Mysore
18
broken clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಬೆಂಗಳೂರು ಡೈರಿ : ಜೆಡಿಎಸ್ ಗೆ ಮರಳಿದ ಜಿ.ಟಿ. ದೇವೇಗೌಡರ ಮಣಿಸಲು ಹವಣಿಸುತ್ತಿರುವ ಸಿದ್ದರಾಮಯ್ಯ?

– ಆರ್.ಟಿ.ವಿಠ್ಠಲಮೂರ್ತಿ

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪರಿಶಿಷ್ಟ ಪಂಗಡದ ನಾಯಕ ಸಮುದಾಯಕ್ಕೆ ಸೇರಿದ ಮಾಜಿ ಸಂಸದ, ನಟ ಶಶಿಕುಮಾರ್ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ತಂತ್ರ!

ಕಳೆದ ವಾರ ಮಾಜಿ ಪ್ರಧಾನಿ ದೇವೇಗೌಡ ಮೈಸೂರಿನಲ್ಲಿರುವ ಜಿ.ಟಿ.ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿದರು.
ಇತ್ತೀಚಿನ ದಿನಗಳಲ್ಲಿ ಜೆಡಿಎಸ್ ಪಕ್ಷದ ಹೊರಗೆ ಕಾಲಿಟ್ಟಿದ್ದ ಜಿ.ಟಿ.ದೇವೇಗೌಡರನ್ನು ಸಾಂತ್ವನಗೊಳಿಸುವುದು ಈ ಭೇಟಿಯ ಮುಖ್ಯ ಉದ್ದೇಶ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಿದ್ಧರಾಮಯ್ಯ ಅವರಂತಹ ಪ್ರಬಲ ನಾಯಕನ ವಿರುದ್ಧ ಜಯಗಳಿಸಿದ್ದ ಜಿ.ಟಿ.ದೇವೇಗೌಡರಿಗೆ ಪಕ್ಷದಲ್ಲಿ ಪ್ರಮುಖ ಸ್ಥಾನಮಾನ ಸಿಗಬೇಕಿತ್ತು. ಆದರೆ ಅಸ್ತಿತ್ವಕ್ಕೆ ಬಂದ ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಅವರಿಚ್ಚೆಗೆ ವಿರುದ್ಧವಾಗಿ ಉನ್ನತ ಶಿಕ್ಷಣ ಖಾತೆಯನ್ನು ಅವರಿಗೆ ಕೊಡಲಾಯಿತು.
ಅಷ್ಟೇ ಅಲ್ಲ, ಪಕ್ಷದಲ್ಲಿ ಕ್ರಮೇಣ ಅವರನ್ನು ನಿರ್ಲಕ್ಷಿಸುವ ಕೆಲಸ ನಡೆಯಿತು. ಈ ಬೆಳವಣಿಗೆಯಿಂದ ಕ್ರುದ್ಧರಾದ ಜಿ.ಟಿ.ದೇವೇಗೌಡ ಜೆಡಿಎಸ್ ಪಕ್ಷದಿಂದ ಅಂತರ ಕಾಯ್ದುಕೊಳ್ಳಲು ಶುರು ಮಾಡಿದರು. ಸಮ್ಮಿಶ್ರ ಸರ್ಕಾರ ಮಗುಚಿಬಿದ್ದ ನಂತರ ಜಿ.ಟಿ.ದೇವೇಗೌಡರ ಹೆಜ್ಜೆ ಗುರುತುಗಳು ಕಾಂಗ್ರೆಸ್, ಬಿಜೆಪಿ ಪಡಸಾಲೆಯಲ್ಲಿ ಕಾಣಿಸತೊಡಗಿದವು. ಜಿ.ಟಿ.ದೇವೇಗೌಡರ ಒಂದು ಷರತ್ತು ಪೂರ್ಣಗೊಂಡಿದ್ದರೆ ಅವರು ಕಾಂಗ್ರೆಸ್ ಅಥವಾ ಬಿಜೆಪಿ ಕಡೆ ಹೋಗಲು ತಯಾರಿದ್ದರು.
ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಲ್ಲಿ ತಮಗೆ, ಚಾಮರಾಜ ಕ್ಷೇತ್ರದಲ್ಲಿ ತಮ್ಮ ಮಗನಿಗೆ ಟಿಕೆಟ್ ಕೊಡುವುದಾದರೆ ಕಾಂಗ್ರೆಸ್ಸಿಗೆ ಬರಲು ನಾನು ಸಿದ್ಧ ಅಂತ ಸಿದ್ಧರಾಮಯ್ಯ ಅವರಿಗೂ ಹೇಳಿದ್ದರು. ಶುರುವಿನಲ್ಲಿ ನೋಡೋಣ ಅಂತ ಸಿದ್ಧರಾಮಯ್ಯ ಹೇಳಿದ್ದರಾದರೂ ಇತ್ತೀಚೆಗೆ ಉಲ್ಟಾ ಹೊಡೆದಿದ್ದರು. ಚಾಮುಂಡೇಶ್ವರಿಯಲ್ಲಿ ನೀವು ಸ್ಪರ್ಧಿಸಿ, ಮೈಸೂರು ಲೋಕಸಭಾ ಕ್ಷೇತ್ರದಿಂದ ನಿಮ್ಮ ಮಗ ಸ್ಪರ್ಧಿಸಲಿ ಅಂತ ಜಿ.ಟಿ.ದೇವೇಗೌಡರಿಗೆ ಸಿದ್ಧರಾಮಯ್ಯ ಹೇಳಿದ್ದರು.
ಪರಿಣಾಮ? ಜಿ.ಟಿ.ದೇವೇಗೌಡರು ಕಾಂಗ್ರೆಸ್ ಗೆ ಹೋಗುವ ನಿರ್ಧಾರದಿಂದ ದೂರ ಸರಿದರು. ಬಿಜೆಪಿಗೆ ಜಿ.ಟಿ.ದೇವೇಗೌಡರೇನೋ ಬೇಕಾಗಿದ್ದರು. ಆದರೆ ಒಂದೇ ಕುಟುಂಬದ ಇಬ್ಬರಿಗೆ ಅವಕಾಶ ಕಲ್ಪಿಸಿಕೊಡಲು ಅದು ತಯಾರಿರಲಿಲ್ಲ. ಅಂದ ಹಾಗೆ ತಮ್ಮ ನಡೆ ಕಾಂಗ್ರೆಸ್ ಕಡೆ ಎಂಬ ಲೆಕ್ಕಾಚಾರದಿಂದ ಜಿ.ಟಿ.ದೇವೇಗೌಡರು ಆ ಪಕ್ಷಕ್ಕೆ ಶಕ್ತಿ ತುಂಬುವ ಕೆಲಸ ಮಾಡಿದ್ದರು. ಹುಣಸೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ಗೆಲುವಿಗಾಗಿ ಅವರು ದುಡಿದಿದ್ದು ರಹಸ್ಯವೇನಲ್ಲ. ಅದೇ ರೀತಿ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಡಾ.ತಿಮ್ಮಯ್ಯ ಅವರಿಗಾಗಿಯೂ ಜಿ.ಟಿ.ದೇವೇಗೌಡರು ಕೆಲಸ ಮಾಡಿದ್ದರು.
ಆದರೆ ಈ ಕಾಲಕ್ಕಾಗಲೇ ಜಿ.ಟಿ.ದೇವೇಗೌಡರು ಪಕ್ಷಕ್ಕೆ ಬಂದರೆ ತಮ್ಮ ನೆಲೆ ಅಲುಗಾಡಬಹುದು ಅಂತ ಹಲ ಕಾಂಗ್ರೆಸ್ಸಿಗರು ವಿಧಾನಪರಿಷತ್ ಚುನಾವಣೆಯಲ್ಲಿ ಜೆ.ಡಿ.ಎಸ್ ಪಕ್ಷದ ಮಂಜೇಗೌಡರನ್ನು ಬೆಂಬಲಿಸಿದರು.
