Mysore
20
broken clouds

Social Media

ಮಂಗಳವಾರ, 06 ಜನವರಿ 2026
Light
Dark

ಆಂದೋಲನ ಓದುಗರ ಪತ್ರ : 09 ಶುಕ್ರವಾರ 2022

ಭೂ ಅತಿಕ್ರಮಣ ತಡೆ ಶ್ಲಾಘನೀಯ

ಶ್ರೀರಾಂಪುರ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಕಂದಾಯ ಭೂಮಿಯನ್ನು ಅತಿಕ್ರಮಿಸಿ ಕಟ್ಟಡ ನಿರ್ಮಾಣ ಮಾಡುವುದನ್ನು ಪಟ್ಟಣ ಪಂಚಾಯ್ತಿ ಅಧಿಕಾರಿಗಳು ಮತ್ತು ಮುಡಾ ಅಧಿಕಾರಿಗಳು ತ್ವರಿತವಾಗಿ ತಡೆಗಟ್ಟಿರುವುದು ಶ್ಲಾಘನೀಯ. ಕಂದಾಯ ಭೂಮಿ ಅತಿಕ್ರಮಣ ಇಂದು ನೆನ್ನೆಯದಲ್ಲ. ಕಂದಾಯ ಭೂಮಿಯನ್ನು ನಕಲಿ ದಾಖಲೆ ಸೃಷ್ಟಿಸಿಕೊಂಡು ನೋಂದಣಿ ಮಾಡಿಸಿ ಮನೆ ಕಟ್ಟಿಕೊಳ್ಳುವವರು, ಮಾರಾಟ ಮಾಡಿ ಲಾಭ ಮಾಡಿಕೊಳ್ಳುವವರ ಸಂಖ್ಯೆ ಕಡಿಮೆ ಇಲ್ಲ. ಇಂತಹ ಪ್ರಕರಣಗಳಲ್ಲಿ ಅಧಿಕಾರಿಗಳು ಶಾಮೀಲಾಗುತ್ತಿರುವುದರಿಂದ ಎಷ್ಟೋ ಪ್ರಕರಣಗಳು ಬೆಳಕಿಗೆ ಬರುವುದೇ ಇಲ್ಲ. ಅವು ಶಾಶ್ವತವಾಗಿ ಯಾರದೋ ಆಸ್ತಿಯಾಗಿ ಬಿಡುತ್ತಿವೆ. ಪ್ರತಿ ಖಾತೆಗಳ ಡಿಜಟಲೀಕರಣ, ಇ- ಖಾತೆ ಮುಂತಾದ ಅತ್ಯಾಧುನಿಕ ತಂತ್ರಜ್ಞಾನ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದರೂ ಅಕ್ರಮಗಳು ನಡೆಯುತ್ತಲೇ ಇವೆ. ಕಂದಾಯ ಭೂಮಿಗಳ ಮಾಹಿತಿ ಇರುವ ಸರ್ಕಾರಿ ಅಧಿಕಾರಿಗಳು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಇದಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ. ಈ ಪ್ರಕರಣದಲ್ಲಿ ಪಟ್ಟಣ ಪಂಚಾಯ್ತಿ ಮತ್ತು ಮುಡಾ ಅಧಿಕಾರಿಗಳು ತ್ವರಿತವಾಗಿ ಕ್ರಮ ಕೈಗೊಂಡಿದ್ದಾರೆ. ಇಂತಹ ಕ್ರಮಗಳಿಂದ ಮಾತ್ರ ಸರ್ಕಾರದ ಆಸ್ತಿಯನ್ನು ಸಂರಕ್ಷಣೆ ಮಾಡಲು ಸಾಧ್ಯ. ಈ ನಿಟ್ಟಿನಲ್ಲಿ ವರದಿ ಮಾಡಿದ ‘ಆಂದೋಲನ’ ಪತ್ರಿಕೆಯ ಪಾತ್ರವೂ ಶ್ಲಾಘನೀಯವಾದುದು.

-ಚಂದ್ರೇಗೌಡ, ಕನ್ನೇಗೌಡನಕೊಪ್ಪಲು, ಮೈಸೂರು.


ಮಾದಾಪುರಕ್ಕೆ ಮತ್ತೊಂದು ಬ್ಯಾಂಕ್ ಬೇಕು

ಎಚ್ ಡಿ ಕೊಟೆ ತಾಲ್ಲೂಕಿಗೆ ಸೇರಿದ ಮಾದಾಪುರ ತಾಲ್ಲೂಕಿನಲ್ಲಿಯೆ ಒಂದು ದೊಡ್ಡ ಗ್ರಾಮ. ಸಾವಿರಾರು ಜನಸಂಖ್ಯೆ ಇರುವ ಗ್ರಾಮ. ಉದ್ಯೋಗಿಗಳು, ವ್ಯಾಪಾರಿಗಳು, ವಿದ್ಯಾರ್ಥಿಗಳು ಸೇರಿದಂತೆ ಬ್ಯಾಂಕಿಂಗ್ ವ್ಯವಹಾರ ನಡೆಸುವವರ ಸಂಖ್ಯೆ ಹೆಚ್ಚಿದೆ. ಆದರೆ, ಗ್ರಾಮದಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖೆ ಇದೆ. ಸುತ್ತಮುತ್ತಲ ಗ್ರಾಮಗಳ ಜನರಿಗೂ ಈ ಬ್ಯಾಂಕಿನಿಂದಲೇ ಸೇವೆ ಒದಗುತ್ತಿದೆ. ಹೀಗಾಗಿ ಹೆಚ್ಚು ವಹಿವಾಟು ಒತ್ತಡದಿಂದಾಗಿ ಗ್ರಾಹಕರಿಗೆ ತ್ವರಿತವಾಗಿ ಸೇವೆ ಲಭ್ಯವಾಗುತ್ತಿಲ್ಲ. ಆದ್ದರಿಂದ ಈ ಗ್ರಾಮದಲ್ಲಿ ಮತ್ತೊಂದು ಬ್ಯಾಂಕ್ ಶಾಖೆಯ ಅಗತ್ಯವಿದೆ. ರಾಷ್ಟ್ರೀಕೃತ ಬ್ಯಾಂಕ್ ಒಂದರ ಶಾಖೆಯನ್ನು ತೆರೆದರೆ ಗ್ರಾಮೀಣ ಪ್ರದೇಶದ ಜನರಿಗೆ ತ್ವರಿತವಾಗಿ ಬ್ಯಾಂಕಿಂಗ್ ಸೇವೆ ಒದಗಿಸಿದಂತಾಗುತ್ತದೆ.

