Mysore
20
overcast clouds
Light
Dark

ಬೆಂಗಳೂರು ಡೈರಿ : ರಾಜ್ಯದಲ್ಲಿ ಕಾಂಗ್ರೆಸ್ ಗೆ ಬಹುಮತ; ಸಿದ್ದು- ಡಿಕೆಶಿ ಬಣಗಳಲ್ಲೇ ಭಿನ್ನಮತ!

– ಆರ್.ಟಿ.ವಿಠ್ಠಲಮೂರ್ತಿ

ಪೇಸಿಎಂ ಪ್ರಚಾರದಿಂದ ಮಂಕಾಗಿರುವ ರಾಜ್ಯ ಬಿಜೆಪಿಗೆ ಮೋದಿ, ಷಾ, ಯೋಗಿ ಬಂದು ಚೇತರಿಕೆಯ ಟಾನಿಕ್ ನೀಡುವರೇ?

ಮುಂಬರುವ ಚುನಾವಣೆಯ ಫಲಿತಾಂಶ ಏನಾಗಲಿದೆ ಎಂಬ ವಿಷಯ ಕಾಂಗ್ರೆಸ್ ಪಾಳೆಯದಲ್ಲಿ ಮಿಶ್ರ ಅಭಿಪ್ರಾಯ ಮೂಡಿಸಿರುವುದು ಕುತೂಹಲಕಾರಿಯಾಗಿದೆ. ಅಂದ ಹಾಗೆ ಇಂತಹ ಮಿಶ್ರ ಅಭಿಪ್ರಾಯಗಳ ಮೂಲವೆಂದರೆ ಸಿದ್ಧರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಬಣಗಳು.

ಸ್ವಯಂಬಲದ ಮೇಲೆ ಗೆದ್ದು ಅಧಿಕಾರ ಹಿಡಿಯುವ ಕನಸು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಬಣದಲ್ಲಿ ಗಟ್ಟಿಯಾಗುತ್ತಿರುವುದಕ್ಕೆ ಒಂದು ಕಾರಣವಿದೆ. ಅದೆಂದರೆ,ರಾಜ್ಯ ಬಿಜೆಪಿಯ ಈಗಿನ ಪರಿಸ್ಥಿತಿ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದರೆ, ಬಿಜೆಪಿಗೆ ಇಂತಹ ಸಮಸ್ಯೆಯೇ ಇರಲಿಲ್ಲ. ಆದರೂ ೨೦೧೮ ರ ವಿಧಾನಸಭಾ ಚುನಾವಣೆಯಲ್ಲಿ ಅದು ಗಳಿಸಿದ್ದು ೧೦೪ ಸ್ಥಾನ. ಎಲ್ಲಕ್ಕಿಂತ ಮುಖ್ಯವಾಗಿ ಅವತ್ತು ಬಿಜೆಪಿ ಸೈನ್ಯದ ಮುಂಚೂಣಿಯಲ್ಲಿದ್ದ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯ ಮೇಲೆ ಕೂರಿಸುವ ಕನಸು ಪ್ರಬಲ ಲಿಂಗಾಯತ ಸಮುದಾಯದಲ್ಲಿತ್ತು.

