ಇ-ಬಸ್ ಸಂಚಾರ ಸ್ವಾಗತಾರ್ಹ
ಇತ್ತೀಚೆಗೆ ಮೈಸೂರು – ಬೆಂಗಳೂರು ರಸ್ತೆಯಲ್ಲಿ ಎಲೆಕ್ಟ್ರಿಕ್ ಬಸ್‌ಗಳು ಸೇವೆಯನ್ನು ಆರಂಭಿಸಿದ್ದು, ಕೆಎಸ್‌ಆರ್‌ಟಿಸಿಯ ಈ ಪ್ರಯೋಗ ಯಶಸ್ವಿಯಾಗುವ ಭರವಸೆ ವ್ಯಕ್ತವಾಗಿದೆ. ಇ- ಬಸ್‌ನಲ್ಲಿ ಪ್ರಯಾಣ ದರ 200ರೂ.ಗಳಿದ್ದು, ಕೇವಲ 2 ಗಂಟೆ ಪ್ರಯಾಣದಲ್ಲಿ ಈ ಐಷಾರಾಮಿ ಬಸ್‌ನಲ್ಲಿ ಬೆಂಗಳೂರು ತಲುಪಬಹುದಾಗಿದೆ. ಈ ಪರಿಸರ ಸ್ನೇಹಿ ಬಸ್‌ಗಳಿಂದ ಇಂಧನ ಸಮಸ್ಯೆಯೂ ತಗ್ಗಲಿದೆ. ವಾಯು ಮಾಲಿನ್ಯವೂ ಕಡಿಮೆಯಾಗಲಿದೆ. ಹಾಗಾಗಿ ಕೆಎಸ್‌ಆರ್‌ಟಿಸಿಯು ಇಂತಹ ಬಸ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸಲು ಅವಕಾಶ ಕಲ್ಪಿಸಬೇಕು. ಆರಾಮದಾಯಕ ಆಸನ, ಟಿವಿ ಸ್ಕ್ರೀನ್, ಪ್ರೀಮಿಯಂ ಸೀಟ್‌ಗಳು, ಚಾರ್ಜಿಂಗ್ ಸಾಕೆಟ್‌ಗಳು, ಎಸಿ ಸೇರಿದಂತೆ ಅನೇಕ ಸೌಲಭ್ಯಗಳನ್ನು ಈ ಬಸ್‌ಗಳು ಹೊಂದಿವೆ. ಬಸ್‌ಗಳ ಸಮಸ್ಯೆಯಿರುವ ಭಾಗಗಳಿಗೆ ಹೆಚ್ಚಿನ ಬಸ್ ಸೌಲಭ್ಯ ಒದಗಿಸಲೂ ಅನುಕೂಲವಾಗುತ್ತದೆ. ಜೊತೆಗೆ ಖರ್ಚು ಕಡಿಮೆಯಾಗಿ ಸಾರಿಗೆ ನಿಗಮಕ್ಕೆ ಆದಾಯವೂ ಹೆಚ್ಚಲಿದೆ.
–ಎಂ.ವಿ.ಪ್ರಕಾಶ್, ಮಚ್ಚರೆ, ಎಚ್.ಡಿ.ಕೋಟೆ ತಾ.
ಮಾನಸಗಂಗೋತ್ರಿಯ ಕ್ಲಾಕ್ ಟವರ್ ಗಡಿಯಾರ ಸರಿಪಡಿಸಿ
ಮೈಸೂರು ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರ ಆಳ್ವಿಕೆಯ ರಜತ ಮಹೋತ್ಸವದ ಸ್ಮರಣಾರ್ಥ ದೊಡ್ಡ ಗಡಿಯಾರ ಹಾಗೂ ಭಾರತದ ವೈಸ್‌ರಾಯ್ ಆಗಿದ್ದ ಲಾರ್ಡ್ ಡಫರಿನ್‌ರವರ ಗೌರವಾರ್ಥ ಚಿಕ್ಕ ಗಡಿಯಾರವನ್ನು ಮೈಸೂರಿನ ಪ್ರಮುಖ ಸ್ಥಳಗಳಲ್ಲಿ ಸ್ಥಾಪಿಸಲಾಗಿತ್ತು. ಮೈಸೂರು ವಿಶ್ವವಿದ್ಯಾನಿಲಯದ ಮಾನಸ ಗಂಗೋತ್ರಿ ಆವರಣದಲ್ಲಿರುವ ಕೆ.ಎಸ್.ಸಿ.ಎ. ಕ್ರೀಡಾಂಗಣದ ಬಳಿಯೂ ಕ್ಲಾಕ್ ಟವರ್ (ಗಡಿಯಾರ ಗೋಪುರ) ಅನ್ನು ಮೈಸೂರು ವಿವಿ ಶತಮಾನೋತ್ಸವದ ಅಂಗವಾಗಿ ನಿರ್ಮಿಸಲಾಗಿದ್ದು, ಇದೀಗ 7ವರ್ಷಗಳು ಕಳೆದಿವೆ. ಆದರೆ ಕೆಲ ದಿನಗಳಿಂದ ತಾಂತ್ರಿಕ ಸಮಸ್ಯೆಗಳಿಂದ ಗಡಿಯಾರ ತನ್ನ ಕಾರ್ಯವನ್ನು ನಿಲ್ಲಿಸಿದೆ. ವಿದ್ಯಾರ್ಥಿಗಳಿಗೆ ಸಮಯ ಸೂಚಿಯಾಗುವ ಜೊತೆಗೆ ಪ್ರತಿ ದಿನ ಬೆಳಿಗ್ಗೆ ಇಲ್ಲಿಗೆ ಬರುವ ವಾಯುವಿಹಾರಿಗಳಿಗೂ ಸಮಯ ಅರಿಯಲು ಸಾಧ್ಯವಾಗುತ್ತಿತ್ತು. ಆದರೆ ಈಗ ಗಡಿಯಾರ ಕಾರ್ಯನಿರ್ವಹಿಸುತ್ತಿಲ್ಲ. ಪ್ರತಿಯೊಂದು ಗಡಿಯಾರಗಳೂ ಮೂರು ಬದಿಗಳಲ್ಲಿ ಇಂಗ್ಲಿಷ್, ಕನ್ನಡ ಮತ್ತು ರೋಮನ್ ಅಂಕಿಗಳನ್ನು ಹೊಂದಿದ್ದು, ೫ ಅಡಿ ವ್ಯಾಸವನ್ನು ಹೊಂದಿ ವಿಶೇಷವೆನಿಸಿವೆ. ಆದ್ದರಿಂದ ಮೈಸೂರು ವಿ.ವಿ ಆಡಳಿತ ಮಂಡಳಿಯು ಗಡಿಯಾರವನ್ನು ಅಳವಡಿಸಿದ ಎಚ್‌ಎಂಟಿ ಕಂಪೆನಿಯ ಗಮನಕ್ಕೆ ತಂದು ಸರಿಪಡಿಸುವ ಕೆಲಸವನ್ನು ಶೀಘ್ರದಲ್ಲೇ ಮಾಡಲಿ.
–ಮನೋಜ್ ಕಬ್ಬಹಳ್ಳಿ, ಪತ್ರಿಕೋದ್ಯಮ ವಿಭಾಗ, ಮಾನಸ ಗಂಗೋತ್ರಿ





