Mysore
26
haze

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಯಾಚೇನಹಳ್ಳಿಯ ಹಾಡುಹಕ್ಕಿ ಚೆನ್ನಾಜಮ್ಮ 

chennamma

‘ನಮ್ಮಳ್ಳಿಲಿ ಕೂಲಿನಾಲಿ ಗೈಕಂಡು ನಿಂತಿದ್ಮಿ. ಗೈಯಾಕೆ ಯಾರಾದ್ರು ಕರುದ್ರೆ ಹತ್ರುಪಾಯಿ ಸಿಕ್ಕದು. ಇಲ್ಲಾ ಅಂದ್ರೆ ಏನೂ ಇಲ್ಲ. ಕೂಲಿಗೆ ಅಂತ ಹೋದ್ರೆ ಅಲ್ಲಿ ನಮ್ಮೂರ್ ಪಕ್ಕದ ಎಲೆಹಳ್ಳಿ ನಿಂಗಮ್ಮ ಅನ್ನೋರು ಗೈಮೆಗೆ ಬರರು. ಅವ್ರು ಇದ್ಯಾಕ್ರಮ್ಮಿ ಸುಮ್ನೆ ಗೇದರಿ ಹಾಡೇಳಿ ಅನ್ನರು. ಅವ್ರ ಸ್ವರ ಚೆಂದಾಗಿತ್ತು. ಜಿನಾ ಒಂದೊಂದ್ ಹಾಡ ಹೇಳ್ಕೊಡರು. ಅವ್ರ ಸ್ವರಕ್ಕೆ ನಾಮೆಲ್ಲಾ ಸ್ವರವ ಸೇರ್ಸಮು.

ಹಿಂಗೆ ಒಂದೊಂದ್ ಪದವ ಕಲ್ತ್ಕಂಡಿ. ಹಾಡೋ ರುಚಿ ಹತ್ತುದ್ ಮ್ಯಾಲೆ ನಮ್ಮೂರಲ್ಲಿ ಹಾಡ್ತಾ ಇದ್ದವರ ತಮಕ್ಕೆಲ್ಲಾ ಹೋಗಿ ಅವ್ರು ಹಾಡ್ತಾ ಇದ್ದದ್ದನ್ನೆಲ್ಲಾ ಎದೆಗಿಳಿಸ್ಕಂಡಿ. ಆಮ್ಯಾಕೆ ಹಾಡದೇ ನನ್ ಬದುಕಾಗೊಯ್ತು’ ಹಾಡುವುದನ್ನು ಕಲಿತು ನಾಡಿನ ವಿವಿಧ ಪ್ರತಿಷ್ಠಿತ ವೇದಿಕೆಯಲ್ಲಿ ನಿರ್ಭಿಡೆಯಿಂದ ಹಾಡುತ್ತಿರುವ ಜನಪದ ಹಾಡುಗಾರ್ತಿ ಚೆನ್ನಾಜಮ್ಮ , ಬನ್ನೂರು ಸಮೀಪದ ಯಾಚೇನಹಳ್ಳಿಯವರು. ಕಷ್ಟದ ನಡಿಗೆಯಲ್ಲೇ ಬದುಕಿನ ದಾರಿಯನ್ನು ಸವೆಸುತ್ತಿರುವ ಇವರು ಸುಖದ ಪರಿಚಯವಿಲ್ಲದೆ ಜೀವಿಸುತ್ತಿದ್ದಾರೆ. ಬಡತನದ ಒದ್ದಾಟದಲ್ಲೂ ಅವರು ಹಾಡುವುದಕ್ಕೆ ಕುಳಿತರೆ ಪದಗಳು ಮಧುರವಾಗಿ ಒದಗಿಬರುತ್ತವೆ. ಸರಸ್ವತಿ ನನ್ನೆದೆ ಒಳಗೆ, ಸರಸ್ವತಿ ನನಗೆ ಮತಿ ಎಂದು ವಿದ್ಯಾದೇವತೆಯನ್ನು ವಿನಮ್ರಭಾವದಿಂದ ಚೆನ್ನಾಜಮ್ಮ ನೆನೆಯುತ್ತಾ, ತನ್ನ ಕರಾಳ ಬದುಕಿನ ಅನುಭವಗಳನ್ನು ಎಳೆ ಎಳೆಯಾಗಿ ಹೇಳತೊಡಗಿದರು.