ಆದರೆ ೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಈ ಪ್ಲಸ್‌ ಪಾಯಿಂಟುಗಳು ಇರುವುದಿಲ್ಲ. ಕಾರಣ? ಅವತ್ತು ಕಾಂಗ್ರೆಸ್‌ ಪಕ್ಷ ಆಡಳಿತ ವಿರೋಧಿ ಅಲೆಯಲ್ಲಿ ಸಿಲುಕಿ ಯುದ್ಧ ಮಾಡಬೇಕಿತ್ತು. ಆದರೆ ಇವತ್ತು ಬಿಜೆಪಿ ಆಡಳಿತ ವಿರೋಧಿ ಅಲೆಯಲ್ಲಿ ಯುದ್ಧ ಮಾಡುವ ಅನಿವಾರ್ಯತೆಗೆ ಸಿಲುಕಿಕೊಂಡಿದೆ. ಹಾಗೆ ನೋಡಿದರೆ ಸಿದ್ಧರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ಯಾವ ಪ್ರಮಾಣದ ಆಡಳಿತ ವಿರೋಧಿ ಅಲೆ ಇತ್ತೋ? ಅದಕ್ಕಿಂತ ದೊಡ್ಡ ಪ್ರಮಾಣದ ಆಡಳಿತ ವಿರೋಧಿ ಅಲೆ ಹಾಲಿ ಬಿಜೆಪಿ ಸರ್ಕಾರಕ್ಕಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದ ವರ್ಚಸ್ಸು ಏನು ಮಾಡಿದರೂ ಹಿಗ್ಗುತ್ತಿಲ್ಲ ಎಂಬುದು ಬಿಜೆಪಿ ಪಾಳೆಯಕ್ಕೇ ಮನವರಿಕೆಯಾಗಿದೆ. ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಜೀವನಾವಶ್ಯಕ ವಸ್ತುಗಳ ಬೆಲೆಯಿಂದ ಹಿಡಿದು, ವ್ಯವಸ್ಥೆಯಲ್ಲಿ ಶಾಂತಿ ಕದಡುವುದು ಬಿಜೆಪಿಯ ಮೂಲ ಉದ್ದೇಶವೇ ಆಗಿದೆ ಎಂಬ ಭಾವನೆ ದಟ್ಟವಾಗುತ್ತಿದೆ. ಈ ಮಧ್ಯೆ ಅದರ ಮುಂಚೂಣಿಯಲ್ಲಿ ಯಡಿಯೂರಪ್ಪ ಇಲ್ಲ. ಅವರನ್ನು ಪಕ್ಷದ ರಾಷ್ಟ್ರೀಯ ಸಂಸದೀಯ ಮಂಡಳಿಯ ಸದಸ್ಯರನ್ನಾಗಿ ಮಾಡಿ ಗೌರವ ತೋರಿಸಲಾಗಿದೆ ಎಂದು ಬಿಜೆಪಿ ಪಾಳೆಯ ಏನೇ ಹೇಳಿಕೊಂಡರೂ ವಸ್ತುಸ್ಥಿತಿ ಅದಕ್ಕೆ ವ್ಯತಿರಿಕ್ತವಾಗಿದೆ.

ಯಾಕೆಂದರೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಕುಳಿತು ತಮ್ಮ ಸಮುದಾಯಕ್ಕೆ ನೀಡುವ ನೆರವು ದೊಡ್ಡದು. ಆದರೆ ರಾಷ್ಟ್ರೀಯ ಸಂಸದೀಯ ಮಂಡಳಿ ಸದಸ್ಯರಾಗಿ ಸಮುದಾಯಕ್ಕೆ ಅವರು ಯಾವ ಕೊಡುಗೆ ನೀಡಬಹುದು? ತೀರಾ ಹೆಚ್ಚು ಎಂದರೆ ಮುಂಬರುವ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ತಾವು ಬಯಸಿದ ಒಂದಷ್ಟು ಜನರಿಗೆ ಟಿಕೆಟ್‌ ಕೊಡಿಸಬಹುದು ಎಂಬುದನ್ನು ಬಿಟ್ಟರೆ, ಯಡಿಯೂರಪ್ಪ ಅವರು ತಮ್ಮ ಸಮುದಾಯಕ್ಕೆ ಮಾಡಲು ಬೇರೆ ಯಾವ ಶಕ್ತಿಯನ್ನೂ ಹೊಂದಿಲ್ಲ. ಈ ಅಂಶವನ್ನು ಲಿಂಗಾಯತ ಮತದಾರರು ಗಂಭೀರವಾಗಿ ಪರಿಗಣಿಸುತ್ತಾರೆ. ಆ ದೃಷ್ಟಿಯಿಂದ ಬಿಜೆಪಿ ಲಿಂಗಾಯತ ಸಮುದಾಯದಿಂದ ದೊಡ್ಡ ಹೊಡೆತ ತಿನ್ನುವುದು ಗ್ಯಾರಂಟಿ.

