ನಗರಗಳ ಭೌಗೋಳಿಕ ವಿಸ್ತರಣೆಗೂ ಔದ್ಯಮಿಕ ಹಿತಾಸಕ್ತಿಗಳಿಗೂ ನೇರವಾದ ಸಂಬಂಧವಿದೆ. ಯಾವುದೇ ದೇಶದ ಬಂಡವಾಳಶಾಹಿ ಅಭಿವೃದ್ಧಿ-ಬೆಳವಣಿಗೆಯ ಮಾದರಿಗಳಲ್ಲಿ ಗುರುತಿಸಬಹುದಾದ ಒಂದು ಸಮಾನ ಎಳೆ ಎಂದರೆ ಮೂಲತಃ ನಗರೀಕರಣ ಮತ್ತು ಅದಕ್ಕೆ ಪೂರಕವಾದ ಭೌಗೋಳಿಕ-ಮೂಲ ಸೌಕರ್ಯಗಳ ವಿಸ್ತರಣೆ ಹಾಗೂ ಆಧುನಿಕ ಔದ್ಯಮಿಕ ಜಗತ್ತಿಗೆ ಅನುಕೂಲವಾಗುವಂತಹ ಮಾರುಕಟ್ಟೆ ವ್ಯವಸ್ಥೆ. ಬಂಡವಾಳದ ಬೆಳವಣಿಗೆಯನ್ನು ನೇರವಾಗಿ ಔದ್ಯೋಗಿಕ ಪ್ರಗತಿ ಮತ್ತು ಅದನ್ನು ಪೋಷಿಸಲು ಬೇಕಾದ ವಿಶಾಲ ನಗರಗಳ ನಿರ್ಮಾಣಗಳಲ್ಲಿ ಗುರುತಿಸಬಹುದು. ಉತ್ಪಾದಕೀಯ ಶ್ರಮಶಕ್ತಿಯನ್ನು ನಗರ ವಿಸ್ತರಣೆ ಮತ್ತು ಮೇಲ್ವರ್ಗದ ಸಮಾಜದ ಉನ್ನತಿಗಾಗಿ ರೂಪುಗೊಂಡ ರಿಯಲ್ ಎಸ್ಟೇಟ್ ಜಗತ್ತಿನಲ್ಲಿ ಪರಾವಲಂಬಿಯನ್ನಾಗಿ ಮಾಡುವ ಮೂಲಕ ಬಂಡವಾಳಶಾಹಿ ಮತ್ತು ಮಾರುಕಟ್ಟೆ ವ್ಯವಸ್ಥೆಯು ಬೃಹತ್ ನಗರದ ಪರಿಕಲ್ಪನೆಯನ್ನು ಸಾರ್ವತ್ರೀಕರಿಸಿತ್ತು. ಶ್ರಮವನ್ನೇ ಅವಲಂಬಿಸಿ ಬದುಕುವ ಲಕ್ಷಾಂತರ ಜನ ರನ್ನು ತಮ್ಮ ಶ್ರಮವನ್ನು ಬಿಟ್ಟು ಮತ್ತೇನನ್ನೂ ಅವಲಂಬಿಸದ ಶ್ರಮಜೀವಿ ಗಳನ್ನಾಗಿ ಪರಿವರ್ತಿಸುವ, ಬಂಡವಾಳಶಾಹಿಯ ಈ ಗುಣವನ್ನು ಆಧುನಿಕ ಭಾರತದ ನಗರೀಕರಣ ಪ್ರಕ್ರಿಯೆಯಲ್ಲಿ ಇಂದಿಗೂ ಗುರುತಿಸಬಹುದು.