‘ಉಣ್ಣಾಕೆ ಹಿಟ್ಟಿಲ್ಲ. ಗೈದ್ರೆ ಉಂಟು, ಇಲ್ಲಾಂದ್ರೆ ಇಲ್ಲ. ನಮ್ಮವ್ವ ಮೂರ್ತಿಂಗ್ಳು ಮಗೀನಾ ಬುಟ್ಬುಟ್ಟು ಒಕ್ಕಲಗೇರಿಗೆ ಕೂಲಿಗೆ ಹೊಂಟೋಗರು. ನಾನು ಇಸ್ಕೂಲ್ ಗಿಸ್ಕೂಲ್ಗೆ ಹೋದೋಳಲ್ಲ. ನನ್ನ ಎಳೆತಂಗಿಯ ನೋಡ್ಕಳದೆ ನನ್ ಕೆಲ್ಸ. ಆ ಮಗಿ ಅತ್ರೆ, ನಾನಿಯೆ ಸಮಾಧಾನ ಮಾಡ್ಬೇಕಿತ್ತು. ಅವ್ರಿವರ್ ಮನೇಲಿ ಅನ್ನವ ಈಸ್ಕಂಡು ಮಗೀಗೆ ತಿನ್ಸದು. ನಮ್ಮಣ್ಣ ಇಟ್ಗೆ ಪ್ಯಾಕ್ಟ್ರೀಲಿ ಕೆಲ್ಸ ಮಾಡ್ತಿದ್ದ.

ಗೋಣಿ ತಾಟ ತಲೆ ಮ್ಯಾಲೆ ಹಾಕಂಡ್ರೆ ಗಂಜಲ ಸುರಿಯದು. ಹಿಂಗೆ ತಂಗೀದಿರ್ನ ತನ್ನೆಗಲ ಮೇಲೆ ಇಟ್ಕಂಡು ಕಷ್ಟಪಟ್ಟು ಸಾಕ್ದ. ನಮ್ಮವ್ವ ದುಡ್ದು ದುಡ್ದೇ ಸತ್ತೋದ್ಲು. ಹಿಂದ್ಗುಂಟ ನಾನ್ ಆಡಿ ಬೆಳೆಸಿದ್ದ ತಂಗಿ ಮಗಾನು ಹೋಗ್ಬುಟ್ಟ. ಒಸಿ ಜಿನ ಆದ್ ಮ್ಯಾಲೆ ನಮ್ಮಣ್ಣನೂ  ಹೋಗ್ಬುಟ್ಟ. ಈ ಸಾಲು ಸಾವ ನೋಡ್ಬುಟ್ಟು ನಾನ್ಯಾಕ್ ಇರ್ಬೇಕು ಅನ್ನುಸ್ತು. ಇಷ್ಟೆಲ್ಲಾ ನೋವ್ಗಳನ್ನ ಎದೆಯೊಳಗೆ ಇಟ್ಕಂಡು ಉಸಿರಾಡ್ತಾ ಇವ್ನಿ. ಇದನ್ನೆಲ್ಲಾ ಮರಿಸ್ತಾಯಿರೋದು ಆ ನಮ್ಮವ್ವೆ ಸರಸ್ವತಿಯೆ. ನಾನೂವೆ ಹೊರಗೆ ಹಾಡದಲ್ದಿಯೇ ಕಳೆಗಿಳೆ ಕೀಳಕೆ ಹೊಯ್ತಿನಿ. ನಂಗೂವೆ ಕಾಯ್ಲೆ. ತಿಂಗಳ್ಗೆ ಒಂದ್ ಸಾವಿರ್ ರೂಪಾಯಿ ಗುಳ್ಗೆಗೇ ಬೇಕು.

ಈಗ ಕೂಲಿಗೋಗಕೂ ಆಯ್ತಾಯಿಲ್ಲ. ಜೀಮ ಸುಸ್ತಾಯ್ತದೆ. ನಮ್ಮೆಜಮಾನ್ರುಗೆ ಏಳ್ಕುಂಟೆ ಗದ್ದೆ ಅದೆ. ಕಾವಲಿಯಿಂದ ನೀರ್ಬುಟ್ರೆ ಮಾತ್ರ ಒಸಿ ಬತ್ತ ಹಾಕ್ತಾರೆ. ನೀರಿಲ್ಲ ಅಂದ್ರೆ ಅವ್ರೂವೆ ಬೇರೆ ಹೊಲಕ್ಕೆ ಕೂಲಿಗೊಯ್ತರೆ. ಹುಟ್ಟುದ್ ಮನೇಲೂ ಕಷ್ಟ ಹೋದ್ ಮನೇಲೂ ಕಷ್ಟ. ಏನ್ಮಾಡದು ಹಿಂಗೇ ಬದುಕ್ಬೇಕು ಅಂತ ಆ ದೇವ್ರು ನನ್ ಹಣೆನಾಗೆ ಬರುದ್ಬುಟ್ಟವನೆ.