ಎಲ್ಲಕ್ಕಿಂತ ಮುಖ್ಯವಾಗಿ ಅವರು ಬಲಿಷ್ಠ ನಾಯಕರಾಗಿ ಚುನಾವಣೆ ಎದುರಿಸಿದಾಗಲೇ ಪಕ್ಷಕ್ಕೆ ಬಹುಮತ ಬಂದಿರಲಿಲ್ಲ. ಹೀಗಾಗಿ ಆಪರೇಷನ್‌ ಕಮಲ ಕಾರ್ಯಾಚರಣೆಯ ಮೂಲಕ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಶಾಸಕರನ್ನು ಎತ್ತಿಕೊಂಡು ಬಂದು ಬಿಜೆಪಿ ಸರ್ಕಾರ ರಚಿಸುವ ಅನಿವಾರ್ಯತೆ ಕಣ್ಣೆದುರಿಗಿತ್ತು.
ಆದರೆ ಈಗ ಯಡಿಯೂರಪ್ಪ ಅವರೇ ಸಿಂಹಾಸನದ ಮೇಲೆ ಕುಳಿತಿಲ್ಲ. ಹೋಗಲಿ, ಅವರ ಪುತ್ರ ವಿಜಯೇಂದ್ರ ಅವರಿಗೆ ಆದ್ಯತೆ ನೀಡುವ ಕೆಲಸವಾದರೂ ಆಗಿದೆಯೇ? ಎಂದರೆ ಅದೂ ಆಗಿಲ್ಲ. ಹೀಗಾಗಿ ರಾಜ್ಯ ಬಿಜೆಪಿಯ ಪರಿಸ್ಥಿತಿ ಈಗ ಮೊದಲಿನಂತಿಲ್ಲ. ಈಗಲೂ ಕೆಲವರು ಯಡಿಯೂರಪ್ಪ ಅವರಿಗೆ ರಾಷ್ಞ್ರ ಮಟ್ಟದಲ್ಲಿ ಪಕ್ಷ ಸ್ಥಾನಮಾನ ಕಲ್ಪಿಸಿರುವುದರಿಂದ ಲಿಂಗಾಯತ ಮತದಾರರು ಬಿಜೆಪಿ ಜತೆ ದೊಡ್ಡ ಮಟ್ಟದಲ್ಲಿ ನಿಲ್ಲುತ್ತಾರೆ ಎಂದು ಲೆಕ್ಕ ಹಾಕುತ್ತಾ ಕುಳಿತಿದ್ದಾರೆ.

ಆದರೆ ಅದು ಕಷ್ಟ ಎಂಬುದು ಸಿದ್ಧರಾಮಯ್ಯ ಅವರ ಬಣದ ಲೆಕ್ಕಾಚಾರ. ಹೀಗಾಗಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ನೂರಿಪ್ಪತ್ತರಿಂದ ನೂರಾಮೂವತ್ತು ಸ್ಥಾನಗಳನ್ನು ಗೆಲ್ಲುವುದು ನಿಶ್ಚಿತ ಎಂಬುದು ಅದರ ಯೋಚನೆ. ಆದರೆ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಸ್ವಯಂಬಲದ ಮೇಲೆ ಸರ್ಕಾರ ರಚಿಸುವ ಕನಸು ಸಿದ್ಧರಾಮಯ್ಯ ಬಣದಲ್ಲಿದ್ದರೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ನೇತೃತ್ವದ ಬಣ: ಇದು ಹುಸಿಯಾಗುವ ಕನಸು ಎನ್ನುತ್ತಿದೆ. ಅದರ ಪ್ರಕಾರ, ಕಳೆದ ಚುನಾವಣೆಗೆ ಹೋಲಿಸಿದರೆ ಬಿಜೆಪಿಗೆ ಕೆಲವು ಅನುಕೂಲಗಳಿಲ್ಲ ಎಂಬುದು ನಿಜ. ಅದೇ ರೀತಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿದ ರೀತಿ ಪ್ರಬಲ ಲಿಂಗಾಯತ ಸಮುದಾಯವನ್ನು ಕೆರಳಿಸಿದೆ.

