Mysore
28
haze

Social Media

ಗುರುವಾರ, 01 ಜನವರಿ 2026
Light
Dark

ದಂಡ ಕಟ್ಟುವಂತೆ ದಂಪತಿಗೆ ಕಿರುಕುಳ : ಸಂಚಾರ ಪೊಲೀಸರ ನಡೆಗೆ ಹೆಚ್‌ಡಿಕೆ ಆಕ್ರೋಶ

ಮಂಡ್ಯ: ಏಳೆಂಟು ತಿಂಗಳ ಹಸುಗೂಸುವಿನೊಂದಿಗೆ ಜಿಲ್ಲಾಸ್ಪತ್ರೆಗೆ ಬೈಕ್‌ನಲ್ಲಿ ತೆರಳುತ್ತಿದ್ದ ದಂಪತಿಯನ್ನು ತಡೆದು ದಂಡ ಪಾವತಿಸುವವರೆಗೂ ತಾಯಿ ಮತ್ತು ಮಗುವನ್ನು ವಾಹನ ದಟ್ಟಣೆಯ ರಸ್ತೆ ಬದಿಯ ಪಾದಾಚಾರಿ ಮಾರ್ಗದಲ್ಲಿ ಕೂರಿಸಿದ ಸಂಚಾರ ಪೊಲೀಸರ ನಡೆಯು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಅವರು ಆಕ್ರೋಶ ಹೊರಹಾಕಿ ಸರಣಿ ಟ್ವೀಟ್‌ ಮಾಡಿದ್ದಾರೆ.

ಮಂಡ್ಯದಲ್ಲಿ ಮಗುವಿನೊಂದಿಗೆ ಆಸ್ಪತ್ರೆಗೆ ತೆರಳುತ್ತಿದ್ದ ದಂಪತಿಯನ್ನು ಅಡ್ಡಗಟ್ಟಿ ಪೊಲೀಸರು ಕಿರುಕುಳ ನೀಡಿದ್ದು ಖಂಡನೀಯ. ಮಾನವೀಯತೆಯನ್ನೇ ಅಣಕಿಸುವ ಇಂಥ ಘಟನೆಗಳು ರಾಜ್ಯದಲ್ಲಿ ಪದೇಪದೆ ಘಟಿಸುತ್ತಿರುವುದು ಆಘಾತಕಾರಿ. ರಾಜ್ಯದಲ್ಲಿ ಪೊಲೀಸ್ ವ್ಯವಸ್ಥೆಯನ್ನು ಬಿಜೆಪಿ ಸರಕಾರ ಹಾಳು ಮಾಡಿದೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿ ಎಂದು ಆಕ್ರೋಶ ಹೊರಹಾಕಿದ್ದಾರೆ.

ಆಸ್ಪತ್ರೆಗೆ ಬೈಕ್‌ನಲ್ಲಿ ಮಗುವನ್ನು ಕರೆದುಕೊಂಡು ಹೋಗುತ್ತಿದ್ದ ತಂದೆ-ತಾಯಿಯನ್ನು ಅಡ್ಡಗಟ್ಟಿ ಹೆಲ್ಮೆಟ್ ಇಲ್ಲ ಎನ್ನುವ ಕಾರಣಕ್ಕೆ ಬೈಕಿನ ಕೀ ಕಿತ್ತುಕೊಂಡು ಪೊಲೀಸರು ಕಿರುಕುಳ ನೀಡಿದ ಘಟನೆಯ ಘಟನೆಯ ವಿಡಿಯೋ ತುಣುಕುಗಳನ್ನು ನೋಡಿ ನನಗೆ ಬಹಳ ಸಂಕಟವಾಯಿತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಮಗುವಿನ ಅನಾರೋಗ್ಯದಿಂದ ಆತಂಕಗೊಂಡಿದ್ದ ದಂಪತಿಯೊಂದಿಗೆ ಪೊಲೀಸರು ಹೀಗೆ ನಡೆದುಕೊಂಡಿದ್ದು ಅಕ್ಷಮ್ಯ ಮತ್ತು ಹೇಯ. “ದಮ್ಮಯ್ಯ, ನಮ್ಮಲ್ಲಿ ಹಣವಿಲ್ಲ, ದಯವಿಟ್ಟು ಬಿಟ್ಟುಬಿಡಿ” ಎಂದು ಬೇಡಿಕೊಂಡರೂ ಪೊಲೀಸರು ದಯೆ ತೋರಿಸಿಲ್ಲ. ದಂಡದ ಮಾತು ಹೇಳುತ್ತಲೇ ಪೊಲೀಸರು ಹಣಕ್ಕಾಗಿ ಪೀಡಿಸಿರುವುದು ಪೈಶಾಚಿಕ ನಡವಳಿಕೆ, ಇಲಾಖೆಯೇ ತಲೆ ತಗ್ಗಿಸುವಂತದ್ದು ಎಂದು ಇಲಾಖೆಯ ವಿರುದ್ದ ಕಿಡಿಕಾರಿದ್ದಾರೆ.

