ಮೈಸೂರು: ಜಿಲ್ಲೆಯಲ್ಲಿ ಚಿರತೆ ಮತ್ತೋರ್ವರನ್ನು ಬಲಿ ಪಡೆದಿದೆ. ಬಯಲು ಶೌಚಕ್ಕೆ ತೆರಳಿದ್ದ 11 ವರ್ಷದ ಬಾಲಕನನ್ನು ಹೊತ್ತೊಯ್ದಿರುವ ಘಟನೆ ಟಿ.ನರಸೀಪುರ ತಾಲೂಕಿನ ಹೊರಳಹಳ್ಳ ಗ್ರಾಮದಲ್ಲಿ ಕಳೆದ ರಾತ್ರಿ ನಡೆದಿದೆ. ಬಾಲಕನಿಗಾಗಿ ಗ್ರಾಮಸ್ಥರು ಹುಡುಕಾಟ ಆರಂಭಿಸಿದ್ದು, ಆತಂಕ ಮನೆ ಮಾಡಿದೆ.ಗ್ರಾಮಸ್ಥರಿಂದ ಹುಡುಕಾಟ: 11 ವರ್ಷದ ಬಾಲಕ ಜಯಂತ್ ಕಳೆದ ರಾತ್ರಿ ಬಯಲು ಶೌಚಕ್ಕಾಗಿ ಮನೆಯಿಂದ ಹೊರ ಹೋಗಿದ್ದ. ಈ ವೇಳೆ ಚಿರತೆ ದಾಳಿ ಮಾಡಿ ಎಳೆದೊಯ್ದಿದೆ. ಗ್ರಾಮಸ್ಥರಿಗೆ ವಿಷಯ ಗೊತ್ತಾಗುತ್ತಿದ್ದಂತೆ ರಾತ್ರಿಯಿಡೀ ಶೋಧ ಕೈಗೊಂಡಿದ್ದಾರೆ. ಆದ್ರೆ ಬಾಲಕ ಪತ್ತೆಯಾಗಿಲ್ಲ. ಗ್ರಾಮದಲ್ಲಿ ಆತಂಕ ಮತ್ತು ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು ರಾತ್ರಿಯೇ ಸ್ಥಳಕ್ಕೆ ಶಾಸಕರು ಮತ್ತು ಡಿಸಿ ಆಗಮಿಸಿದ್ದರು.
ಗ್ರಾಮಕ್ಕೆ ರಾತ್ರಿಯೇ ಶಾಸಕ, ಡಿಸಿ ಭೇಟಿ:
ವಿಷಯ ಗೊತ್ತಾಗುತ್ತಿದ್ದಂತೆ ಶಾಸಕ ಅಶ್ವಿನ್ ಕುಮಾರ್, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ಗ್ರಾಮಕ್ಕೆ ಆಗಮಿಸಿ, ಜನರಿಗೆ ಧೈರ್ಯ ತುಂಬಿದರು. ಚಿರತೆ ಹಾವಳಿಯಿಂದ ಜನರು ಆಕ್ರೋಶಗೊಂಡಿದ್ದರಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಅರಣ್ಯಾಧಿಕಾರಿಗಳು ಕೂಡ ಸ್ಥಳದಲ್ಲಿದ್ದರು.
ಚಿರತೆಗೆ 2 ತಿಂಗಳಲ್ಲಿ ನಾಲ್ವರು ಬಲಿ:
ಮೈಸೂರು ಸೇರಿ ಕೆಲವು ಜಿಲ್ಲೆಗಳಲ್ಲಿ ಇತ್ತೀಚೆಗೆ ಚಿರತೆ ದಾಳಿ ಹೆಚ್ಚುತ್ತಿದೆ. ಮೈಸೂರಲ್ಲೇ ಎರಡು ತಿಂಗಳಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ.





