Mysore
23
broken clouds
Light
Dark

ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವಂತಿದೆ ಈ ಸರ್ಕಾರಿ ಶಾಲೆ

By – ಪ್ರಶಾಂತ್‌ ಎಸ್‌ 

ಸರ್ಕಾರಿ ಶಾಲೆ ಎಂದರೆ ಅಲ್ಲಿ ಸೌಲಭ್ಯಗಳಿಲ್ಲ. ಮಕ್ಕಳ ಶೈಕ್ಷಣಿಕ ಪ್ರಗತಿ ಸಾಧ್ಯವಿಲ್ಲ ಎಂದು ಎಷ್ಟೋ ಪೋಷಕರು ಸಾಲ ಮಾಡಿಯಾದರೂ ತಮ್ಮ ಮಕ್ಕಳನ್ನು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಓದಿಸಬೇಕು ಅಂದುಕೊಳ್ಳುತ್ತಾರೆ.
ಪೋಷಕರ ಇಂತಹ ಮನಸ್ಥಿತಿಯನ್ನು ಬದಲಾಯಿಸುವ ಒಂದಿಷ್ಟು ಸರ್ಕಾರಿ ಶಾಲೆಗಳು ನಮ್ಮಲ್ಲಿದ್ದು, ಇರುವ ಸೌಲಭ್ಯಗಳ ಸಮರ್ಪಕ ಬಳಕೆ ಮತ್ತು ಗುಣಮಟ್ಟದ ಶಿಕ್ಷಣದಿಂದಾಗಿ ಖಾಸಗಿ ಶಾಲೆಗಳಿಗೆ ಸಡ್ಡು ಹೊಡೆದು ನಿಂತಿವೆ. ಅದರಲ್ಲಿ ಒಂದು ಮುಖ್ಯಮಂತ್ರಿ ತವರು ಕ್ಷೇತ್ರದ ಕೀಳನಪುರ ಗ್ರಾಮದ ಸರ್ಕಾರಿ ಮಾದರಿ ಕಿರಿಯ ಪ್ರಾಥಮಿಕ ಶಾಲೆ.

ಈ ಶಾಲೆಯ ಮುಖ್ಯ ಆಕರ್ಷಣೆಯೇ ಇಲ್ಲಿನ ಕಟ್ಟಡಕ್ಕೆ ಹಚ್ಚಿರುವ ಬಣ್ಣ. ರೈಲಿನ ಬೋಗಿಗಳಂತೆ ಶಾಲಾ ಕೊಠಡಿಗಳಿಗೆ ಬಣ್ಣ ಹಚ್ಚಲಾಗಿದ್ದು, ಇದು ವಿದ್ಯಾರ್ಥಿಗಳನ್ನು ಆಕರ್ಷಿಸಿದೆ. ಶಾಲೆಯ ಈ ವಿನೂತನ ಪ್ರಯತ್ನ ಜತೆಗೆ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಮತ್ತು ಸೌಕರ್ಯಗಳ ಸಮಪರ್ಕ ಬಳಕೆಗೆ ಒತ್ತು ನೀಡಿರುವ ಪರಿಣಾಮ ಶಾಲೆ ಅಭಿವೃದ್ಧಿಯತ್ತ ಸಾಗುತ್ತಿದೆ.

ಇನ್ನು ಶಾಲೆ ಕಾಂಪೌಂಡ್‌ನಲ್ಲಿ ಮೂಡಿರುವ ಬಣ್ಣದ ಚಿತ್ತಾರ, ಬರಹಗಳು ಮತ್ತಷ್ಟು ಆಕರ್ಷಣೀಯ. ಈ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಎನ್.ಮಾಲಂಗಿ ಸುರೇಶ್ ಸರ್ಕಾರ ನೀಡುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಜತೆಗೆ ದಾನಿಗಳ ನೆರವಿನಿಂದ ಶಾಲೆಗೆ ಈ ವಿನ್ಯಾಸ ನೀಡಿದ್ದಾರೆ. ಈ ಪ್ರಯತ್ನಕ್ಕೆ ಎಸ್ ಡಿಎಂಸಿ ಸಹಕಾರ, ಗ್ರಾಮ, ಶಿಕ್ಷಣ ಇಲಾಖೆಯ ಪ್ರೋತ್ಸಾಹವೂ ಇದೆ.

ಸದ್ಯ ಈ ಶಾಲೆಯಲ್ಲಿ 2022-23ನೇ ಸಾಲಿನಲ್ಲಿ ಒಂದರಿಂದ ಏಳನೇ ತರಗತಿವರೆಗೆ 71 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಮುಂದಿನ ಬಾರಿ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ. ಸ್ಥಳೀಯ ಕಲಾವಿದ ಲೋಕೇಶ್ ಕೈಚಳಕದಿಂದ ರೈಲು ಬೋಗಿಯ ಶಾಲೆ ಅಂದವಾಗಿ ಮೂಡಿಬಂದಿದೆ. ರೈಲು ಇಂಜಿನ್, ಬೋಗಿ, ರೈಲಿನ ಕಿಟಕಿಯ ಬಣ್ಣ ಬಳಿಯಲಾಗಿದ್ದು, ಮಕ್ಕಳು ಪ್ರಯಾಣಿಸುತ್ತಲೇ ವಿದ್ಯಾಭ್ಯಾಸ ಮಾಡುವಂತಿದೆ.

ಇನ್ನು ಶಾಲೆಯಲ್ಲಿ ಉತ್ತಮ ಕಲಿಕಾ ಕೊಠಡಿ, ಹೈಟೆಕ್ ಶೌಚಾಲಯ, ಅಕ್ಷರ ದಾಸೋಹ ಕಟ್ಟಡ ಹೊಂದಿದೆ. ಶಾಲಾ ಅಂಗಳಕ್ಕೆ ಇಂಟರ್ಲಾಕ್ ಅಳವಡಿಸಿದ್ದು, ಉದ್ಯಾನವನ ನಿರ್ವಹಣೆ ಮಾಡಲಾಗಿದೆ. ಶಾಲೆಯಲ್ಲಿ ಕಂಪ್ಯೂಟರ್ ಶಿಕ್ಷಣವನ್ನೂ ನೀಡಲಾಗುತ್ತಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