ತಾರಕದಲ್ಲಿ ಅನಾಥವಾದ ಹುಲಿ ಮರಿಗಳು ಪತ್ತೆ
ಅಂತರಸಂತೆ: ಎಚ್.ಡಿ.ಕೋಟೆ ತಾಲ್ಲೂಕಿನ ತಾರಕ ಸಮೀಪದ ಜಮೀನು ಒಂದರಲ್ಲಿ ಉರುಳಿಗೆ ಸಿಲುಕಿ ಮೃತಪಟ್ಟ ಹೆಣ್ಣು ಹುಲಿಯ ಮೂರು ಮರಿಗಳು ಪತ್ತೆಯಾಗಿದ್ದು, ಎಲ್ಲವೂ ಆರೋಗ್ಯದಿಂದಿರುವುದು ಕಂಡು ಬಂದಿದೆ.
ತಾಯಿ ಹುಲಿ ಉರುಳಿಗೆ ಸಿಲುಕಿ ಮೃತಪಟ್ಟ ಬಳಿಕ ಈ ಮೂರು ಹುಲಿ ಮರಿಗಳನ್ನು ರಕ್ಷಿಸಲು ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ ಕಾರ್ಯಾಚರಣೆ ವೇಳೆ ಪತ್ತೆಯಾಗದ ಹುಲಿ ಮರಿಗಳು ಅರಣ್ಯದಲ್ಲಿ ಅಳವಡಿಸಲಾದ ಕ್ಯಾಮೆರಾ ಟ್ಯ್ರಾಪಿಂಗ್ನಲ್ಲಿ ಸೆರೆಯಾಗಿವೆ.
ನಾಗರಹೊಳೆ ಅರಣ್ಯ ವ್ಯಾಪ್ತಿಯ ತಾಲ್ಲೂಕಿನ ಅಂತರಸಂತೆ ವನ್ಯಜೀವಿ ವಲಯಕ್ಕೆ ಹೊಂದಿಕೊಂಡಂತಿರುವ ತಾರಕ ಸಮೀಪದ ಜಮೀನಿನಲ್ಲಿ ನವೆಂಬರ್ 12ರಂದು ಕೊಳೆತ ಸ್ಥಿತಿಯಲ್ಲಿ ಸುಮಾರು 12-13 ವರ್ಷದ ಹೆಣ್ಣುಹುಲಿಯ ಕಳೇಬರ ಪತ್ತೆಯಾಗಿತ್ತು. ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಜಮೀನಿನಲ್ಲಿ ಕಾಡುಹಂದಿಗಾಗಿ ಹಾಕಿದ್ದ ಉರುಳಿಗೆ ಸಿಲುಕಿ ಹುಲಿ ಸಾವನ್ನಪ್ಪಿರುವುದು ಬೆಳಕಿಗೆ ಬಂದಿತ್ತು. ಆಗ ಅನಾಥವಾದ ಮೂರು ಹುಲಿ ಮರಿಗಳ ರಕ್ಷಣೆಯ ದೃಷ್ಟಿಯಿಂದ ಅರಣ್ಯ ಇಲಾಖೆ ಶೋಧ ಕಾರ್ಯಾಚರಣೆ ಕೈಗೊಂಡಿತ್ತು. ಇದೀಗ ಹುಲಿ ಮರಿಗಳು ಪತ್ತೆಯಾಗುವುದರೊಂದಿಗೆ ಅರಣ್ಯಾಧಿಕಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಹುಲಿಗಳ ಚಲನವಲನವನ್ನು ಇನ್ನೊಂದಷ್ಟು ಕಾಲ ಗಮನಿಸಿ ಇವುಗಳನ್ನು ಹಿಡಿದು ಸಂರಕ್ಷಿಸಬೇಕೇ ಅಥವಾ ಕಾಡಿನಲ್ಲಿಯೇ ಬಿಟ್ಟು ಸುರಕ್ಷತೆಯ ಬಗ್ಗೆ ಗಮನ ಹರಿಸಬೇಕೇ ಎಂದು ನಿರ್ಧಾರ ಕೈಗೊಳ್ಳಲಿದ್ದಾರೆ.





