Mysore
20
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ದೇಶದಲ್ಲಿ ಕಾಣುತ್ತಿದೆ ಬ್ರಿಟಿಷರ ಒಡೆದು ಆಳುವ ನೀತಿಯ ವಿಸ್ತೃತ ರೂಪ

ಶಿವಪ್ರಸಾದ್ ಜಿ

ಸ್ವಾತಂತ್ರ್ಯದ ಅಮೃತ ಮಹೋತ್ಸವದ ವರ್ಷದಲ್ಲಿ ಇದ್ದೇವೆ. ಸ್ವಾತಂತ್ರ್ಯ ಚಳವಳಿಯ ಕಾವಿಗೆ ಬೆದರಿದ ಬ್ರಿಟಿಷರು ನಮ್ಮ ದೇಶ ಬಿಟ್ಟು ಹೋಗಿದ್ದು ಇತಿಹಾಸ. ಆದರೆ, ಅವರ ಚಾಳಿಯೊಂದು ಈಗಲೂ ನಮ್ಮನ್ನು ಆಳುತ್ತಿದೆ? ಅದರಲ್ಲಿಯೂ ವಿಶೇಷವಾಗಿ ಪ್ರಸ್ತುತ ಆಡಳಿತಗಾರರು ಅದನ್ನು ಚಾಚೂತಪ್ಪದೆ ಅನುಸರಿಸುತ್ತಿದ್ದಾರೆ ಅನಿಸುತ್ತದೆ. ಆ ಚಾಳಿ ಏನೆಂದರೆ, ಒಟ್ಟಾಗಿ ಬಾಳುವವರನ್ನು, ಸಹಬಾಳ್ವೆ, ಸಹಮತ, ಸಾಮರಸ್ಯದಿಂದ ಬದುಕುವವರನ್ನು ‘ಒಡೆದು ಆಳುವ’ ಕುಟಿಲ ನೀತಿ.
ಬ್ರಿಟಿಷರು ಅವರ ಇಡೀ ಸಾಮ್ರಾಜ್ಯದ ವಿಸ್ತರಣೆಗಾಗಿ ಈ ಕುಟಿಲ ನೀತಿಯನ್ನು ಅಳವಡಿಸಿಕೊಂಡಿದ್ದರು. ಅದನ್ನು ಒಪ್ಪಬಹುದೇನೋ? ಆದರೆ, ಈಗ ಭಾರತ ಆಳುತ್ತಿರುವ ಮಹನೀಯರು ಮಾಡುತ್ತಿರುವುದೇನು? ರಾಜಕೀಯ ಅಧಿಕಾರದ ದಾಹದಿಂದ, ಧರ್ಮ, ಜಾತಿಗಳ ನಡುವೆ ದ್ವೇಷ, ಮತ್ಸರಗಳನ್ನು ಬಿತ್ತುವ ಮೂಲಕ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದ್ದಾರೆ.
ಟಿಪ್ಪು ಎಕ್ಸ್‌ಪ್ರೆಸ್ ರೈಲುಗಾಡಿಯ ಹೆಸರನ್ನು ಒಡೆಯರ್ ಎಕ್ಸ್‌ಪ್ರೆಸ್ ಎಂದು ಬದಲಿಸಲಾಗಿದೆ. ಇದು ಕೂಡ ಒಡೆದು ಆಳುವ ನೀತಿಯ ಭಾಗವೇ ಆಗಿದೆ. ಟಿಪ್ಪು ಸುಲ್ತಾನ್ ಮತಾಂಧ, ಆತನ ಹೆಸರಿನ ರೈಲು ಬೇಡ ಎಂಬುದು ಆಡಳಿತಗಾರರ ಸಮರ್ಥನೆ. ಈ ಬಗ್ಗೆ ಜನಸಾಮಾನ್ಯರನ್ನು ಕೇಳಿದರೆ, ಹೆಸರಿನಲ್ಲೇನಿದೆ ಎನ್ನುತ್ತಾರೆ. ಮೈಸೂರು ರಾಜ ಮನೆತನದ ಬಗ್ಗೆ ಗೌರವ ಇದ್ದರೆ ಹೊಸದೊಂದು ರೈಲಿಗೆ ಒಡೆಯರ್ ಹೆಸರು ನಾಮಕರಣ ಮಾಡಬಹುದಿತ್ತು ಎಂಬುದಾಗಿಯೂ ಹೇಳುತ್ತಾರೆ. ದೇಶವನ್ನು ಆಳುತ್ತಿರುವ ರಾಜಕೀಯ ನಾಯಕರಿಗೆ ಈ ರೈಲು ಹೆಸರು ಬದಲಾವಣೆ ದೇಶಭಕ್ತಿಯನ್ನು ಗಟ್ಟಿಗೊಳಿಸುವ ಸಂಕೇತವಾಗಿ ಕಂಡರೆ, ಪರೋಕ್ಷವಾಗಿ ಅದು ಮತ್ತೊಮ್ಮೆ ದೇಶ ವಿಭಜನೆಯತ್ತ ಸಾಗಬಹುದಾದ ಆತಂಕವನ್ನೂ ಸೃಷ್ಟಿಸುತ್ತದೆ.
