ಸಾರ್ವಜನಿಕರ ತೆರಿಗೆ ಹಣಕ್ಕೆ ಬೆಲೆ ಇಲ್ಲವೇ?
ಮೈಸೂರು- ಊಟಿ ರಸ್ತೆಯ ಜೆಎಸ್‌ಎಸ್ ಕಾಲೇಜಿನ ಹತ್ತಿರ ಪ್ರಯಾಣಿಕರಿಗಾಗಿ ಬಸ್ ನಿಲ್ದಾಣವನ್ನು ಸ್ಥಾಪಿಸಲಾಗಿದೆ. ಈ ನಿಲ್ದಾಣದ ಮೇಲೆ ಗುಂಬಜ್ ಮಾದರಿ ಆಕಾರವಿದೆ ಎಂದು ಸಂಸದರಿಗೆ ಈಗ ತಾನೇ ಅರಿವಾದಂತಿದೆ. ತಮ್ಮ ವ್ಯಾಪ್ತಿಯಲ್ಲಿ ಬಸ್ ನಿಲ್ದಾಣ ಗುಂಬಜ್ ಆಕಾರದಲ್ಲಿ ನಿರ್ಮಾಣವಾಗುತ್ತಿರುವುದು ಮುಂಚಿತವಾಗಿಯೇ ಗೊತ್ತಿರಲಿಲ್ಲವೇ? ಬಸ್ ನಿಲ್ದಾಣ ನಿರ್ಮಾಣವಾಗಿರುವುದು ಸಾರ್ವಜನಿಕರ ತೆರೆಗೆ ಹಣದಲ್ಲಿ . ನಿರ್ಮಾಣವಾಗಿರುವ ನಿಲ್ದಾಣವನ್ನು ಕೆಡುವಿ ಮತ್ತೆ ನಿಲ್ದಾಣವನ್ನು ಕಟ್ಟುತ್ತೇವೆ ಎಂದು ಹೇಳುವ ಸಂಸದರೆ ಜನರ ಹಣಕ್ಕೆ ಹೊಣೆಯಾರು? ಸಂಸದರು ಸಂಸದರಾಗಿ ಯೋಚಿಸಿ ಮಾತನಾಡಬೇಕು. ರಾಜಕೀಯವೇ ಬೇರೆ, ಸಾಮಾಜಿಕ ಕಾರ್ಯಗಳೆ ಬೇರೆ ಎಂದು ತಿಳಿಯಬೇಕು.
-ನಾಗೇಶ್, ಮಾನಸಗಂಗೋತ್ರಿ, ಮೈಸೂರು.
ಸಾಹಿತಿ ಭೈರಪ್ಪನವರ ಪ್ರೋತ್ಸಾಹ ಯಾರಿಗೆ?
ರಂಗಾಯಣದ ನಿರ್ದೇಶಕರಾದ ಮಾನ್ಯ ಅಡ್ಡಂಡ ಕಾರ್ಯಪ್ಪನವರು ರಚಿಸಿರು ಟಿಪ್ಪುವಿನ ನಿಜ ಕನಸುಗಳು ಪುಸ್ತಕದ ಬಿಡುಗಡೆಯ ಸಂದರ್ಭದಲ್ಲಿ ಸಾಹಿತಿ ಎಸ್ ಎಲ್ ಭೈರಪ್ಪನವರು ಮಾತನಾಡಿರುವ ರೀತಿ ನಿಜಕ್ಕೂ ಆಶ್ಚರ್ಯ. ನೂರಾರು ವರ್ಷಗಳಿಂದ ಸಾಮಾರಸ್ಯದಿಂದ ಬದುಕುತ್ತಿರುವ ಮುಸ್ಲಿಂ ಸಮುದಾಯಗಳ ಮೇಲೆ ಇಲ್ಲಸಲ್ಲದ ಆರೋಪವನ್ನು ಮಾಡಿರುವುದು ಭೈರಪ್ಪನವರ ಸಂಕುಚಿತ ಮನಸ್ಥಿತಿಗೆ ಹಿಡಿದ ಕನ್ನಡಿ.
ರಾಜಕೀಯ ಕಾರಣಕ್ಕೆ ಬಾಬ್ರಿ ಮಸೀದಿಯಂತಹ ಸೂಕ್ಷ್ಮ ವಿಚಾರವನ್ನು ವಿವಾದವಾಗಿಸಿದವರು ಯಾರು ಎನ್ನುವುದು ಎಲ್ಲರಿಗೂ ತಿಳಿದ ವಿಷಯ. ನ್ಯಾಯಾಲಯದ ತೀರ್ಪುಗಳನ್ನು ಒಪ್ಪಿ ದೇಶದ ಕಾನೂನುಗಳಿಗೆ ಗೌರವವನ್ನು ನೀಡುತ್ತಿರುವ ಮುಸ್ಲಿಂ ಸಮುದಾಯಗಳ ಮನಸ್ಥಿತಿ ಯಾವ ದೃಷ್ಟಿಯಲ್ಲಿ ಬದಲಾಗಬೇಕು ತಿಳಿಯದಾಗಿದೆ?
ಮಾನ್ಯ ಬೈರಪ್ಪನವರು ಈ ದೇಶದ ಜಾತಿಗ್ರಸ್ಥ ಮನಸ್ಸಿಗಳ ಮನಸ್ಥಿತಿ ಬದಲಾಗಲು ಕರೆ ನೀಡಿದ್ದರೆ ಅದನ್ನು ಪ್ರಶಂಸಿಸಬಹುದಿತ್ತು. ಅದರೆ ಅನ್ಯ ಸಮುದಾಯಗಳ ಮೇಲೆ ದ್ವೇಷ ಭಾಷಣ ಮಾಡುವ ಭೈರಪ್ಪನವರ ಮಾತುಗಳು ತೀರ ಖಂಡನೀಯ.
ಸಂವಿಧಾನದ ಆಶಯಗಳಿಗೆ ಕಿಂಚಿತ್ತು ಬೆಲೆ ಕೊಡದ ಸಂವಿಧಾನ ಶಿಲ್ಪಿ ಪದವನ್ನು ಬೇಕೇಂದೇ ಪಠ್ಯಪುಸ್ತಕ ಪರಿಷ್ಕರಣೆಯ ಹೆಸರಿನಲ್ಲಿ ತೆಗೆದಿದ್ದ ರೋಹಿತ್ ಚಕ್ರತೀರ್ಥರಂತವರ ಜೊತೆ ವೇದಿಕೆ ಹಂಚಿಕೊಳ್ಳುವ ಭೈರಪ್ಪನವರ ಮನಸ್ಥಿತಿ ಏನೀರಬಹುದು?
ಇದೇ ವೇದಿಕೆಯಲ್ಲಿ ಪ್ರತಾಪ್ ಸಿಂಹ ರವರು ತಾವು ಮೈಸೂರು ಕ್ಷೇತ್ರದ ಸಂಸದ ಎನ್ನುವುದನ್ನು ಮರೆತು ವೇದಿಕೆ ಮಾತನಾಡಿದ್ದಾರೆ. ತಮ್ಮದೇ ಸರ್ಕಾರ ನಿರ್ಮಿಸಿರುವು ಬಸ್ ನಿಲ್ದಾಣವನ್ನು ಕೆಡುವುದಾಗಿ ಹೇಳಿರುವುದಕ್ಕೆ ಮಾನ್ಯ ಭೈರಪ್ಪನವರ ಸಮ್ಮತಿ ಇದೆಯೇ? ಪುಸ್ತಕದ ಲೇಖಕರಾದ ಮಾನ್ಯ ಅಡ್ಡಂಡ ಕಾರ್ಯಪ್ಪನವರ ಬಗ್ಗೆ ಮಾತನಾಡುವುದೇ ಬೇಡ. ಅವರು ಮಾತನಾಡಿದರೇ ಎಡಪಂಥೀಯರ, ಟಿಪ್ಪುವಿನ ಬಗ್ಗೆ ಮತ್ತು ಸಮಾಜವಾದಿಗಳ ಬಗ್ಗೆ ನಂಜುಕಾರುವುದನ್ನೆ ಕಾಯಕ ಮಾಡಿಕೊಂಡಿದ್ದಾರೆ. ಇವರೆಲ್ಲರ ಇರಾದೇ ಕೋಮು ಸಾಮಾರಸ್ಯವನ್ನು ಹಾಳು ಮಾಡಿ ಧರ್ಮಗಳ ನಡುವೆ ಸಂಘರ್ಷವನ್ನು ಬೆಳೆಸುವುದು. ಇತ್ತೀಚಿನ ಭೈರಪ್ಪನವರ ಭಾಷಣಗಳು ಮತ್ತು ಅವರು ಭಾಗವಹಿಸುತ್ತಿರುವ ವೇದಿಕೆಗಳನ್ನು ಗಮನಿಸಿದರೇ ಅವರೇ ಈ ಕಿಡಿಗೇಡಿ ಗುಂಪುಗಳ ನಾಯಕತ್ವವಹಿಸಿರುವಂತಿದೆ.
-ವಸಂತ, ಮೈಸೂರು.
