ಮೈಸೂರು: ಮುಂಬರುವ ವಿಧಾನಸಭಾ ಚುನಾವಣೆಗೆ ಜಾ.ದಳ ಪಕ್ಷದಿಂದ ಕಣಕ್ಕಿಳಿಯುವ 100 ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಸಿದ್ಧವಾಗಿದ್ದು, ಆದಷ್ಟು ಶೀಘ್ರದಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಪಂಚರತ್ನ ಕಾರ್ಯಕ್ರಮ ಆರಂಭಕ್ಕೂ ಮುನ್ನ ನಗರಕ್ಕೆ ಆಗಮಿಸಿದ್ದ ಕುಮಾರಸ್ವಾಮಿ ಅವರು ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.
ಚುನಾವಣೆಗೆ ಕಣಕ್ಕಿಳಿಯುವ 100 ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿದೆ. ನಮ್ಮ ಪಕ್ಷದಲ್ಲಿರು ಹೆಚಿ.ಡಿ.ರೇವಣ್ಣ ಅವರು ಜ್ಯೋತಿಷಿಗಳಿದ್ದಂತೆ. ಪಟ್ಟಿ ಬಿಡುಗಡೆಗೆ ಸಮಯ ಪ್ರಸಕ್ತವಾಗಿಲ್ಲ ಎಂದು ಅವರು ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ತಕರಾರು ತೆಗೆದಿದ್ದಾರೆ ಎಂದರು.
ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಸೂಕ್ತ ಸಮಯ ನೋಡಿಕೊಂಡು ಪಟ್ಟಿ ಬಿಡುಗಡೆ ಮಾಡುತ್ತೇವೆ. ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಮಾಜಿ ಪ್ರಧಾನಿ ಹಾಗೂ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಅವರ ನೇತೃತ್ವದಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಪಂಚರತ್ನ ಯಾತ್ರೆಯನ್ನು ಮಳೆಯ ಸಮಸ್ಯೆಯಿಂದ ಮುಂದುಡಲಾಗಿತ್ತು. ಮುಂದೆ ಯಾವುದೇ ಸಮಸ್ಯೆಯಾಗದಿರಲಿ ಎಂದು ನಂಜುಡೇಶ್ವರ ಹಾಗೂ ಚಾಮುಂಡಿ ತಾಯಿಯ ಆಶೀರ್ವಾದ ಪಡೆದಿದ್ದೇನೆ.
ಇಂದಿನಿಂದ 36 ದಿನಗಳ ಕಾಲ ಮೊದಲ ಹಂತದ ಯಾತ್ರೆ ಆರಂಭವಾಗಲಿದೆ ಎಂದರು.
ನಾಡಿನ ಜನತೆಗೆ ತಿಳುವಳಿಕೆ ಮೂಡಿಸಲು ಯಾತ್ರೆ ಆರಂಭಿಸಿದ್ದೇವೆ. ಪಿನಾಕಿನ ನದಿಯ ವಿಚಾರವಾಗಿ ತಕರಾರು ಆರಂಭವಾಗಿದೆ. ಕೇಂದ್ರ ಸರ್ಕಾರ ನಮ್ಮ ರಾಜ್ಯದ ಮೇಲೆ ನಿರ್ಲಕ್ಷ್ಯ ತೋರಿದೆ. ಇದರಿಂದಾಗಿ ನೀರಾವರಿ ವಿಚಾರವಾಗಿ ತೊಂದರೆಯಾಗಿದೆ ಎಂದರು.
ಮೇಕೆದಾಟು ಯೋಜನೆಗೆ ಮೂರುವರೆ ವರ್ಷದ ಹಿಂದೆಯೇ ಡಿಪಿಆರ್ ಕಳುಹಿಸಲಾಗಿದೆ. ಕೇಂದ್ರ ಸರ್ಕಾರ ಈವರೆಗೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ತುಂಗಭದ್ರ, ಕೃಷ್ಣ ನೀರಾವರಿ ಯೋಜನೆಗಳನ್ನು ಮೇಲ್ದರ್ಜೆಗೆ ಏರಿಸುವ ಯೋಜನೆಗೆ ಶೀಘ್ರದಲ್ಲೇ ಚಾಲನೆ ಕೊಡುತ್ತೇವೆ ಎಂದು ರಾಜ್ಯ ಸರ್ಕಾರ ಹೇಳುತ್ತೇಲೇ ಬಂದಿದೆ. ಆದರೆ, ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದರು.
ಚಾಮುಂಡೇಶ್ವರಿ ಕ್ಷೇತ್ರದಲ್ಲೇ ಪಂಚರತ್ನ ಸಮಾರೋಪ ಸಮಾರಂಭ ಮಾಡುತ್ತೇವೆ. ಮಾರ್ಚ್‌ನಲ್ಲಿ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಮಾಡುತ್ತೇವೆ. 123 ಸ್ಥಾನ ಗೆಲುವಿನ ಗುರಿ ಇಟ್ಟುಕೊಂಡು ನಾವು ಹೊರಟಿದ್ದೇವೆ ಎಂದು ಹೇಳಿದರು.