ಇಲ್ಲೀಗಂಟ ಕೂಲಿನಾಲಿ ಮಾಡ್ಕಂಡು ನಾನು ಮಕ್ಕುಳ್ನ ಸಾಕಿಮಿ. ನಾಮು ವಯಸ್ಸಾದ್ಮೇಲೆ ಮೂಲೇಲಿ ಕುಂತ್ಕಂಡ್ ಮ್ಯಾಲೆ ನಮ್ಮ ನೋಡ್ಕಳ್ಳದು ಅವರ ಧರ್ಮ. ಈಗುನ್ ಕಾಲ್ದಲ್ಲಿ ಮಕ್ಕ ನಮ್ಮ ನೋಡ್ಕತರೆ ಅನ್ನೋದೆಲ್ಲಾ ಸುಳ್ಳು. ಮದುವೆ ಆಯ್ತಿದ್ದಂಗೆ ಹೆಂಡ್ತಿಯಾ ಕರ್ಕಂಡು ಹೆತ್ತವರ ಮೊಕನೂ ನೋಡ್ದೆ ಹೊಯ್ತಿರ್ತರೆ. ನಾಮು ಅದನ್ನೆಲ್ಲಾ ನೆಚ್ಕಂಡಿಲ್ಲ. ನಾಲಗೇಲಿ ಸರಸ್ವತಿ ಅವುಳೆ. ಸಕ್ತಿ ಇರಗಂಟ ಹಾಡ್ತನೇ ಇರ್ತೀನಿ.

ಇದ ಬುಟ್ರೆ ನಂಗೇನೂ ಗೊತ್ತಿಲ್ಲ’ ಹೀಗೆ ಅಂತರಾಳದ ದುಃಖ ದುಮ್ಮಾನಗಳನ್ನು ಹೇಳುತ್ತಲೆ, ‘ಟೇಮಿಗೆ ಸರಿಯಾಗಿ ಗುಳಿಗೆ ತಗಬೇಕು ಇರಿ ಸಾ’ ಎಂದು ಗುಳಿಗೆಗಾಗೆ ಮೀಸಲಾಗಿದ್ದ ಒಂದು ಪ್ಲಾಸ್ಟಿಕ್ ಚೀಲದಿಂದ ಎಂಥದ್ದೋ ಒಂದು ಗುಳಿಗೆಯನ್ನು ನುಂಗಿ, ‘ಮಾತು ಸಾಕು ಸಾ, ಹಾಡ್ತೀನಿ‘ ಎಂದು ಹಾಡಲು ಶುರು ಮಾಡಿದರು. ಪಕ್ಕದಲ್ಲಿ ಕುಳಿತಿದ್ದ ಸಹಗಾಯಕಿಯರಾದ ನಿಂಗಮ್ಮ, ರಾಜಮ್ಮ, ಮಂಚಮ್ಮ ಅವರು ಚೆನ್ನಾಜಮ್ಮ ಅವರ ದನಿಗೆ ದನಿಯಾದರು. ಮಾದಪ್ಪ, ಭೈರುವ, ವೆಂಕಟರಮಣ ಸ್ವಾಮಿ, ದಂಡಿನಮ್ಮ, ಮಂಚಮ್ಮ- ಈ ಎಲ್ಲಾ ದೇವರುಗಳ ಮೇಲೆ ಹಾಡುವ ಇವರು ಸೋಬಾನೆ ಪದಗಳಲ್ಲಿನ ವಿವಿಧ ಶಾಸ್ತ್ರದ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡುತ್ತಾರೆ. ತೆರೆದ ಕಂಠದಿಂದ ನಗುಮೊಗದಿಂದಲೇ ಹಾಡುತ್ತಿದ್ದ ಚೆನ್ನಾಜಮ್ಮ ಅಣ್ಣ ತಮ್ಮರ ಹಾಡನ್ನು ಹಾಡುವಾಗ ಅವರ ಕಂಠ ಬಿಗಿಯುತ್ತಿತ್ತು, ಕಣ್ಣೀರು ಹಾಡಿನ ಜೊತೆ ಹರಿಯುತ್ತಿತ್ತು!

ಡಾ. ಮೈಸೂರು ಉಮೇಶ್

Tags:
error: Content is protected !!