ಪರಿಣಾಮ?ಕಾಂಗ್ರೆಸ್ ಪಕ್ಷ ನೀಡಿದ 1200 ರಷ್ಟು ದ್ವಿತೀಯ ಪ್ರಾಶಸ್ತ್ಯದ ಮತಗಳು ಜೆಡಿಎಸ್ ನ ಗೆಲುವಿಗೆ‌ ಕಾರಣವಾಯಿತು.
ಈ ಬೆಳವಣಿಗೆ ಜಿ.ಟಿ.ದೇವೇಗೌಡರನ್ನು ಅಲುಗಾಡಿಸಿದ್ದು ನಿಜ.ಯಾಕೆಂದರೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆದ್ದು, ಬಿಜೆಪಿ ಅಭ್ಯರ್ಥಿ ರಘು ಕೌಟಿಲ್ಯ ದಡ ದಾಟಿದರೆ ಜೆಡಿಎಸ್ ಮಣ್ಣು ಮುಕ್ಕಿದಂತಾಗುತ್ತದೆ. ಆ ಮೂಲಕ ತಾವಿಲ್ಲದೆ ಜೆಡಿಎಸ್ ಗೆ ಬಲವಿಲ್ಲ ಎಂಬುದು ಸಾಬೀತಾಗುತ್ತದೆ ಅಂತ ಅವರು ಭಾವಿಸಿದ್ದರು. ಆದರೆ ಅವರ ಲೆಕ್ಕಾಚಾರ ತಪ್ಪಿತು. ಕಾಂಗ್ರೆಸ್ ಗೆಲ್ಲುವ ಕಾಲಕ್ಕೆ ಜೆಡಿಎಸ್ ಕೂಡಾ ದಡ ಸೇರಿತು.
ಜಿ.ಟಿ.ಡಿ ಲೆಕ್ಕಾಚಾರ ಹುಸಿಯಾಗಲಿ ಅಂತ ಕಾಂಗ್ರೆಸ್, ಬಿಜೆಪಿಯ ಬಹುತೇಕರು ಲೆಕ್ಕ ಹಾಕಿದ್ದರಿಂದ ಜೆಡಿಎಸ್ ಅಭ್ಯರ್ಥಿ ಗೆದ್ದು ಬಿಜೆಪಿಯ ರಘು ಕೌಟಿಲ್ಯ ಸೋಲುವಂತಾಯಿತು.
ಯಾವಾಗ ಈ ಬೆಳವಣಿಗೆಯ ಜತೆ, ತಮ್ಮ ಟಿಕೆಟ್ ಬೇಡಿಕೆ‌ ನಿರಾಕರಣೆ ಆಯಿತೋ? ಆಗ ಜಿಟಿಡಿ ಕ್ರಮೇಣ ಜೆಡಿಎಸ್ ಕಡೆ ವಾಲತೊಡಗಿದರು.
ಮೈಸೂರು ಮಹಾನಗರಪಾಲಿಕೆಯ ಮೇಯರ್, ಉಪಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ತುಪುಕ್ಕಂತ ಉದುರಲು ಜಿಟಿಡಿ ಅವರೇ ನೇರ ಕಾರಣ.
ತಮಗೆ ಕೈ ಕೊಟ್ಟ ಕಾಂಗ್ರೆಸ್ ಪಕ್ಷ ಏಳಿಗೆಯಾಗಬಾರದು ಅಂತ ಅವರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ನೀಡಿದ ಸಲಹೆ ವರ್ಕ್ ಔಟ್ ಆಯಿತು. ಚುನಾವಣೆಯಲ್ಲಿ ಬಿಜೆಪಿಯೇ ಮೇಯರ್, ಉಪಮೇಯರ್ ಹುದ್ದೆಗಳನ್ನು ಗೆದ್ದುಕೊಳ್ಳುವಂತಾಯಿತು.