ಹಾಗಂತ ಅದು ದೊಡ್ಡ ಪ್ರಮಾಣದಲ್ಲಿ ಕಾಂಗ್ರೆಸ್‌ ಜತೆ ನಿಲ್ಲುತ್ತದೆ ಎಂಬುದು ಭ್ರಮೆ. ಯಾಕೆಂದರೆ ಕಳೆದ ಚುನಾವಣೆಯ ಸಂದರ್ಭದಲ್ಲಿ ವೀರಶೈವ-ಲಿಂಗಾಯತ ಧರ್ಮವನ್ನು ಒಡೆಯಲು ಕಾಂಗ್ರೆಸ್‌ ಯತ್ನಿಸಿದ ರೀತಿ ಆ ಸಮುದಾಯದ ಮನಸ್ಸನಲ್ಲಿದೆ. ಇವತ್ತು ಕೆಲ ಕಾರಣಗಳಿಂದ ಅದು ಬಿಜೆಪಿ ಬಗ್ಗೆ ಭ್ರಮನಿರಸನಗೊಂಡಿದ್ದರೂ, ಇಂತಹ ಭ್ರಮ ನಿರಸನ ಅದು ಕಾಂಗ್ರೆಸ್‌ ಜತೆ ಸಾರಾಸಗಟಾಗಿ ನಿಲ್ಲುವಂತೆ ಮಾಡುತ್ತದೆ ಎಂಬುದು ಸುಳ್ಳು.
ಅದೇ ರೀತಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಪದವಿಯಿಂದ ಕೆಳಗಿಳಿಸಿದ ಬಿಜೆಪಿ ವರಿಷ್ಟರ ರೀತಿಯೂ ಲಿಂಗಾಯತ ಸಮುದಾಯವನ್ನು ಕೆರಳಿಸಿದೆ.ಆದರೆ ಏನೇ ಆದರೂ ಯಡಿಯೂರಪ್ಪ ಅಲ್ಲೇ ಇದ್ದಾರೆ.

ಹೀಗಾಗಿ ಲಿಂಗಾಯತ ಸಮುದಾಯದ ಗೊಂದಲದಿಂದ ಕೆಲ ಪ್ರಮಾಣದ ಮತಗಳು ಕಾಂಗ್ರೆಸ್ಸಿಗೆ ದಕ್ಕಬಹುದಾದರೂ ಅದು ಗಣನೀಯ ಪ್ರಮಾಣದಲ್ಲಂತೂ ಇರುವುದಿಲ್ಲ ಎಂಬುದು ಡಿ.ಕೆ.ಶಿವಕುಮಾರ್‌ ಬಣದ ವಾದ. ಅವತ್ತು ಲಿಂಗಾಯತ ಧರ್ಮವನ್ನು ಒಡೆಯಲು ಮುಂದಾದವರಿಗೆ ಬೆಂಬಲ ನೀಡಿ ಮುಖ್ಯಮಂತ್ರಿ ಮಾಡುವುದು ನಮ್ಮ ಕೆಲಸವಲ್ಲ ಎಂದು ಲಿಂಗಾಯತರು ಭಾವಿಸುತ್ತಾರೆ. ಹೀಗಾಗಿ ಎಷ್ಟೇ ಕಷ್ಞ ಪಟ್ಟರೂ ಲಿಂಗಾಯತ ಸಮುದಾಯದ ಗೊಂದಲ ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ಕಾಂಗ್ರೆಸ್‌ ಪಕ್ಷಕ್ಕೆ ಒಂದಷ್ಟು ನೆರವು ನೀಡಬಹುದು.
ಇದೇ ರೀತಿ ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಡಿಕೆಶಿ ಕುಳಿತಿರುವುರಿಂದ ಒಕ್ಕಲಿಗ ಮತಗಳು ಕಾಂಗ್ರೆಸ್ಸಿಗೆ ಒಂದಷ್ಟು ನೆರವು ನೀಡಬಹುದಾದರೂ ಶೇಕಡಾ ಎಪ್ಪತ್ತರಷ್ಟು ಮತಗಳು ಈಗಲೂ ದೇವೇಗೌಡರ ನೇತೃತ್ವದ ಜೆಡಿಎಸ್‌ ಜತೆಗೇ ಇರುವುದು ನಿಜ. ಈ ಮಧ್ಯೆ ಸಿಎಂ ಹುದ್ದೆಗಾಗಿ ಡಿಕೆಶಿ ಮತ್ತು ಸಿದ್ಧರಾಮಯ್ಯ ನಡುವೆ ನಡೆಯುತ್ತಿರುವ ಕದನದಿಂದ ಒಕ್ಕಲಿಗ ಮತದಾರರು ಗೊಂದಲಗೊಂಡಿದ್ದು, ಈ ಗೊಂದಲವೂ ಜೆಡಿಎಸ್‌ ಪಾಳೆಯಕ್ಕೆ ಅನುಕೂಲ ಕಲ್ಪಿಸಿಕೊಡುತ್ತದೆ.

