Mysore
20
overcast clouds

Social Media

ಶನಿವಾರ, 19 ಅಕ್ಟೋಬರ್ 2024
Light
Dark

ಆಂದೋಲನ ಓದುಗರ ಪತ್ರ : 08 ಗುರುವಾರ 2022

ಎಟಿಐ ವಸ್ತುಗಳನ್ನು ರೋಹಿಣಿ ಸಿಂಧೂರಿ ಹಿಂದಿರುಗಿಸಲಿ

ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿಯವರು ತಾವು ತಾತ್ಕಾಲಿಕವಾಗಿ ವಾಸ್ತವ್ಯ ಇದ್ದ ಆಡಳಿತ ಮತ್ತು ತರಬೇತಿ ಸಂಸ್ಥೆಯ (ಎಟಿಐ) ಬೆಲೆ ಬಾಳುವ ಬೆತ್ತದ ಚೇರುಗಳು, ಟೆಲಿಫೋನ್ ಟೇಬಲ್ ಸೇರಿದಂತೆ ಸುಮಾರು ೧೫ ವಸ್ತುಗಳನ್ನು ತೆಗೆದುಕೊಂಡು ಹೋಗಿ ೨ ವರ್ಷಗಳಾದರೂ ಅವುಗಳನ್ನು ಹಿಂದಿರುಗಿಸಿಲ್ಲ ಎಂಬುದಾಗಿ ಕೆಲ ಪತ್ರಿಕೆಗಳಲ್ಲಿ ವರದಿಯಾಗಿದೆ. ಆಡಳಿತ ಮತ್ತು ತರಬೇತಿ ಸಂಸ್ಥೆಯವರು ಅವರಿಗೆ ಮೂರು ಬಾರಿ ಪತ್ರ ಬರೆದು ಆ ವಸ್ತುಗಳನ್ನು ಹಿಂದಿರುಗಿಸುವಂತೆ ಕೋರಿದ್ದರೂ ಅದಕ್ಕೆ ಸಿಂಧೂರಿ ಅವರು ಪ್ರತಿಕ್ರಿಯಿಸದಿರುವುದು ವಿಪರ್ಯಾಸ. ಇವೆಲ್ಲಾ ‘ದೊಡ್ಡವರ ಸಣ್ಣತನಗಳು’ ಅನಿಸುತ್ತದೆ. ಆದರ್ಶವಾಗಿರಬೇಕಾದ ಮೇಲಾಧಿಕಾರಿಗಳೇ ಈ ಮಟ್ಟಕ್ಕೆ ಇಳಿದರೆ ಇನ್ನು ತಳಮಟ್ಟದ ಅಧಿಕಾರಿಗಳು ಸರ್ಕಾರಿ ವಸ್ತುಗಳನ್ನು ಯಾವ ರೀತಿಯಲ್ಲಿ ಉಪಯೋಗಿಸಿಕೊಳ್ಳಬಹುದು? ಈಗಲಾದರೂ ರೋಹಿಣಿ ಸಿಂಧೂರಿ ಅವರು ಎಟಿಐ ವಸ್ತುಗಳನ್ನು ಹಿಂದಿರುಗಿಸಲಿ.

-ಬೂಕನಕೆರೆ ವಿಜೇಂದ್ರ, ಕುವೆಂಪುನಗರ, ಮೈಸೂರು.


