ಮೂಲ: ಸಿಎ ಕುಮಾರ್ ಪಾಲ್ ಎಂ ಜೈನ್,
ಚಾರ್ಟರ್ಡ್ ಅಕೌಂಟೆಂಟ್, ಮೈಸೂರು
ಅನುವಾದ: ಕಾಶೀನಾಥ್
ನಿಗದಿತ ಆದಾಯ ಮಿತಿ ಮೀರಿಲ್ಲದಿದ್ದರೂ ಕೆಲ ಪರಿಶೀಲನೆ ಅಗತ್ಯ
ನಿಮ್ಮ ಆದಾಯ ೫ರಿಂದ ೭ ಲಕ್ಷ ರೂ. ಆಗಿದ್ದರೆ ನೀವು ಆದಾಯ ತೆರಿಗೆ ಸಲ್ಲಿಕೆಯಿಂದ (ಐಟಿಆರ್) ವಿನಾಯಿತಿ ಪಡೆಯಬಹುದು ಎಂದುಕೊಂಡಿದ್ದೀರಾ ? ಇಲ್ಲ, ಈ ಬಗ್ಗೆ ಮತ್ತೊಮ್ಮೆ ಯೋಚಿಸುವುದು ಒಳಿತು. ಹಳೆಯ ತೆರಿಗೆ ಪದ್ಧತಿಯಲ್ಲಿ ಒಟ್ಟು ಆದಾಯ ೫ ಲಕ್ಷ ರೂ. ಗಳಷ್ಟು ಅಥವಾ ಹೊಸ ತೆರಿಗೆ ಪದ್ಧತಿಯಲ್ಲಿ ೭ ಲಕ್ಷ ರೂ. ಗಳಷ್ಟು ಇದ್ದರೆ, ಅಂತಹವರು ತಮ್ಮ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಸುವುದನ್ನು ಬಿಟ್ಟುಬಿಡಬಹುದು ಎಂಬುದು ಅನೇಕ ತೆರಿಗೆದಾರರ ಸಾಮಾನ್ಯ ನಂಬಿಕೆ . ಆದಾಯ ತೆರಿಗೆ ಕಾಯ್ದೆ, ೧೯೬೧ ರ ಸೆಕ್ಷನ್ ೮೭ ಎ ಅಂತಹ ಸಂದರ್ಭಗಳಲ್ಲಿ ತೆರಿಗೆ ವಿನಾಯಿತಿ ನೀಡುತ್ತದೆ. ಆದರೆ ಈ ಪರಿಹಾರವು ಸ್ವಯಂಚಾಲಿತವಾಗಿರುವುದಿಲ್ಲ (ಆಟೋ).
ಬದಲಾಗಿ ಪರಿಹಾರವನ್ನು ಕ್ಲೈಮ್ ಮಾಡಲು, ನೀವು ನಿಗದಿತ ದಿನಾಂಕದೊಳಗೆ ಮಾನ್ಯವಾದ ರಿಟರ್ನ್ಸ್ ಅನ್ನು ಸಲ್ಲಿಸಲೇಬೇಕಾಗಿದೆ. ಬಹಳಷ್ಟು ವ್ಯಕ್ತಿಗಳಿಗೆ, ಇದರ ಮೌಲ್ಯಮಾಪನ ವರ್ಷದ ಜುಲೈ ೩೧ ಆಗಿದೆ. ಆದರೆ ಈ ವರ್ಷ, ಸರ್ಕಾರವು ಸೆಪ್ಟೆಂಬರ್ ೧೫ರವರೆಗೆ ಗಡುವನ್ನು ವಿಸ್ತರಿಸಿದೆ.