ಇನ್ನು ಇತ್ತೀಚಿನ ದಿನಗಳಲ್ಲಿ ನಾವು ರೂಪಿಸಿದ ಹೋರಾಟದಿಂದ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಮಂಕಾಗಿರುವುದು ನಿಜ. ಅದು ಪೇಸಿಎಂ ಇರಬಹುದು, ಸೇಸಿಎಂ ಇರಬಹುದು, ಒಟ್ಟಿನಲ್ಲಿ ಹಲವು ಆರೋಪಗಳು ರಾಜ್ಯದ ಬಿಜೆಪಿ ಸರ್ಕಾರದ ಇಮೇಜ್‌ ನೆಲ ಕಚ್ಚುವಂತೆ ಮಾಡಿವೆ.
ಆದರೆ ಅದರ ಇಮೇಜ್‌ ಕುಸಿಯುತ್ತಿದೆ ಎಂಬ ಒಂದೇ ಕಾರಣದಿಂದ ಕಾಂಗ್ರೆಸ್‌ ಪಕ್ಷ ಸ್ವಯಂಬಲದ ಮೇಲೆ ಗೆದವ್ದು ಬಿಡುತ್ತದೆ ಎಂದಲ್ಲ. ಗಮನಿಸಬೇಕಾದ ಸಂಗತಿ ಎಂದರೆ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆ ಮುಗಿದ ಕೂಡಲೇ ಪ್ರಧಾನಿ ನರೇಂದ್ರಮೋದಿ, ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ಬಿಜೆಪಿಯ ರಾಷ್ಟ್ರೀಯ ತಂಡ ಕರ್ನಾಟಕಕ್ಕೆ ಬಂದಿಳಿಯುತ್ತದೆ.

ಹೀಗೆ ಇಳಿಯುವ ತಂಡ ಕರ್ನಾಟಕದ ಮತದಾರರ ಮೇಲೆ ಗಣನೀಯ ಪ್ರಮಾಣದ ಪ್ರಭಾವ ಬೀರುವುದು ನಿಶ್ಚಿತ. ಹೋಲಿಸಿ ನೋಡಿದರೆ ಕಾಂಗ್ರೆಸ್‌ ಪಕ್ಷಕ್ಕೆ ರಾಷ್ಟ್ರ ನಾಯಕರ ಶಕ್ತಿ ಇಲ್ಲ. ಆದರೆ ಬಿಜೆಪಿಗೆ ಇಂತಹ ಶಕ್ತಿ ಇದೆ. ಮೋದಿ, ಅಮಿತ್‌ ಶಾ, ಯೋಗಿ ಆದಿತ್ಯನಾಥ್‌ ತರದವರು ಏನು ಬೇಕಾದರೂ ಮಾಡಬಲ್ಲರು. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸ್ವಯಂಬಲದ ಮೇಲೆ ಗೆದ್ದು ಅಧಿಕಾರ ಹಿಡಿಯದೇ ಇರಬಹುದು. ಆದರೆ ಜೆಡಿಎಸ್‌ ಜತೆ ಸೇರಿ ಮೈತ್ರಿಕೂಟ ಸರ್ಕಾರ ರಚಿಸುವ ಸ್ಥಿತಿಗಂತೂ ಅದು ಬರುತ್ತದೆ. ಹಾಗಾದಾಗ ಏನು ಮಾಡಬೇಕು? ಅನ್ನುವುದು ಡಿಕೆಶಿ ಬಣದ ಚಿಂತೆ.

ಈ ಎರಡು ಬಗೆಯ ಚಿಂತೆಗಳ ನಡುವೆ ರಾಜ್ಯ ರಾಜಕಾರಣದ ಚಿತ್ರ ಸ್ಪಷ್ಟವಾಗತೊಡಗಿದರೆ ಅದರಲ್ಲಿ ಅಚ್ಚರಿ ಏನಿಲ್ಲ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