ರಾಜಕಾರಣದಲ್ಲಿ ಏನೂ ಹೇಳಲಾಗದು. ಮುಂದಿನ ದಿನಗಳಲ್ಲಿ ರಾಜಕೀಯ ಸಮೀಕರಣ ಆಗಬಹುದು. ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಜನತಾ ಪರಿವಾರದಿಂದ ಹೋದವರೇ ಹೆಚ್ಚು ಇದ್ದಾರೆ. ಅವರ ಮನಪರಿವರ್ತನೆಯಾಗಿ ಮತ್ತೆ ಪಕ್ಷಕ್ಕೆ ಬರಬಹುದು. ಬಂದಾಗ ಏನು ತೀರ್ಮಾನ ಮಾಡಬೇಕು ನೋಡೋಣ ಎಂದು ನುಡಿದರು.
ಖಾಸಗಿ ಕಂಪನಿ ಮುಂದುಟ್ಟಿಕೊಂಡು ಮತದಾರರ ಡೇಟಾ ಸಂಗ್ರಹ ಮಾಡುತ್ತಿರುವ ವಿಚಾರಕ್ಕೆ ಸಂಬಂದಿಸಿದಂತೆ ಮಾತನಾಡಿದ ಅವರು, ಇದರಲ್ಲಿ ಕೆಲವು ತಪ್ಪುಗಳು ಆಗಿವೆ. ಸರ್ಕಾರದ ಅಧಿಕಾರಿಗಳು ಇದರಲ್ಲಿ ಭಾಗಿಯಾಗಿದ್ದಾರೆ. ಡೇಟಾ ಸಂಗ್ರಹ ಮಾಡುವ ಸಿಬ್ಬಂದಿಗಳು ಸರ್ಕಾರಿ ನೌಕರರು ಎಂದು ಹೇಳಿಕೊಂಡು ಮನೆಗಳಿಗೆ ಭೇಟಿ ಕೊಟ್ಟಿರುವ ಮಾಹಿತಿ ಇದೆ ಎಂದರು.
ಸರ್ಕಾರದ ನಡವಳಿಕೆ ಪ್ರತಿಯೊಬ್ಬರಿಗೂ ಸಂಶಯ ಮೂಡುತ್ತದೆ. ಇದರಿಂದ ಬಿಜೆಪಿಯವರು ದೊಡ್ಡ ಸಾಧನೆ ಮಾಡುತ್ತಾರೆ ಎಂಬ ಗಾಬರಿ ನನಗೆ ಇಲ್ಲ. ಈ ಬಾರಿ ಬಿಜೆಪಿ ಏನೇ ಮಾಡಿದರೂ ಪ್ರಯೋಜನವಾಗುವುದಿಲ್ಲ. ನಾಡಿನ ಜನರು ಬೇಸತ್ತು ಹೋಗಿದ್ದಾರೆ. ಈ ಬಾರಿ ಕುತಂತ್ರದಿಂದ ಅಧಿಕಾರ ಹಿಡಿಯಲು ಸಾಧ್ಯವಿಲ್ಲ ಎಂದರು.
ಬಸ್ ನಿಲ್ದಾಣ ವಿವಾದ ಕುರಿತು ಮಾತನಾಡಿದ ಅವರು, ನನಗೆ ಕಿರುಕುಳವಾಗುತ್ತಿದೆ ಎಂದು ಬಿಜೆಪಿ ಶಾಸಕರೇ ಕಣ್ಣೀರಿಟ್ಟರೆ ಅವರಿಗೆ ಮತ ಕೊಟ್ಟ ಜನರ ಗತಿ ಏನು?. ಮಸೀದಿಯನ್ನಾದರೂ ಮಾಡಿ, ಗೋಪುರವನ್ನಾದರೂ ಮಾಡಿ. ಜನರಿಗೆ ನೆರಳು ಕೊಡಿ. ಕೆಡಹುವ ಕೆಲಸ ಮಾಡಬೇಡಿ ಎಂದು ಸಲಹೆ ನೀಡಿದರು. ಪೂಜೆ ಸಲ್ಲಿಕೆ ವೇಳೆ ಮಾಜಿ ಸಚಿವರದ ಜಿ.ಟಿ.ದೇವೇಗೌಡ, ಬಂಡಪ್ಪ ಕಾಶಂಪುರ್, ಸಿ.ಎಸ್.ಪುಟ್ಟರಾಜು ಮುಂತಾದವರು ಹಾಜರಿದ್ದರು.





