‘ಸುಂದರಿ’
ಅಮೆರಿಕದ ಆರ್ಬಾನಿ
ಗೇಬ್ರಿಯಲ್
‘ಭುವನಸುಂದರಿ’ಯಾಗಿ ಆಯ್ಕೆಯಂತೆ.
ಆಗಲಿ-ಆದರೆ
ನಮ್ಮ ನಮ್ಮ ಮನೆಯಾಕೆಯರೇನು ಕಡಿಮೆ?
‘ಭವನ ಸುಂದರಿ’ಯರಲ್ಲವೆ?
-ಸಿಪಿಕೆ, ಮೈಸೂರು
ಡಿ.ಬಿ.ಕುಪ್ಪೆ ಶಾಲೆಗೆ ಆಟದ ಮೈದಾನ ಬೇಕು
ಎಚ್.ಡಿ.ಕೋಟೆ ತಾಲ್ಲೂಕಿನ ಅಂತರಸಂತೆ ಹೋಬಳಿಯ ಡಿ.ಬಿ.ಕುಪ್ಪೆ ಪಂಚಾಯಿತಿ ವ್ಯಾಪ್ತಿಯಲ್ಲಿ ಗಿರಿಜನ ಹಾಡಿಗಳು ಸೇರಿದಂತೆ ಸುಮಾರು 13ಕ್ಕೂ ಅಧಿಕ ಹಳ್ಳಿಗಳಿದ್ದು, ಇದು ಕೇರಳ ರಾಜ್ಯದ ಗಡಿಭಾಗಕ್ಕೆ ಹೊಂದಿಕೊಂಡಂತಿದೆ. ಈ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ವಿದ್ಯಾರ್ಥಿಗಳಿಗೆ ಕೇವಲ ಒಂದೇ ಒಂದು ಪ್ರೌಢಶಾಲೆ ಈ ವ್ಯಾಪ್ತಿಯಲ್ಲಿದ್ದು, ಈ ಶಾಲೆಯಲ್ಲಿ ಸುಸಜ್ಜಿತ ಆಟದ ಮೈದಾನ ಇಲ್ಲದಂತಾಗಿದೆ. ಇತ್ತೀಚೆಗೆ ಡಿ.ಬಿ.ಕುಪ್ಪೆ ಶಾಲೆಯ ವಿದ್ಯಾರ್ಥಿನಿಯೊಬ್ಬರು ಎತ್ತರ ಜಿಗಿತ ಸ್ಪರ್ಧೆಯಲ್ಲಿ ಬಹುಮಾನವನ್ನು ಗೆಲ್ಲುವ ಮೂಲಕ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಹೀಗೆ ಸಾಧನೆಯ ಹಾದಿ ಹಿಡಿಯುವ ಮಕ್ಕಳಿಗೆ ಸರಿಯಾಗಿ ಅಭ್ಯಾಸ ಮಾಡಲು ಸರಿಯಾದ ಆಟದ ಮೈದಾನವಿಲ್ಲ .
ಇದೇ ರೀತಿ ಕಳೆದ ವರ್ಷವೂ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ನೂರು ಮೀಟರ್ ಓಟದ ಸ್ಪರ್ಧೆಯಲ್ಲಿ ಡಿ.ಬಿ.ಕುಪ್ಪೆ ಶಾಲೆಯ ವಿದ್ಯಾರ್ಥಿ ಪ್ರಥಮ ಸ್ಥಾನ ಪಡೆದು, ಸರಿಯಾಗಿ ಅಭ್ಯಾಸ ಮಾಡುವುದು ಸಾಧ್ಯವಾಗದೆ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಸೋಲನ್ನು ಅನುಭವಿಸಬೇಕಾಯಿತು. ಇಲ್ಲಿನ ವಿದ್ಯಾರ್ಥಿಗಳ ಕ್ರೀಡಾ ಸಾಧನೆ ಯನ್ನು ಎಲ್ಲರೂ ಪತ್ರಿಕೆಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ನೋಡುತ್ತಲೇ ಇದ್ದರೇ ಹೊರತು ಸಂಬಂಧಪಟ್ಟ ಅಧಿಕಾರಿಗಳು, ಚುನಾಯಿತ ಪ್ರತಿನಿಽಗಳು ಮಾತ್ರ ಈ ಶಾಲೆಗೆ ಒಂದು ಆಟದ ಮೈದಾನವನ್ನು ಕಲ್ಪಿಸಲು ಸಾಧ್ಯವಾಗಿಲ್ಲ ಎಂಬುದು ಬೇಸರದ ಸಂಗತಿಯಾಗಿದೆ. ಇಲ್ಲಿನ ಶಾಲೆಯ ಶಿಕ್ಷಕರು ಹಾಗೂ ಗ್ರಾಮಸ್ಥರು ಅನೇಕ ಬಾರಿ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೆ, ಮುಂದಿನ ವರ್ಷದ ಶೈಕ್ಷಣಿಕ ಸಾಲಿನಲ್ಲಿ ಹೋಬಳಿ ಮಟ್ಟದ ಕ್ರೀಡಾಕೂಟವು ಡಿ.ಬಿ.ಕುಪ್ಪೆ ಶಾಲೆಯಲ್ಲೇ ನಡೆಯುವ ಸಾಧ್ಯತೆ ಇದೆ. ಆದರೆ, ಶಾಲೆಯಲ್ಲಿ ಸುಸಜ್ಜಿತ ಮೈದಾನ ಇಲ್ಲ. ಆದ್ದರಿಂದ ಶಾಲೆಗೆ ಆದಷ್ಟು ಬೇಗ ಮೈದಾನ ಅಭಿವೃದ್ಧಿಗೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕ್ರಮಕೈಗೊಳ್ಳಬೇಕು.
– ಎಂ.ಕೆ.ಮಲ್ಲೇಶ, ಪತ್ರಿಕೋದ್ಯಮ ವಿಭಾಗ, ಮಹಾರಾಜ ಕಾಲೇಜು, ಮೈಸೂರು.