ಈ ಆಧುನಿಕ ನಗರಗಳಲ್ಲಿ ಶ್ರಮಜೀವಿಗಳಿಗೆ ಶಾಶ್ವತ ಸುಸ್ಥಿರ ಬದುಕು ಕಲ್ಪಿಸುವಂತಹ ಉತ್ಪಾದಕ ಕೈಗಾರಿಕೆಗಳು ಇಲ್ಲವಾಗುತ್ತವೆ ಅಥವಾ ಹೊರ ವಲಯಗಳಿಗೆ ದೂಡಲ್ಪಡುತ್ತವೆ. ನಗರಗಳಲ್ಲಿ ಲೀನವಾದ ಗ್ರಾಮ/ಪಟ್ಟಣ ಗಳಲ್ಲಿ ಸ್ವಂತ ದುಡಿಮೆಯಲ್ಲಿದ್ದಂತಹ ಕೃಷಿ, ವ್ಯಾಪಾರ ಕ್ಷೇತ್ರದ ಕೆಳಸ್ತರದ ಸಮಾಜದ ಶ್ರಮಿಕರು, ಆಧುನಿಕ ನಗರಗಳ ಐಷಾರಾಮಿ ವಸತಿ ಸಮುಚ್ಚಯಗಳಲ್ಲಿ, ಔದ್ಯಮಿಕ ಕಚೇರಿಗಳಲ್ಲಿ ನಾಲ್ಕನೇ ದರ್ಜೆಯ ನೌಕರರಾಗಿ, ಭದ್ರತಾ ಸಿಬ್ಬಂದಿಯಾಗಿ ರೂಪಾಂತರ ಹೊಂದುತ್ತಾರೆ. ಹಾಗಾಗಿಯೇ ನವ ಶತಮಾನದ ಭಾರತದ ಆರ್ಥಿಕತೆ ರಿಯಲ್ ಎಸ್ಟೇಟ್, ಹೆದ್ದಾರಿಗಳು, ಆರು-ಎಂಟು-ಹತ್ತು ವಿಭಾಗಗಳ ಎಕ್ಸ್‌ಪ್ರೆಸ್‌ವೇಗಳು, ಸುರಂಗಗಳು, ಮೇಲು ಸೇತುವೆಗಳು ಮತ್ತು ಇನ್ನಿತರ ಮೂಲ ಸೌಕರ್ಯಗಳನ್ನು ಪೋಷಿಸುವ ನಿಟ್ಟಿನಲ್ಲಿ ಹೊಸ ನೀತಿಗಳನ್ನು ರೂಪಿಸುತ್ತಿದೆ. ಶಾಸನಸಭೆಗಳಿಗೆ ಆಯ್ಕೆಯಾಗುವ ಬಹುಪಾಲು ಪ್ರತಿನಿಧಿಗಳು ಈ ವಲಯಗಳನ್ನೇ ಪ್ರಧಾನ ವಾಗಿ ಪ್ರತಿನಿಧಿಸುವುದು ಸಮಕಾಲೀನ ವಾಸ್ತವ.
ರಸ್ತೆ ಅಗಲೀಕರಣ ಮತ್ತು ನಗರೀಕರಣ : ಹಾಗಾಗಿಯೇ ಮೈಸೂರಿ ನಂತಹ ಸುಂದರ ಹಸಿರು ಹೊದಿಕೆಯ ನಗರಗಳೂ ಕೂಡ ರಸ್ತೆ ಅಗಲೀ ಕರಣ ಪ್ರಕ್ರಿಯೆಗೆ ಒಳಗಾಗಿ, ಬೆಳೆದು ನಿಂತ ಗಟ್ಟಿಬೇರಿನ ಮರಗಳು ಕೂಡ ನಾಶವಾಗುತ್ತವೆ. ಇತ್ತೀಚೆಗೆ ಮೈಸೂರಿನ ಹೈದರ್ ಅಲಿ ರಸ್ತೆಯಲ್ಲಿ ಬೆಳೆದು ನಿಂತ ೪೦ ಮರಗಳ ಹನನ ಮಾಡಿದ ಪ್ರಕರಣವನ್ನು ಈ ದೃಷ್ಟಿಯಿಂದಲೇ ನೋಡಬೇಕಿದೆ.
