ಮೈಸೂರು: ನಗರದಲ್ಲಿ ಗುಂಬಜ್ ಮಾದರಿಯ ಬಸ್ ನಿಲ್ದಾಣವನ್ನು ಜೆಸಿಬಿ ತೆಗೆದುಕೊಂಡು ಹೋಗಿ ನಾನೇ ಕೆಡವುತ್ತೇನೆಂದು ಹೇಳಿರುವ ಸಂಸದ ಪ್ರತಾಪ್ ಸಿಂಹ ವಿರುದ್ಧ ವಿರೋಧ ಪಕ್ಷದ ನಾಯಕ ಕಿಡಿಕಾರಿದರು.
ಎರಡನೇ ಬಾರಿ ಸಂಸದರಾಗಿರುವ ಪ್ರತಾಪ್ ಸಿಂಹ ಜವಾಬ್ದಾರಿಯಿಂದ ಮಾತನಾಡಬೇಕು. ಕಾಮನ್‌ಸೆನ್ಸ್ ಇಲ್ಲ ಅಂದರೆ ಹೇಗೆ? ಇವನು ಯಾವನೂ ಕೆಡುತ್ತೇನೆ ಎನ್ನುವುದಕ್ಕೆ. ನಿಲ್ದಾಣದ ದುಡ್ಡು ಸರ್ಕಾರದಿಂದ ನೀಡಿರುವುದು ಹೊರತು ಇವರ ಮನೆಯಿಂದ ನೀಡಿಲ್ಲ ಎಂದು ಹೇಳಿದರು.
ಸರ್ಕಾರಿ ಇಂಜಿನಿಯರ್‌ಗಳು ಡಿಸೈನ್ ಮಾಡಿದಾಗ ಏನು ಮಾಡುತ್ತಿದ್ದರು?ಕಟ್ಟುವಾಗ ಗೊತ್ತಿರಲಿಲ್ಲವೇ. ಜಾತಿ,ಧರ್ಮದ ಹೆಸರಿನಲ್ಲಿ ಅಶಾಂತಿ ಉಂಟು ಮಾಡುವುದಕ್ಕೆ ಮತ್ತು ಚುನಾವಣಾ ಕಾರಣಕ್ಕಾಗಿ ಈ ರೀತಿಯ ಹೇಳಿಕೆಗಳನ್ನು ಕೊಡುತ್ತಿದ್ದಾರೆ.ವಿವಾದಗಳನ್ನು ಹುಟ್ಟು ಹಾಕಲು ಪ್ರತಾಪ್ ಸಿಂಹ ಅಂತಹವರು ಹುಟ್ಟುಕೊಂಡಿದ್ದಾರೆ ಎಂದು ತರಾಟೆಗೆ ತಗೆದುಕೊಂಡರು.ಗುಂಬಜ್ ಮಾದರಿಯಲ್ಲಿ ಕಟ್ಟಿದ್ದರೆ ಹೊಡೆದು ಹಾಕೋಕೆ ಇವನ್ಯಾರು? ಇವನ ದುಡ್ಡಲ್ಲ. ಸಾರ್ವಜನಿಕರ ತೆರಿಗೆ ಹಣದಿಂದ ನಿರ್ಮಿಸುತ್ತಿರುವುದನ್ನು ಮರೆಯಬಾರದು ಎಂದರು.
೬೦೦ ವರ್ಷಗಳ ಕಾಲ ದೇಶವನ್ನು ಮೊಘಲರು ಆಳ್ವಿಕೆ ಮಾಡಿದ್ದರು. ಅವಾಗ ಇವರೆಲ್ಲಾ ಎಲ್ಲಿಗೆ ಹೋಗಿದ್ರು? ಕೆಲವು ವಿಚಾರಗಳನ್ನು ಇಟ್ಟುಕೊಂಡು ಜನರ ಮನಸ್ಸನ್ನು ಸೆಳೆಯುವ ಪ್ರಯತ್ನ ಮಾಡುತ್ತಾರೆ. ಆದರೆ, ಜನರು ಬುದ್ದಿವಂತರಿದ್ದಾರೆ. ಮುಂದಿನ ದಿನಗಳಲ್ಲಿ ಬಿಜೆಪಿಗೆ ಬುದ್ದಿ ಕಲಿಸುತ್ತಾರೆ ಎಂದು ಹೇಳಿದರು.