Mysore
25
few clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ದೆಹಲಿ ಧ್ಯಾನ : ಚೀನೀ ಗಂಡಾಂತರ ಮತ್ತು ಉತ್ತರಾಖಂಡದ ಪ್ರೇತಗ್ರಾಮಗಳು!

ಬಾರಾಹೋಟಿ  ಪ್ರದೇಶದಲ್ಲಿ ವೀನೀ ಸೇನೆಯ ಅತಿಕ್ರಮಣ ಪ್ರಕರಣಗಳು ಜರುಗುತ್ತಲೇ ಇವೆ 

ಹಿಮಾಲಯ ಶ್ರೇಣಿಗಳ ಮಧ್ಯಭಾಗದ ಪರ್ವತ ಸೀಮೆಯ ಪೌರಾಣಿಕ ಹೆಸರು ಉತ್ತರಾಖಂಡ. ಈ ಭೂ ಪ್ರದೇಶದ ಗಿರಿಶಿಖರಗಳು ಕಣಿವೆ ಕಂದರಗಳು ದೇವಭೂಮಿಯೆಂದೇ ಜನಜನಿತ. ಜೀವಗಂಗೆ ಜನಿಸುವ ನಾಡು. ೩೫೦ಕಿ.ಮೀ. ಉದ್ದದ ಭಾರತ-ಚೀನಾ ಗಡಿ ಮತ್ತು ೨೭೫ಕಿ.ಮೀ. ಉದ್ದದ ಭಾರತ-ನೇಪಾಳ ಗಡಿ ಉತ್ತರಾಖಂಡಕ್ಕೆ ಹೊಂದಿಕೊಂಡಿದೆ.

ಚೀನೀ ವಾಸ್ತವ ಗಡಿರೇಖೆಗುಂಟ ಜರುಗುತ್ತ ಬಂದಿರುವ ಮಿಲಿಟರಿ ಚಟುವಟಿಕೆಗಳು ಲದ್ದಾಖ್ ಮತ್ತು ಅರುಣಾಚಲ ಪ್ರದೇಶ ಮಾತ್ರವಲ್ಲದೆ, ಉತ್ತರಾಖಂಡವನ್ನೂ ಬಾಽಸಿವೆ. ಈ ರಾಜ್ಯದ ಚೀನೀ ಗಡಿ ಭಾಗದ ಗ್ರಾಮಗಳ ಜನಸಾಂದ್ರತೆಯನ್ನು ದಟ್ಟಗೊಳಿಸುವಂತೆ ಬಹುಮುಖ್ಯ ಸಲಹೆಯೊಂದು ಕೇಳಿ ಬಂದಿದೆ. ಭಾರತೀಯ ಸಂಯುಕ್ತ ಸೇನೆಗಳ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ ಈ ಸಲಹೆ ನೀಡಿದ್ದಾರೆ. ಈ ಗಡಿಗ್ರಾಮಗಳ ಜನ ಭಾರೀ ಪ್ರಮಾಣದಲ್ಲಿ ವಲಸೆ ಹೋಗಿ,ಊರುಗಳು ಖಾಲಿ ಖಾಲಿ ಬಿದ್ದಿರುವುದು ದೇಶದ ಸುರಕ್ಷತೆಗೆ ಒಳಿತಲ್ಲ. ಸಂಯುಕ್ತ ಸೇನೆಗಳ ಈ ಹಿಂದಿನ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಕೂಡ ಈ ಎಚ್ಚರಿಕೆ ನೀಡಿದ್ದುಂಟು.  ಈ ವಲಸೆ ತಪ್ಪಿಸಲು ದಶಕಗಳಿಂದ ರಾಜ್ಯ ಸರ್ಕಾರಗಳು ಕೈಗೊಂಡಿರುವ ಕ್ರಮಗಳು ಫಲ ನೀಡಿಲ್ಲ. ರಾಜ್ಯದ ಒಟ್ಟು ೧೩ ಜಿಲ್ಲೆಗಳ ಪೈಕಿ ಐದು ಗಡಿ ಜಿಲ್ಲೆಗಳು, ಪಿತ್ತೋಡಗಢ ಜಿಲ್ಲೆಯ ಎಂಟು ಹಳ್ಳಿಗಳು, ಚಮೋಲಿಯ ಒಂದು, ಚಂಪಾವತದ ಐದು ಗ್ರಾಮಗಳು ಪ್ರೇತಗ್ರಾಮಗಳಾಗಿವೆ. ಪಿತ್ತೋಡಗಢದ ಎರಡು ಮತ್ತು ಚಂಪಾವತದ ನಾಲ್ಕು ಗ್ರಾಮಗಳ ಜನಸಂಖ್ಯೆ ಶೇ.೫೦ರಷ್ಟು ಕುಸಿದಿದೆ.