ಹಾಸಿಗೆಗಳನ್ನು ಒದಗಿಸಿ
ವಿಜಯಪುರದಲ್ಲಿ ಕೇಂದ್ರ ಸರ್ಕಾರದಿಂದ ಪ್ರಶಸ್ತಿ ಪಡೆದ ಜಿಲ್ಲಾಸ್ಪತ್ರೆಯಲ್ಲಿ ಹಾಸಿಗೆಗಳ ಕೊರತೆಯಿಂದ ರೋಗಸ್ಥರು, ಗರ್ಭಿಣಿಯರು ಸಂಕಟ ಅನುಭವಿಸುತ್ತಿದ್ದಾರೆ. ೫೦ ರಿಂದ ೭೦ ಹಾಸಿಗೆಗಳ ಕೊರತೆಯಿಂದ ಗರ್ಭಿಣಿ ಸ್ತ್ರೀಯರು ಕೊರೆವ ಚಳಿಯಲ್ಲಿ ನೆಲದ ಮೇಲೆ ಮಲಗುವ ಪರಿಸ್ಥಿತಿ ಒದಗಿದೆ. ಕೆಲವರಿಗೆ ಶೀತದಿಂದ ಲಕ್ವಾ ಹೊಡೆಯಬಹುದು ಅಥವಾ ಹುಟ್ಟುವ ಶಿಶುವಿಗೆ ತೊಂದರೆಯಾಗುತ್ತದೆ. ಇದು ವಿಜಯಪುರದ ಸಮಸ್ಯೆಮಾತ್ರವಲ್ಲ. ರಾಜ್ಯದ್ಯಂತ ಜಿಲ್ಲಾ ಆಸ್ಪತ್ರೆಗಳ ಸಮಸ್ಯೆ. ಜಿಲ್ಲಾಸ್ಪತ್ರೆಯ ಬಗ್ಗೆ ಜಿಲ್ಲಾಡಳಿತ ಹಾಗೂ ಸರ್ಕಾರ ನಿಗವಹಿಸಿ ಕೂಡಲೇ ಹಾಸಿಗೆಗಳ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟು ಗರ್ಭಿಣಿ ಮತ್ತು ರೋಗಸ್ಥರ ಆರೋಗ್ಯ ಕಾಪಾಡಬೇಕು.
-ಲಿಖಿತ ಕೆ ಬಿ, ಮೈಸೂರು.
ಕಾರ್ಪೊರೆಟ್ ಹಿತ
ಕೆಂಪೇಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಶ್ರೀಗಳು ಪ್ರಧಾನಿ ಮೋದಿ ಅವರನ್ನು ಕೆಂಪೇಗೌಡರಿಗೆ ಹೋಲಿಸಿ ಹೊಗಳಿದ್ದಾರೆ. ಭಾರತದ ಆಹಾರ ಭದ್ರತೆ ಮತ್ತು ರೈತ ಬದುಕನ್ನು ನಾಶಗೊಳಿಸಿ ಕೃಷಿ ಕಾನೂನು ಮಾಡಿ, ಪ್ರತಿಭಟಿಸಿದ ರೈತರ ಹೋರಾಟ ಮುರಿಯಲು ಎಲ್ಲಾ ತಂತ್ರ ಬಳಸಿದ ಮೋದಿಯವರು ರೈತರ ಪ್ರತಿಭಟನೆಗೆ ಶರಣಾಗಿ ದೇಶದೆದುರು ಕ್ಷಮೆ ಕೋರಿ ಕಾನೂನು ವಾಪಸ್ ಪಡೆದು, ರೈತರನ್ನು ಮಾತು ಕತೆಗೆ ಕರೆಯುವ ವಚನ ಕೊಟ್ಟು ವರ್ಷ ಕಳೆದಿದೆ. ಇತ್ತ ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಒಕ್ಕಲುತನದ ಸುತ್ತಲಿನ ಎಲ್ಲಾ ಕಸುಬುದಾರ ಸಮುದಾಯಗಳಿಗೆ ಮಾರಕವಾದ ಎಲ್ಲಾ ಗ್ರಾಮಗಳ ಗೋಮಾಳಗಳನ್ನು ಆರ್‌ಎಸ್‌ಎಸ್ ನಂತಹ ಸಂಘಟನೆಗಳಿಗೆ ಪರಬಾರೆ ಮಾಡಲು ಹೊರಟಿದೆ. ಎಮ್ಮೆ ದನಗಳನ್ನು ಹದಿಮೂರು ವರ್ಷ ತುಂಬುವ ಮೊದಲು ಮಾರದಂತೆ ಅಡ್ಡಿ ಮಾಡುವ ಕಾನೂನು ಮಾಡಿದೆ. ಈ ಎಲ್ಲಾ ಕೃಷಿ ರೈತ ಮತ್ತು ಗ್ರಾಮೀಣ ಸಮುದಾಯಗಳ ಬೇರು ಕಿತ್ತು ಅವರು ನಗರ ಪ್ರದೇಶಗಳತ್ತ ಗುಳೆ ಹೋಗುವಂತಹ ಕಾನೂನುಗಳ ವಿರುದ್ಧ ದ್ವನಿ ಎತ್ತದೆ ತಮ್ಮ ಒಕ್ಕಳುಗಳ ಭಕ್ತ ಸಮುದಾಯಗಳ ಸಂಸ್ಕೃತಿ ರಕ್ಷಿಸದ ಚುಂಚನಗಿರಿ ಶ್ರೀಗಳು ಕಾರ್ಪೊರೇಟ್ ಸಮುದಾಯದ ಹಿತಕಾಯಲು ನಿಂತಿದ್ದಾರೆ.
-ಉಗ್ರನರಸಿಂಹೇ ಗೌಡ, ಮೈಸೂರು.