ರೈಲು ಹೆಸರು ಬದಲಾವಣೆ ಪ್ರಕರಣಕ್ಕೂ ಸ್ವಲ್ಪ ದಿನಗಳ ಮೊದಲು ಮಹಾರಾಷ್ಟ್ರ ಸರ್ಕಾರವು, ಸರ್ಕಾರಿ ನೌಕರರು ದೂರವಾಣಿ ಕರೆಗಳಲ್ಲಿ ಮಾತು ಶುರು ಮಾಡುವ ಮುಂಚೆ ‘ಹಲೋ’ ಎನ್ನುವ ಬದಲಿಗೆ ‘ವಂದೇ ಮಾತರಂ’ ಅಂತ ಹೇಳಿ ಎಂದು ಮೌಖಿಕವಾಗಿ ಹುಕುಂ ಜಾರಿ ಮಾಡಿತ್ತು. ಅಷ್ಟೇ ಅಲ್ಲ ಖಾಸಗಿ ಔದ್ಯೋಗಿಕ ವಲಯದಲ್ಲೂ ಈ ‘ವಂದೇ ಮಾತರಂ’ ಹೇಳಬೇಕೆಂಬ ಮನವಿಯನ್ನೂ ಮಾಡಲಾಗಿತ್ತು. ಶಿವಸೇನಾದಿಂದ ಹೊರಬಂದು, ಬಿಜೆಪಿ ಸಹಕಾರದೊಂದಿಗೆ ಸರ್ಕಾರ ರಚಿಸಿರುವ ಏಕನಾಥ ಶಿಂಧೆ ಅವರು, ಕೇಂದ್ರದಲ್ಲಿರುವ ಬಿಜೆಪಿ ನಾಯಕರ ಮೆಚ್ಚುಗೆ ಗಳಿಸುವ ಸಲುವಾಗಿ ಅನುಸರಿಸಿದ ‘ನೀತಿ’ ಇದು. ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಆ ನಿಲುವಿನಿಂದ ಶಿಂಧೆ ಸರ್ಕಾರ ಹಿಂದೆ ಸರಿದಿದೆ.

ಈ ಎರಡೂ ಪ್ರಕರಣಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಪರೋಕ್ಷವಾಗಿ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡಿರುವುದು ಅರಿವಾಗುತ್ತದೆ. ಇಲ್ಲಿ ಅಲ್ಪಸಂಖ್ಯಾತರು ಎಂದರೆ ಕೇವಲ ಇಸ್ಲಾಂ ಧರ್ಮೀಯರಲ್ಲ. ಬೌದ್ಧರು, ಜೈನರು, ಸಿಖ್ಖರು ಎಲ್ಲರನ್ನೂ ಸೇರಿಸಿಯೇ ಇಂತಹ ಹುನ್ನಾರ ನಡೆಯುತ್ತಿದೆ ಅನಿಸುತ್ತದೆ. ಬೌದ್ಧರು ಕೂಡ ಸಾಮಾನ್ಯವಾಗಿ ಪರಸ್ಪರ ಎದುರಾದರೂ ಮೊದಲು ಬುದ್ಧನ ಸಂದೇಶ ನೆನೆದು ಮಾತು ಆರಂಭಿಸುತ್ತಾರೆ ಎನ್ನಲಾಗಿದೆ. ಅಷ್ಟೇ ಏಕೆ? ಬಹುತೇಕ ದಲಿತರು ತಮ್ಮದೇ ಸಮುದಾಯದವರ ಜತೆ ಸಂಭಾಷಣೆ ಶುರು ಮಾಡುವ ಮೊದಲು ಅಥವಾ ದಿಢೀರ್ ಎದುರಾದ ತಮ್ಮವರೊಡನೆ ‘ಜೈ ಭೀಮ್’ ಎಂದೇ ಮಾತಿಗಾರಂಭಿಸುವುದನ್ನು ರೂಢಿಸಿಕೊಂಡಿದ್ದಾರೆ. ೨೦೦೪ರ ವೇಳೆಯಲ್ಲಿ ಮೈಸೂರು ಭಾಗದಲ್ಲಿ ಈ ಬೆಳವಣಿಗೆ ದಲಿತರಲ್ಲಿ ಸಂಚಲನ ಮೂಡಿಸಿತ್ತು.