ಚಮೋಲಿ ಜಿಲ್ಲೆಯ ನೀತಿ ಕಣಿವೆಯಲ್ಲಿ ಹರಿಯುವ ಧೌಲಿಗಂಗಾ ನದಿಯ ಪಕ್ಕದ ಕಚ್ಚಾ ರಸ್ತೆ ಭಾರತ-ಚೀನಾ ಗಡಿಯ ಕಟ್ಟಕಡೆಯ ಐಟಿಬಿಪಿ (ಇಂಡೋ-ಟಿಬೆಟನ್ ಬಾರ್ಡರ್ ಪೊಲೀಸ್) ಪಹರೆ ಠಾಣೆಯತ್ತ ಸಾಗುತ್ತದೆ. ಎಂಬತ್ತು ಮನೆಗಳ ಹಳ್ಳಿ ನೀತಿಯೇ ಗಡಿ ಭಾಗದ ಕಟ್ಟಕಡೆಯ ಗ್ರಾಮ. ಉಪ್ಪು, ತತ್ತಿ ಹಾಲು ಕೂಡ ಇಲ್ಲಿ ದುರ್ಲಭ. ೯೦ಕಿ.ಮೀ.ಗಳಾಚೆಯ ಜೋಶಿಮಠವೇ ಗತಿ. ಟಿಬೆಟ್ ಸ್ವತಂತ್ರವಿದ್ದಾಗ ಅದರ ಜೊತೆಗೆ ಸ್ಥಳೀಯರು ಸರಕು ಸಾಮಗ್ರಿಗಳ ವಿನಿಮಯ ವ್ಯವಹಾರ ನಡೆಸಿ ತಮಗೆ ಬೇಕಾದ ವಸ್ತುಗಳನ್ನು ಪಡೆಯುತ್ತಿದ್ದರು. ೬೨ ವರ್ಷಗಳ ಹಿಂದೆ ಚೀನೀ ಆಕ್ರಮಣದ ನಂತರ ಅದು ನಿಂತು ಹೋಯಿತು. ಅಲ್ಲಲ್ಲಿ ವೃದ್ಧರ ವಿನಾ ಈ ಹಳ್ಳಿಯಲ್ಲಿ ಯುವಜನರ‍್ಯಾರೂ ಇಲ್ಲ.

ಸೇನೆಗೆ ಭರ್ತಿಯಾಗುವುದು ಇಲ್ಲಿನ ಜನರ ಪಾಲಿಗೆ ಸುಲಭದ ಉದ್ಯೋಗಾವಕಾಶ. ರಾಜ್ಯದ ೬೦ ಸಾವಿರಕ್ಕೂ ಹೆಚ್ಚು ಯುವಕರು ಸಶಸ್ತ್ರ ಪಡೆಗಳನ್ನು ಸೇರಿದ್ದಾರೆ. ಇದು ಕೂಡ ಈ ವಲಸೆಯ ಕಾರಣಗಳಲ್ಲೊಂದು. ಇಲ್ಲಿನ ನಿವೃತ್ತ ಯೋಧರ ಸಂಖ್ಯೆ ಕನಿಷ್ಠ ಎರಡು ಲಕ್ಷ.

