Mysore
21
mist

Social Media

ಸೋಮವಾರ, 29 ಡಿಸೆಂಬರ್ 2025
Light
Dark

ಸೀಳು ನಾಯಿಗಳ ಬೇಟೆ ಹುಲಿರಾಯನ ಪಾಲಾಯಿತು…!

ನಾಗರಹೊಳೆ ಕಬಿನಿ ಹಿನ್ನೀರು ಪ್ರದೇಶದಲ್ಲಿ ಅಪರೂಪದ ದೃಶ್ಯ ಕಣ್ತುಂಬಿಕೊಂಡ ಸಫಾರಿ ಪ್ರವಾಸಿಗರು

ಮೈಸೂರು: ನಾಗರ ಹೊಳೆ ಅಭಯಾರಣ್ಯದ ಕಬಿನಿ ಹಿನ್ನೀರು ಪ್ರದೇಶದಲ್ಲಿ ಸೀಳು ನಾಯಿಗಳು (Wild Dogs) ಬೇಟೆಯಾಡಿದ ಕಡವೆ ಮರಿಯನ್ನು ಹುಲಿರಾಯ ಎಗರಿಸಿದ ಅಪರೂಪದ ದೃಶ್ಯವನ್ನು ಸಫಾರಿ ಪ್ರವಾಸಿಗರು ಗುರುವಾರ ಕಣ್ತುಂಬಿಕೊಂಡಿದ್ದಾರೆ.

ಡಿ.ಬಿ.ಕುಪ್ಪೆ ಮತ್ತು ಅಂತರಸಂತೆ ವಲಯ ವ್ಯಾಪ್ತಿಗೆ ಸೇರಿದ ಕೈಮರದಿಂದ ಬಿಸಿಲವಾಡಿಗೆ ಹೋಗುವ ಸಫಾರಿ ಹಾದಿಯಲ್ಲಿ ಕಂಡು ಬಂದ ಸುಮಾರು ಮೂರ್ನಾಲ್ಕು ನಿಮಿಷಗಳ ಈ ದೃಶ್ಯ ಸಫಾರಿ ಪ್ರವಾಸಿಗರು ಮಾತ್ರವಲ್ಲ ವನ್ಯಪ್ರೇಮಿಗಳ ಗಮನಸೆಳೆದಿದೆ.

ಸೀಳುನಾಯಿಗಳು ಹುಲಿ, ಚಿರತೆ ಮುಂತಾದ ಪ್ರಾಣಿಗಳ ಬೇಟೆಯನ್ನು ಎಗರಿಸಿ ತಾವು ಭಕ್ಷಿಸುವ ಘಟನೆಗಳು ಸಾಮಾನ್ಯ. ಗುಂಪಿನಲ್ಲಿ ಸಾಗುವ ಸೀಳು ನಾಯಿಗಳು ತಮಗಿಂತ ಬಲಿಷ್ಠವಾದ ಮೃಗಗಳು ಬೇಟೆಯಾಡಿದ ಮಾಂಸವನ್ನು ಉಪಾಯದಿಂದ ಕಬಳಿಸಿ ಹೊತ್ತೊಯ್ಯುತ್ತವೆ. ಆದರೆ ಈ ಕಬಿನಿ ಹಿನ್ನೀರು ಪ್ರದೇಶದಲ್ಲಿ ದಾಖಲಾದ ಘಟನೆಯಲ್ಲಿ ಸೀಳು ನಾಯಿಗಳು ಬೇಟೆಯಾಡಿದ ಕಡವೆ ಮರಿಯನ್ನು ಗಂಡು ಹುಲಿ ಬಂದು ಹೊತ್ತೊಯ್ದು ಭಕ್ಷಿಸಿದೆ.

ಈ ನಡುವೆ ಮರಿಯನ್ನು ಕಳೆದುಕೊಂಡ ಕಡವೆ, ಸೀಳು ನಾಯಿಗಳನ್ನು ಓಡಿಸುವ ಪ್ರಯತ್ನ ಮಾಡಿದರೂ ಸಫಲವಾಗುವುದಿಲ್ಲ. ಒಂದು ನಾಯಿಯನ್ನು ಓಡಿಸುವಷ್ಟರಲ್ಲಿ ಮತ್ತೊಂದು ಕಡೆಯಿಂದ ಸೀಳು ನಾಯಿಗಳು ಮರಿಯ ಮಾಂಸವನ್ನು ಭಕ್ಷಿಸಲಾರಂಭಿಸಿವೆ. ಅಂತಿಮವಾಗಿ ಸ್ಥಳಕ್ಕೆ ಹಾಜರಾದ ಹುಲಿರಾಯ ಕಡವೆ ಮಾಂಸವನ್ನು ಎತ್ತಿಕೊಂಡು ಹೋಗಿದೆ. ಸೀಳು ನಾಯಿಗಳ ಪೆಚ್ಚು ಮೋರೆ ಹಾಕಿಕೊಂಡು ಹುಲಿಯನ್ನು ನೋಡುತ್ತಾ ನಿಂತಿವೆ. ತಾಯಿ ಕಡವೆಯ ರೋದನ ಮುಂದುವರಿದಿದೆ.

ಜಂಗಲ್‌ ರೆಸಾರ್ಟ್ಸ್‌ ಬಸ್ಸಿನ ಚಾಲಕ ಸಿ. ಆರ್ . ನಾಗೇಶ್ ಅವರು ಈ ಅಪರೂಪದ ದೃಶ್ಯವನ್ನು ತಮ್ಮ ಮೊಬೈಲ್‌ ಮೂಲಕ ಈ ದೃಶ್ಯವನ್ನು ಸೆರೆ ಹಿಡಿದಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!