ಭ್ರಷ್ಟಾಚಾರ ಮುಕ್ತ ಆಡಳಿತ ನೀಡಲಾಗದ ರಾಜ್ಯ ಸರ್ಕಾರ

ರಾಜ್ಯ ಸರ್ಕಾರವು ಜನಪರ ಆಡಳಿತ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಮಂತ್ರಿಗಳು ಮತ್ತು ಆಡಳಿತ ಪಕ್ಷದ ಶಾಸಕರ ಭ್ರಷ್ಟಾಚಾರವನ್ನು ಮರೆಮಾಚಲು ತೆರೆಮರೆಯಲ್ಲಿ ಸಮಸ್ಯೆಗಳನ್ನು ಸೃಷ್ಟಿಸಿ, ತನ್ನ ಹಿಡಿತದಲ್ಲಿರುವ ಮಾಧ್ಯಮಗಳ ಮೂಲಕ ಜನರ ಗಮನವನ್ನು ಬೇರೆಡೆ ಸೆಳೆಯುತ್ತಿದ್ದಾರೆ. ಪಿಎಸ್‌ಐ ನೇಮಕಾತಿ ಹಗರಣ ಮುಚ್ಚಿಹಾಕಲು ಹಿಂದೂ-ಮುಸ್ಲಿಂ ಹೆಸರಿನಲ್ಲಿ ‘ಧರ್ಮ ದಂಗಲ್’ ಎಂಬ ಕಾರ್ಯಕ್ರಮ, ತನಗೆ ಮತ ಹಾಕದ ಮತದಾರರನ್ನು ಪಟ್ಟಿಯಿಂದಲೇ ತೆಗೆದುಹಾಕುವ ‘ಚಿಲುಮೆ’ ಅವಾಂತರವನ್ನು ಮರೆಯಾಗಿಸಲು ಕರ್ನಾಟಕ-ಮಹಾರಾಷ್ಟ್ರ ಗಡಿಭಾಗದ ಜನರನ್ನು ಬಳಸಿಕೊಳ್ಳಲಾಗುತ್ತಿದೆ. ವಾಸ್ತವವಾಗಿ ಗಡಿ ಭಾಗದ ಜನರ ನಿತ್ಯ ಬದುಕು ಪರಸ್ಪರ ಅವಲಂಬಿತವಾಗಿದೆ. ಆದರೆ ಎರಡೂ ರಾಜ್ಯಗಳಲ್ಲಿ ತಮ್ಮದೇ ಪಕ್ಷ ಅಧಿಕಾರದಲ್ಲಿದ್ದರೂ ಭಾಷೆಯ ವಿಚಾರದಲ್ಲಿ ಸಮಸ್ಯೆ ಸೃಷ್ಟಿಯಾಗುತ್ತಿರುವುದು ಸರ್ಕಾರದ ಪ್ರಾಯೋಜಿತ ಕೆಲಸವಲ್ಲದೆ ಮತ್ತೇನೂ ಅಲ್ಲ. ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿರುವುದರಿಂದ ತನ್ನೆಲ್ಲಾ ಅಕ್ರಮ, ಅವ್ಯವಹಾರ ಮುಚ್ಚಿಕೊಳ್ಳಲು ಸರ್ಕಾರಕ್ಕೆ, ಜನರ ಭಾವನಾತ್ಮಕ ವಿಷಯಗಳನ್ನು ಕೆದಕುವುದು ಬಿಟ್ಟರೆ ಬೇರೆ ದಾರಿ ಕಾಣದಿರುವುದು ‘ಕಳ್ಳನಿಗೊಂದು ಪಿಳ್ಳೆ ನೆಪ‘ ಎಂಬಂತಾಗಿದೆ.

-ಪಿ.ಮಲ್ಲಿಕಾರ್ಜುನಪ್ಪ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಮಹಾರಾಜ ಕಾಲೇಜು, ಮೈಸೂರು.


ಗ್ರಾಮಾಂತರ ಭಾಗದ ರೈತರಿಗೆ ನ್ಯಾಯ ಕೊಡಿ

ಗ್ರಾಮಾಂತರ ಭಾಗಗಳಲ್ಲಿ ಶೇ.೯೦ರಷ್ಟು ಕುಟುಂಬಗಳು ಇಂದಿಗೂ ವ್ಯವಸಾಯವನ್ನೇ ಆಧರಿಸಿ ಜೀವನ ಕಟ್ಟಿಕೊಂಡಿವೆ. ಆದರೆ ಇತ್ತೀಚೆಗೆ ಕೃಷಿ ಭೂಮಿಗಳೆಲ್ಲ ವಾಣಿಜ್ಯ ಭೂಮಿಗಳಾಗಿ ಬದಲಾಗುತ್ತಿದ್ದು, ರೈತರ ಆತಂಕಕ್ಕೆ ಕಾರಣವಾಗಿದೆ. ಜೊತೆಗೆ ನಗರ ಪ್ರದೇಶಗಳಲ್ಲಿರುವ ಉನ್ನತ ಹುದ್ದೆ, ಕೈತುಂಬ ಸಂಬಳ ಪಡೆಯುವ ಶ್ರೀಮಂತರು, ವ್ಯವಸಾಯವನ್ನು ಒಂದು ಹವ್ಯಾಸವಾಗಿ ಪರಿಗಣಿಸಿದ್ದಾರೆ. ಅವರು ಗ್ರಾಮೀಣ ಭಾಗದ ರೈತರ ಭೂಮಿಯನ್ನು ಖರೀದಿಸಿ ಅಲ್ಲಿ ಬೇಸಾಯ ಆರಂಭಿಸಿ ತಮಗಿಷ್ಟ ಬಂದ ಬೆಲೆಗೆ ಬೆಳೆಗಳನ್ನು ಮಾರಾಟ ಮಾಡುತ್ತಿದ್ದಾರೆ. ಇದರಿಂದ ಸಾಮಾನ್ಯ ರೈತರಿಗೆ ಸೂಕ್ತ ಬೆಲೆ ಸಿಗದೆ ಪರದಾಡುವಂತಾಗಿದೆ. ಆದ್ದರಿಂದ ರಾಜ್ಯ ಸರ್ಕಾರ ಈ ಬಗ್ಗೆ ಸೂಕ್ತ ಯೋಜನೆ ರೂಪಿಸಿ ನಿಜವಾದ ರೈತರಿಗೆ ನ್ಯಾಯ ದೊರಕಿಸಿಕೊಡಬೇಕು.

ಎಂ.ವಿ.ಪ್ರಕಾಶ್, ಮಚ್ಚರೆ, ಎಚ್.ಡಿ.ಕೋಟೆ ತಾ.


