ವೇದ ಭದ್ರಾವತಿ
ದೃಷ್ಟಿ ದಿಗಂತದುದ್ದಕ್ಕೂ ಹಾಯ್ದಿರುವ ಹಿಮಾಚ್ಛಾದಿತ ಪರ್ವತ ಪ್ರದೇಶಗಳು, ಮುಗಿಲೆತ್ತರ ನಿಂತ ಸೂಚಿಪರ್ಣ ವೃಕ್ಷಗಳ ದಟ್ಟಕಾಡು, ಜುಳುಜುಳು ಹರಿವ ತಂಪಾದ ನದಿತೊರೆಗಳು ಹೀಗೆ ಸುತ್ತೆಲ್ಲ ರಮ್ಯ ನಿಸರ್ಗವನ್ನು ಹೊದ್ದುಕೊಂಡ ಹಳ್ಳಿಯೊಂದರಲ್ಲಿ ಜನಿಸಿದ ಕೃಶ ಕಾಯದ ಸರಳ ವ್ಯಕ್ತಿಯೊಬ್ಬರ ಜೀವನ ಚರಿತ್ರೆ ಬರೆಯುವುದೆಂದರೆ, ಅದು ಆ ವ್ಯಕ್ತಿ ಸಮಷ್ಟಿಗಾಗಿ ತನ್ನನ್ನು ಸಮರ್ಪಿಸಿಕೊಂಡಿದ್ದಕ್ಕೆ ಸಂವೇದನಾಶೀಲ ಮನಸ್ಸೊಂದು ಸಲ್ಲಿಸಬಹುದಾಗಿರುವ ನಮನ.
ಭಾರತದ ಪರಿಸರ ಹೋರಾಟಗಳ ಅಧ್ಯಯನದ ಸಂದರ್ಭದಲ್ಲಿ ಸುಂದರಲಾಲ್ ಬಹುಗುಣ ಅವರ ಬಗ್ಗೆ ಅರಿತ, ಅಮೆರಿಕದ ಜಾರ್ಜ್ ಆಲ್ಫ್ರೆಡ್ ಜೇಮ್ಸ್ ತಮ್ಮ ‘ಇಕಾಲಜಿ ಈಸ್ ಪರ್ಮನೆಂಟ್ ಎಕಾನಮಿ’ ಬಯೋಗ್ರಫಿಯ ಮೂಲಕ ಬಹುಗುಣ ಅವರ ಹೋರಾಟಪೂರ್ಣ ಬದುಕಿನ ಮಹತ್ವದ ಘಟ್ಟಗಳನ್ನು ವಿಶ್ಲೇಷಿಸುತ್ತ ಹೋಗುತ್ತಾರೆ.
ಇಪ್ಪತ್ತನೇ ಶತಮಾನದಲ್ಲಿ ಭಾರತದ ಸಾಕ್ಷಿಪ್ರಜ್ಞೆ ಎರಡು ಬೃಹತ್ತಾದ, ಮಹತ್ವದ ಚಳವಳಿಗಳಲ್ಲಿ ಪಾಲ್ಗೊಳ್ಳಬೇಕಾಯ್ತು. ಇವುಗಳಲ್ಲಿ ಪೂರ್ವಾರ್ಧದ ಸ್ವಾತಂತ್ರ್ಯ ಆಂದೋಲನ ರಾಜಕೀಯ ದಾಸ್ಯದ ವಿರುದ್ಧವಾಗಿದ್ದರೆ, ಉತ್ತರಾರ್ಧದ ಪರಿಸರ ಆಂದೋಲನ ಅಭಿವೃದ್ಧಿಯ ಹೆಸರಿನಲ್ಲಿ ಯೋಜನೆಗಳಿಂದ ಉಂಟಾಗುತ್ತಿರುವ ಉಳ್ಳವರ ಮತ್ತು ಉಳಿದವರ ಮಧ್ಯದ ಕಂದಕವನ್ನು ಪ್ರಶ್ನಿಸುವಂಥದ್ದಾಗಿತ್ತು.