ನೀವು ರಿಟರ್ನ್ಸ್ ಸಲ್ಲಿಸುವುದು ಕೇವಲ ಕಾನೂನು ಔಪಚಾರಿಕತೆಗಳಿಗಲ್ಲ. ಬದಲಾಗಿ ನಿಮಗೆ ಸಿಗುವ ಪ್ರಯೋಜನಗಳನ್ನು ಭದ್ರಪಡಿಸಿಕೊಳ್ಳಲು ಮತ್ತು ನಿಮ್ಮ ಹಣಕಾಸಿನ ಪ್ರೊಫೈಲ್ ಅನ್ನು ಸದೃಢವಾಗಿರಿಸಿಕೊಳ್ಳಲು ಇದು ಅತ್ಯಗತ್ಯವಾಗಿದೆ. ಒಂದು ವೇಳೆ ನೀವು ಐಟಿಆರ್ ಅನ್ನು ಸಲ್ಲಿಸುವುದನ್ನು ತಪ್ಪಿಸಿಕೊಂಡರೆ, ನಿಮಗೆ ಸೆಕ್ಷನ್ ೮೭ ಎ ಸಿಗುವ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಆಗ ನಿಮ್ಮ ಆದಾಯಕ್ಕೆ ಮೂಲ ವಿನಾಯಿತಿ ಮಿತಿಗಳ ಪ್ರಕಾರ ಮಾತ್ರವೇ ತೆರಿಗೆ ವಿಧಿಸಲಾಗುತ್ತದೆ. (ಅನುವಾದಿತ ಲೇಖನ)
ತೆರಿಗೆದಾರರು ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳು (ಎಫ್‌ಎಕ್ಯು):
ಪ್ರಶ್ನೆ: ಹೊಸ ಪದ್ಧತಿಯಡಿಯಲ್ಲಿ ನನ್ನ ಆದಾಯ ೬.೫ ಲಕ್ಷ ರೂ. ಇದೆ. ಹಾಗಿದ್ದರೆ ನಾನು ಇನ್ನೂ ಐಟಿಆರ್ ಸಲ್ಲಿಸಬೇಕೇ?
ಉತ್ತರ: ಹೌದು. ನೀವು ಐಟಿಆರ್ ಸಲ್ಲಿಸಿದರೆ ಮಾತ್ರ ಸೆಕ್ಷನ್ ೮೭ಎ ಪರಿಹಾರ ಅನ್ವಯವಾಗುತ್ತದೆ.
ಪ್ರಶ್ನೆ: ಒಂದು ವೇಳೆ ನಾನು ಐಟಿಆರ್ ಸಲ್ಲಿಸದಿದ್ದರೆ ಏನಾಗುತ್ತದೆ?
ಉತ್ತರ: ಸೆಕ್ಷನ್ ೮೭ಎ ರಿಯಾಯಿತಿ ಅನ್ವಯಿಸುವುದಿಲ್ಲ. ಆ ಸಂದರ್ಭದಲ್ಲಿ, ತೆರಿಗೆ ಇಲಾಖೆಯು ಮೂಲ ವಿನಾಯಿತಿ ಮಿತಿಯನ್ನು (ಹಳೆಯ ತೆರಿಗೆ ಪದ್ಧತಿಯಲ್ಲಿ ೨.೫ ಲಕ್ಷ ರೂ./ ೩ ಲಕ್ಷ ರೂ. /೫ ಲಕ್ಷ ರೂ. ಅಥವಾ ಹೊಸ ತೆರಿಗೆ ಪದ್ಧತಿಯಲ್ಲಿ ೩ ಲಕ್ಷ ರೂ.) ಮಾತ್ರ ಪರಿಗಣಿಸುತ್ತದೆ ಮತ್ತು ಆ ಮಿತಿಗಿಂತ ಹೆಚ್ಚಿನ ಯಾವುದೇ ಆದಾಯವಿದ್ದರೂ ಅದರ ಮೇಲೆ ತೆರಿಗೆಯನ್ನು ಲೆಕ್ಕಹಾಕುತ್ತದೆ.
ಪ್ರಶ್ನೆ: ನಾನು ತೆರಿಗೆ ಪಾವತಿಸದಿದ್ದರೂ ಐಟಿಆರ್ ಏಕೆ ಸಲ್ಲಿಸಬೇಕು?
ಉತ್ತರ: ಈ ಐಟಿಆರ್ ಸಲ್ಲಿಕೆಯಿಂದ ನಿಮ್ಮ ದಾಖಲೆಗಳನ್ನು ಸ್ವಚ್ಛವಾಗಿರಿಸಿದಂತಾಗುತ್ತದೆ. ನಿಮಗೆ ಸಿಗಬೇಕಾದ ಪ್ರಯೋಜನಗಳನ್ನು ರಕ್ಷಿಸುತ್ತದೆ ಜೊತೆಗೆ ರಾಷ್ಟ್ರೀಯ ಪಾರದರ್ಶಕತೆಗೆ ಕೊಡುಗೆ ನೀಡುತ್ತದೆ.
