Mysore
21
few clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಮಂಜಿನ ನಗರಿಯಲ್ಲಿಂದು ಸ್ಕ್ವಾ.ಲೀ. ಅಜ್ಜಮಾಡ ದೇವಯ್ಯ ಪುಣ್ಯಸ್ಮರಣೆ

-ಪುತ್ತರಿರ ಕರುಣ್ ಕಾಳಯ್ಯ

ಐದೂವರೆ ದಶಕದ ಹಿಂದೆ(೧೯೬೫) ಭಾರತ-ಪಾಕ್ ನಡುವೆ ನಡೆದ ಯುದ್ಧದಲ್ಲಿ ಶತ್ರು ವಿಮಾನವನ್ನು ಹೊಡೆದುರುಳಿಸಿ ಬಲಿದಾನಗೈದವರು ಕೊಡಗಿನ ಅಮರವೀರ ಯೋಧ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ. ಅವರ ಪ್ರತಿಮೆಯನ್ನು ಮಡಿಕೇರಿಯಲ್ಲಿ ಅವರದೇ ಹೆಸರಿನ ವೃತ್ತದಲ್ಲಿ ಪ್ರತಿಷ್ಠಾಪಿಸಲಾಗಿದೆ. ಅಪ್ರತಿಮ ವೀರಯೋಧ ಸ್ಕ್ವಾ.ಲೀ. ದೇವಯ್ಯನವರ ಕೀರ್ತಿ ಅಜರಾಮರವಾಗಿರುವುದೇ ವೀರಪರಂಪರೆಯ ನಾಡಿಗೆ ಹೆಮ್ಮೆ.
ಕೊಡಗಿನ ವೀರ ಸೇನಾ ಪರಂಪರೆಯ ಇತಿಹಾಸದಲ್ಲಿ ಎರಡನೆಯ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ಮಹಾವೀರ ಚಕ್ರ ಪ್ರಶಸ್ತಿ ಮರಣೋತ್ತರವಾಗಿ ಸ್ಕ್ವಾ.ಲೀ. ಅಜ್ಜಮಾಡ ದೇವಯ್ಯನವರಿಗೆ ದೊರೆತರೆ, ನಿವೃತ್ತ ಜೀವನ ನಡೆಸುತ್ತಿರುವ ಲೆಫ್ಟಿನೆಂಟ್ ಕರ್ನಲ್ ಪುಟ್ಟಿಚಂಡ ಎಸ್. ಗಣಪತಿ ಈ ಗೌರವಯುತ ಪ್ರಶಸ್ತಿಗೆ ಭಾಜನರಾದ ಮತ್ತೋರ್ವರು.
ಕ್ಷಾತ್ರಪರಂಪರೆಯ ಇತಿಹಾಸ ಹೊಂದಿರುವ ಕೊಡಗಿನ ಮಣ್ಣಿನಲ್ಲಿ ಭಾರತೀಯ ವಾಯುಸೇನಾ ಪಡೆಯ ಸ್ಕ್ವಾಡ್ರನ್ ಲೀಡರ್ ಹುದ್ದೆಯನ್ನೇರಿದ ವೀರಸೇನಾನಿ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ, ತನ್ನ ಜೀವದ ಹಂಗು ತೊರೆದು ಶತ್ರುಗಳೊಂದಿಗೆ ಹೋರಾಡಿ ಕೀರ್ತಿ ಮೆರೆಯುತ್ತಲೇ ವೀರ ಮರಣವನಪ್ಪಿ ಇಂದಿಗೆ ೫೬ ವರ್ಷಗಳೇ ಕಳೆದಿವೆ.