ಗಡಿ ಗ್ರಾಮಗಳಲ್ಲಿ ಉಂಟಾಗುತ್ತಿರುವ ಈ ‘ಜನಸಂಖ್ಯಾ ನಿರ್ವಾತ’ವು ರಕ್ಷಣಾ ಇಲಾಖೆಯ ತಲೆನೋವಿಗೆ ಕಾರಣವಾಗಿದೆ. ಚಮೋಲಿ ಜಿಲ್ಲೆಯ ಬಾರಾಹೋಟಿ ಪ್ರದೇಶದಲ್ಲಿ ಚೀನೀ ಸೇನೆಯ ಅತಿಕ್ರಮಣದ ಪ್ರಕರಣಗಳು ಜರುಗುತ್ತಲೇ ಇರುತ್ತವೆ. ಕಟ್ಟಕಡೆಯ ಹಳ್ಳಿಯಾದ ಕಾರಣ ನೀತಿಗೆ ಭೇಟಿ ನೀಡಬೇಕಿದ್ದರೆ ಸರ್ಕಾರದ ವಿಶೇಷ ಅನುಮತಿ ಬೇಕು. ಇಲ್ಲಿನ ಮೂಲಸೌಲಭ್ಯಗಳನ್ನು ಸುಧಾರಿಸುವ ಕೆಲಸ ನಡೆದಿದೆ.

ರಾಜ್ಯ ಸರ್ಕಾರ ಐದು ವರ್ಷಗಳ ಹಿಂದೆ ‘ಪಲಾಯನ ಆಯೋಗ’ವೊಂದನ್ನು ರಚಿಸಿತು. ಹಿಂದಿ ಭಾಷೆಯಲ್ಲಿ ‘ಪಲಾಯನ’ ಅಂದರೆ ವಲಸೆ ಎಂದು ಅರ್ಥ. ಅಂದಿಗೆ ಹತ್ತು ವರ್ಷಗಳಷ್ಟು ಹಿಂದಿನಿಂದ ನಡೆದ ವಲಸೆಯ ಕುರಿತು ಅಧ್ಯಯನದ ವರದಿಯ ಪ್ರಕಾರ ರಾಜ್ಯದ ೭೦೦ ಗ್ರಾಮಗಳು ಖಾಲಿಯಾಗಿದ್ದವು. ೧.೧೯ ಲಕ್ಷ ಜನ ಬಯಲುಪ್ರದೇಶಗಳಿಗೆ ತೆರಳಿದ್ದರು. ಈ ಪೈಕಿ ಅರ್ಧದಷ್ಟು ಮಂದಿ ಊರು ತೊರೆದದ್ದು ಜೀವನೋಪಾಯ ಅರಸಿ. ಉಳಿದವರು ಖಾಲಿ ಮಾಡಿದ್ದು ಉತ್ತಮ ವಿದ್ಯಾಭ್ಯಾಸ ಮತ್ತು ಆರೋಗ್ಯ ಸೌಲಭ್ಯಗಳಿಗಾಗಿ. ಅತ್ಯಽಕ ವಲಸೆಯ ಬಿಸಿಯನ್ನು ಎದುರಿಸಿರುವ ಜಿಲ್ಲೆಗಳು ಅಲ್ಮೋಡಾ ಮತ್ತು ಪೌಡಿ ಗಢವಾಲ್.

ಈ ನಿರ್ಜನ ಗ್ರಾಮಗಳ ಸಂಖ್ಯೆ ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ೧,೭೫೦. ಇವುಗಳಲ್ಲಿ ಒಬ್ಬರು ಅಥವಾ ಇಬ್ಬರು ಮಾತ್ರವೇ ವಾಸವಿರುವ ಗ್ರಾಮಗಳೂ ಸೇರಿವೆ. ರಾಜ್ಯದಲ್ಲಿನ ಒಟ್ಟು ಕಂದಾಯ ಗ್ರಾಮಗಳು ೧೬,೫೦೦. ಮಹಿಳೆಯರು ಪುಟ್ಟ ಮಕ್ಕಳು ಮತ್ತು ವೃದ್ಧರು ಮಾತ್ರವೇ ಉಳಿದಿರುವ ಗ್ರಾಮಗಳೂ ಉಂಟು. ಇವುಗಳಲ್ಲಿ ಸಾವು ಸಂಭವಿಸಿದರೆ ಹೆಗಲು ಕೊಡುವವರು ನೆರೆಹೊರೆಯ ಗ್ರಾಮಗಳಿಂದ ಬರಬೇಕು.

