ಓದುಗರ ಪತ್ರ
ತೃತೀಯ ಲಿಂಗಿಗಳ ಸಾಧನೆ ಸರ್ವರಿಗೂ ಮಾದರಿ
ಇತ್ತೀಚಿಗೆ ಪ್ರಕಟಗೊಂಡ ಸರ್ಕಾರಿ ಶಾಲಾ ಶಿಕ್ಷಕರ ನೇಮಕಾತಿಯಲ್ಲಿ ತೃತೀಯ ಲಿಂಗಿ ಕೋಟಾದಡಿಯಲ್ಲಿ ಮೂವರು ತೃತೀಯ ಲಿಂಗಿಗಳು ಸರ್ಕಾರಿ ಹುದ್ದೆ ಪಡೆಯುವಲ್ಲಿ ಯಶಸ್ವಿಯಾಗಿದ್ದು, ಅವರು ಸಾಧನೆ ಹರ್ಷವೆನಿಸಿದೆ. ತಮ್ಮದಲ್ಲದೆ ತಪ್ಪಿಗೆ ಹೆತ್ತವರು, ಬಂಧು ಬಳಗ ಹಾಗೂ ಸಮಾಜದಲ್ಲಿ ಶೋಷಣೆಗೆ ಒಳಗಾಗಿ ಮುಜುಗರಕ್ಕೆ ಈಡಾಗುವ ಇವರು ಲಿಂಗ ಪರಿವರ್ತನೆ ನಂತರ ಬೀದಿ ಬೀದಿಯಲ್ಲಿ ಭಿಕ್ಷಾಟನೆ ಮಾಡುತ್ತಾ ಜೀವನ ಸಾಗಿಸುವುದು ದುರ್ಗಮ. ಸದ್ಯ ಸುಪ್ರೀಂ ಕೋರ್ಟಿನ ತೀರ್ಪಿನಂತೆ ಶೇ. ೧ ರಷ್ಟು ಮೀಸಲಾತಿ ಸೌಲಭ್ಯ ಇವರಿಗೆ ಸಿಕ್ಕಿದ್ದು, ಅದರ ಸದ್ಬಳಕೆಯಾಗುತ್ತಿರುವುದು ಶ್ಲಾಘನೀಯ. ಇಂದಿನ ಯುವ ಸಮೂಹಕ್ಕೆ ಈ ತೃತೀಯ ಲಿಂಗಿಗಳು ನಿಜಕ್ಕೂ ಪ್ರೇರಣೆಯಾಗಿದ್ದಾರೆ. ಸಾಮಾಜಿಕವಾಗಿ ನಿರ್ಲಕ್ಷ್ಯಕ್ಕೆ ಒಳಗಾಗಿ ಸಂಕಷ್ಟದ ಜೀವನ ಸಾಗಿಸುತ್ತಾ ನಕಾರಾತ್ಮಕ ದೃಷ್ಟಿಕೋನಗಳಿಂದ ಕಾಣುವ ಸಮೂಹದ ನಡುವೆ ಮೀಸಲಾತಿಯು ವರದಾನ ಹಾಗೂ ನ್ಯಾಯಯುತವಾದ ತನ್ನ ನೈತಿಕ ಹಕ್ಕಿನ ಅರಿವಿನಿಂದ ಛಲ ಬಿಡದ ಇವರು ವಾಡಿದ ಸಾಧನೆ ಸಮಾಜದಲ್ಲಿ ಸ್ವಾಭಿಮಾನದ ಬದುಕು ಕಟ್ಟಿಕೊಂಡು ಮುನ್ನೆಲೆಗೆ ಬರುತ್ತಿರುವುದು ಸಕರಾತ್ಮಕ ಅಂಶ.
ಅನಿಲ್ ಕುಮಾರ್, ನಂಜನಗೂಡು.