ಈಗ ಖುದ್ದು ಮಾಜಿ ಪ್ರಧಾನಿ ದೇವೇಗೌಡರೇ ಮೈಸೂರಿನ ಜಿ.ಟಿ.ಡಿ ನಿವಾಸಕ್ಕೆ ಬಂದು ಹೆಗಲ ಮೇಲೆ ಕೈಯಿಟ್ಟ ನಂತರ ಆಟ ಒಂದು ಹಂತಕ್ಕೆ ಬಂದಿದೆ.
ಜಿಟಿಡಿ ತಮ್ಮ ಧೀರ್ಘ‌ಕಾಲದ ಮುನಿಸಿಗೆ ವಿರಾಮ ಹೇಳಿ, ಜೆಡಿಎಸ್ ಪಕ್ಷದಲ್ಲೇ ಉಳಿಯುವ, ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಹುದ್ದೆಗೇರಿಸುವ ತಮ್ಮ ನಿಲುವನ್ನು ಬಹಿರಂಗವಾಗಿ ಘೋಷಿಸಿದ್ದಾರೆ.
****
ಅಂದ ಹಾಗೆ ಜಿ.ಟಿ.ದೇವೇಗೌಡರ ಈ ನಿಲುವಿನಿಂದ ಮೈಸೂರು ಭಾಗದಲ್ಲಿ ಜೆಡಿಎಸ್ ಗೆ ಬಲ ಹೆಚ್ಚಿರುವುದು ನಿಜ. ಇದೇ ಕಾರಣಕ್ಕಾಗಿ ಜೆಡಿಎಸ್ ಕೂಡಾ ಜಿಟಿಡಿ ಚಾಮುಂಡೇಶ್ವರಿಗೆ, ಅವರ ಪುತ್ರ ಹುಣಸೂರಿಗೆ ಅಂತ ಖಚಿತ ಪಡಿಸಿದೆ. ಈ ಕಾಲಘಟ್ಟದಲ್ಲಿ ಮೇಲೆದ್ದಿರುವ ಜೆಡಿಎಸ್ ಗೆ, ಅದರ ಮುಂಚೂಣಿಗೆ ಬಂದು ನಿಂತಿರುವ ಜಿ.ಟಿ.ದೇವೇಗೌಡರಿಗೆ, ಮತ್ತು ಅದೇ ಕಾಲಕ್ಕೆ ಬಿಜೆಪಿಗೆ ಟಕ್ಕರ್ ಕೊಡುವ ಒಂದು ರಣತಂತ್ರ ಕಾಂಗ್ರೆಸ್ ಪಾಳೆಯದಲ್ಲಿ ರೂಪುಗೊಳ್ಳುತ್ತಿದೆ.
ಈ ರಣತಂತ್ರವನ್ನು ರೂಪಿಸುತ್ತಿರುವವರು ಕಾಂಗ್ರೆಸ್ ನಾಯಕ, ಮಾಜಿ ಸಿಎಂ ಸಿದ್ಧರಾಮಯ್ಯ. ಅವರಿಗೀಗ ಒಂದೇ ಕಲ್ಲಿಗೆ ಮೂರು ಹಕ್ಕಿ ಹೊಡೆಯುವ ಇರಾದೆ ಇದೆ. ಈ ಕಾರಣಕ್ಕಾಗಿ ಅವರು ತಮ್ಮ ಬತ್ತಳಿಕೆಯಿಂದ ಸರ್ಪಾಸ್ತ್ರ ಪ್ರಯೋಗಿಸಲು ಸಜ್ಜಾಗಿದ್ದಾರೆ. ಅರ್ಥಾತ್ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಕಣದಲ್ಲಿ ಪರಿಶಿಷ್ಟ ಪಂಗಡದ ನಾಯಕ ಸಮುದಾಯಕ್ಕೆ ಸೇರಿದ ಮಾಜಿ ಸಂಸದ, ನಟ ಶಶಿಕುಮಾರ್ ಅವರನ್ನು ಕಣಕ್ಕಿಳಿಸಲು ಯೋಚಿಸುತ್ತಿದ್ದಾರೆ.
ಹೀಗೆ ಶಶಿಕುಮಾರ್ ಅವರನ್ನು ಕಣಕ್ಕಿಳಿಸಿದರೆ ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಿಸಿ ಲಾಭ ಪಡೆಯುವ ಕನಸು ಕಾಣುತ್ತಿರುವ ಬಿಜೆಪಿಗೆ ಟಕ್ಕರ್ ಕೊಟ್ಟಂತಾಗುತ್ತದೆ. ಅದೇ ಕಾಲಕ್ಕೆ ಚಾಮುಂಡೇಶ್ವರಿ ಕ್ಷೇತ್ರದ ಕಣದಲ್ಲಿ ಖರ್ಗೆ ಅವರಿಂದಾಗಿ ಪರಿಶಿಷ್ಟ ಜಾತಿ, ಶಶಿಕುಮಾರ್ ಅವರ ಸ್ಪರ್ಧೆಯಿಂದಾಗಿ ಪರಿಶಿಷ್ಟ ಪಂಗಡದ ಮತಗಳು ಕಾಂಗ್ರೆಸ್ಸಿಗೆ ದಕ್ಕುತ್ತವೆ. ಅದೇ ಕಾಲದಲ್ಲಿ ಕುರುಬ, ಮುಸ್ಲಿಂ ಮತಗಳು ಸಾಲಿಡ್ಡಾಗಿ ಸಿಗುವುದರಿಂದ ಕಾಂಗ್ರೆಸ್ ಗೆದ್ದು ಜಿ.ಟಿ.ದೇವೇಗೌಡರು ಸೋಲುವಂತಾಗುತ್ತದೆ.
ಈ ಮಧ್ಯೆ ನಾಯಕ ಸಮುದಾಯಕ್ಕೆ ಕೊಡುವ ಪ್ರಾತಿನಿಧ್ಯ ಹುಣಸೂರು, ಕೆ.ಆರ್.ನಗರ ಸೇರಿದಂತೆ ಮೈಸೂರು-ಚಾಮರಾಜನಗರ ಜಿಲ್ಲೆಯ ಬಹುತೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್ಸಿಗೆ ವರವಾಗುತ್ತದೆ.
ಆ ಮೂಲಕ ಜೆಡಿಎಸ್, ಬಿಜೆಪಿ ಸೈನ್ಯಗಳಿಗೆ ಹೊಡೆತ ಕೊಡುವ ಗುರಿ ಈಡೇರಿದಂತಾಗುತ್ತದೆ ಎಂಬುದು ಸಿದ್ಧರಾಮಯ್ಯ ಲೆಕ್ಕಾಚಾರ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಮ್ಮನ್ನು ಸೋಲಿಸಿದ್ದ ಜಿ.ಟಿ.ದೇವೇಗೌಡರ ರಾಜಕೀಯ ಬದುಕನ್ನು ಫಿನಿಷ್ ಮಾಡುವುದು, ಅದೇ ಕಾಲಕ್ಕೆ ತಾವು ವಿರೋಧಿಸುವ ಜೆಡಿಎಸ್ ಪಕ್ಷವನ್ನು ಮಕಾಡೆ ಮಲಗಿಸುವುದು ಅವರ ಹಟ. ಶಶಿಕುಮಾರ್ ಎಂಬ ಸರ್ಪಾಸ್ತ್ರದ ಪ್ರಯೋಗಕ್ಕೆ ಅವರು ಸಜ್ಜಾಗುತ್ತಿರುವುದಕ್ಕೆ ಇದೇ ಮುಖ್ಯ ಕಾರಣ.
ಮುಂದೇನೋ?

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