-ಕಾರ್ತಿಕ್ ಕೃಷ್ಣ
ಅಸಾಧ್ಯವಾದ ಕೆಲಸ ಅಥವಾ ಅಸಾಧಾರಣ ಸಾಧನೆ ಮಾಡಲು ಹೊರಟವರನ್ನು’ಆಕಾಶಕ್ಕೆ ಏಣಿ ಹಾಕಲು ಹೊರಟವರು’ ಎಂದು ಸಂಭೋಧಿಸುವುದನ್ನು ಕೇಳಿದ್ದೇವೆ. ಕೊನೆಯಿರದ ಆಕಾಶಕ್ಕೆ ಏಣಿ ಹಾಕುವುದು ಎಷ್ಟು ಕಷ್ಟವೋ ಹಾಗೆಯೇ ಕಷ್ಟಸಾಧ್ಯವಾದ ಕನಸುಗಳನ್ನು ಸಾಕಾರಗೊಳಿಸುವುದೂ ಅಷ್ಟೇ ಕಷ್ಟ ಎಂಬುದಕ್ಕೆ ಈ ವ್ಯಾಖ್ಯಾನ. ಇನ್ಮೇಲೆ ಇಂತಹ ಹೋಲಿಕೆ ಅಸಮಂಜಸ! ಯಾಕೆಂದರೆ, ವಿಜ್ಞಾನಿಗಳು ಅಕ್ಷರಶಃ ಆಕಾಶಕ್ಕೇ ಏಣಿ ಹಾಕಲು ಹೊರಟಿದ್ದಾರೆ. ಬಹುಷಃ ನಮ್ಮ ಗಾದೆ ಅವರ ಕಿವಿಗೆ ಬಿತ್ತೇನೋ! ಅದಕ್ಕೆ ಆ ಮಾತನ್ನೇ ನಿಜ ಮಾಡಲು ಹೊರಟಂತಿದೆ ವಿಜ್ಞಾನಿಗಳ ತಂಡ. ಅಷ್ಟಕ್ಕೂ ಆಕಾಶಕ್ಕೆ ಏಣಿ ಏತಕೆ ಬೇಕು? ಎತ್ತರೆತ್ತರದ ಕಟ್ಟಡಗಳು, ಪ್ರತಿಮೆಗಳು ಸಾಕಷ್ಟಿರುವಾಗ, ಅವುಗಳನ್ನೂ ಮೀರಿದ ಅತೀ ಎತ್ತರದ ಮಾನವ ನಿರ್ಮಿತ ವಸ್ತು ಎಂಬ ಹಿರಿಮೆ ಗಿಟ್ಟಿಸಿಕೊಳ್ಳುವ ತವಕವೇ ಎಂದು ನಿಮಗನ್ನಿಸಬಹುದು. ಆದರೆ ಅದರ ನಿರ್ಮಾಣದ ಹಿಂದೆ ಒಂದಷ್ಟು ಸದುದ್ದೇಶಗಳಿವೆ. ಖಚ್ಚಛಿ ಉ್ಝಛಿಠಿಟ್ಟ Space Elevator ಎಂದು ಕರೆಯಲ್ಪಡುವ ಈ ’ನಭೋ ಸೋಪಾನ’ದ ಕಲ್ಪನೆಯ ಹುಟ್ಟು, ನಿರ್ಮಾಣದ ಉದ್ದೇಶ, ಅದರ ಕಾರ್ಯಸಾಧ್ಯತೆ ಮುಂತಾದವುಗಳನ್ನು ತಿಳಿದುಕೊಳ್ಳೋಣ ಬನ್ನಿ.
