ಡಿ.ವಿ.ರಾಜಶೇಖರ್, ಹಿರಿಯ ಪತ್ರಕರ್ತರು
ಪಾಕಿಸ್ತಾನದ ಗಡಿ ಭಾರತಕ್ಕೆ ಸಂಘರ್ಷದ ಕೇಂದ್ರವಾಗಿರುವಂತೆ ಇತ್ತೀಚಿನ ವರ್ಷಗಳಲ್ಲಿ ಚೀನಾದ ಗಡಿಯೂ ಸಂಘರ್ಷದ ಕೇಂದ್ರವಾಗುತ್ತಿದೆ. ಚೀನಾದ ಗಡಿಯಲ್ಲಿ ಎರಡೂ ದೇಶಗಳ ಸೈನಿಕರ ನಡುವೆ ಮತ್ತೆ ಮತ್ತೆ ಘರ್ಷಣೆಗಳು ಸಂಭವಿಸುತ್ತಿವೆ. ಪಾಕಿಸ್ತಾನದ ಜೊತೆಗಿನ ಸಂಘರ್ಷದಂತೆೆಯೇ ಚೀನಾ ಜೊತೆಗಿನ ಸಂಘರ್ಷ ಭಾರತದಲ್ಲಿ ಈಗ ಹೆಚ್ಚು ಭಾವೋದ್ರೇಕಕ್ಕೆ ಕಾರಣವಾಗುತ್ತಿದೆ.
ಪಾಕಿಸ್ತಾನ ಭಯೋತ್ಪಾದನೆಗೆ ಉತ್ತೇಜನ ನೀಡುವ ಮೂಲಕ ಭಾರತದ ಜೊತೆ ಪರೋಕ್ಷ ಸಂಘರ್ಷ ನಡೆಸುತ್ತಿದ್ದರೆ, ಚೀನಾ ಪರೋಕ್ಷ ಮತ್ತು ಪ್ರತ್ಯಕ್ಷ ಎರಡೂ ಮಾರ್ಗವನ್ನು ಅನುಸರಿಸುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಚೀನಾವು, ಪಾಕಿಸ್ತಾನಕ್ಕೆ ಬೆಂಬಲವಾಗಿ ನಿಲ್ಲುವುದರ ಜೊತೆಗೆ ಭಾರತದ ಬೆಳವಣಿಗೆಗೆ ಅಡ್ಡಗಾಲು ಹಾಕುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಮುಖ್ಯವಾಗಿ ಭಾರತ ವಿಶ್ವ ಸಂಸ್ಥೆಯ ಭದ್ರತಾಮಂಡಳಿಯ ಸದಸ್ಯ ದೇಶವಾಗುವುದಕ್ಕೆ ಚೀನಾ ಈ ಬಾರಿಯೂ ಅಡ್ಡಿಪಡಿಸಿ ಆಫ್ರಿಕಾಕ್ಕೆ ಆ ಸ್ಥಾನ ಕೊಡಬೇಕೆಂದು ಸಲಹೆ ಮಾಡಿದೆ. ಈ ಸಲಹೆಗೆ ಪಾಕಿಸ್ತಾನ ಬೆಂಬಲ ನೀಡಿದೆ.
ಕಳೆದ ವರ್ಷ ಲಡಾಖ್‌ನ ಗಲ್ವಾನ್ ಕಣಿವೆ ಪ್ರದೇಶದಲ್ಲಿ ಎರಡೂ ಕಡೆಯ ಸೈನಿಕರ ನಡುವಣ ಘರ್ಷಣೆಯಲ್ಲಿ ಅಧಿಕ ಸಾವು ನೋವು ಸಂಭವಿಸಿತ್ತು. ಎರಡೂ ಕಡೆಯ ಕಮಾಂಡರುಗಳ ನಡುವಣ ಮಾತುಕತೆಯಿಂದಾಗಿ ಘರ್ಷಣೆ ತಣ್ಣಗಾಗಿತ್ತು.
ವಿವಾದವನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳುವ ರಾಜೀಸೂತ್ರದ ಪ್ರಕಾರ ಎರಡೂ ಕಡೆಯ ಸೈನಿಕರು ಕೆಲವು ಪ್ರದೇಶಗಳಿಂದ ಹಿಂದೆ ಸರಿದಿದ್ದರು. ಮುಖ್ಯವಾಗಿ ಚೀನೀ ಸೈನಿಕರು ಹಿಂದೆ ಸರಿದದ್ದು ಗಮನಾರ್ಹವಾಗಿತ್ತು. ಈ ಗಲ್ವಾನ್ ಕಣಿವೆ ಪ್ರದೇಶದ ಕೆಲವು ಭಾಗ ಭಾರತದ ಹಿಡಿತದಲ್ಲಿರುವುದು ಮತ್ತು ಕೆಲವು ಭಾಗ ಚೀನಾದ ಹಿಡಿತದಲ್ಲಿರುವುದು ಗೊಂದಲಕ್ಕೆ ಕಾರಣವಾಗಿದೆ.
ಆ ಪ್ರದೇಶದಲ್ಲಿ ಕೆರೆ, ಹೊಳೆ, ಗುಡ್ಡ ಬೆಟ್ಟಗಳಿರುವುದರಿಂದ ಗಡಿಯನ್ನು ನಿಖರವಾಗಿ ಗುರುತಿಸಿಲ್ಲ. ಭಾರತ ಪ್ರತಿಪಾದಿಸುವ ವಾಸ್ತವ ಗಡಿ ನಿಯಂತ್ರಣ ರೇಖೆಗೆ ಚೀನಾ ಮಾನ್ಯತೆ ನೀಡಿಲ್ಲ. ಹೀಗಾಗಿ ಗೊಂದಲ ಇದೆ. ಸಂಘರ್ಷಕ್ಕೂ ಕಾರಣವಾಗಿದೆ.
ಇದೇ ರೀತಿ ಅರುಣಾಚಲ ಪ್ರದೇಶ ರಾಜ್ಯದ ಪೂರ್ವದಲ್ಲಿರುವ ತವಾಂಗ್ ಸೆಕ್ಟರ್‌ಗೆ ಕೆಲವು ದಿನಗಳ ಹಿಂದೆ ಚೀನಾ ಸೈನಿಕರು ಅತಿಕ್ರಮ ಪ್ರವೇಶ ಮಾಡಿದ್ದೇ ಕಾರಣವಾಗಿ ಸಂಘರ್ಷ ಸಂಭವಿಸಿದೆ ಎಂದು ಭಾರತ ಹೇಳುತ್ತಿದೆ.
ವಾಸ್ತವ ಗಡಿಯನ್ನು ಬದಲಾಯಿಸುವ ಪ್ರಯತ್ನವನ್ನು ಚೀನೀ ಸೈನಿಕರು ನಡೆಸಿದರು ಎಂದು ಭಾರತದ ಗೃಹಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಇಂಥದ್ದೇ ಆರೋಪವನ್ನು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯ ವಕ್ತಾರ ಲಾಂಗ್ ಶಹುವಾ ಮಾಡಿದ್ದಾರೆ. ‘ಅರುಣಾಚಲ ಪ್ರದೇಶ ಟಿಬೆಟ್‌ನ ಭಾಗವಾಗಿದೆ, ಟಿಬೆಟ್ ಚೀನಾಕ್ಕೆ ಸೇರಿರುವುದರಿಂದ ಭಾರತ ಆ ಪ್ರದೇಶವನ್ನು ಅಕ್ರಮವಾಗಿ ಅತಿಕ್ರಮಿಸಿದೆ‘ ಎಂಬ ಹಳೆಯ ವಾದವನ್ನು ಶಹುವಾ ಪುನರುಚ್ಚರಿಸಿದ್ದಾರೆ.
ಟಿಬೆಟ್, ಚೀನಾ, ಬ್ರಿಟನ್ ನಡುವೆ ಹಿಂದೆ ಒಂದು ಒಪ್ಪಂದವಾಗಿತ್ತು. ಭಾರತದ ಭಾಗವಾಗಿ ಅರುಣಾಚಲ ಪ್ರದೇಶವನ್ನು ಗುರುತಿಸುವುದು ಮತ್ತು ಟಿಬೆಟ್ಟನ್ನು ಚೀನಾದ ಭಾಗವಾಗಿ ಗುರುತಿಸುವುದು ಈ ಒಪ್ಪಂದದ ಭಾಗವಾಗಿತ್ತು. ಅರುಣಾಚಲ ಪ್ರದೇಶವನ್ನು ಬಿಟ್ಟುಕೊಡಲು ಚೀನಾ ಸಿದ್ಧವಿರಲಿಲ್ಲ. ಹೀಗಾಗಿ ಒಪ್ಪಂದ ಮುರಿದು ಬಿದ್ದಿತ್ತು. ಭಾರತ ಸ್ವಾತಂತ್ರ್ಯಾ ನಂತರ ಅರುಣಾಚಲ ಪ್ರದೇಶ ಭಾರತದ ಭಾಗವಾಗಿ ಬೆಳೆಯಿತು.
ಚೀನಾ ಹಲವು ದಶಕಗಳ ಕಾಲ ಅದರ ಸುದ್ದಿ ಎತ್ತಲಿಲ್ಲ. ಟಿಬೆಟ್ ಪ್ರದೇಶ ತನ್ನ ಭಾಗವಾದ ಮೇಲೆ ಚೀನಾ ದೇಶ ಅರುಣಾಚಲ ಪ್ರದೇಶದ ಮೇಲೆ ಕಣ್ಣುಹಾಕಿದೆ. ಕಳೆದ ವಾರ ನಡೆದಿರುವುದು ಒಂದು ಘಟನೆಯಷ್ಟೆ. ಹಾಗೆ ನೋಡಿದರೆ ಚೀನಾ ಅರುಣಾಚಲದ ಗಡಿಯಲ್ಲಿ ದೊಡ್ಡ ಗ್ರಾಮವೊಂದನ್ನು ಕಟ್ಟಿ ಸೈನಿಕರಿಗೆ ವಸತಿ ಕಲ್ಪಸಿದೆ. ಚೀನಾದ ಮುಖ್ಯ ಭಾಗಕ್ಕೆ ಸಂಪರ್ಕ ಕಲ್ಪಿಸುವ ದೊಡ್ಡ ದೊಡ್ಡ ರಸ್ತೆಗಳು ನಿರ್ಮಾಣವಾಗಿದೆ.. ಸೈನಿಕ ನೆಲೆಯನ್ನು ನಿರ್ಮಿಸಲಾಗಿದೆ. ಇದು ಭಾರತಕ್ಕೆ ತಿಳಿಯದಿರುವುದೇನಲ್ಲ. ಸರ್ಕಾರ ಚೀನಾಕ್ಕೆ ಪ್ರತಿಭಟನೆ ಸಲ್ಲಿಸಿದೆ.
ಆದರೆ ಚೀನಾ ನಾಯಕರು ಭಾರತದ ಪ್ರತಿಭಟನೆಯನ್ನು ಕಿವಿಗೇ ಹಾಕಿಕೊಂಡಿಲ್ಲ. ಲಡಾಖ್ ವಿಚಾರದಲ್ಲಿಯೇ ಆಗಲಿ, ಅರುಣಾಚಲ ಪ್ರದೇಶದ ವಿಚಾರದಲ್ಲಿಯೇ ಆಗಲಿ ‘ನಮ್ಮ ಪ್ರದೇಶವನ್ನು ನಾವು ನಿಯಂತ್ರಣಕ್ಕೆ ತೆಗೆಕೊಳ್ಳುವ ಪ್ರಯತ್ನ ನಡೆಸುತ್ತಿದ್ದೇವೆ’ ಇದರಲ್ಲಿ ಅತಿಕ್ರಮದ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎನ್ನುವ ನಿಲುವನ್ನು ಚೀನಾ ನಾಯಕರು ತಳೆದಿದ್ದಾರೆ.