ಹಣವಿಲ್ಲದೇ ದಂಪತಿ ರಸ್ತೆಯಲ್ಲೇ ಪರದಾಡಿದ್ದಾರೆ. ಆ ಮಗುವಿನ ತಂದೆ ಹಣಕ್ಕಾಗಿ ಒದ್ದಾಡಿದ್ದಾರೆ, ಆ ತಾಯಿ ಅನಾರೋಗ್ಯಕ್ಕೆ ತುತ್ತಾಗಿದ್ದ ಮಗುವನ್ನು ರಸ್ತೆ ನಡುವೆಯೇ ಮಡಿಲಲ್ಲಿಟ್ಟುಕೊಂಡು ಅನುಭವಿಸಿದ ವೇದನೆ ಬಿಜೆಪಿ ಸರಕಾರದ ಕೆಟ್ಟ ಆಡಳಿತಕ್ಕೆ ಹಿಡಿದ ಕನ್ನಡಿ, ಮನುಷ್ಯತ್ವ ಸತ್ತ ಸರಕಾರದ ಇನ್ನೊಂದು ಕರಾಳಮುಖ ಎನ್ನದೇ ವಿಧಿ ಇಲ್ಲ

ಆ ಮಗುವಿನ ತಂದೆ ಕೊನೆಗೂ ಗೆಳೆಯರೊಬ್ಬರಿಂದ ಹಣ ಪಡೆದು ತಮ್ಮ ಬ್ಯಾಂಕ್ ಖಾತೆಗೆ ಹಾಕಿಸಿಕೊಂಡು ದಂಡ ಕಟ್ಟಿದ ಮೇಲೆ ಪೊಲೀಸರು ಬೈಕ್ ಬಿಟ್ಟು ಕಳಿಸಿದ್ದಾರೆ.
ಬದಲಿಗೆ ದಂಡದ ರಸೀತಿ ಕೊಟ್ಟು, ಆ ನಂತರ ದಂಡ ಕಟ್ಟಿ ಎಂದು ಪೊಲೀಸರು ಹೇಳಬಹುದಿತ್ತು. ಹಾಗೆ ಮಾಡದೇ ದಂಡಪ್ರಯೋಗದ ಹೆಸರಿನಲ್ಲಿ ಪೊಲೀಸರು ಹಿಂಸೆ ನೀಡಿದ್ದಾರೆ.

ಕೂಡಲೇ ಆ ಪೊಲೀಸ್ ಸಿಬ್ಬಂದಿಯ ವಿರುದ್ಧ ರಾಜ್ಯ ಸರಕಾರ ಕಠಿಣ ಕ್ರಮ ವಹಿಸಬೇಕು ಹಾಗೂ ಇಂಥ ಮನಃಸ್ಥಿತಿಯ ಪೊಲೀಸ್ ಸಿಬ್ಬಂದಿಯ ಮನಃಪರಿವರ್ತನೆ ಮಾಡಬೇಕು. ಹಿರಿಯ ಅಧಿಕಾರಿಗಳು ಈ ಬಗ್ಗೆ ಹೆಚ್ಚು ಮುತುವರ್ಜಿ, ಎಚ್ಚರಿಕೆ ವಹಿಸಬೇಕು. ಅಲ್ಲದೆ; ಗೃಹ ಸಚಿವರು ಈ ಬಗ್ಗೆ ಜನರಿಗೆ ಉತ್ತರ ನೀಡಬೇಕಲ್ಲದೆ, ನೊಂದ ದಂಪತಿಗೆ ಸಾಂತ್ವನ ಹೇಳಲೇಬೇಕು. ಇಂಥ ಘಟನೆಗಳು ರಾಜ್ಯದಲ್ಲಿ ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಹಾಗೂ ಪೊಲೀಸ್ ವ್ಯವಸ್ಥೆಯನ್ನು ಜನಸ್ನೇಹಿಯನ್ನಾಗಿ ಮಾಡಲು ಎಲ್ಲಾ ಕ್ರಮಗಳನ್ನು ತುರ್ತಾಗಿ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!