ಪರಿಸರ ಚಳವಳಿಯನ್ನು ವಾಸ್ತವವಾಗಿ ಸ್ವಾತಂತ್ರ್ಯ ಚಳವಳಿಯ ಮುಂದುವರಿದ ಭಾಗವೆನ್ನಬಹುದು. ಏಕೆಂದರೆ ಸ್ವಾತಂತ್ರ್ಯ ಎನ್ನುವುದು ರಾಜಕೀಯ ಬಿಡುಗಡೆ ಮಾತ್ರವಲ್ಲ – ಭಾರತದ ಆರ್ಥಿಕತೆ, ಸಾಮಾಜಿಕ ವಿನ್ಯಾಸ, ಸಂಪನ್ಮೂಲಗಳ ಸದ್ಬಳಕೆ ಮತ್ತು ಆ ಮೂಲಕ ಕಟ್ಟಿಕೊಳ್ಳಲು ಸಾಧ್ಯವಾಗುವ ಸುಸ್ಥಿರ ಬದುಕಿನ ಸ್ಥಾಪನೆ ಇಂಥ- ಬೇರೆ ಬೇರೆ ಆಯಾಮಗಳನ್ನೂ ಒಳಗೊಂಡಿದೆ. ಆದ್ದರಿಂದ ಸರ್ಕಾರವು ಜಾರಿಗೊಳಿಸುವ ಅಭಿವೃದ್ಧಿ ಯೋಜನೆಗಳು ಗಾಂಧೀಜಿಯವರ ‘ಸರ್ವೋದಯ’ ಕಲ್ಪನೆಗೆ ವಿರುದ್ಧವಾಗಿ, ಸ್ಥಳೀಯ ಸಂಪನ್ಮೂಲಗಳನ್ನು ಕೊಳ್ಳೆ ಹೊಡೆಯುವುದನ್ನು ಮತ್ತು ಆ ಮೂಲಕ ಮನುಷ್ಯ ಮತ್ತು ಅವನ ಸುತ್ತಲ ಪ್ರಕೃತಿಯ ಅವಿನಾಭಾವ ಸಂಬಂಧವನ್ನು ಹಾಳುಗೆಡಹುವುದನ್ನು ಪರಿಸರ ಚಳವಳಿ ವಿರೋಧಿಸುತ್ತದೆ ಮತ್ತು ನಿಜಾರ್ಥದಲ್ಲಿ ಮನುಷ್ಯನನ್ನು ಸ್ವತಂತ್ರವಾಗಿಸಲು ಯತ್ನಿಸುತ್ತದೆ. ಇಷ್ಟಾದರೂ ಪರಿಸರ ಚಳವಳಿಗೆ ಸ್ವಾತಂತ್ರ್ಯ ಆಂದೋಲನಕ್ಕಿಲ್ಲದ ಕೆಲವು ತೊಡಕುಗಳಿದ್ದುವು. ಮೊದಲನೆಯದಾಗಿ ಸ್ವಾತಂತ್ರ್ಯ ಚಳವಳಿ ಅನ್ಯ ದೇಶೀಯರ ವಿರುದ್ಧವಾಗಿದ್ದರೆ ಸ್ವಾತಂತ್ರ್ಯೋತ್ತರ ಪರಿಸರ ಆಂದೋಲನದಲ್ಲಿ ತಮ್ಮವರ ವಿರುದ್ಧವೇ ಹೋರಾಡಬೇಕಾದ ಪರಿಸ್ಥಿತಿ ಇತ್ತು. ಪರಿಸರ ಚಳವಳಿಯನ್ನು ‘ವಿಜ್ಞಾನ/ಅಭಿವೃದ್ಧಿ ವಿರೋಧಿ’ ಎಂದು ಬಿಂಬಿಸಲಾಗಿತ್ತು.
ಪರಿಸರದಲ್ಲಿ ಉಂಟಾಗುವ ವ್ಯತ್ಯಯದ ಪರಿಣಾಮವು ತಕ್ಷಣಕ್ಕೆ ಗೋಚರವಾಗದ ಕಾರಣ ಆ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಸುಲಭ ಸಾಧ್ಯವಾಗಿರಲಿಲ್ಲ. ಪರಿಸರವಾದಿಗಳು ಸ್ಥಳೀಯವಾಗಿ ಅಲ್ಲಲ್ಲಿ ನಡೆಸುತ್ತಿದ್ದ ಪ್ರತಿಭಟನೆಗಳು ದೇಶವ್ಯಾಪಿಯಾಗಿ ಗಮನ ಸೆಳೆಯಲು, ಗಾಂಧೀಜಿಯವರಂಥ ಪ್ರಭಾವೀ ಮುಂದಾಳತ್ವದ ಕೊರತೆಯಿತ್ತು.
ಈ ಎಲ್ಲ ತೊಡಕುಗಳನ್ನು ನಿವಾರಿಸಿಕೊಂಡು ಪರಿಸರ ವಾದವನ್ನು ಅತ್ಯಂತ ಸಮರ್ಥವಾಗಿ ದೇಶವ್ಯಾಪಿಗೊಳಿಸಿದ ಹಿರಿಮೆ ಬಹುಗುಣ ಅವರಿಗೆ ಸಲ್ಲುತ್ತದೆ.
ಬಹುಗುಣರಿಗೆ ಇದು ಸಾಧ್ಯವಾಗಿದ್ದು ಹೇಗೆ ಎನ್ನುವ ಪ್ರಶ್ನೆಗೆ ಅವರ ಬದುಕಿನಲ್ಲೇ ಉತ್ತರವಿದೆ.