ದೇಶವನ್ನು ಹಿಂದೂತ್ವದ ಆಧಾರದಲ್ಲಿ ಕಟ್ಟಲು ಹೊರಟಿರುವ ಆಡಳಿತಗಾರರಿಗೆ ಇದು ಅಪಥ್ಯವಾಗಿ ಕಾಣಬಹುದು. ಸದ್ಯಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಡಳಿತದಲ್ಲಿ ಅನೇಕ ಹಿಂದೂಯೇತರ ಹೆಸರಿನ ಬಡಾವಣೆಗಳು, ಊರುಗಳನ್ನು ಬದಲಿಸಲಾಗಿದೆ. ಹಿಂದುತ್ವವನ್ನು ಬಲವಂತವಾಗಿಯಾದರೂ ಇತರ ಧರ್ಮೀಯರ ಮೇಲೆ ಹೇರುವ ಸನ್ನಾಹ ಇದೆನ್ನಬಹುದು. ಇದು ಬಿಜೆಪಿ ಅಥವಾ ಅದರ ಬೆಂಬಲಿತ ಸರ್ಕಾರಗಳು ಇರುವ ಎಲ್ಲ ರಾಜ್ಯಗಳಲ್ಲಿ ನಿಧಾನವಾಗಿ ವಿಸ್ತಾರಗೊಳ್ಳುತ್ತಿದೆ. ನಮ್ಮ ರಾಜ್ಯದ ಟಿಪ್ಪು ಎಕ್ಸ್‌ಪ್ರೆಸ್ ರೈಲು ಹೆಸರು ಬದಲಾವಣೆ ಕೂಡ ಇದರ ಮುಂದುವರಿದ ಭಾಗ ಎನ್ನಬಹುದು. ಮುಖ್ಯಮಂತ್ರಿಗಳು, ಅಗತ್ಯವಾದರೆ ಉತ್ತರ ಪ್ರದೇಶದ ಆಡಳಿತ ಮಾಡೆಲ್ ಜಾರಿಗೊಳಿಸುತ್ತೇವೆ ಎಂದಿದ್ದರ ಹಿಂದೆ ಇದೇ ಉದ್ದೇಶ ಇರಬಹುದು.

ಕೇಂದ್ರದಲ್ಲಿರುವ ಆಡಳಿತಗಾರರು, ಹಿಂದುತ್ವ, ಧರ್ಮ ರಾಜಕಾರಣಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಆದರೆ, ಬಡವರ ಜೀವನ ಸುಧಾರಣೆ, ಭ್ರಷ್ಟಾಚಾರ ನಿವಾರಣೆ, ಮಹಿಳೆಯರ ಸಬಲೀಕರಣ ಇತ್ಯಾದಿ ಸ್ಫೂರ್ತಿದಾಯಕ ಕಾರ್ಯಗಳಿಗೆ ನಿರಾಸಕ್ತಿ ತೋರಿಸುತ್ತಿದ್ದಾರೆ. ಆದರೆ, ಹಿಂದುತ್ವದ ಬಣ್ಣದ ಮಾತುಗಳಿಗೆ ಮರುಳಾಗುವ ಬಡ ಯುವಕರ ಬದುಕು ಸಮಾನತೆ, ಸಹಿಷ್ಣುತೆ ಭಾವನೆಗಳಿಂದ ದೂರವಾಗುತ್ತಿದ್ದಾರೆ. ಹಿಂದೂಪರ ಸಂಘಟನೆಗಳ ಹೋರಾಟದ ಮುಂಚೂಣಿಯಲ್ಲಿ ಬಹಳಷ್ಟು ಶೂದ್ರ ಸಮುದಾಯದ ಯುವಕರೇ ಇರುತ್ತಾರೆ ಎಂಬುದು ಹಲವು ಪ್ರಗತಿಪರರ ಪ್ರತಿಪಾದನೆ. ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊಲೆಗಳು ನಡೆದಾಗ, ಹಿಂದೂ ಪರ ಸಂಘಟನೆಗಳಲ್ಲಿ ಇರುವ ಬಿಲ್ಲವ ಯುವಕರೇ ಹೆಚ್ಚು ಹತರಾಗುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು.