ವಲಸೆ ಆಯೋಗದ ವರದಿಯ ಪ್ರಕಾರ ೨೦೧೧ರ ಜನಗಣತಿಯ ನಂತರ ೨೦೧೭ರ ಇಸವಿಯ ತನಕ ೭೩೪ ಹಳ್ಳಿಗಳು ನೂರಕ್ಕೆ ನೂರು ನಿರ್ವಸಿತ ಆಗಿದ್ದವು. ಉಳಿದ ೫೬೫ ಗ್ರಾಮಗಳ ಜನಸಂಖ್ಯೆ ಶೇ.೫೦ರಷ್ಟು ಕುಸಿದಿತ್ತು. ಸ್ಥಳೀಯ ನುಡಿಗಟ್ಟಿನಲ್ಲಿ ಈ ಗ್ರಾಮಗಳಿಗೆ ‘ಭೂತಿಯಾ ಗಾಂವ್’ (ಪ್ರೇತಗ್ರಾಮಗಳು) ಎಂಬ ಹೆಸರು ಬಿದ್ದಿದೆ. ‘ನಮ್ಮ ಹಳ್ಳಿಗಳು ಖಾಲಿಯಾಗತೊಡಗಿವೆ. ಅನುಕೂಲದ ಬದುಕನ್ನು ಅರಸಿ ಕಣಿವೆ ಸೀಮೆಗಳ ಕಾಯಮ್ಮಾಗಿ ತೊರೆಯತೊಡಗಿದ್ದಾರೆ ಜನ. ತುರ್ತು ಗಮನ ಹರಿಸಬೇಕಿದೆ’ ಎಂದು ಉತ್ತರಾಖಂಡದ ಮುಖ್ಯಮಂತ್ರಿ ತ್ರಿವೇಂದ್ರ ರಾವತ್ ಆತಂಕಪಟ್ಟಿದ್ದುಂಟು.

ಹಳ್ಳಿ ಹಳ್ಳಿಗಳೇ ಖಾಲಿಯಾಗುವುದೆಂದರೆ ಗುಳೆಯೆದ್ದು ಹೋದವರು ಮರಳಿ ಬರುವರೆಂಬುದು ಸಾಮಾನ್ಯ ನಿರೀಕ್ಷೆ. ಆದರೆ ಉತ್ತರಾಖಂಡದ ಸಂದರ್ಭದಲ್ಲಿ ಈ ನಿರೀಕ್ಷೆ ನಿಜವಾಗುತ್ತಿಲ್ಲ. ಖಾಲಿಯಾದ ಹಳ್ಳಿಗಳ ಹಾದಿಬೀದಿಗಳನ್ನು ಮರಗಿಡಗಳು ಬೆಳೆದು ಮುಚ್ಚಿಹಾಕತೊಡಗಿವೆ. ಪಾಳು ಬಿದ್ದ ಮನೆಗಳ ಛಾವಣಿಗಳು ಕುಸಿದು ಬಾನಿಗೆ ಬಾಯಿ ತೆರೆದಿವೆ. ಗೋಡೆಗಳ ಬಿರುಕಿನಿಂದ ಬಳ್ಳಿಗಳು ಮೊಳಕೆಯೊಡೆದು ಹರಡಿ ಹಬ್ಬಿವೆ. ರಂಗೋಲಿ ಕಂಡ ಅಂಗಳಗಳೀಗ ಕಂಟಿ ಕುರುಚಲುಗಳ ಎಡೆಯಾಗಿ ಹಾವು ಹಲ್ಲಿಗಳು ಹರಿದಾಡತೊಡಗಿವೆ.