 -ಸಿದ್ದಲಿಂಗೆಗೌಡ, ಹೈರಿಗೆ ಗ್ರಾಮ, ಎಚ್ ಡಿ ಕೊಟೆ ತಾಲ್ಲೂಕು.


 ಬೆಳೆ ಹಾನಿ ವಾಸ್ತವಿಕ ಅಂದಾಜು ಮಾಡಲಿ

ಪ್ರಕೃತಿ ವಿಕೋಪಗಳ ಸಂದರ್ಭಗಳಲ್ಲಿ ಬೆಳೆ ಹಾನಿಯಾದಾಗ ನಷ್ಟ ಅಂದಾಜು ಮಾಡುವಾಗ ರೈತರಿಗೆ ನ್ಯಾಯ ದೊರಕುವ ಮಾದರಿಯನ್ನು ಅಳವಡಿಸಿಕೊಂಡಿಲ್ಲ. ಪ್ರವಾಹದಿಂದ ಬೆಳೆ ಸಂಪೂರ್ಣವಾಗಿ ಕೊಚ್ಚಿ ಹೋದಾಗ, ವಾಸ್ತವಿಕವಾಗಿ ಮತ್ತೆ ಬೆಳೆ ಬೆಳೆಯಲು ಸಾಧ್ಯವಾಗುವುದಿಲ್ಲ. ರೈತರಿಗೆ ಆಗುವ ಒಟ್ಟು ನಷ್ಟವನ್ನು ಫಲು ಬಂದಾಗ ಬರುತ್ತಿದ್ದ ಆದಾಯ ಎಷ್ಟಿತ್ತೆಂಬುದನ್ನು ಪರಿಗಣಿಸಿ ಅಂದಾಜು ಮಾಡಬೇಕು. ಆದರೆ, ರೈತರು ಹಾಕಿದ ಬಿತ್ತನೆ ಬೀಜ, ಗೊಬ್ಬರ ಇದಿಷ್ಟನ್ನೇ ಲೆಕ್ಕಹಾಕಿ ರೈತರಿಗಾದ ನಷ್ಟವನ್ನು ನಿರ್ಧರಿಸಲಾಗುತ್ತದೆ. ಇದು ಅವೈಜ್ಞಾನಿಕವಷ್ಟೇ ಅಲ್ಲ, ರೈತರಿಗೆ ಮಾಡುವ ಅನ್ಯಾಯ ಕೂಡ. ಕೊಡಗಿಗೆ ಕೇಂದ್ರದ ತಂಡ ಆಗಮಿಸಿದೆ. ಪ್ರವಾಹದಿಂದಾದ ನಷ್ಟದ ಅಂದಾಜು ಮಾಡುತ್ತಿದೆ. ಕೇಂದ್ರದ ತಂಡವು ವೈಜ್ಞಾನಿಕವಾಗಿ ನಷ್ಟದ ಅಂದಾಜು ಮಾಡಬೇಕಿದೆ. ರೈತರಿಗೆ ನ್ಯಾಯ ಒದಗಿಸಬೇಕಿದೆ.

-ಪೂರ್ಣಚಂದ್ರ, ಹುಣಸೂರು.


ಕತ್ತಿ ಇನ್ನಷ್ಟು ದಿನ ಇರಬೇಕಿತ್ತು!

ಒಂದಲ್ಲ ಒಂದು ದಿನ

ನಾನೇ ಸಿಎಂ ಎಂಬ ಹಟವಿತ್ತು

ಬದುಕಿನಲ್ಲಿ ಭರವಸೆಯ ಆತ್ಮವಿಶ್ವಾಸವಿತ್ತು.

ಕತ್ತಿಯಂಥ ಚೂಪಾದ ಮೊನಚು ಮಾತಿತ್ತು!

ಮಾತು ಒರಟಾದರೂ ಹಾಸ್ಯಪ್ರಜ್ಞೆ ಹೆಚ್ಚಿತ್ತು.

ನೇರ ನಡೆ-ನುಡಿಯ ಮಾತುಗಳು ಸಾಕಷ್ಟಿತ್ತು.

ಏನೇ ಹೇಳಿ! ಉಮೇಶ್ ಕತ್ತಿ

ಇನ್ನಷ್ಟು ವರ್ಷ ಬದುಕಬೇಕಿತ್ತು.

ಬದುಕಿ ರಾಜ್ಯ ರಾಜಕಾರಣವನ್ನು

ಮತ್ತಷ್ಟು ಬೆಳಗಬೇಕಿತ್ತು!

-ಹರಳಹಳ್ಳಿ ಪುಟ್ಟರಾಜು, ಪಾಂಡವಪುರ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!