ಸಿದ್ದಪ್ಪ ವೃತ್ತದ ಬಳಿಯ ಟಿವಿ ಕೇಬಲ್ ತೆರವುಗೊಳಿಸಿ

 ಸಂಬಂಧಪಟ್ಟವರು ರಸ್ತೆಗಳ ಬದಿಯಲ್ಲಿ ಬೇಕಾಬಿಟ್ಟಿ ಬೀಸಾಡಿದ್ದು, ಇದರಿಂದ ಪಾದಚಾರಿಗಳಿಗೆ ಕಿರಿಕಿರಿಯಾಗುತ್ತಿದೆ. ಈ ಭಾಗವು ಅತ್ಯಂತ ಜನಸಂದಣಿಯ ಸ್ಥಳವಾಗಿದ್ದು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ಮಹಿಳೆಯರು ಹೆಚ್ಚಾಗಿ ಓಡಾಡುವ ಸ್ಥಳವಾಗಿದೆ. ಅಲ್ಲದೆ ಸಾಕಷ್ಟು ಮಂದಿ ಈ ವೃತ್ತದ ಳಿ ಇರುವ ಪ್ರಯಾಣಿಕರ ತಂಗುದಾಣದಲ್ಲಿ ಬಸ್‌ಗಾಗಿ ಕಾಯುತ್ತಿರುತ್ತಾರೆ. ಜೊತೆಗೆ ಈ ಸ್ಥಳದಲ್ಲಿ ಸದಾ ವಾಹನಗಳ ದಟ್ಟಣೆಯೂ ಇರುತ್ತದೆ. ಪಾದಚಾರಿಗಳು ಈ ವೈರ್‌ಗಳಿಂದಾಗಿ ಎಡವಿ ಬಿದ್ದರೆ ರಸ್ತೆಯಲ್ಲಿ ಸಂಚರಿಸುವ ವಾಹನಕ್ಕೆ ಸಿಲುಕಿ ಅಪಘಾತ ಸಂಭವಿಸುವ ಸಾಧ್ಯತೆಗಳೂ ಇವೆ. ಈ ಸಮಸ್ಯೆ ಬಗ್ಗೆ ಯಾವುದೇ ಅಧಿಕಾರ, ಜನಪ್ರತಿನಿಽಗಳು ಗಮನಿಸದಿರುವುದು ವಿಪರ್ಯಾಸ. ನಗರಪಾಲಿಕೆ  ಅಧಿಕಾರಿಗಳು ಕೂಡಲೇ ಇತ್ತ ಗಮನಹರಿಸಿ, ನೆಲದ ಮೇಲೆ ಬಿದ್ದಿರುವ ಕೇಬಲ್‌ಗಳನ್ನು ತೆರವು ಮಾಡಲು ಕ್ರಮವಹಿಸಬೇಕು.

-ಎಂ.ಎಲ್.ಪ್ರಭಾಕರ್, ಹೊಸ ಬಂಡಿಕೇರಿ, ಮೈಸೂರು.

ದೇವಾಲಯದ ರಾಜಗೋಪುರಕ್ಕೆ ವಿದ್ಯುತ್ ದೀಪ ಅಳವಡಿಸಿ

ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನದ ರಾಜಗೋಪುರಕ್ಕೆ ಪ್ರತಿ ಮಂಗಳವಾರ, ಶುಕ್ರವಾರ, ಆಷಾಢ ಮಾಸ, ನವರಾತ್ರಿ, ಬೆಟ್ಟದ ತೇರು, ಸರ್ಕಾರಿ ರಜಾ ದಿನಗಳಲ್ಲಿ ಸೆಸ್ಕ್ ವತಿಯಿಂದ ವಿದ್ಯುತ್ ದೀಪಾಲಂಕರ ಮಾಡಲಾಗುತ್ತಿತ್ತು. ಆದರೆ ಕಳೆದ ಐದಾರು ತಿಂಗಳುಗಳಿಂದ ಈ ದೀಪಾಲಂಕಾರ ವ್ಯವಸ್ಥೆ ಕಾಣುತ್ತಿಲ್ಲ. ಆದ್ದರಿಂದ ಸಂಬಂಧಪಟ್ಟ ಪುರಾತತ್ವ ಇಲಾಖೆ, ಮುಜರಾಯಿ ಇಲಾಖೆ ಮತ್ತು ಮೈಸೂರು ಜಿಲ್ಲಾಡಳಿತ ಇದಕ್ಕೆ ಸ್ಪಷ್ಟನೆ ನೀಡಬೇಕು. ಸಮಸ್ಯೆ ಯಾವುದೇ ಇದ್ದರೂ ಎಂದಿನಂತೆ ರಾಜಗೋಪುರ ಮತ್ತೆ ವಿದ್ಯುತ್ ದೀಪಗಳಿಂದ ಕಂಗೊಳಿಸುವಂತೆ ಮಾಡುವುದಕ್ಕೆ ಕ್ರಮಕೈಗೊಳ್ಳಬೇಕು.

-ಅಜಯ್ ಶಾಸ್ತ್ರಿ, ಮೈಸೂರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