ದೇಶದ ಆಡಳಿತಗಾರರ ದೃಷ್ಟಿ ಹಿಂದೂ ರಾಷ್ಟ್ರ ನಿರ್ಮಾಣವೇ ಆಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಸದ್ಯಕ್ಕೆ ಅಲ್ಪಸಂಖ್ಯಾತರು ಗುರಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಆಹಾರ ಸಂಸ್ಕೃತಿಯನ್ನು ಮುಂದಿಟ್ಟುಕೊಂಡು ದೇಶ ಒಡೆಯುವ ಕೆಲಸಕ್ಕೂ ಆಡಳಿತಾಗರರು ಮುಂದಾಗಬಹುದು. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಸಸ್ಯಾಹಾರಿಗಳು ಮತ್ತು ಮಾಂಸಾಹಾರಿಗಳು ಎಂಬ ವಿಷಯವೂ ಮುಂಚೂಣಿಗೆ ಬರುವುದರಲ್ಲಿ ಸಂಶಯವಿಲ್ಲ.
ಧರ್ಮ, ಸಂಸ್ಕೃತಿ, ಸಂಪ್ರದಾಯಗಳಿಗೆ ಕುಂದು ಉಂಟಾದರೆ ಅಬ್ಬರಿಸುವ ಸರ್ಕಾರಗಳು, ದಲಿತರು, ಶೋಷಿತರ ನೋವುಗಳಿಗೆ ಸ್ಪಂದಿಸಲು ಮೀನ-ಮೇಷ ಎಣಿಸುತ್ತಿವೆ. ಮೊದಲು ರಾಜಕೀಯ ಲಾಭದ ಲೆಕ್ಕಾಚಾರ ಮಾಡಿ ನಂತರ ಪ್ರತಿಕ್ರಿಯಿಸುವುದನ್ನು ರೂಢಿಸಿಕೊಂಡಿವೆ. ಇತ್ತೀಚೆಗೆ ನಾಡಹಬ್ಬ ದಸರಾ ಮಹೋತ್ಸವವನ್ನು ರಾಜ್ಯ ಸರ್ಕಾರ ಯಶಸ್ವಿಯಾಗಿ ನೆರೆವೇರಿಸಿತು. ಅದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೇ ಶಹಬ್ಬಾಷ್‌ಗಿರಿ ನೀಡಿರುವುದು ಸ್ವಾಗತಾರ್ಹ. ವಿಪರ್ಯಾಸವೆಂದರೆ ಕಳೆದ ಆಗಸ್ಟ್‌ನಲ್ಲಿ ಚಿತ್ರದುರ್ಗದ ಮುರುಘಾ ಮಠದ ಸ್ವಾಮೀಜಿಯವರು ಅಪ್ತಾಪ್ರೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದರು ಎನ್ನಲಾದ ಪ್ರಕರಣ ಬೆಳಕಿಗೆ ಬಂದಿತ್ತು. ಸೆಪ್ಟೆಂಬರ್ ೨ರಂದು ಮಂಗಳೂರಿನಲ್ಲಿ ಅಂದಾಜು ೩,೦೦೦ ಕೋಟಿ ರೂ.ಗಳ ವೆಚ್ಚದ ಯೋಜನೆಗಳ ಶಂಕಸ್ಥಾಪನೆ ನೆರವೇರಿಸಲು ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರು, ಆ ಸಂತ್ರಸ್ತ ಬಾಲಕಿಯರ ಪರವಾಗಿ ಒಂದೂ ಮಾತನ್ನೂ ಆಡಲಿಲ್ಲ. ಸಾಧಕರನ್ನು ಮೆಚ್ಚಿದಂತೆ ನೊಂದವರನ್ನೂ ಸಂತೈಸಬೇಕು ಎಂಬ ಮಾನವೀಯ ಮನಸ್ಸುಗಳ ಅಪೇಕ್ಷೆ ತಪ್ಪೇ?
ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಉಳೇರಹಳ್ಳಿಯಲ್ಲಿ ನಡೆದ ಜಾತ್ರೆಯಲ್ಲಿ ಪಲ್ಲಕ್ಕಿಯಿಂದ ಕೆಳಗೆಬಿದ್ದ ದೇವರ ಗುಜ್ಜಕೋಲು ಎತ್ತಿಕೊಟ್ಟ ದಲಿತ ಬಾಲಕನನ್ನು ಸವರ್ಣೀಯರು ಥಳಿಸಿದ್ದಲ್ಲದೆ, ಆತನ ಕುಟುಂಬಕ್ಕೆ ೬೦,೦೦೦ ರೂ.ಗಳು ದಂಡ ಹಾಕಿದರು. ಕೂಲಿ ಮಾಡಿ ಬದುಕುತ್ತಿರುವ ಬಡಕುಟುಂಬಕ್ಕೆ ಆ ಹಣ ದೊಡ್ಡ ಹೊರೆ. ಹಾಗಾಗಿ ಅವರು ಪೊಲೀಸರಿಗೆ ದೂರು ನೀಡಿದರು. ಅದಲ್ಲದೆ, ಇದೇ ಜಿಲ್ಲೆಯ ದಾನವ ಹಳ್ಳಿಯಲ್ಲಿ ವಿಜಯದಶಮಿ ದಿನ ದಸರಾ ಮೆರವಣಿಗೆ ಸಂಬಂಧ ದಲಿತರು- ಸವರ್ಣೀಯರ ನಡುವೆ ಮಾರಾಮಾರಿ ನಡೆಯಿತು. ಆಡಳಿತ ಪಕ್ಷಗಳಿಗೆ ಅದು ಸಮಸ್ಯೆಯಾಗಿ ಕಾಣಲೇ ಇಲ್ಲ. ಕೇವಲ ತಮ್ಮ ಪಕ್ಷದ ಕಾರ್ಯಗಳಿಗೆ ಮೆಚ್ಚುಗೆ ಸೂಸುವ ಪ್ರಧಾನಿಗಳು ಇಂತಹ ಅಮಾನವೀಯ ಕೃತ್ಯಗಳಿಂದ ಸಂತ್ರಸ್ತರಾದವರ ನೋವುಗಳಿಗೆ ಕಿವಿಯಾಗಬೇಕಾಗಿದೆ. ಇಲ್ಲದಿದ್ದರೆ, ಅವರು ಕನಸು ಕಾಣುತ್ತಿರುವ ಹಿಂದುತ್ವ ದೇಶದಲ್ಲಿ ಕೇವಲ ಸವರ್ಣೀಯರಿಗೆ ಆದ್ಯತೆ ಎಂಬುದು ನಿಜವಾಗುತ್ತದೆ. ಶೂದ್ರರು, ದಲಿತರು, ದಮನಿತರು, ಶೋಷಿತರು ಶ್ರೇಣೀಕೃತ ವ್ಯವಸ್ಥೆಯಲ್ಲಿ ಕಂಡುಂಡಂತಹ ಬದುಕಿಗೇ ಮರಳಬೇಕಾಗುತ್ತದೆ.
