ಹನೂರು: ತಾಲ್ಲೂಕಿನ ಹೊಸದೊಡ್ಡಿ ಗ್ರಾಮ ಸಮೀಪದ ಎಡೆಯರಹಳ್ಳಿ ಕ್ರಾಸ್ ನಲ್ಲಿ ವಾಹನ ಸವಾರರಿಗೆ ಭಾನುವಾರ ತಡರಾತ್ರಿ ಹುಲಿಯೊಂದು ಪ್ರತ್ಯಕ್ಷವಾಗಿರುವುದು ಪರಿಸರ ಪ್ರೇಮಿಗಳಿಗೆ ಸಂತಸ ವನ್ನುಂಟುಮಾಡಿದರೆ, ರೈತರಲ್ಲಿ ನಡುಕ ಪ್ರಾರಂಭವಾಗಿದೆ.

ತಾಲ್ಲೂಕು ಬಿಆರ್ ಟಿ ಅರಣ್ಯ ಪ್ರದೇಶದಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ಹುಲಿಗಳು ಹುಲಿ ಗಣತಿ ಯಲ್ಲಿ ಕಾಣಿಸಿಕೊಂಡಿದೆ. ಇನ್ನೂ ಬಿಆರ್ ಟಿ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತೆ ಇರುವ ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ 18 ಕ್ಕೂ ಹೆಚ್ಚು ಹುಲಿಗಳು ತನ್ನ ಸಂತತಿಯನ್ನು ವೃದ್ಧಿಸಿಕೊಂಡಿದೆ . ಪಿ ಜಿ ಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಗ್ರಾಮಗಳು ಮಲೆಮಹದೇಶ್ವರ ವನ್ಯಧಾಮದ ಅಂಚಿನಲ್ಲಿವೆ. ಆಗೊಮ್ಮೆ ಈಗೊಮ್ಮೆ ಹುಲಿ ಕಾಣಿಸಿಕೊಳ್ಳುತ್ತಿತ್ತು. ಆದರೆ ಕಳೆದ 1ವಾರದಿಂದ ಹುಲಿಯೊಂದು ಸ್ಥಳೀಯರಿಗೆ ಹಾಗೂ ವಾಹನ ಸವಾರರಿಗೆ ಪದೇಪದೆ ದರ್ಶನ ನೀಡುತ್ತಿರುವುದು ಸ್ಥಳೀಯರಲ್ಲಿ ಆತಂಕವನ್ನುಂಟು ಮಾಡಿದೆ.

ಕಳೆದ ಒಂದು ವಾರದಿಂದ ಹುಲಿ ಪ್ರತ್ಯಕ್ಷವಾಗುತ್ತಿರುವುದರಿಂದ ರೈತರಲ್ಲಿ ಆತಂಕ ಪ್ರಾರಂಭವಾಗಿದೆ.ಭಯದಿಂದ ಜಮೀನಿನ ಕಾವಲಿಗೆ ತೆರಳಲು ಹಿಂಜರಿಯುತ್ತಿದ್ದಾರೆ . ಆದ್ದರಿಂದ ಸಂಬಂಧ ಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಆನೆ ಕಾರಿಡಾರ್ ಹಾಗೂ ಸೋಲಾರ್ ವ್ಯವಸ್ಥೆ ಮಾಡಿಕೊಡುವಂತೆ ಪರಿವರ್ತನಾ ಗ್ರಾಮ ಸಮಿತಿ ಅಧ್ಯಕ್ಷ ಎನ್ ಕೃಷ್ಣಮೂರ್ತಿ ಒತ್ತಾಯಿಸಿದ್ದಾರೆ.