ಮಹಾರಾಜ ಕಾಲೇಜಿನಲ್ಲಿ ಮೂಲ ಸೌಕರ್ಯ ಕಲ್ಪಿಸಿ
ನಾಲ್ವಡಿ ಕೃಷ್ಣರಾಜ ಒಡೆಯರ ರವರ ದೂರದೃಷ್ಟಿಯ ಜನಪರ ಚಿಂತನೆಗಳಿಂದಾಗಿ ಸ್ಥಾಪಿಸಲ್ಪಟ್ಟ ಮೈಸೂರು ವಿವಿಗೆ ೧೫೦ಕ್ಕೂ ಅಧಿಕ ವರ್ಷಗಳ ಇತಿಹಾಸವಿದೆ. ವಾರ್ಷಿಕವಾಗಿ ಸುವಾರು ೩೦೦ ಕೋಟಿ ರೂ. ಹೆಚ್ಚು ಬಜೆಟ್ ಲೆಕ್ಕ ತೋರಿಸುವ ವಿವಿಯ ಆಡಳಿತ ವರ್ಗದಿಂದ ವಿದ್ಯಾರ್ಥಿಗಳಿಗೆ ಕನಿಷ್ಠ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ. ವಿವಿ ವ್ಯಾಪ್ತಿಯ ಕಾಲೇಜುಗಳ ಕಟ್ಟಡಗಳು ವಿದ್ಯಾರ್ಥಿಗಳಿಗೆ ಯಮನ ರೂಪದಲ್ಲಿವೆ. ಮಹಾರಾಜ ಪದವಿ ಕಾಲೇಜಿನ ಕ್ಯಾಂಪಸ್ಸಿನಲ್ಲಿ ಒಣಗಿರುವ ಮರಗಳು, ರೆಂಬೆ ಕೊಂಬೆಗಳು ಬೀಳುವ ಸ್ಥಿತಿಯಲ್ಲಿವೆ ಶೌಚಾಲಯಕ್ಕೆ ನೀರಿನ ವ್ಯವಸ್ಥೆ ಮಾಡಿದರೂ ಅದಕ್ಕೆ ಬೀಗ ಜಡಿಯಲಾಗಿದೆ. ಕ್ರಿಮಿನಾಲಜಿ ವಿಭಾಗ ಮತ್ತು ಕುಲಸಚಿವರ ನಿವಾಸದ ಪಕ್ಕದ ಮ್ಯಾನ್ ಹೋಲ್‌ಗಳು ಕಟ್ಟಿಕೊಂಡಿದ್ದು, ಮಲ, ಮೂತ್ರದ ಕೊಳಚೆ ನೀರನ್ನು ತುಳಿದುಕೊಂಡೇ ವಿದ್ಯಾರ್ಥಿಗಳು ನಡೆದಾಡಬೇಕಿದೆ. ಕುಡಿಯುವ ನೀರಿನ ಶುದ್ಧೀಕರಣ ಘಟಕ ಹಾಳಾಗಿ ಎರಡು ತಿಂಗಳಾದರೂ ಸರಿಪಡಿಸಿಲ್ಲ. ಆಡಳಿತಾಧಿಕಾರಿಗಳು ತಾವು ಕೂರುವ ಜಾಗವನ್ನಷ್ಟೇ ಸರಿಯಾಗಿ ನೋಡಿಕೊಳ್ಳುವ ಬದಲು ವಿದ್ಯಾರ್ಥಿಗಳ ಸಮಸ್ಯೆಗಳಿಗಳನ್ನು ಪರಿಹರಿಸಬೇಕು.
-ಪಿ.ಮಲ್ಲಿಕಾರ್ಜುನಪ್ಪ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿದ್ಯಾರ್ಥಿ, ಮಹಾರಾಜ ಕಾಲೇಜು.