ಅಂದು ೧೯೬೫ನೇ ಇಸವಿ, ಭಾರತ-ಪಾಕ್ ಯುದ್ಧದ ಸಂದರ್ಭ. ವಿಂಗ್ ಕಮಾಂಡರ್ ಆಗಿದ್ದ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ಬಿ. ದೇವಯ್ಯರವರಿಗೆ ಪಾಕ್ ಭದ್ರ ಕೋಟೆಯಾಗಿದ್ದ ಸರಗೋಡ ವಾಯುನೆಲೆಯ ಮೇಲೆ ದಾಳಿ ನಡೆಸುವ ಜವಾಬ್ದಾರಿ ವಹಿಸಲಾಗಿತ್ತು. ತಮ್ಮ ಪಾಲಿನ ಹೊಣೆಗಾರಿಕೆಯನ್ನು ನಿಭಾಯಿಸಲು ಹೊರಟ ದೇವಯ್ಯನವರ ತಂಡಕ್ಕೆ ಶತ್ರುಗಳ ವಾಯುನೆಲೆಯನ್ನು ಧ್ವಂಸಗೊಳಿಸುವ ಮೂಲಕ ಗುರಿ ಸಾಧಿಸಿ ಹಿಂತಿರುಗಿ ಬರುವ ಎಲ್ಲ ಅವಕಾಶಗಳಿದ್ದರೂ ತಮ್ಮ ತಂಡದ ಇತರೆ ಯುದ್ಧ ವಿಮಾನಗಳ ಮೇಲೆ ದಾಳಿಯಾಗದಿರಲಿ ಎಂದು ಬೆಂಗಾವಲಾಗಿ ನಿಂತು ಸುರಕ್ಷಿತವಾಗಿ ಹಿಂತಿರುಗುತ್ತಿದ್ದಂತೆ ದಿಢೀರನೆ ಹಿಂಬಾಲಿಸಿದ ಶತ್ರು ವಿಮಾನದೊಂದಿಗೆ ಮತ್ತೆ ಹೋರಾಟ ನಡೆಸಬೇಕಾಗಿತ್ತು.
ಎದೆಗುಂದದ ದೇವಯ್ಯ ಯುದ್ಧ ಮುಂದುವರಿಸಿದರು. ಯುದ್ಧ ವಿಮಾನಗಳು ಪರಸ್ಪರ ಪಲ್ಟಿ ಹೊಡೆಯುತ್ತಾ ಬಹುಹೊತ್ತಿನವರೆಗೆ ದಾಳಿ ಪ್ರತಿದಾಳಿ ಮುಂದುವರಿಸಿದವು. ದೇವಯ್ಯ ತಮ್ಮ ವಿಮಾನದಿಂದ ಶತ್ರುವಿಮಾನಕ್ಕೆ ತೀವ್ರ ಹಾನಿ ಮಾಡಿದರು.
ಶತ್ರುಗಳ ಬಲಿಷ್ಠವಾದ ಸೂಪರ್‌ಸಾನಿಕ್ ವಿಮಾನವನ್ನು ಹೊಡೆದು ಉರುಳಿಸುವ ಮೂಲಕ ಭಾರತೀಯ ವಾಯುಪಡೆಯಲ್ಲಿ ಸಾಹಸದ ಒಂದು ದಾಖಲೆ ನಿರ್ಮಿಸಿದರು. ಕಾಳಗದ ಕೊನೆಯಲ್ಲಿ ದೇವಯ್ಯನವರ ವಿಮಾನಕ್ಕೂ ಧಕ್ಕೆಯಾಯಿತು.
ಆ ಸಂದರ್ಭ ಪ್ಯಾರಾಚೂಟ್‌ನಲ್ಲಿ ಇಳಿಯುವ ಅವಕಾಶವಿತ್ತು. ಆದರೆ, ಶತ್ರುವಿನ ನೆಲದಲ್ಲಿ ಇಳಿದರೆ ಸೆರೆಯಾಗಿ ತಲೆತಗ್ಗಿಸಲು ಕೊಡಗಿನ ಮಹಾವೀರನಿಗೆ ಮನಸ್ಸಾಗಲಿಲ್ಲವೋ ಅಥವಾ ಅದಾಗಲೇ ಹೊತ್ತಿ ಉರಿಯುತ್ತಿದ್ದ ವಿಮಾನದಿಂದ ಹೊರಜಿಗಿಯಲು ಸಾಧ್ಯವಾಗಿಲ್ಲವೋ, ತಾನಿದ್ದ ಯುದ್ಧವಿಮಾನ ಪತನಗೊಂಡು ಸುಟ್ಟು ಕರಕಲಾದ ಪರಿಣಾಮ ದೇವಯ್ಯ ತಮ್ಮ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದರು.