ಜೇಮ್ಸ್ ಅವರ ಸಂದರ್ಶನದ ಮೂಲಕ ತೆರೆದುಕೊಳ್ಳುತ್ತ ಹೋಗುವ ಬಹುಗುಣ ಅವರ ಎಂಬತ್ತು ದಶಕಗಳ ಅನುಭವದ ರೂಪುಗೊಳ್ಳುವಿಕೆಯಲ್ಲಿ ಬಾಲ್ಯದಲ್ಲಿ ಕಾಡಿನ ಬಗ್ಗೆ ಪ್ರೀತಿ ಉಂಟು ಮಾಡಿದ ತಂದೆ; ತಾಳ್ಮೆ ಮತ್ತು ಕಷ್ಟಸಹಿಷ್ಣುತೆ ಬೆಳೆಯಲು ಕಾರಣರಾದ ತಾಯಿ; ಬಹುಗುಣರು ಗುರುಗಳೆಂದು ಭಾವಿಸುವ ದೇವ್ ಸಮನ್ ಹಾಗೂ ಸಂತ ಬಾರ್ಬ್ ಬೇಕರ್; ಗಾಂಧೀಜಿಯವರ ಶಿಷ್ಯರಾದ ಮೀರಾ ಬೆಹನ್, ಸರಳ ಬೆಹನ್ ವಿನೋಬಾ ಭಾವೆ; ಹಾಗೆಯೇ ಬಹುಗುಣರು ಓದಿದ ಪ್ರಮುಖ ಪುಸ್ತಕಗಳು – (ಯುವಕರಿಗೊಂದು ಕರೆ, ಹಿಂದ್ ಸ್ವರಾಜ್, ಸ್ಮಾಲ್ ಈಸ್ ಬ್ಯೂಟಿಫುಲ್, ಶಾಶ್ವತ ಅರ್ಥಶಾಸ್ತ್ರ) –
ಹೀಗೆ ಹತ್ತು ಹಲವು ಮಹೋನ್ನತ ಅಂಶಗಳು ಪೂರಕವಾಗಿ ಕೆಲಸ ಮಾಡಿದ್ದರೆ ಗಾಂಧೀಜಿಯವರ ಬದುಕು ಮತ್ತು ಆಲೋಚನೆಗಳು ಬಹುಗುಣರ ಮೇಲೆ ಬೀರಿದ ಪ್ರಭಾವ ಅಗಾಧ ಮತ್ತು ಅಚ್ಚಳಿಯದಂಥದ್ದು.
ಶರೀರ ಶ್ರಮದ ಮೂಲಕ ‘ಠಕ್ಕರ್ ಬಾಪಾ’ ದಂಥ (ಗಾಂಧಿಯವರ ಒಬ್ಬ ಶಿಷ್ಯ) ವಿದ್ಯಾರ್ಥಿನಿಲಯಗಳನ್ನು ಕಟ್ಟಿದ್ದು; ಜಾತಿಭೇದ ಸಮಸ್ಯೆಯ ವಿರುದ್ಧ ಗಂಗೋತ್ರಿ ಯಮುನೋತ್ರಿಗಳಿಗೆ ವಿದ್ಯಾರ್ಥಿಗಳನ್ನು ಕರೆದೊಯ್ದಿದ್ದು; ಪ್ರಾರ್ಥನಾ ಸಭೆಗಳನ್ನು ನಡೆಸಿದ್ದು; ಸರಳ ವಿಕೇಂದ್ರೀಕೃತ ಮತ್ತು ಸುಸ್ಥಿರ ಸಮಾಜದ ನಿರ್ಮಾಣಕ್ಕಾಗಿ ತಳಮಟ್ಟದಲ್ಲಿ ಜನರನ್ನು ಸಂಘಟಿಸಿದ್ದು; ವಿವಿಧ ಪಾದಯಾತ್ರೆಗಳು; ಮದ್ಯಪಾನದ ವಿರುದ್ಧ ಅಹಿಂಸಾತ್ಮಕ ಪ್ರತಿಭಟನೆ ನಂತರ ಇವೆಲ್ಲಕ್ಕೂ ಕಿರೀಟಪ್ರಾಯವಾಗಿ ಚಿಪ್ಕೊ ಆಂದೋಲನದ ಸಂದರ್ಭದಲ್ಲಿ ಅವರು ಕೈಗೊಂಡ ಉಪವಾಸ ಸತ್ಯಾಗ್ರಹ ಹೀಗೆ ಬಹುಗುಣರ ಬದುಕಿನ ಪ್ರತಿ ನಡೆಯಲ್ಲೂ ಗಾಂಧಿ ಆವರಿಸಿರುವುದನ್ನು ಕಾಣಬಹುದು.