ಪೊಲೀಸರು ಸಂಚಾರ ಕೆಲಸ ಮಾಡಲಿ
ಮೈಸೂರು ನಗರದಲ್ಲಿ ಸಂಚಾರ ವ್ಯವಸ್ಥೆ ಸಂಪೂರ್ಣ ಕುಸಿದು ಹೋಗಿದೆ ಎನ್ನುವುದನ್ನು ಕಣ್ಣಾರೆ ಕಂಡಾಗ ಬೇಸರವಾಗುತ್ತದೆ. ಹಿಂದೆ ಈಗಿನ ಡಿಜಿಪಿ ಪ್ರವೀಣ್ ಸೂದ್, ಆನಂತರ ಆುುಂಕ್ತರಾಗಿದ್ದ ಸುನೀಲ್ ಅಗರವಾಲ್, ಡಾ.ಎಂ.ಎ.ಸಲೀಂ ಅವರು ಹೊಸ ಹೊಸ ಕಾರ್ಯಕ್ರಮಗಳ ಮೂಲಕ ಮೈಸೂರಿನ ಸಂಚಾರ ಸುಧಾರಣೆಗೆ ಗಮನ ನೀಡಿದರು. ಆಗ ಡಿಸಿಪಿ ಆಗಿದ್ದ ರಾಜೇಂದ್ರ ಪ್ರಸಾದ್, ಮಹದೇವಯ್ಯ, ಎಸಿಪಿಗಳಾಗಿದ್ದ ಶಂಕರೇಗೌಡ, ಜಯಕುಮಾರ್, ಪ್ರಭಾಕರ್ ಬಾರ್ಕಿ ಅವರನ್ನೂ ನೆನಪಿಸಿಕೊಳ್ಳಬೇಕು. ಈಗಂತೂ ಡಿಸಿಪಿ, ಎಸಿಪಿ ಅವರು ಕಾರಲ್ಲಿ ಹೋಗುವುದು ಗೊತ್ತಾಗುತ್ತದೆೆಯೇ ವಿನಃ ಸಂಚಾರ ಸುಧಾರಣೆಗೆ ಒತ್ತು ನೀಡಿದ ಒಂದೇ ಒಂದು ಕಾರ್ಯಕ್ರಮವೂ ಕಾಣುತ್ತಿಲ್ಲ. ಸಂಚಾರ ಎಂದರೆ ರಾತ್ರಿ ಹೊತ್ತಲ್ಲಿ ಕುಡಿದು ವಾಹನ ಸವಾರರನ್ನು ಹಿಡಿಯುವುದು ಎನ್ನುವಂತಾಗಿದೆ. ಮೈಸೂರಿನಲ್ಲಿ ಹಲವು ಅನಾಹುತಗಳ ನಂತರವೂ ಡಿಜಿಪಿ ಅವರ ಸೂಚನೆ ಬಳಿಕವೂ ರಸ್ತೆಯಲ್ಲಿ ನಿಂತು ಸಂಚಾರ ಪೊಲೀಸರು ಅಡ್ಡಹಾಕಿ ಬೇಕಾಬಿಟ್ಟಿಯಾಗಿ ಸವಾರರನ್ನು ಹಿಡಿಯುವುದನ್ನು ಪುನಾರಂಭಿಸಿದ್ದಾರೆ. ಪ್ರಮುಖ ವೃತ್ತಗಳಲ್ಲಿ ಸಂಚಾರ ಸಮಸ್ಯೆಗಳು, ಏಕ ಮುಖ ರಸ್ತೆ, ಸಿಗ್ನಲ್‌ಗಳ ದುರಸ್ತಿ, ರಿಂಗ್ ರಸ್ತೆಯಲ್ಲಿ ಸಂಚಾರ ಸುಧಾರಣೆ, ಮಕ್ಕಳು, ಯುವಕರಲ್ಲಿ ಜಾಗೃತಿ, ಪ್ರವಾಸಿಗರಿಗೆ ಮಾಹಿತಿ ನೀಡುವ ಚಟುವಟಿಕೆಗಳನ್ನು ಹೊಸ ಆಯುಕ್ತರು ಗಮನ ಹರಿಸಲಿ ಎನ್ನುವುದು ನಮ್ಮ ಮನವಿ.
-ರವಿಸುಂದರ್, ಗೋಕುಲಂ ಮೈಸೂರು