ಭಾರತ ಈ ನಿಲುವನ್ನು ಒಪ್ಪುವುದಿಲ್ಲ. ಹೀಗಾಗಿ ವಿವಾದ, ಘರ್ಷಣೆ. ಚೀನಾದ ನಿಲುವನ್ನು ನೋಡಿದರೆ ಅದು ಸುಲಭವಾಗಿ ಭಾರತದ ನಿಯಂತ್ರಣದಲ್ಲಿರುವ ಪ್ರದೇಶಗಳನ್ನು ಬಿಟ್ಟುಕೊಡುವಂತೆ ಕಾಣುವುದಿಲ್ಲ. ಅಂತಾರಾಷ್ಟ್ರೀಯ ಒತ್ತಡ ಮತ್ತು ಮಾತುಕತೆ ಮಾತ್ರ ಉಳಿದಿರುವ ದಾರಿ. ಯುದ್ಧ ಯಾರೂ ಯೋಚಿಸಬಾರದ ಆಲೋಚನೆ. ಚೀನಾ ಹಿಂದೆಯೂ ಅತಿಕ್ರಮಿಸಿಕೊಂಡಿದೆ ಮತ್ತು ಈಗಲೂ ಅದನ್ನೇ ಮಾಡುತ್ತಿದೆ. ವಾಸ್ತವ ವಿಚಾರಗಳನ್ನು ಜನರ ಮುಂದಿಟ್ಟು ಸಂಘಟಿತವಾಗಿ ಅಂತಾರಾಷ್ಟ್ರೀಯವಾಗಿ ಒತ್ತಡ ಹೇರಿ ಚೀನಾವನ್ನು ಬಗ್ಗಿಸುವ ವಿಧಾನ ಹುಡುಕುವುದೇ ಉಳಿದಿರುವ ದಾರಿ.
ಚೀನಾ ಈಗ ಬಲಾಢ್ಯ ದೇಶ. ಅಭಿವೃದ್ಧಿಯಲ್ಲಿ ವಿಶ್ವದ ಮುಂಚೂಣಿ ದೇಶಗಳಲ್ಲಿ ಒಂದು. 1949ರ ವೇಳೆಗೆ (ಹೊಸಚೀನಾ ಸ್ಥಾಪಿತವಾಗಿ ನೂರು ವರ್ಷ) ವಿಶ್ವದಲ್ಲಿ ಮೊದಲ ಸ್ಥಾನಕ್ಕೇರಬೇಕೆಂದು ಹಂಬಲಿಸುತ್ತಿದೆ. ವಿಶ್ವದಲ್ಲಿ ಯಾವ ದೇಶವೂ ಚೀನಾ ಜೊತೆ ಹಗೆ ಸಾಧಿಸುವ ಸ್ಥಿತಿಯಲ್ಲಿ ಇಲ್ಲ. ಎಲ್ಲ ದೇಶಗಳಿಗೂ ಚೀನಾದ ಸ್ನೇಹ ಈಗ ಬೇಕು. ಹೀಗೆಂದೇ ಚೀನಾ ಯಾವುದೇ ವಿಚಾರದಲ್ಲಿ ಯಾವುದೇ ದೇಶಕ್ಕೆ ತಲೆಬಾಗಿಲ್ಲ. ಸಮಯ ಕಾದು ಮುನ್ನುಗ್ಗುವ ಸ್ವಭಾವ ಚೀನಾ ನಾಯಕರದ್ದು.
ಭಾರತದ ವಿಚಾರದಲ್ಲಿಯೂ ಇದೇ ಧೋರಣೆಯನ್ನು ಚೀನಾ ನಾಯಕರು ಅನುಸರಿಸುತ್ತಿದ್ದಾರೆ. ಸ್ವಲ್ಪ ಸ್ವಲ್ಪ ನಿಧಾನವೇ ಆದರೂ ಸರಿ ವಿವಾದಕ್ಕೆ ಸಿಕ್ಕಿರುವ ಭಾರತದ ಭೂಪ್ರದೇಶವನ್ನು ಕಬಳಿಸುವುದು ಚೀನಾ ಗುರಿ.
ಬೇರೆ ದೇಶದ ಮೇಲೆ ದಂಡೆತ್ತಿ ಹೋಗಿ ಅದನ್ನು ವಶಮಾಡಿಕೊಳ್ಳುವ ಕಾಲ ಇದಲ್ಲ. ತೈವಾನ್ ಜೊತೆಗಿನ ವಿವಾದವೇ ಇದಕ್ಕೆ ನಿದರ್ಶನ. ಭಾರತವನ್ನು ಏಕಾಂಗಿ ಮಾಡಲು ಚೀನಾ ಭಿನ್ನ ದಾರಿ ಅನುಸರಿಸುತ್ತಿದೆ. ಭಾರತ ಮತ್ತು ಭಾರತದ ನೆರೆಯ ದೇಶಗಳ ಮಾರುಕಟ್ಟೆ ಆಕ್ರಮಿಸಿಕೊಳ್ಳುವುದಕ್ಕೆ ಚೀನಾದ ಆದ್ಯತೆ.
ನಂತರ ಅಗತ್ಯ ನೆರವು ನೀಡಿಕೆ ಮತ್ತು ಬಂಡವಾಳ ಹೂಡಿಕೆ. ಭಾರತ ಶಕ್ತಿಯುತ ದೇಶವಾಗಿ ಬೆಳೆಯದಿರುವಂತೆ ಮಾಡಲು ಚೀನಾ ಅನುಸರಿಸಿರುವ ಮಾರ್ಗ ಇದು.
ದಕ್ಷಿಣ ಚೀನಾದ ಸಮುದ್ರ ಮಾರ್ಗ ಬಹಳ ಮುಖ್ಯವಾದುದು. ಏಷ್ಯಾದ ದೇಶಗಳಿಗೆ, ಯುರೋಪ್ ಮತ್ತು ಆಫ್ರಿಕಾದ ದೇಶಗಳಿಗೆ ಸಂಪರ್ಕ ಕಲ್ಪಿಸುವ ಜಲಮಾರ್ಗ ಇದು. ಸಮುದ್ರದ ಮೂಲಕ ನಡೆಯುವ ವಿಶ್ವವಹಿವಾಟಿನ ಮೂರನೇಯ ಒಂದು ಭಾಗ ದಕ್ಷಿಣ ಚೀನಾ ಸಮುದ್ರ ಮಾರ್ಗದಲ್ಲಿ ನಡೆಯುತ್ತದೆ. ಈ ಸಮುದ್ರ ತಳದಲ್ಲಿ ತೈಲ ಸೇರಿದಂತೆ ಅಪಾರ ಸಂಪನ್ಮೂಲ ಇದೆ. ಈ ಜಲ ಮಾರ್ಗ ಮತ್ತು ಜಲಸಂಪತ್ತಿನ ಮೇಲೆ ನಿಯಂತ್ರಣ ಸಾಧಿಸಲು ಚೀನಾ ಪ್ರಯತ್ನಿಸುತ್ತಿದೆ.
ಚೀನಾದ ಈ ಯತ್ನಕ್ಕೆ ಭಾರಿ ಪ್ರತಿರೋಧ ಆ ವಲಯದ ದೇಶಗಳಿಂದ ವ್ಯಕ್ತವಾಗಿದೆ. ಇದಕ್ಕೆ ಸೊಪ್ಪೂ ಹಾಕದೆ ಸಮುದ್ರದ ಆಳದಲ್ಲಿ ಸಬ್‌ಮೆರಿನ್ ನೆಲೆ ಸ್ಥಾಪಿಸುತ್ತಿದೆ. ಸಮುದ್ರವಲಯದ ಮಿಲಿಟರೀಕರಣವನ್ನು ಅಮೆರಿಕ, ಜಪಾನ್, ಫ್ರಾನ್ಸ್ ಸೇರಿದಂತೆ ಬಲಿಷ್ಠ ದೇಶಗಳು ವಿರೋಧಿಸಿವೆ. ಚೀನಾದ ವಿಸ್ತರಣಾ ನೀತಿ ಭೂಮಿಗಷ್ಟೇ ಸೀಮಿತವಾಗಿಲ್ಲ. ಸಮುದ್ರಕ್ಕೂ ಹಬ್ಬಿದೆ. ಹಿಂದೂ ಮಹಾಸಾಗರದ ಮೇಲೂ ತನ್ನ ಹಿಡಿತ ಸಾಧಿಸಲು ಚೀನಾ ಮುಂದಾಗಿದೆ. ಮಧ್ಯಪ್ರ್ರಾಚ್ಯ ದೇಶಗಳಿಗೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಪಾಕಿಸ್ತಾನದ ಬಲೂಚಿಸ್ತಾನದ ಗಾದ್ವಾರ್‌ನಲ್ಲಿ ಸರ್ವಋತು ಬಂದರು ನಿರ್ಮಾಣ ಯೋಜನೆಯಲ್ಲಿ ಬಂಡವಾಳ ಹೂಡಿದೆ.
ಒನ್ ಬೆಲ್ಟ್ ಒನ್ ರೋಡ್ ಯೋಜನೆಯ ಭಾಗವಾಗಿ ವಿಶೇಷ ಆರ್ಥಿಕ ವಲಯವನ್ನು ನಿರ್ಮಾಣ ಮಾಡುತ್ತಿದೆ.. ಹೀಗೆ ಒಂದಲ್ಲ ಎರಡಲ್ಲ ವಿಶ್ವದ ಎಲ್ಲಕಡೆ ಚೀನಾ ಬಂಡವಾಳ ಹೂಡುತ್ತಿದೆ. ತೀವ್ರ ಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ಚೀನಾದ ವೇಗ ಕರೋನಾದಿಂದ ಸ್ವಲ್ಪ ತಗ್ಗಿದೆಯಾದರೂ ಪರಿಸ್ಥಿತಿ ಸುಧಾರಿಸಿದ ಮೇಲೆ ಚೀನಾ ಶಕ್ತಿ ರಾಷ್ಟ್ರವಾಗುವುದರಲ್ಲಿ ಅನುಮಾನವಿಲ್ಲ. 1969ರ ಸ್ಥಿತಿ ಈಗ ಇಲ್ಲ. ಭಾರತದ ರಕ್ಷಣಾ ಸಾಮರ್ಥ್ಯ ಹೆಚ್ಚಿದೆ. ಚೀನಾ ಮಿಲಿಟರಿ ಸವಾಲನ್ನು ಹೆದರಿಸುವ ಸಾಮರ್ಥ್ಯ ಭಾರತದ ಸೇನೆಗೆ ಇದೆ.
ಆದರೆ, ಗಡಿ ವಿವಾದಗಳು ಮಿಲಿಟರಿ ಬಲದಿಂದ ಇತ್ಯರ್ಥವಾಗುವಂತವಲ್ಲ. ಇಂತಹ ದೇಶವನ್ನು ಭಾರತ ನಿಯಂತ್ರಿಸಬೇಕಾದರೆ ಮೊದಲು ಅಂತಾರಾಷ್ಟ್ರೀಯ ಒತ್ತಡ ಹೆಚ್ಚಬೇಕು. ಆರ್ಥಿಕ ಅಭಿವೃದ್ಧಿ ಸಾಧಿಸಬೇಕು. ತೈವಾನ್ ಮಾರ್ಗವನ್ನು ಭಾರತ ಅನುಸರಿಸಬೇಕು. ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಯಾವುದೇ ಬೆಳವಣಿಗೆಯನ್ನು ಮರೆಮಾಚದೆ, ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯಬೇಕು. ನಿಜ ಸಂಗತಿಗಳನ್ನು ಬಹಿರಂಗಗೊಳಿಸಿದರೆ ಯಾರದೋ ವರ್ಚಸ್ಸಿಗೆ ಕುಂದಾಗುತ್ತದೆ ಎಂದು ಯಾರು ತಿಳಿಯಬಾರದು. ಇದು ದೇಶದ ರಕ್ಷಣೆಯ ಪ್ರಶ್ನೆಯಾಗಿರುವುದರಿಂದ ಒಮ್ಮತ ಬಹಳ ಮುಖ್ಯ.
ಬೇರೆ ದೇಶದ ಮೇಲೆ ದಂಡೆತ್ತಿ ಹೋಗಿ ಅದನ್ನು ವಶಮಾಡಿಕೊಳ್ಳುವ ಕಾಲ ಇದಲ್ಲ. ತೈವಾನ್ ಜೊತೆಗಿನ ವಿವಾದವೇ ಇದಕ್ಕೆ ನಿದರ್ಶನ. ಭಾರತವನ್ನು ಏಕಾಂಗಿ ಮಾಡಲು ಚೀನಾ ಭಿನ್ನ ದಾರಿ ಅನುಸರಿಸುತ್ತಿದೆ. ಭಾರತ ಮತ್ತು ಭಾರತದ ನೆರೆಯ ದೇಶಗಳ ಮಾರುಕಟ್ಟೆ ಆಕ್ರಮಿಸಿಕೊಳ್ಳುವುದಕ್ಕೆ ಚೀನಾದ ಆದ್ಯತೆ. ನಂತರ ಅಗತ್ಯ ನೆರವು ನೀಡಿಕೆ ಮತ್ತು ಬಂಡವಾಳ ಹೂಡಿಕೆ. ಭಾರತ ಶಕ್ತಿ ದೇಶವಾಗಿ ಬೆಳೆಯದಿರುವಂತೆ ಮಾಡಲು ಚೀನಾ ಅನುಸರಿಸಿರುವ ಮಾರ್ಗ ಇದು.