ಮೈಸೂರು: ಬಿಜೆಪಿಯಲ್ಲಿ ಯಾರಿಗೂ ಕಿರುಕುಳ ನೀಡುವ ವಾತಾವರಣ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮನ್ನು ಪಕ್ಷದಿಂದ ಬಿಡಿಸಲು ಕಿರುಕುಳ ನೀಡಲಾಗುತ್ತಿದೆ ಎಂಬ ಶಾಸಕ ಎಸ್.ಎ.ರಾಮದಾಸ್ ಆರೋಪಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದರು. ರಾಮದಾಸ್ ಹಿರಿಯ ನಾಯಕರಾಗಿದ್ದು, ತಮ್ಮ ಸುದೀರ್ಘ ರಾಜಕಾರಣದಲ್ಲಿ ಯಾರಿಗೂ ಕಿರುಕುಳ ನೀಡಿಲ್ಲ. ಅವರು ಬೇರೆಯವರಿಗೆ ಕಿರುಕುಳ ನೀಡಿಲ್ಲ ಎಂದ ಮೇಲೆ ಅವರಿಗೆ ಯಾರು ಕಿರುಕುಳ ನೀಡುತ್ತಾರೆ ಎಂದು ಮಾಧ್ಯಮದವರನ್ನೇ ಪ್ರಶ್ನಿಸಿದರು.
ಮಾಜಿ ಮಂತ್ರಿ ಹಾಗೂ ಅನುಭವ ರಾಜಕಾರಣಿಯಾಗಿರುವ ಎಸ್.ಎ. ರಾಮದಾಸ್ ಅವರಿಗೆ ಯಾರು ಕೂಡ ಮನಸ್ಸು ನೋಯಿಸುವ ಕೆಲಸ ಮಾಡುವುದಿಲ್ಲ ಎಂಬ ವಿಶ್ವಾಸ ಇದೆ. ನಾನು ಬಿಜೆಪಿಗೆ ಬಂದು ಮೂರು ವರ್ಷವಾಗಿದ್ದು, ನಾನು ಕಂಡಂತೆ ಬಿಜೆಪಿಯಲ್ಲಿ ಕಿರುಕುಳದ ವಾತಾವರಣ ಇಲ್ಲ. ರಾಮದಾಸ್ ನನಗಿಂತ ಹಳೆಯ ನಾಯಕರಾಗಿದ್ದು, ಈ ಬಗ್ಗೆ ಅವರಿಗೆ ಚೆನ್ನಾಗಿ ತಿಳಿದಿದೆ ಎಂದರು.
ಮೈಸೂರಿನ ಬಸ್ ತಂಗುದಾಣದ ವಿವಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷರ ಗಮನಕ್ಕೆ ಹೋಗಿದೆ. ಮುಖ್ಯಮಂತ್ರಿಗಳು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಎರಡು ದಿನಗಳಲ್ಲಿ ಸಮಸ್ಯೆ ಬಗೆ ಹರಿಯಲಿದೆ ಎಂದು ಹೇಳಿದರು.
ಮತದಾರರ ಪಟ್ಟಿ ಪರಿಷ್ಕೃರಣೆ ವಿವಾದ ಸಂಬಂಧ ಪ್ರತಿಕ್ರಿಯಿಸಿದ ಅವರು, ಮತದಾರರ ಪಟ್ಟಿಗೆ ಹೆಸರು ಸೇರಿಸುವುದು ಮತ್ತು ಹೆಸರು ಬಿಡುವುದು ನಿರಂತರ ಪ್ರಕ್ರಿಯೆ ಆಗಿದೆ. ಇಂದು ಈ ಬಡಾಬಣೆಯಲ್ಲಿ ಇರುವವರು ಮುಂದೆ ಬೇರೆ ಬಡಾವಣೆಗೆ ಹೋಗುತ್ತಾರೆ. ಆಗ ಮತದಾರರ ಪಟ್ಟಿಯಲ್ಲಿ ಬದಲಾವಣೆ ಮಾಡಿಸಿಕೊಳ್ಳುತ್ತಾರೆ. ಈ ಬಗ್ಗೆ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತರು ಉತ್ತರ ನೀಡಿದ್ದಾರೆ. ಮತದಾರರ ಪಟ್ಟಿಯಲ್ಲಿ ಎಷ್ಟು ಹೊಸ ಮತದಾರರು ಸೇರಿದ್ದಾರೆ. ಎಷ್ಟು ಮತದಾರರನ್ನು ತೆಗೆಯಲಾಗಿದೆ ಎಂದು ತಿಳಿಸಿದ್ದಾರೆ ಎಂದರು. ಅಭಿವೃದ್ಧಿ ಬಗ್ಗೆ ಪ್ರಶ್ನೆ ಮಾಡಲು ಕಾಂಗ್ರೆಸ್ ನಾಯಕರಿಗೆ ಏನು ಕಾಣುತ್ತಿಲ್ಲ. ಸದ್ಯ ಚುನಾವಣೆ ಹತ್ತಿರ ಬರುತ್ತಿರುವ ಕಾರಣ ಕುಂಟು ನೆಪ ಹೇಳಿಕೊಂಡು ಟೀಕೆ ಮಾಡುತ್ತಿದ್ದಾರೆ. ಕಾಂಗ್ರೆಸ್ನ ಯಾವ ಆಟವೂ ನಡೆಯುವುದಿಲ್ಲ ಎಂದರು. ಮಂಗಳೂರಿನಲ್ಲಿನ ಸ್ಛೋಟ ಸಂಬಂಧ ಪ್ರತಿಕ್ರಿಯಿಸಿದ ಅವರು, ನಗರ ಪೊಲೀಸ್ ಆಯುಕ್ತರು ಈ ಸಂಬಂಧ ಚರ್ಚೆ ನಡೆಸಿದ್ದಾರೆ. ಮೈಸೂರಿನಲ್ಲೂ ಬಿಗಿ ಭದ್ರತೆ ಕೈಗೊಳ್ಳುವಂತೆ ಸೂಚಿಸಲಾಗಿದೆ. ಮಂಗಳೂರಿನಲ್ಲೂ ಬಿಗಿ ಭದ್ರತೆ ಮಾಡಲಾಗಿದೆ ಎಂದರು.
ಮೈಸೂರಿನಲ್ಲಿ ಬಿಗಿ ಬಂದೋಬಸ್ತ್
ಮಂಗಳೂರಿನಲ್ಲಿ ನಡೆದ ಆಟೋ ಸ್ಟೋಟ ಪ್ರಕರಣ ಸಂಬಂಧ ಮೈಸೂರಿನಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನಿಗಾವಹಿಸಲಾಗಿದ್ದು, ಸೂಕ್ತ ಬಂದೋ ಬಸ್ತ್ ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು. ಈ ಸಂಬಂಧ ನಗರ ಪೊಲೀಸ್ ಆಯುಕ್ತರೊಂದಿಗೆ ಚರ್ಚೆ ನಡೆಸಲಾಗಿದೆ. ಅಗತ್ಯ ಬಿಗಿ ಭದ್ರತೆ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದರು.