Mysore
20
overcast clouds
Light
Dark

ಅನಾಥ ಮಗುವಿಗಾಗಿ ಮದುವೆಯಾದ ತಿಲಕ್‌ ಮತ್ತು ಧನಾ

  • ಪಂಜು ಗಂಗೊಳ್ಳಿ

ಚೆನ್ನೈಯ ತಿಲಕ್‌ ಒಬ್ಬ ಸಾಮಾಜಿಕ ಕಾರ್ಯಕರ್ತ. ಅವರು ಚೆನ್ನೈಯ “ಸೇವೆ ಕರಂಗಳ್’ ಎಂಬ ಸಂಸ್ಥೆಯ ಸ್ಥಾಪಕರಲ್ಲೊಬ್ಬರು. ‘ಸೇವೆ ಕರಂಗಳ್’ ಚೆನ್ನೈಯ ಎಂಟು ಬಾಲಾಶ್ರಮಗಳ ಬೇಕು ಬೇಡಗಳನ್ನು ನಿಭಾಯಿಸುತ್ತದೆ. ಚಿಕ್ಕ ಮಕ್ಕಳು ತಮ್ಮ ಸುತ್ತಮುತ್ತಲಿನವರಿಂದ ಎಲ್ಲಕ್ಕಿಂತ ಹೆಚ್ಚಾಗಿ ಪ್ರೀತಿ ಹಾಗೂ ಅವರ ಲಕ್ಷ್ಯವನ್ನು ನಿರೀಕ್ಷಿಸುತ್ತವೆ ಎಂದು ನಂಬುವ ತಿಲಕ್, ಜನರು ತಮ್ಮ ಮಕ್ಕಳ ಜನ್ಮದಿನಾಚರಣೆಗಳನ್ನು ಈ ಆಶ್ರಮಗಳಲ್ಲಿ ನೆರವೇರಿಸುವಂತೆ ಪ್ರೇರೇಪಿಸುತ್ತಾರೆ. ಹಣ ದೇಣಿಗೆ ನೀಡಲು ತಯಾರಿರುವವರು ಈ ಮಕ್ಕಳನ್ನು ಆಗಾಗ್ಗೆ ಟ್ರೆಕ್ಕಿಂಗ್ ಮೊದಲಾದ ಚಟುವಟಿಕೆಗಳಿಗೆ ಕರೆದುಕೊಂಡು ಹೋಗುವಂತೆ ಮಾಡುತ್ತಾರೆ. ಈ ಬಾಲಾಶ್ರಮಗಳಲ್ಲಿ ದೀಪಾವಳಿ ಮೊದಲಾದ ಹಬ್ಬಗಳನ್ನು ನಡೆಸುತ್ತಾರೆ. ಆ ಮಕ್ಕಳ ಶಿಕ್ಷಣಕ್ಕೆ ಬೇಕಾದ ಪುಸ್ತಕ, ಚೀಲ, ಸ್ಟೇಷನರಿ, ಯೂನಿಫಾರ್ಮ್ ಮೊದಲಾದವುಗಳನ್ನು ಒದಗಿಸುತ್ತಾರೆ. ತಿಲಕ್ ಬಾಲಾಶ್ರಮಗಳಲ್ಲದೆ ಒಂದು ವೃದ್ಧಾಶ್ರಮವನ್ನೂ ನೋಡಿಕೊಳ್ಳುತ್ತಿದ್ದಾರೆ.

ಚೆನ್ನೈಯ ಧನಾ ಎನ್ನುವವರೂ ಒಬ್ಬರು ಸಾಮಾಜಿಕ ಕಾರ್ಯಕರ್ತೆ. ಅವರು ಮತ್ತು ತಿಲಕ್ ಬಹು ಕಾಲದ ಗೆಳೆಯ ಗೆಳತಿಯರು. ಇಬ್ಬರೂ ಬಹುಕಾಲದಿಂದ ಗೆಳೆಯ ಗೆಳತಿಯರಾಗಿದ್ದು ಇಬ್ಬರೂ ಅನಾಥ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ತಮ್ಮನ್ನು ತೊಡಗಿಸಿಕೊಂಡವರು. ತಿಲಕ್ ಮತ್ತು ಧನಾ ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದರೂ ಇಬ್ಬರ ನಡುವೆ ಪ್ರೇಮ, ಪ್ರೀತಿ, ಮದುವೆ ಮೊದಲಾದ ಯಾವ ವಿಚಾರವೂ ಮೂಡಿರಲಿಲ್ಲ. ಏಕೆಂದರೆ, ಇಬ್ಬರಿಗೂ ಮದುವೆ ಎಂಬುದು ಅಲರ್ಜಿಯ ವಿಷಯವಾಗಿತ್ತು. ಧನಾ ತನ್ನನ್ನು ಸಾಮಾಜಿಕ ಕಾರ್ಯ ಮತ್ತು ಪ್ರಾಣಿಗಳ ಆರೈಕೆಯಲ್ಲಿ ಎಷ್ಟು ತೊಡಗಿಸಿಕೊಂಡಿದ್ದರೆಂದರೆ, ಆ ಕಾರಣಕ್ಕಾಗಿಯೇ ಅವರು ಮದುವೆಯಾಗಬಾರದು ಎಂದು ದೃಢ ತೀರ್ಮಾನ ಮಾಡಿದ್ದರು. ಇತ್ತ ತಿಲಕ್ ತನ್ನ ಸಾಮಾಜಿಕ ಕಾರ್ಯಗಳನ್ನು ಒಪ್ಪಿ ಗೌರವಿಸುವ, ಸಹಕರಿಸುವ ಹೆಣ್ಣು ಸಿಗುವುದು ಸಾಧ್ಯವೇ ಇಲ್ಲ ಎಂದು ತನಗೆ ತಾನೇ ಮನದಟ್ಟು ಮಾಡಿಕೊಂಡು ಮದುವೆಯಾಗಬಾರದು ಎಂದು ತೀರ್ಮಾನಿಸಿದ್ದರು. ಆದರೆ, ಅಂತಹ ಇಬ್ಬರು ಒಂದು ದಿನ ಪರಸ್ಪರ ಮದುವೆಯಾಗುವುದಾಗಿ ತೀರ್ಮಾನಿಸುತ್ತಾರೆ! ಅವರು ಹಾಗೆ ಇದ್ದಕ್ಕಿದ್ದಂತೆ ಮದುವೆಯಾಗಲು ತೀರ್ಮಾನಿಸಲು ಕಾರಣ ಅವರ ನಡುವೆ ಹುಟ್ಟಿದ ಯಾವುದೇ ರೀತಿಯ ಪ್ರೀತಿ, ಪ್ರೇಮವಲ್ಲ. ಕಾರಣ ಬೇರೆಯೇ ಆಗಿತ್ತು.

ಥೆರೆಸಾ ಆರು ತಿಂಗಳ ಹೆಣ್ಣು ಮಗು. ಅವಳ ತಾಯಿ ಎಚ್‌ಐವಿ ಪೀಡಿತೆ. ಥೆರೆಸಾಗೆ ಎಚ್ ಐವಿಯ ಸೋಂಕು ತಗುಲಿರಲಿಲ್ಲ. ಆದರೂ ಅವಳು ತನ್ನ ಮಗುವನು ತ್ಯಜಿಸಿದಳು. ಧನಾ ಥೆರೆಸಾಳನ್ನು ನೋಡುತ್ತಿದಂತೆ ಅವರಿಗೆ ಅವಳ ಮೇಲೆ ತೀವ್ರ ತರದ ಪ್ರೀತಿ, ಮಮತೆ ಮಾಡಿತು. ಅವರು ಥೆರೆಸಾಳನ್ನು ದತ್ತು ಸ್ವೀಕರಿಸಲು ತೀರ್ಮಾನಿಸುತ್ತಾರೆ. ಒಂಟಿ ತಾಯಿಯಾಗಿ ಒಂದು ಮಗುವನ್ನು ಬೆಳೆಸುವುದು ಕಷ್ಟ ಎಂದು ಭಾವಿಸಿ, ಅವರು ತಿಲಕ್ ರನ್ನು ತನ್ನನ್ನು ಮದುವೆಯಾಗುತ್ತೀರಾ ಎಂದು ಕೇಳುತ್ತಾರೆ. ತಿಲಕ್ ಒಪ್ಪುತ್ತಾರೆ. ಆದರೆ, ಧನಾ ತನ್ನ ಕೆಲಸಗಳ ನಡುವೆ ಸಮಯದ ಅಭಾವದ ಕಾರಣ ತನ್ನ ಮನೆಯವರನ್ನು ಮದುವೆಗೆ ಒಪ್ಪಿಸುವಲ್ಲಿ ಎರಡು ವರ್ಷಗಳು ಬೇಕಾದವು. ಅಷ್ಟರಲ್ಲಿ ಥೆರೆಸಾಗೆ ಒಂದು ವರ್ಷ ತುಂಬಿತು. ಬಾಲಾಶ್ರಮಗಳು ಸಾಮಾನ್ಯವಾಗಿ ಮಕ್ಕಳಿಗೆ ಒಂದು ವರ್ಷ ತುಂಬುವ ಮೊದಲೇ ದತ್ತು ನೀಡುತ್ತವೆ. ಏಕೆಂದರೆ, ಮಗುವಿಗೆ ಹೆಚ್ಚು ಹೆಚ್ಚು ಪ್ರಾಯವಾದಂತೆ ಅದಕ್ಕೆ ತಾನು ದತ್ತು ಸ್ವೀಕರಿಸಲ್ಪಟ್ಟ ಮನೆಗೆ ಹಾಗೂ ವ್ಯಕ್ತಿಗಳಿಗೆ ಹೊಂದಿಕೊಳ್ಳಲು ಕಷ್ಟವಾಗುತ್ತದೆ. ಹೀಗಾಗಿ, ಧನಾ ಮತ್ತು ತಿಲಕ್ ಮದುವೆಯಾಗುವ ತೀರ್ಮಾನವನ್ನು ಕಾರ್ಯಗತಗೊಳಿಸುವ ಮೊದಲೇ ಯಾರೋ ಹೆತ್ತವರು ಥೆರೆಸಾಳನ್ನು ದತ್ತು ಪಡೆದು ಕರೆದುಕೊಂಡು ಹೋದರು.

ತಿಲಕ್ ಮತ್ತು ಧನಾ ಥೆರೆಸಾಳನ್ನು ತಮ್ಮ ಮಗುವನ್ನಾಗಿ ಮಾಡಿಕೊಳ್ಳಲು ವಿಫಲರಾದರೂ ಅವಳ ಕಾರಣಕ್ಕೆ ಪರಸ್ಪರ ಮದುವೆಯಾಗಲು ಮಾಡಿದ ತೀರ್ಮಾನದಿಂದ ಹಿಂದೆ ಸರಿಯಲಿಲ್ಲ. ಆ ತೀರ್ಮಾನದಂತೆಯೇ 2012ರ ಜೂನ್ 1 ರಂದು ಮದುವೆಯಾದರು. ಆದರೆ, ಅವರು ಮದುವೆಯಾದ ರೀತಿ ಮಾತ್ರ ವಿನೂತನವಾಗಿತ್ತು. ಅವರು ತಮ್ಮ ಮದುವೆಯ ರಿಷೆಪ್ಪನ್ ಸಮಾರಂಭವನ್ನು ಥೆರೆಸಾಳ ಹೆಸರಲ್ಲಿ ಒಂದು ಫಂಡ್ ರೈಸರ್ ಆಗಿ ಪರಿವರ್ತಿಸಿದರು. ಅದರ ಪ್ರಕಾರ ಮದುವೆಗೆ ಬಂದ ಅವರ ನೆಂಟರಿಷ್ಟರು, ಆತ್ಮೀಯರು ಯಾವುದೇ ರೀತಿಯ ವಸ್ತು ರೂಪದ ಗಿಫ್ಟ್‌ಗಳನ್ನು ಕೊಡುವಂತಿರಲಿಲ್ಲ. ವಸ್ತು ರೂಪದ ಗಿಫ್ಟ್ ಬಯಸುವವರು ಅವುಗಳ ಬದಲಿಗೆ ಹಣವನ್ನೇ ಗಿಫ್ಟ್ ಕೊಡಬೇಕಿತ್ತು. ಹಾಗೆ ಸಂಗ್ರಹವಾದ ಹಣವನ್ನು ಅವರು ಬಡಮಕ್ಕಳ ಶಿಕ್ಷಣಕ್ಕಾಗಿ ಒಂದು ದತ್ತಿನಿಧಿಯಾಗಿ ತೆಗೆದಿರಿಸಿದರು. ತಮ್ಮ ಮದುವೆಗೆ ತಿಲಕ್ ನೋಡಿಕೊಳ್ಳುತ್ತಿದ್ದ ಚೆನ್ನೈಯ ఎంటు ಬಾಲಾಶ್ರಮದ ಮಕ್ಕಳನ್ನು ಅತಿಥಿಗಳನ್ನಾಗಿ ಕರೆತಂದಿದ್ದರು. ಮದುಮಗಳು ಧನಾ ಯಾವುದೇ ರೀತಿಯ ದುಬಾರಿ ಸೀರೆ, ಒಡವೆ ತೊಡದೆ, ಕೇವಲ ಹತ್ತಿರದ ಬಂಧುಬಳಗವನ್ನಷ್ಟೇ ಆಹ್ವಾನಿಸಿದ್ದರು.

ತಿಲಕ್‌ ಮತ್ತು ಧನಾ ಶ್ರೀಮಂತರೇನಲ್ಲ. ಇಬ್ಬರೂ ಸಾಮಾನ್ಯ ಕುಟುಂಬಗಳಿಂದ ಬಂದವರು. ಆದರೆ ಇಬ್ಬರ ಹೃದಯ ಶ್ರೀಮಂತಿಕೆ ಮಾತ್ರ ಅಪಾರವಾದುದು. ಮದುವೆ ಎಂಬ ವ್ಯವಸ್ಥೆಯನ್ನು ನಿರಾಕರಿಸುತ್ತ ಬಂದಿದ್ದ ಇಬ್ಬರೂ ಒಂದು ಅನಾಥ ಹೆಣ್ಣು ಮಗುವಿಗಾಗಿ ಮದುವೆಯಾದುದು ಯಾವುದೇ ಸಿನಿಮಾದ ಕತೆಗಿಂತ ಕಡಿಮೆಯಾದುದಲ್ಲ. ಹಾಗೆ ಮದುವೆಯಾಗುವ ಮೂಲಕ ಅವರು ಮದುವೆ ವ್ಯವಸ್ಥೆಗೆ ಹೊಸ ಅರ್ಥವನ್ನು ನೀಡಿದರು. ಥೆರೆಸಾಳಿಗಾಗಿ ಮದುವೆಯಾದ ಅವರಿಗೆ ಥೆರೆಸಾ ಸಿಗಲಿಲ್ಲ. ಆದರೇನು, ಮುಂದೆ ಅವರು ಅದೆಷ್ಟೋ ಜನ ಥೆರೆಸಾರ ಬಾಳಿಗೆ ತಂದೆ ತಾಯಿಯರಾಗುವುದರಲ್ಲಿ ಅನುಮಾನವಿಲ್ಲ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