ಮೈಸೂರು: ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ಮಂಗಳವಾರ ಸೆರೆ ಹಿಡಿಯಲಾದ ಎರಡು ಹೆಣ್ಣು ಹುಲಿಗಳಿಗೆ ನಗರದ ಕೂರ್ಗಳ್ಳಿ ಪುನರ್ವಸತಿ ಕೇಂದ್ರದಲ್ಲಿ ಮೃಗಾಲಯದ ಪಶುವೈದ್ಯಾಧಿಕಾರಿಗಳು ಚಿಕಿತ್ಸೆ ನೀಡಿದ್ದಾರೆ.
ನಾಗರಹೊಳೆಯ ಅಂತರಸಂತೆ ವಲಯದಲಿ ಸೆರೆ ಹಿಡಿದ 9ವರ್ಷದ ಹೆಣ್ಣು ಹುಲಿ, ನಾಣಚ್ಚಿ ಬಳಿ ಸೆರೆ ಹಿಡಿದ 12ವರ್ಷದ ಹೆಣ್ಣು ಹುಲಿಗೆ ಸೆರೆ ಹಿಡಿಯುವ ವೇಳೆ ಹೆಚ್ಚು ಗಾಯವಾದ ಹಿನ್ನೆಲೆಯಲ್ಲಿ ಮೃಗಾಲಯದ ಪಶುವೈದ್ಯರು ಚಿಕಿತ್ಸೆ ನೀಡಿದ್ದಾರೆ. ಹಾಗೆಯೇ, ಟಿ. ನರಸೀಪುರ ಬಳಿ ಬೋನಿಗೆ ಬಿದ್ದ ಚಿರತೆ ಆರೋಗ್ಯವನ್ನು ತಪಾಸಣೆ ಮಾಡಿ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ.
ಮೈಸೂರು ಮೃಗಾಲಯದಲ್ಲಿ ಸ್ಥಳ ಕಡಿಮೆ ಇರುವುದರಿಂದ ಸೆರೆ ಸಿಕ್ಕ ಎರಡು ಹೆಣ್ಣು ಹುಲಿಗಳಲ್ಲಿ ಒಂದು ಹುಲಿಯನ್ನು ಬನ್ನೇರುಘಟ್ಟಕ್ಕೆ ಸ್ಥಳಾಂತರ ಮಾಡಲಾಗುವುದು. ಒಂದು ಹುಲಿಯನ್ನು ಮೈಸೂರು ಮೃಗಾಲಯದಲ್ಲಿ ಉಳಿಸಿಕೊಳ್ಳಲಾಗುವುದು ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ ತಿಳಿಸಿದರು.
ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ್ ಅವರು ಕೂರ್ಗಳ್ಳಿ ಪುನರ್ವಸತಿ ಕೇಂದ್ರಕ್ಕೆ ಭೇಟಿ ನೀಡಿ ಹುಲಿಗಳಿಗೆ ಚಿಕಿತ್ಸೆ ನೀಡುವುದನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಪ್ರಾಧಿಕಾರದ ಅಧಿಕಾರಿಗಳು, ವೈದ್ಯಕೀಯ ಸಿಬ್ಬಂದಿಗಳು ಹಾಜರಿದ್ದರು.