೧೯೬೫ರ ಸೆಪ್ಟೆಂಬರ್ ೭ ರಂದು ನಡೆದ ಈ ಘಟನೆಯಲ್ಲಿ ದೇವಯ್ಯ ಸಾಹಸ ಮೆರೆದು ತನ್ನ ಪ್ರಾಣವನ್ನು ದೇಶಕ್ಕಾಗಿ ಅರ್ಪಿಸಿದರು. ಆದರೆ ಅವರ ಈ ವೀರ ತ್ಯಾಗ ಬಲಿದಾನ ತಿಳಿಯಲು ಸಾಕಷ್ಟು ವರ್ಷಗಳೇ ಬೇಕಾಯಿತು.
ಯುದ್ಧದಲ್ಲಿ ಭಾಗಿಯಾಗಿದ್ದರೂ ಮಿಸ್ಸಿಂಗ್ ಲಿಸ್ಟ್‌ನಲ್ಲಿದ್ದ ಹುತಾತ್ಮ ದೇವಯ್ಯನವರ ಹೋರಾಟದ ಪರಿಯನ್ನು ಯುದ್ಧದಲ್ಲಿ ಹೋರಾಡಿ ಬದುಕುಳಿದ ಶತ್ರು ದೇಶದ ಪೈಲಟ್ ಅಮ್ಜದ್ ಹುಸೇನ್ ವಿವರಿಸಿದ್ದನ್ನು ೨೩ ವರ್ಷಗಳ ನಂತರ ಪಾಕಿಸ್ತಾನದ ಖ್ಯಾತ ಬರಹಗಾರನೊಬ್ಬ ಭಾರತ- ಪಾಕಿಸ್ತಾನ ಯುದ್ಧದ ಕುರಿತು ರಚಿಸಿದ ಕೃತಿಯಲ್ಲಿ ಪ್ರಸ್ತಾಪಿಸಿದರು. ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯನವರ ಸಾಧನೆ ಹಾಗೂ ಹೋರಾಟ ಅಪ್ರತಿಮ ವಾದುದೆಂದು ದಾಖಲಾದ ಫಲವಾಗಿ ಇಡೀ ಜಗತ್ತಿಗೆ ತಿಳಿಯಿತು.
ಕೊಡಗಿನ ಶ್ರೀಮಂಗಲದ ಕುರ್ಚಿ ಗ್ರಾಮದ ಅಜ್ಜಮಾಡ ಬೋಪಯ್ಯ ಹಾಗೂ ನೀಲಮ್ಮ ದಂಪತಿಗಳ ಪುತ್ರ ದೇವಯ್ಯ ೧೯೫೪ರ ತನ್ನ ೨೨ರ ಹರಯದಲ್ಲಿ ಸೇನೆಗೆ ಸೇರಿದರು. ಅವರ ೧೧ ವರ್ಷದ ಸೇನಾ ಜೀವನದ ಅಸಾಮಾನ್ಯ ಸಾಹಸ, ಎದೆಗಾರಿಕೆ ತ್ಯಾಗ ಬಲಿದಾನಗಳನ್ನು ಪರಿಗಣಿಸಿ ಭಾರತ ಸರ್ಕಾರ ಮರಣೋತ್ತರವಾಗಿ ದೇವಯ್ಯರವರಿಗೆ ೧೯೮೮ ರಲ್ಲಿ ಮಹಾವೀರಚಕ್ರ ಪ್ರಶಸ್ತಿಯನ್ನು ಅಂದಿನ ರಾಷ್ಟ್ರಪತಿ ಆರ್. ವೆಂಕಟರಾಮನ್‌ರವರು ದಿ.ದೇವಯ್ಯರವರ ಪತ್ನಿ ಸುಂದರಿ ದೇವಯ್ಯರವರಿಗೆ ಪ್ರದಾನ ಮಾಡಿ ಗೌರವಿಸಿದರು.