ಈಗ ರಸ್ತೆ ಅಗಲೀಕರಣ ನಗರದ ದುಡಿಯುವ ವರ್ಗಗಳಿಗಾಗಲೀ ಅಥವಾ ಕೆಳಮಧ್ಯಮ ವರ್ಗದ, ಕೆಳಸ್ತರದ ಸಮಾಜಕ್ಕಾಗಲೀ ಅನಿ ವಾರ್ಯವಲ್ಲ. ಆದರೆ ರಸ್ತೆ ಅಗಲೀಕರಣದಿಂದ ತಮ್ಮ ನೆಲೆಯನ್ನು ಕಳೆದು ಕೊಳ್ಳುವುದು ಇದೇ ಜನತೆ. ಜೊತೆಗೆ ಅವರ ದುಡಿಮೆಯ ಆಧಾರವಾಗಿದ್ದ ಸಣ್ಣ ಪುಟ್ಟ ಅಂಗಡಿ, ಹೋಟೆಲ್, ಪೆಟ್ಟಿಗೆ ಅಂಗಡಿ, ಬೀದಿ ಬದಿಯ ವ್ಯಾಪಾರ ಇತ್ಯಾದಿ ಜೀವನಾಧಾರದ ನೆಲೆಗಳು. ಈಗ ಸಾಂಸ್ಕೃತಿಕ ನಗರಿ ಎಂದೇ ಪ್ರಸಿದ್ಧಿಯಾಗಿರುವ ಮೈಸೂರು ಬೃಹತ್ ನಗರವಾಗಿ ರೂಪಾಂತರಗೊಳ್ಳಲು ಸಜ್ಜಾಗುತ್ತಿದೆ. ಮೈಸೂರು ಮಹಾನಗರ ಪಾಲಿಕೆ ಮತ್ತು ಜಿಲ್ಲಾಡಳಿತ ಈ ನಿಟ್ಟಿನಲ್ಲಿ ನೀಲನಕ್ಷೆಯನ್ನು ಸಿದ್ಧಪಡಿಸಿದ್ದು, ಸುತ್ತಲಿನ ೨೦ ರಿಂದ ೩೦ ಹಳ್ಳಿಗಳನ್ನು ವಿಲೀನಗೊಳಿಸುವ ಮೂಲಕ(ಸರಳ ಜನಭಾಷೆಯಲ್ಲಿ ನುಂಗಿಹಾಕುವುದು) ಮೈಸೂರು ನಗರವನ್ನು ಮಹಾನಗರವನ್ನಾಗಿ ಮಾಡುವ ಪ್ರಯತ್ನಗಳು ಚಾಲ್ತಿಯಲ್ಲಿವೆ.
ಮೈಸೂರು ಬೃಹನ್ನಗರಿ. ಆದರೆ, ಇಲ್ಲಿ ಶತಮಾನಗಳಿಂದ ಜೀವಂತವಾಗಿ ರುವ ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ಜನಪದೀಯ ನೆಲೆಗಳ ಅವಕಾಶಗಳು ವಿಸ್ತರಿಸುತ್ತವೆಯೇ? ಬೃಹತ್ ಮೈಸೂರಿನಲ್ಲಿ ಹೆಚ್ಚಿನ ರಂಗ ಮಂದಿರಗಳು ನಿರ್ಮಾಣವಾಗುವವೇ? ನುಂಗಿಹಾಕಲ್ಪಟ್ಟ ಗ್ರಾಮಗಳ ದುಡಿಯುವ ಜೀವಗಳಿಗೆ ಅಗತ್ಯವಾದ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸರ್ಕಾರಿ ಪ್ರಾಥಮಿಕ ಶಾಲೆಗಳು ಹೆಚ್ಚು ನಿರ್ಮಾಣವಾಗುತ್ತವೆಯೇ? ಕೈಗೆಟುಕುವ ಸುಲಭ ದರದಲ್ಲಿ ಜೀವನಾವಶ್ಯ ವಸ್ತುಗಳು ದೊರೆಯುವ ಸಣ್ಣ ಮಾರುಕಟ್ಟೆಗಳು ಬೆಳೆಯುತ್ತವೆಯೇ? ಉತ್ಪಾದಕೀಯ ನೆಲೆಯಿಂದ ಶ್ರಮಜೀವೀಕರಣಕ್ಕೊಳಗಾಗಿ ನಗರಗಳಲ್ಲಿ ಲೀನವಾಗುವ ಅಪಾರ ಸಂಖ್ಯೆಯ ಶ್ರಮಿಕರಿಗೆ ಪೂರಕವಾದ ಆರ್ಥಿಕತೆ ರೂಪುಗೊಳ್ಳುವುದೇ? ಅಥವಾ ಮೇಲ್ಪದರ ಸಮಾಜದ ಹಿತವಲಯಕ್ಕಾಗಿ ನಿರ್ಮಾಣವಾಗುವ ಅತ್ಯಾಧುನಿಕ ಬಡಾವಣೆಗಳಲ್ಲಿ ಈ ಶ್ರಮಿಕರಿಗೆ ವಸತಿ ಸೌಲಭ್ಯ ದೊರೆಯುವುದೇ ? ನವ ಉದಾರವಾದಿ ಕಾರ್ಪೋರೇಟ್ ಆರ್ಥಿಕತೆಯಲ್ಲಿ ಪ್ರವಾಸೋದ್ಯಮವೂ ಬಹುಮುಖ್ಯ ವಲಯವಾಗಿರುವ ಕಾರಣ, ಪ್ರವಾಸೋದ್ಯಮದ ಅಭಿವೃದ್ಧಿಯ ನೆಪದಲ್ಲಿ ಹಸಿರು, ಸಸ್ಯ ಸಂಪತ್ತು ಮತ್ತು ಪ್ರಾಣಿ ಸಂಕುಲಗಳು ಕ್ರಮೇಣ ಬಲಿಯಾಗುತ್ತಲೇ ಹೋಗುತ್ತವೆ.
ಜನಪ್ರಾತಿನಿಧ್ಯದ ಆದ್ಯತೆಗಳು : ಈ ಎಲ್ಲ ಸಮಸ್ಯೆಗಳಿಂದಾಚೆಗೆ ೨೦೨೩ರಲ್ಲಿ ನಡೆಯಬೇಕಿದ್ದ ಮೈಸೂರು ಮಹಾನಗರ ಪಾಲಿಕೆ ಚುನಾವಣೆಗಳು ಈವರೆಗೂ ನಡೆದಿಲ್ಲ. ಜನಪ್ರತಿನಿಧಿಗಳಿಲ್ಲದೆ ಅಽಕಾರಶಾಹಿಯ ಹಿಡಿತ ದಲ್ಲಿರುವ ಮೈಸೂರು ನಗರ ಈಗ ಗ್ರೇಟರ್ ಮೈಸೂರು ಅಥವಾ ಬೃಹತ್ ಮೈಸೂರು ಆಗುವುದರಿಂದ, ಒಳಗೆ ಸೇರಿಸಲ್ಪಡುವ ೨೦-೩೦ ಹಳ್ಳಿಗಳನ್ನೂ ಸೇರಿದಂತೆ, ಜನಪ್ರಾತಿನಿಧ್ಯದ ಅನುಪಾತಗಳು ಪಲ್ಲಟವಾಗುತ್ತವೆ. ಈಗ ಮೈಸೂರಿನಲ್ಲಿರುವ ೬೫ ವಾರ್ಡ್‌ಗಳ ಸಂಖ್ಯೆ ಹೆಚ್ಚಾಗುತ್ತವೆ. ವಾರ್ಡ್‌ಗಳ ಪ್ರಾದೇಶಿಕ ವಿನ್ಯಾಸ ಮತ್ತು ವಿಸ್ತೀರ್ಣವೂ ಬದಲಾಗುತ್ತದೆ. ಇದರಿಂದ ಈ ನುಂಗಿಹಾಕಲ್ಪಟ್ಟ ಗ್ರಾಮಗಳಲ್ಲಿದ್ದ ಗ್ರಾಮ-ಜಿಲ್ಲಾ ಪಂಚಾಯತ್ ಜನಪ್ರತಿನಿಽಗಳು ತಮ್ಮ ಪ್ರಾತಿನಿಧ್ಯವನ್ನು ಕಳೆದುಕೊಂಡು, ನಗರಪಾಲಿಕೆಯ ಭಾಗವಾಗಬೇಕಾಗುತ್ತದೆ. ಮುಂದೆ ನಡೆಯಬಹುದಾದ ಚುನಾವಣೆಗಳಲ್ಲಿ ಪ್ರಾತಿನಿಧ್ಯದ ಲಕ್ಷಣಗಳೇ ಬದಲಾಗಿ, ನಗರೀಕರಣಕ್ಕೊಳಗಾದ ಸಮಾಜದ ಪ್ರಬಲ ವರ್ಗಗಳು ಆಡಳಿತ ವ್ಯವಸ್ಥೆಯನ್ನು ಆಕ್ರಮಿಸಿಕೊಳ್ಳುತ್ತವೆ.