ಬಾಹ್ಯಾಕಾಶ ಸಂಸ್ಥೆಗಳು ತಮ್ಮ ಯೋಜನೆಗಳ ಮೇಲೆ ಕೋಟ್ಯಂತರ ಡಾಲರ್ ಸುರಿಯುತ್ತಿರುವುದು ನಮಗೆ ತಿಳಿದಿರುವ ವಿಚಾರ. ಇದರ ಬಹುತೇಕ ಪಾಲು ’ಬಾನಬಂಡಿ’ಯ ಉಡಾವಣೆಯದ್ದೇ! ಎಷ್ಟೋ ಇಂಧನ ಖರ್ಚು ಮಾಡಿ ರಾಕೆಟ್ ಉಡಾಯಿಸಿ, ಬಾಹ್ಯಾಕಾಶ ನೌಕೆಯನ್ನೋ ಅಥವಾ ಉಪಗ್ರಹ ಗಳನ್ನೋ ನಭದ ಕಕ್ಷೆಗೆ ಸೇರಿಸುವಲ್ಲಿ ಬಹಳಷ್ಟು ಜಾಗರೂಕತೆ ಬೇಕಾಗುತ್ತದೆ. ಶಕ್ತಿ ಮತ್ತು ವೆಚ್ಚವು ಎಣಿಕೆಗೆ ಸಿಗದಷ್ಟು ವ್ಯಯವಾಗಿರುತ್ತದೆ. ಉದಾಹರಣೆಗೆ, ನಾಸಾ ದ ಆರ್ಟಿಮಸ್ ಯೋಜನೆಯನ್ನೇ ಪರಿಗಣಿಸಿದರೆ, SLS ಏರುಬಂಡಿಯಲ್ಲಿದ್ದ ತಾಂತ್ರಿಕ ದೋಷದಿಂದ ಆ ಯೋಜನೆ ಮತ್ತಷ್ಟು ದಿನ ಮುಂದೂಡಲ್ಪಟ್ಟಿತ್ತು. ಈ ತಲೆನೋವನ್ನು ನಿವಾರಿಸಲೆಂದೇ Space Elevator ನ ಕಲ್ಪನೆ ಜಾರಿಗೆ ಬಂದದ್ದು. ಇಂಧನವ ಉರಿಸಿ, ಅಗ್ನಿಯ ಚೆಂಡಿನಂತೆ ನಭಕ್ಕೆ ಹಾರುವ ರಾಕೆಟ್ ಗಳಿಗೆ ಪರ್ಯಾಯ ವ್ಯವಸ್ಥೆಯಿದು. ಹವಾಮಾನದ ಅವಲಂಬನೆಯಿಲ್ಲದೆ, ಪ್ರಾಣ ಭಯವಿಲ್ಲದೆ ಗಗನಯಾತ್ರಿಗಳು ನಭಕ್ಕೆ ಚಿಮ್ಮುವ ಹಾಗೆ ಮಾಡುವ ಅತ್ಯದ್ಭುತ ವ್ಯವಸ್ಥೆಯಾಗಬಲ್ಲ’ಆಕಾಶ ಏಣಿ’ಯಿದು. ಇದು ಸಾಕಾರಗೊಂಡರೆ ಗಗನ ಯಾನಗಳನ್ನು‘Space Mission’ ಎನ್ನುವ ಬದಲು ‘Space Transit’ ಎಂದು ಕರೆಯಬಹುದು!
ಬಾಹ್ಯಾಕಾಶ ಎಲಿವೇರ್ಟ ಅನ್ನು ಬಾಹ್ಯಾಕಾಶ ಸೇತುವೆ, ನಕ್ಷತ್ರ ಏಣಿ ಮತ್ತು ಕಕ್ಷೀಯ ಲಿಫ್ಟ್ ಎಂದೂ ಕರೆಯಲಾಗುತ್ತದೆ. ಇದೊಂತರ planet&to&space ಸಾರಿಗೆ ವ್ಯವಸ್ಥೆಯ ಹಾಗೆ. ಸಾಮಾನ್ಯವಾಗಿ ವೈಜ್ಞಾನಿಕ ಕಾದಂಬರಿಗಳಲ್ಲಿ ಕಂಡುಬರುತ್ತಿದ್ದ ಈ ವ್ಯವಸ್ಥೆಯನ್ನು, ನೈಜವಾಗಿ ಅನುಷ್ಠಾನಕ್ಕೆ ತರುವ ಮಾರ್ಗದ ಬಗ್ಗೆ ಹೇರಳವಾಗಿ ಚರ್ಚೆಯಾಗುತ್ತಿದೆ. ಸರಳವಾಗಿ ಹೇಳಬೇಕೆಂದರೆ, ತಪ್ಪಲಿನಿಂದ ಬೆಟ್ಟದ ತುದಿಗೆ ಕರೆದೊಯ್ಯುವವ ಕೇಬಲ್ ರ್ಕಾ’ ಅನ್ನು ಊಹಿಸಿಕೊಳ್ಳಿ. ಅದೇ ಮಾದರಿಯಲ್ಲಿ Space Tether ಎಂದು ಕರೆಯಲ್ಪಡುವ ಕೇಬಲ್, ಭೂಮಿಯಿಂದ ಬಾಹ್ಯಾಕಾಶಕ್ಕೆ ವಿಸ್ತರಿ ಸಲ್ಪಡುತ್ತದೆ. ಇದರಿಂದ ಉಪಗ್ರಹಗಳು ಹಾಗೂ ಬಾಹ್ಯಾಕಾಶ ನೌಕೆಗಳು ದೊಡ್ಡ ರಾಕೆಟ್ಗಳ ಸಹಾಯವಿಲ್ಲದೆ, ಭೂಮಿಯ ಮೇಲ್ಮೈಯಿಂದ ನೇರವಾಗಿ ಕಕ್ಷೆಗೆ ಕೇಬಲ್ ಮೂಲಕ ಚಲಿಸಬಲ್ಲವು! ಇದು ಹೇಳಿದಷ್ಟು ಸುಲಭವಿಲ್ಲ. ಅಷ್ಟುದ್ದ ಕೇಬಲ್ ನಿಲ್ಲಿಸಬೇಕಾದರೆ ಹಲವಾರು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಅಷ್ಟುದ್ದ ಗೋಪುರವನ್ನೇ ಕಟ್ಟಬಹುದಲ್ಲಾ ಎಂದು ನೀವು ಯೋಚಿಸಬಹದು. ಮೊದಲಿಗೆ ಮೇಲೆ ಹೋದಂತೆಲ್ಲಾ, ಭೂಮಿಯ ಗುರುತ್ವಾಕರ್ಷಣೆ ತನ್ನ ಆಟವನ್ನು ಶುರು ಮಾಡುತ್ತದೆ. ತೂಕ ಹೆಚ್ಚಿದಂತೆ, ಇಡೀ ಗೋಪುರವೇ ಬುಡಮೇಲಾಗಬಲ್ಲದು. ಬದಲಿಗೆ ಕೇಬಲ್ ನ ಒಂದು ತುದಿಯನ್ನು ಸಮಭಾಜವೃತ್ತ ಬಳಿ ಜೋಡಿಸಿ, ಕೇಬಲ್ ನ ಇನ್ನೊಂದು ತುದಿಯನ್ನು ಬಾಹ್ಯಾಕಾಶದ ಭೂಸ್ಥಿರ ಕಕ್ಷೆಯಲ್ಲಿರುವ (೩೫,೭೮೬ ಕಿಮೀ ಎತ್ತರ) ಕೌಂಟರ್ವೇಟ್ಗೆ ಜೋಡಿಸಲಾಗುವುದು. ಕೆಳಗಿನ ತುದಿಯನ್ನು ಪ್ರಬಲವಾಗಿರುವ ಗುರುತ್ವಾಕರ್ಷಣೆಯು ಹಿಡಿದಿಟ್ಟರೆ ಮೇಲಿನ ತುದಿಯನ್ನು ಮೇಲ್ಮುಖ ಕೇಂದ್ರಾಪಗಾಮಿ ಬಲವು (Centrifugal Force) ಹಿಡಿದಿಟ್ಟುಕೊಳ್ಳುತ್ತದೆ. ಇದರಿಂದ ಕೇಬಲ್ ಭೂಮಿಯ ಮೇಲೆ ಒಂದೇ ಸ್ಥಾನದಲ್ಲಿ ಸ್ಥಿರವಾಗಿದ್ದು, ಆರೋಹಿಗಳು ಯಾಂತ್ರಿಕ ವಿಧಾನಗಳ ಮೂಲಕ ಮೇಲಕ್ಕೆ ಮತ್ತು ಕೆಳಕ್ಕೆ ಸಾಗಿ, ತಮ್ಮ ಸರಕುಗಳನ್ನು ಕಕ್ಷೆಗೆ ಮತ್ತು ಕಕ್ಷೆಯಿಂದ ಮರಳಿ ತರಬಲ್ಲದು.