ಅಂದೊಂದು ದಿನ ಪತ್ನಿ ಮಕ್ಕಳೊಂದಿಗೆ ಇದ್ದ ಸಮಯ ವಾಯುಪಡೆಯ ಸಂದೇಶ ರವಾನಿಸುವ ಯೋಧನೊಬ್ಬ ಬಂದು ನೀಡಿದ ಟೆಲಿಗ್ರಾಂನಲ್ಲಿ ಗಡಿಯಲ್ಲಿ ಪಾಕಿಸ್ತಾನದ ಸೈನ್ಯವು ಅಟ್ಟಹಾಸ ಮೆರೆಯುತ್ತಿದ್ದು ಯುದ್ಧಕ್ಕೆ ಸಿದ್ಧರಾಗುವಂತೆ ಸೂಚನೆಯಿತ್ತು. ಕುಟುಂಬದವರಿಗೆ ಧೈರ್ಯತುಂಬಿ ಯುದ್ಧಕ್ಕೆ ಹೊರಟರು. ಯುದ್ಧ ಗೆದ್ದು ಅಮರರಾದರು.
ಬದುಕನ್ನು ದೇಶಕ್ಕಾಗಿ ಮುಡುಪಾಗಿಟ್ಟ ಮಹಾವೀರ ಸ್ಕ್ವಾಡ್ರನ್ ಲೀಡರ್ ದಿ. ಅಜ್ಜಮಾಡ ದೇವಯ್ಯನವರ ನೆನಪನ್ನು ದಾಖಲೆ ಮಾಡಬೇಕೆನ್ನುವುದು ಕೊಡವ ಮಕ್ಕಡಕೂಟದ ಆಶಯವಾಗಿತ್ತು. ಸಾಹಿತಿ ಹಾಗೂ ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ಅವರು ದೇವಯ್ಯನವರ ಪರಿಚಯ, ದೇಶಪ್ರೇಮ, ಹೋರಾಟದ ಬಗ್ಗೆಯೆಲ್ಲ ಅಧ್ಯಯನ ನಡೆಸಿ ಸಾಕಷ್ಟು ಮಾಹಿತಿ ಸಂಗ್ರಹಿಸಿ ೧೯೬೫ರ ಯುದ್ದ ಹಾಗೂ ಕೊಡಗಿನ ಮಹಾವೀರ ಎಂಬ ಕೃತಿಯನ್ನು ರಚಿಸಿದರು.
ಕೃತಿಯಲ್ಲಿ ಸ್ಕ್ವಾಡ್ರನ್ ಲೀಡರ್ ದಿ. ಅಜ್ಜಮಾಡ ದೇವಯ್ಯ ನವರ ಜೀವನ ಸಾಧನೆಯನ್ನು ಎಳೆಎಳೆಯಾಗಿ ವಿವರಿಸಲಾಗಿದೆ.
ಕೊಡವ ಮಕ್ಕಡಕೂಟ ಹಾಗೂ ಅಜ್ಜಮಡ ಕುಟುಂಬ ಕೃತಿಯನ್ನು ೨೦೧೭ರ ಸೆಪ್ಟೆಂಬರ್ ೭ ರಂದು ಅನಾವರಣಗೊಳಿಸಿತ್ತು. ೨೦೧೮ ಫೆಬ್ರವರಿ ೧೫ರಂದು ದ್ವಿತೀಯ ಮುದ್ರಣ ಮಾಡಲಾಗಿದೆ.
ಕೊಡವ ಮಕ್ಕಡ ಕೂಟ ಅಜ್ಜಮಾಡ ಕುಟುಂಬಸ್ಥರ ಸಹಯೋಗದೊಂದಿಗೆ ಮಡಿಕೇರಿಯ ಕೇಂದ್ರಬಿಂದುವಾದ ಹಳೆಯ ಖಾಸಗಿ ಬಸ್ ನಿಲ್ದಾಣದಲ್ಲಿ ದೇವಯ್ಯ ಪ್ರತಿಮೆ ಪ್ರತಿಷ್ಠಾಪನೆ ಮಾಡಿದೆ. ಪ್ರತಿವರ್ಷ ಸೆ.೭ರಂದು ವೀರ ಯೋಧ ದೇವಯ್ಯ ಅವರ ಸ್ಮರಣೆ ಮಾಡಿಕೊಂಡು ಬರಲಾಗುತ್ತಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