ಇದು ಕೇವಲ ಅಂಕಿ ಸಂಖ್ಯೆಗಳ ಸಮಸ್ಯೆಯಲ್ಲ; ಸಮಾಜ, ಸಂಸ್ಕೃತಿ ತಳಮಟ್ಟದ ಪ್ರಜಾಸತ್ತಾತ್ಮಕ ನೆಲೆಗಳು , ಅವಕಾಶವಂಚಿತ ಜನಸಮುದಾಯಗಳ ಪ್ರಾತಿನಿಧ್ಯ ಮತ್ತು ಕಳೆದುಹೋಗುವ ಸಾಂಸ್ಕೃತಿಕ ಅಸ್ಮಿತೆಗಳ ಪ್ರಶ್ನೆ. ದುರದೃಷ್ಟ ವಶಾತ್ ಅಽಕಾರಶಾಹಿ ಮತ್ತು ಆಡಳಿತ ವ್ಯವಸ್ಥೆ ಇದನ್ನು ಮನಗಾಣುವುದರಲ್ಲಿ ವಿಫಲವಾಗಿವೆ. ಬದಲಾಗಿ ಮೈಸೂರನ್ನು ಬೃಹನ್ನಗರಿ ಯನ್ನಾಗಿ ಮಾಡುವತ್ತ ಹೆಜ್ಜೆ ಇಟ್ಟಿವೆ. ಇದು ಮೈಸೂರಿನ ಪಾರಂಪರಿಕ ಸೊಬಗು ಮತ್ತು ಸಾಂಸ್ಕೃತಿಕ ಸೌಂದ ರ್ಯವನ್ನು ವಿನಾಶದೆಡೆಗೆ ಕೊಂಡೊಯ್ಯುವ ಹೆಜ್ಜೆಯಾಗಲಿದೆ. ಚಾಮುಂಡಿ ಬೆಟ್ಟಕ್ಕೆ ರೋಪ್‌ವೇ, ಕೆಆರ್‌ಎಸ್ ಅಣೆಕಟ್ಟೆಯ ಬಳಿ ಅಮ್ಯೂಸ್‌ಮೆಂಟ್ ಪಾರ್ಕ್ ಮೊದಲಾದ ಮಾರುಕಟ್ಟೆ ಯೋಜನೆಗಳು ಈ ಕನಸಿನ ಒಂದು ಭಾಗವೇ ಎನ್ನುವುದನ್ನು ಮೈಸೂರಿನ ನಾಗರಿಕರು ಗಮನಿಸಬೇಕಿದೆ. ಇದು ರಾಜಕೀಯ ಪ್ರಶ್ನೆಯಲ್ಲ, ತಳ ಸಮಾಜವನ್ನೂ, ಮೇಲ್ಪದರದ ಸಮಾಜವನ್ನೂ ಸಮಾನವಾಗಿ ಕಾಡುವ ಬದುಕಿನ ಪ್ರಶ್ನೆ. ಇದರ ವಿರುದ್ಧ ನಮ್ಮ ದನಿ ಇರಲಿ.
– ನಾ.ದಿವಾಕರ





