ಹನೂರು: ತಾಲೂಕಿನ ಒಡೆಯರ ಪಾಳ್ಯ ಸಮೀಪದ ವಿ ಎಸ್ ದೊಡ್ಡಿ ಗ್ರಾಮದ ಜಮೀನೊಂದರಲ್ಲಿ ಸಿದ್ದಾಚಾರಿ ಎಂಬುವರಿಗೆ ಸೇರಿದ ಎರಡು ಇಲಾಚಿ ಕರುಗಳ ಮೇಲೆ ಚಿರತೆ ದಾಳಿ ನಡೆಸಿದ ಪರಿಣಾಮ ಕರುಗಳು ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.
ಕಳೆದ ಎರಡು ದಿನಗಳಿಂದ ಸಿದ್ದಾಚಾರಿ ಎಂಬುವರಿಗೆ ಸೇರಿದ ಜಮೀನಿನ ಕೊಟ್ಟಿಗೆಯಲ್ಲಿ ಕಟ್ಟು ಹಾಕಲಾಗಿದ್ದ ಐದು ಇಲಾಚಿ ಕರುಗಳ ಪೈಕಿ ಕಳೆದ ಎರಡು ದಿನಗಳಿಂದ ಪ್ರತಿ ದಿನಕ್ಕೊಂದು ಕರುವನ್ನು ತಿಂದು ಹಾಕಿದೆ.
ಮೊದಲನೆಯ ದಿನ ಚಿರತೆ ಕರುವನ್ನು ಎಳೆದೊಯ್ದು ಅರ್ಧ ತಿಂದಿತ್ತು. ಈ ವೇಳೆ ರೈತ ಸಿದ್ದಾಚಾರಿ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ ಪರಿಣಾಮ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿ, ಮತ್ತೆ ಇನ್ನೆರಡು ದಿನ ಚಿರತೆ ಬರುವುದಿಲ್ಲ ಎಂದು ತಿಳಿಸಿದ್ದರು.
ಆದರೆ ಮರುದಿನವೇ ಇನ್ನೊಂದು ಇಲಾಚಿ ಕರುವನ್ನು ಎಳೆದೊಯ್ದಿದೆ. ಈ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳು ಹಿರಿಯ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಕರುಗಳ ಮೇಲೆ ಚಿರತೆ ದಾಳಿ ನಡೆಸಿರುವ ಘಟನೆ ತಿಳಿಯುತ್ತಿದ್ದಂತೆ ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಹರೀಶ್ ಸಿದ್ದಾಚಾರಿ ಜಮೀನಿಗೆ ಸಿಸಿ ಕ್ಯಾಮೆರಾ ವನ್ನು ಸಂಜೆ 6 ಗಂಟೆಯ ವೇಳೆಗೆ ಅಳವಡಿಸಿದ್ದಾರೆ.
ಕ್ಯಾಮರ ಅಳವಡಿಸಿದ 40 ನಿಮಿಷದಲ್ಲಿಯೇ ಚಿರತೆ ಮತ್ತೊಮ್ಮೆ ಕೊಟ್ಟಿಗೆಯ ಬಳಿ ಬಂದಿರುವುದು ಸೆರೆಯಾಗಿದೆ. ಇನ್ನಾದರೂ ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆ ಹಿಡಿಯಲು ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಮೃತಪಟ್ಟಿರುವ ಎರಡು ಇಲಾಚಿ ಕರುಗಳಿಗೆ ಅರಣ್ಯ ಇಲಾಖೆಯಿಂದ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಲಾಗಿದೆ.
ಕಳೆದ ನಾಲ್ಕು ದಿನಗಳಿಂದ ಸತತವಾಗಿ ಚಿರತೆ ದಾಳಿ ನಡೆಸಿ ಮೇಕೆ ನಾಯಿ ಕರುಗಳನ್ನು ತಿಂದು ಹಾಕಿದೆ. ತೋಟದ ಮನೆಯಲ್ಲಿ ಇರುವ ವಯೋವೃದ್ಧರು ಹಾಗೂ ಚಿಕ್ಕ ಮಕ್ಕಳುಗಳನ್ನು ಪೋಷಕರು ಸಂಜೆಯ ನಂತರ ತಿರುಗಾಡಲು ಬಿಡಬಾರದು. ಅರಣ್ಯ ಇಲಾಖೆ ಅಧಿಕಾರಿಗಳು ಬೋನು ಇಟ್ಟು ಹೆಚ್ಚಿನ ಸಿಬ್ಬಂದಿಗಳನ್ನು ನೇಮಿಸಿ ಶೀಘ್ರವೇ ಚಿರತೆ ಸೆರೆ ಹಿಡಿಯಬೇಕು ಎಂದು ಪರಿವರ್ತನಾ ಅರಣ್ಯ ಸಮಿತಿ ಅಧ್ಯಕ್ಷರು ಎನ್ ಕೃಷ್ಣಮೂರ್ತಿ ಆಗ್ರಹಿಸಿದ್ದಾರೆ.