ಒಂದರ್ಥದಲ್ಲಿ ಪರಿಸರ ಸಮಸ್ಯೆಯು ಗಾಂಧಿ ಎದುರಿಸಿದ ರಾಜಕೀಯ ಸ್ವಾತಂತ್ರ್ಯದ ಸಮಸ್ಯೆಗಿಂತಲೂ ಜಟಿಲವಾದದ್ದು. ಏಕೆಂದರೆ ರಾಜಕೀಯ ಸ್ವಾತಂತ್ರ್ಯವೆಂಬ ತಳಹದಿಯ ಮೇಲೆ ಕಟ್ಟಬೇಕಾದ ಸುಸ್ಥಿರ ಬದುಕಿಗೆ ಪರಿಸರ ಸಂರಕ್ಷಣೆ ಮೂಲಭೂತ ಪರಿಕರವೆಂಬುದನ್ನು ಬಹುಗುಣ ಮನಗಂಡಿದ್ದರು. ಗಾಂಧಿ ಇಂದು ಬದುಕಿದ್ದರೆ ಪರಿಸರ ರಕ್ಷಣೆಗಾಗಿ ಕೆಲಸ ಮಾಡುತ್ತಿದ್ದರು ಎಂಬ ಬಹುಗುಣರ ಹೇಳಿಕೆ ಇದನ್ನೇ ಧ್ವನಿಸುತ್ತದೆ.
ಶ್ರೀ ಸುರೇಂದ್ರ ಕೌಲಗಿ ಮತ್ತು ಶ್ರೀಮತಿ ಅರ್ಚನಾ ಖ್ಯಾಡಿಯವರ ಅನುವಾದ ‘ಅಪ್ಪಿಕೋ’ ಕೃತಿಯಲ್ಲಿ ಬಹುಗುಣರ ಬದುಕು ಮತ್ತು ಆಲೋಚನೆಗಳನ್ನು ೧೪ ಅಧ್ಯಾಯಗಳಲ್ಲಿ ವಿಸ್ತೃತವಾಗಿ ನಿರೂಪಿಸುವಾಗ ಅದು ಅನುವಾದ ಎಂದು ಓದುಗರ ಗಮನಕ್ಕೆ ಬಾರದಷ್ಟು ಸ್ಫುಟವಾಗಿ ನಿವೇದಿಸಿರುವುದು ಪುಸ್ತಕದ ಅಗ್ಗಳಿಕೆ. ಅಹರ್ನಿಷಿ ಪ್ರಕಾಶನದ ಅಚ್ಚುಕಟ್ಟಾದ/ದೋಷರಹಿತ ಮುದ್ರಣ, ಸುದೀರ್ಘ ೩೦೦ ಪುಟಗಳ ಓದನ್ನು ಸುಲಲಿತಗೊಳಿಸುತ್ತದೆ.
ಜನಪದ ಸೇವಾಟ್ರಸ್ಟ್‌ಗೆ ಬಹುಗುಣರು ಭೇಟಿ ನೀಡಿದ್ದ ಸಂದರ್ಭದ ಚಿತ್ರಗಳು, ಪುಸ್ತಕಕ್ಕೆ ಆಪ್ತತೆಯನ್ನು ಒದಗಿಸಿವೆ.
ಬಹುಗುಣ ಅವರು ಗಾಂಧಿಯವರ ಜಾಡಿನಲ್ಲೇ ಬದುಕಿ, ಪರಿಸರ ಸಮಸ್ಯೆಗಳಿಗೆ ಮುಖಾಮುಖಿಯಾದದ್ದು; ಇಂದು ಪ್ರಪಂಚ ಎದುರಿಸುತ್ತಿರುವ ಪರಿಸರ ವಿನಾಶದ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಲು ಗಾಂಧಿ ಹಾಕಿಕೊಟ್ಟ ಸರಳ ಬದುಕು ಮತ್ತು ಅಹಿಂಸಾತ್ಮಕ ಚಳುವಳಿಗಳಿಂದ ಮಾತ್ರ ಸಾಧ್ಯ ಎನ್ನುವುದಕ್ಕೆ ದೃಷ್ಟಾಂತವೆಂಬಂತಿದೆ. ಇದು ಅವರ ಜೀವನಚರಿತ್ರೆ ನೀಡುವ ಬಹುದೊಡ್ಡ ಸಂದೇಶ. ಈ ಕಾರಣಕ್ಕಾಗಿ ಪ್ರತಿಯೊಬ್ಬ ಕನ್ನಡಿಗರೂ ಓದಲೇಬೇಕಾದ ಕೃತಿ ‘ಅಪ್ಪಿಕೋ’.