವುದನ್ನೂ ತಡೆಯಬಹುದು. ಹೀಗೆ ಉಳಿಸುವ ಹಣವನ್ನು ದೇಶದ ಅಭಿವೃದ್ಧಿಗೆ ಬಳಸಬಹುದು ಎಂಬುವು ಈತನ ವಿಚಾರಗಳು. (ಇವೇ ಮಾತುಗಳನ್ನು ಬೇರೆ ಯಾರಾದರೂ ಬರೆದಿದ್ದರೆ ಅವರ ಮೇಲೆ ದೇಶದ್ರೋಹದ ಕೇಸುಗಳನ್ನು ಜಡಿದು ಜೈಲಿಗೆ ತಳ್ಳಲಾಗುತ್ತಿತ್ತು).
ಭೂಸ್ವಾಧೀನ ಕಾಯಿದೆಯು ಯಾಕಿಷ್ಟು ಜಟಿಲವಾಗಿದೆ, ಸರಳವಾಗಬಾರದೇಕೆ ಎಂಬುದಾಗಿ ಪ್ರಧಾನಿ ಮೋದಿ ತಮ್ಮೊಂದಿಗೆ ಚರ್ಚಿಸಿದ್ದಾಗಿ ಹೇಳುತ್ತಾರೆ ಜೈಸುಖ್ ಭಾಯಿ. ತಮ್ಮೊಂದಿಗೆ ಈ ಕುರಿತು ಮಾತಾಡುವಂತೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಮೋದಿಯವರು ಸೂಚನೆ ನೀಡಿದ್ದಾಗಯೂ ಜೈಸುಖ್ ಭಾಯಿ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ. ಒಂದು ತೂಗು ಸೇತುವೆಯನ್ನು ಕೂಡ ನಿರ್ವಹಿಸಲಾಗದೆ 135 ಜೀವಗಳ ಬಲಿ ತೆಗೆದುಕೊಂಡ ವ್ಯಕ್ತಿ ದೇಶದ ಘನ ಸಮಸ್ಯೆಗಳ ಕುರಿತು ಪ್ರಧಾನಮಂತ್ರಿ ಮೋದಿಯವರಿಗೆ ಸಲಹೆ ನೀಡುವುದು ಕುಚೋದ್ಯವೇ ಸರಿ.