ಭಾರತೀನಗರ: ಯಾರೂ ಇಲ್ಲದ ಮನೆಯಲ್ಲಿ ಯುವಕನೊಬ್ಬನ ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ದೊಡ್ಡಅರಸಿನಕೆರೆ ಗ್ರಾಮದಲ್ಲಿ ನಡೆದಿದೆ.
ತಮ್ಮಯ್ಯ ಎಂಬುವವರ ಪುತ್ರ ನಾಗೇಶ್ ಅಲಿಯಾಸ್ ಸ್ಪಾಟ್ (35) ಎಂಬಾತ ಕೊಲೆಯಾದ ಯುವಕ. ಚೇತನ್ ಅಲಿಯಾಸ್ ಗಣೆಯಾರ ಚೇತ ಎಂಬುವವರ ಮನೆಯಲ್ಲಿ ಕೊಲೆ ನಡೆದಿದ್ದು, ಪೊಲೀಸರು ಚೇತನ್ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ.
ಕಳೆದ ಭಾನುವಾರ ಮಳವಳ್ಳಿ ತಾಲ್ಲೂಕಿನ ಕೊಂಡದ ಮಾರಮ್ಮನ ದೇವಾಲಯಕ್ಕೆ ತೆರಳಿದ್ದ ಸಂದರ್ಭ ನಾಗೇಶ್ ಮತ್ತು ಚೇತನ್ ನಡುವೆ ಜಗಳ ನಡೆದಿತ್ತು. ಅಭಿ ಅಲಿಯಾಸ್ ಕಟ್ಟಪ್ಪ, ಚಂದ್ರ ಅಲಿಯಾಸ್ ಹಿಟಾಚಿ ಮತ್ತಿತರ ಸ್ನೇಹಿತರೂ ಕೂಡ ಚೇತನ್ ಜೊತೆಗೆ ಸಾಥ್ ನೀಡಿದ್ದರು.
ಅಲ್ಲಿಂದ ಊರಿಗೆ ತೆರಳಿದ ನಂತರ ಗ್ರಾಮದ ಸೊಸೈಟಿ ಹಿಂಭಾಗ ಮತ್ತೆ ಇದೇ ಚೇತನ್ ನಾಗೇಶ್ ಮೇಲೆ ಜಗಳ ತೆಗೆದು ಹಲ್ಲೆಗೆ ಮುಂದಾಗಿದ್ದನೆಂದು ಹೇಳಲಾಗಿದೆ. ಈ ಸಂಬಂಧ ಗ್ರಾಮದ ಕೆಲವು ಮುಖಂಡರು ರಾಜಿ ಸಂಧಾನ ನಡೆಸಿ ಇಬ್ಬರನ್ನು ಮನೆಗೆ ಕಳುಹಿಸಿದ್ದರು. ಮತ್ತೆ ಸೋಮವಾರ ಹಳೇ ಘಟನೆ ಮರುಕಳಿಸಿದ್ದು, ನಾಗೇಶ್‌ನನ್ನು ಕರೆ ಮಾಡಿ ಗಣೆಯಾರ ಚೇತನ್ ತನ್ನ ಮನೆಗೆ ಕರೆಯಿಸಿದ್ದು, ಕತ್ತು ಸೀಳಿ ಕೊಲೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ತೀವ್ರ ರಕ್ತಸ್ರಾವವಾಗಿ ನಾಗೇಶ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಮನೆಯಲ್ಲಿ ಯಾರೂ ಇಲ್ಲದ್ದರಿಂದ ನಾಗೇಶ್ ಚೀರಾಟ ಯಾರಿಗೂ ಕೇಳಿಸಿಲ್ಲ ಎಂಬುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ. ನಂತರ ಸ್ಥಳಕ್ಕೆ ಆಗಮಿಸಿದ ಕೆ.ಎಂ.ದೊಡ್ಡಿ ಠಾಣಾ ಪೊಲೀಸರು ನಾಗೇಶ್ ಶವವನ್ನು ಮಂಡ್ಯ ಜಿಲ್ಲಾಸ್ಪತ್ರೆ ಮರಣೋತ್ತರ ಪರೀಕ್ಷೆಗಾಗಿ ಕೊಂಡೊಯ್ದಿದ್ದಾರೆ. ಈ ಸಂಬಂಧ ಕೆ.ಎಂ.ದೊಡ್ಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.