ದೂರದ ಅಡವಿಗಳು ಊರುಗಳತ್ತ ನಡೆದು ಬರತೊಡಗಿವೆ. ಮನೆಮಠಗಳ ಭಣಭಣ ವಸತಿಗಳನ್ನು ನುಂಗಿ ಕಾಲಗರ್ಭದಲ್ಲಿ ಹುಗಿಯುವ ದಿನಗಳು ದೂರವಿಲ್ಲ. ಕೋವಿಡ್ ಲಾಕ್‌ಡೌನ್ ಕಾರಣ ವಲಸೆ ಹೋಗಿದ್ದ ಜನ ಪರ್ವತಪ್ರಾಂತಕ್ಕೆ ಮರಳಿದ್ದರು. ಹೀಗೆ ವಾಪಸಾಗಿದ್ದವರ ಅಂದಾಜು ಸಂಖ್ಯೆ ಮೂರು ಲಕ್ಷ. ಆದರೂ ಪ್ರೇತಗ್ರಾಮಗಳ ಪರಿಸ್ಥಿತಿಯಲ್ಲಿ ಹೆಚ್ಚಿನ ಬದಲಾವಣೆಯೇನೂ ಕಂಡಿರಲಿಲ್ಲ. ಪೇಟೆ, ಪಟ್ಟಣಗಳು, ಮಹಾನಗರಗಳು ಕೋವಿಡ್ ಹೊಡೆತದಿಂದ ಚೇತರಿಸಿಕೊಂಡ ನಂತರ ಮತ್ತೆ ವಲಸೆ ಶುರುವಾಗಿದೆ. ಇದು ಹೊಟ್ಟೆಪಾಡಿನ ಪ್ರಶ್ನೆ. ಹಳ್ಳಿಯಲ್ಲಿ ಕುಳಿತರೆ ಸಂಪಾದನೆಯ ಗತಿಯೇನು, ಬದುಕು ನಡೆಯುವ ಬಗೆಯೆಂತು ಎಂಬ ಪ್ರಶ್ನೆಗಳಿವೆ.

ಅಲ್ಮೋಡ, ಪೌಡೀ ಗಢವಾಲ್, ತೆಹರೀ ಗಢವಾಲ್, ಪಿತ್ತೋಡಗಢ್, ಚಮೋಲಿ, ಬಾಗೇಶ್ವರ್, ರುದ್ರಪ್ರಯಾಗ, ಉತ್ತರಕಾಶಿ, ಚಂಪಾವತ್ ಹಾಗೂ ನೈನಿತಾಲ್ ಜಿಲ್ಲೆಗಳ ಜನಸಂಖ್ಯಾ ಬೆಳವಣಿಗೆ ದರ ತೀವ್ರವಾಗಿ ಕುಸಿದಿದೆ.

ದೈನಂದಿನ ಬದುಕಿನ ಮೂಲಭೂತ ಅಗತ್ಯಗಳಿಲ್ಲದ ಕಾರಣ ಜನ ಹಳ್ಳಿಗೆ ಹಳ್ಳಿಯನ್ನೇ ಖಾಲಿ ಮಾಡಿದ್ದಾರೆ. ಭಾರತ-ಚೀನಾ ಗಡಿಭಾಗದಲ್ಲಿ ಇಂತಹ ೧೪ ಹಳ್ಳಿಗಳಿರುವುದು ಕಳವಳದ ಸಂಗತಿ. ಈ ಹಳ್ಳಿಗಳ ಮೂಲಸೌಲಭ್ಯಗಳನ್ನು ಉತ್ತಮಪಡಿಸುವ ಮತ್ತು ಜನರಿಗೆ ಜೀವನೋಪಾಯದ ದಾರಿಗಳನ್ನು ಕಲ್ಪಿಸುವ ವಚನವನ್ನು ಕೇಂದ್ರ ರಕ್ಷಣಾ ಮಂತ್ರಿ ರಾಜನಾಥಸಿಂಗ್ ನೀಡಿ ವರ್ಷಗಳೇ ಉರುಳಿವೆ.

ದೇಶದ ಸುರಕ್ಷತೆ ಕುರಿತು ಮತ್ತು ಪಾಕಿಸ್ತಾನವನ್ನು ಭೂಪಟದಿಂದಲೇ ಅಳಿಸಿಹಾಕುವ ವೀರಾವೇಶದ ಮಾತಾಡುತ್ತದೆ ನರೇಂದ್ರ ಮೋದಿ ಸರ್ಕಾರ. ಚೀನೀ ಆಕ್ರಮಣದ ವಿಷಯ ಬಂದಾಗ ಏಕೆ ಕುಸಿದು ಕುಗ್ಗಿ ಹೋಗುತ್ತಿದೆ ಎಂಬುದು ಯಕ್ಷಪ್ರಶ್ನೆ.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