ನಿಮ್ಮ ಹಣಕಾಸಿನ ವ್ಯವಹಾರದ ದಾಖಲೆ ಇಟ್ಟುಕೊಳ್ಳಿ:
ಉತ್ತಮ ಹಣಕಾಸಿನ ವ್ಯವಹಾರಗಳ ಫೈಲಿಂಗ್ ಪದ್ಧತಿಯು ಸಾಲಗಳನ್ನು ಪಡೆಯಲು, ವೀಸಾ ಪಡೆಯಲು ಮತ್ತಿತರ ಹಣಕಾಸು ವ್ಯವಹಾರಗಳಿಗೆ ಸಹಾಯಕವಾಗುತ್ತದೆ. ಸರ್ಕಾರದ (ತೆರಿಗೆ ಇಲಾಖೆಯ) ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಿ. ಅದರಿಂದ ಮುಂದೆ ಬರಬಹುದಾದ ಸೂಚನೆಗಳು, ದಂಡಗಳು ಮತ್ತು ವಿವಾದಗಳಿಂದ ತಪ್ಪಿಸಿಕೊಳ್ಳಬಹುದಾಗಿದೆ. ಆರ್ಥಿಕತೆಯನ್ನು ಬೆಂಬಲಿಸಿ – ನಿಮ್ಮ ಪ್ರತಿ ರಿಟರ್ನ್ಸ್ ರಾಷ್ಟ್ರದ ನಿಖರವಾದ ಆರ್ಥಿಕ ದತ್ತಾಂಶಕ್ಕೆ ಬಲ ನೀಡಿದಂತಾಗುತ್ತದೆ
ಹೊಸ ತೆರಿಗೆ ಪದ್ದತಿ: ಎಲ್ಲಾ ತೆರಿಗೆದಾರರಿಗೆ ೩ ಲಕ್ಷ ರೂ. ಮಿತಿ ಇರುವುದು. ಹಾಗಾಗಿ ಈ ಮಿತಿಗಳನ್ನು ಮೀರಿದ ಯಾವುದೇ ಆದಾಯವು ತೆರಿಗೆಗೆ ಒಳಪಡುತ್ತದೆ ಮತ್ತು ಸೆಕ್ಷನ್ ೮೭ ಎ ಅಡಿಯಲ್ಲಿ ತೆರಿಗೆ ಉಳಿಸುವ ಅವಕಾಶವನ್ನು ಕಳೆದುಕೊಳ್ಳಬೇಕಾಗುತ್ತದೆ.
ಐಟಿಆರ್ ಸಲ್ಲಿಸುವುದು ಏಕೆ ಮುಖ್ಯ?: ನಿಮಗೆ ಸಲ್ಲಬೇಕಾದ ಪ್ರಯೋಜನಗಳನ್ನು ಪಡೆದುಕೊಳ್ಳಿ. ಐಟಿಆರ್ ಸಲ್ಲಿಸಿದರೆ ಸೆಕ್ಷನ್ ೮೭ಎ ಸಿಗುವ ಪರಿಹಾರವನ್ನು ಅನ್ವಯಿಸಲಾಗುತ್ತದೆ ಎಂಬುದನ್ನು ಖಚಿತಪಡಿಸಿದಂತಾಗುತ್ತದೆ.
ಹಳೆಯ ತೆರಿಗೆ ಪದ್ಧತಿ:
೨.೫ ಲಕ್ಷ ರೂ. ೬೦ ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ
೩ ಲಕ್ಷ ರೂ. ಹಿರಿಯ ನಾಗರಿಕರಿಗೆ (೬೦-೭೯ ವರ್ಷಗಳು)
೫ ಲಕ್ಷ ರೂ. ತುಂಬಾ ಹಿರಿಯ ನಾಗರಿಕರಿಗೆ (೮೦+ ವರ್ಷಗಳು)