ಉತ್ತರ ಪ್ರದೇಶದಲ್ಲಿ ದಲಿತರ ಬದುಕು ಮೂರಾಬಟ್ಟೆಯಾಗಿದೆ. ದಲಿತ ಅಪ್ರಾಪ್ತೆಯರು, ಯುವತಿಯರು, ಮಹಿಳೆಯರ ಮೇಲೆ ಅತ್ಯಾಚಾರ ನಿರಂತರವಾಗಿ ನಡೆಯುತ್ತಿವೆ. ಶಾಲೆಯೊಂದರಲ್ಲಿ ನೀರಿನ ಮಡಕೆ ಮುಟ್ಟಿದ್ದಕ್ಕೆ ದಲಿತ ಬಾಲಕನೊಬ್ಬನನ್ನು ಶಿಕ್ಷಕನೇ ಮಾರಣಾಂತಿಕವಾಗಿ ಹೊಡೆದು, ಆಸ್ಪತ್ರೆಯಲ್ಲಿ ಆ ಬಾಲಕ ಸಾವಿಗೀಡಾದಂತಹ ಘಟನೆಗಳ ಬಗ್ಗೆ ಆಡಳಿತಗಾರರಿಗೆ ಯಾವುದೇ ಪಶ್ಚಾತ್ತಾಪ ಭಾವನೆ ಕಾಡುವುದೇ ಇಲ್ಲ ಎಂಬುದು ನಾಡಿನ ದೊಡ್ಡ ದುರಂತ.
ಶಿವಮೊಗ್ಗದಂತಹ ಸೂಕ್ಷ್ಮ ಜಿಲ್ಲೆಯಲ್ಲಿ ಗಣೇಶೋತ್ಸವದಲ್ಲಿ ಮಹಾತ್ಮ ಗಾಂಧಿ ಹಂತಕ ನಾಥೂರಾಮ್ ಗೋಡ್ಸೆಯ ಭಾವಚಿತ್ರ ಹಿಡಿದು ಕುಣಿದರೂ, ಆಡಳಿತಗಾರರಿಗೆ ಅದು ದೊಡ್ಡ ವಿಷಯವೇ ಅಲ್ಲ. ಗಾಂಧೀಜಿ ಒಬ್ಬರಿಂದಲೇ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಲಿಲ್ಲ ಎಂದು ಆರ್‌ಎಸ್‌ಎಸ್ ನಾಯಕ ಮೋಹನ್ ಭಾಗವತ್ ಹೇಳಿದ್ದಾರೆ. ಅವರ ಮಾತುಗಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರೊಬ್ಬರೇ ಸಂವಿಧಾನ ರಚಿಸಲಿಲ್ಲ ಎಂಬುದನ್ನೂ ಧ್ವನಿಸುತ್ತದೆ. ಹೀಗೆ ಹೇಳಿಕೆ ನೀಡುವಂತಹ ಅಭಿವ್ಯಕ್ತಿ ಸ್ವಾತಂತ್ರ್ಯ ಕೊಟ್ಟವರೇ ಅಂಬೇಡ್ಕರ್ ಎಂಬುದನ್ನು ಅಲ್ಲಗಳೆಯುವುದು ಸಾಧ್ಯವೇ? ಇನ್ನೊಂದು ನೆನಪು ಮಾಡಬೇಕಾದ ವಿಚಾರ. ಕೆಆರ್‌ಎಸ್ ಅಣೆಕಟ್ಟೆ ಸರ್ ಎಂ.ವಿಶ್ವೇಶ್ವರಯ್ಯ ಅವರ ಕೊಡುಗೆ ಎಂಬ ವಿಚಾರದಲ್ಲಿ ಭಾಗವತ್‌ರ ಸಮರ್ಥನೆ ಏನಾಗಿರಬಹುದು?
ಇಂತಹದ್ದನ್ನೆಲ್ಲ ಕೇಳಿಸಿಕೊಂಡು ಆಡಳಿತಾಗರರು ಕಣ್ಣುಮುಚ್ಚಿ ಕುಳಿತಿರುವುದರ ಹಿಂದಿನ ಸಂದೇಶವೇನು ಎಂಬುದನ್ನು ಊಹಿಸುವುದು ಜನಸಾಮಾನ್ಯರ ತಿಳಿವಳಿಕೆಯನ್ನು ಆಧರಿಸಿದೆ. ಇದು ಪ್ರಜಾಪ್ರಭುತ್ವ ರಾಷ್ಟ್ರ. ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ನಮ್ಮ ಸಂವಿಧಾನದ ಆಶಯ. ಇದನ್ನು ಆಡಳಿತಗಾರರಿಗೆ ಪದೇ ಪದೇ ನೆನಪಿಸಬೇಕೆ?

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