ಜಿಯೋಸಿಂಕ್ರೊನಸ್ ಕಕ್ಷೆಯನ್ನು ತಲುಪುವ ಗೋಪುರದ ಪರಿಕಲ್ಪನೆಯನ್ನು ಮೊದಲು ಪ್ರಕಟಿಸಿದ್ದು ’ಕಾನ್ಸ್ಟಾಂಟಿನ್ ತ್ಸಿಯೋಲ್ಕೊವ್ಸ್ಕಿ’. ೧೮೯೫ರಲ್ಲಿ ಪ್ರಕಟವಾದ ಅವರ ಲೇಖನದಲ್ಲಿ, ಭೂಮಿಯ ಮೇಲ್ಮೈಯಿಂದ ಭೂಸ್ಥಿರ ಕಕ್ಷೆಯ ಎತ್ತರಕ್ಕೆ ತಲುಪುವ ಗೋಪುರದ ಪ್ರಸ್ತಾಪವಿತ್ತು. ಎಲ್ಲಾ ಕಟ್ಟಡಗಳಂತೆ, ಸಿಯೋಲ್ಕೊವ್ಸ್ಕಿಯ ರಚನೆಯು ಕೂಡ ಅಡಿಪಾಯದ ಆಧಾರದಲ್ಲಿ ತಲೆಯೆತ್ತುವ ಮತ್ತೊಂದು ಗಗನಚುಂಬಿಯಂತಿತ್ತು. ಆದರೆ ಕೇಬಲ್ ನ ಕಲ್ಪನೆ ಶುರುವಾಗಿದ್ದು ೧೯೫೯ ರಲ್ಲಿ. ಈ ಕಲ್ಪನೆಯಲ್ಲಿ ಮೊದಲು ತಿಳಿಸಿದ ಗುರುತ್ವಾಕರ್ಷಣಾ ಶಕ್ತಿ ಹಾಗು ಕೇಂದ್ರಾಪಗಾಮಿ ಬಲಗಳು ಪ್ರಧಾನ ಪಾತ್ರವಹಿಸುತ್ತವೆ. ೨೦೧೯ರಲ್ಲಿ ಅಂತರಾಷ್ಟ್ರೀಯ ಆಸ್ಟ್ರೋನಾಟಿಕ್ಸ್ ಅಕಾಡೆಮಿ’ ಒಂದು ವರದಿಯನ್ನು ತಯಾರಿಸಿತು. Road to the Space Elevator Era ಎಂಬ ಆ ವರದಿಯಲ್ಲಿ Space Elevator ನ ತಯಾರಿಕೆಯ ಸಾಧ್ಯತೆಯನ್ನು ಚರ್ಚಿಸಲಾಗಿತ್ತು. ವಿಶ್ವದ ಅಗ್ರಮಾನ್ಯ ಬಾಹ್ಯಾಕಾಶ ವಿಜ್ಞಾನಿಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ, ಅಮೂಲಾಗ್ರ ಚಿಂತನೆ ನಡೆಸಿ ತಯಾರಿಸಲಾದ ವರದಿಯದು. ಅದರ ಪ್ರಕಾರ Space Elevator ತಲೆಯೆತ್ತುವ ದಿನಗಳು ಹತ್ತಿರದಲ್ಲೇ ಇದೆ! ಹಾಗೆಯೆ ಈಗ ಲಭ್ಯವಿರುವ ವಸ್ತುಗಳು, ಬಾಹ್ಯಾಕಾಶ ಎಲಿವೇರ್ಟ ಅನ್ನು ಪ್ರಾಯೋಗಿಕವಾಗಿ ಮಾಡಲು ಸಾಕಷ್ಟು ಹಗುರವಾಗಿದ್ದು, ಮ್ಯಾಕ್ರೋ-ಸ್ಕೇಲ್ ಸಿಂಗಲ್ ಕ್ರಿಸ್ಟಲ್ ಗ್ರ್ಯಾಫೀನ್ ಎಂಬ ಪರ್ಯಾಯ ವಸ್ತುವಿನ ಅವಶ್ಯಕತೆಯಿದೆ. ಕಾರ್ಬನ್ ನ್ಯಾನೊಟ್ಯೂಬ್ ಗಳಿಗಿಂತ ಹೆಚ್ಚು ಶಕ್ತಿಯುತವಾಗಿರುವ ಈ ವಸ್ತು Space Elevatorಗೆ ಭದ್ರ ಬುನಾದಿ ಹಾಕಲಿದೆ.
ಇನ್ನೊಂದು ವಿಷಯ, ಆಪಲ್ ಟಿವಿಯಲ್ಲಿರುವ Foundation ಎಂಬ ಸೀರೀಸ್ನಲ್ಲಿಒಬ್ಬಾತ Space Elevator ಅನ್ನು ನಾಶಗೊಳಿಸಲು ಪ್ರಯತ್ನಿಸುತ್ತಾನೆ. ಆ ದೃಶ್ಯ, ಹೊಸ ಚರ್ಚೆಯನ್ನು ಹುಟ್ಟುಹಾಕಿತು! ಎಲ್ಲಾದರೂ ಕೇಬಲ್ ಮುರಿದು ’ನಭೋ ಸೋಪಾನ’ ಧರೆಗುರುಳಿದರೆ? ಅಷ್ಟು ಎತ್ತರದಿಂದ, ಗುರುತ್ವದ ಸಹಾಯದಿಂದ ಭೂಮಿಗೆ ಅಪ್ಪಳಿಸಿದರೆ ಏನಾಗಬಹುದು? ಮನುಕುಲಕ್ಕೆ ಸಹಾಯ ಮಾಡಲು ಹೋಗಿ, ಅದೇ ಮಾರಕವಾದರೆ! ಹೀಗೆ ಹಲವು ಪ್ರಶ್ನೆಗಳು ಏಳುತ್ತಿದೆ. ಅದೇನೇ ಇರಲಿ, ಎಲ್ಲಾ ಸರಿಯಾಗಿ ನಡೆದರೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆಯಾಗುವುದಂತೂ ಖಚಿತ!