ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಐಪಿಎಸ್ ಅಧಿಕಾರಿ ಡಿ. ರೂಪಾ ಅವರ ಕಿತ್ತಾಟ ಇದೀಗ ಸುಪ್ರೀಂ ಹಂತದವರೆಗೂ ತಲುಪಿದೆ. ಡಿ ರೂಪಾ ಅವರು ರೋಹಿಣಿ ಸಿಂಧೂರಿ ಅವರ ಆಕ್ಷೇಪಾರ್ಹ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಹೀಗಾಗಿ ರೂಪಾ ವಿರುದ್ಧ ರೋಹಿಣಿ ಸಿಂಧೂರಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರು.
ಈ ಮಾನನಷ್ಟ ಮೊಕದ್ದಮೆಯನ್ನು ರದ್ದುಗೊಳಿಸಬೇಕೆಂದು ಡಿ ರೂಪಾ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಈ ಕುರಿತು ಇಂದು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿದೆ. ರೂಪಾ ಪರ ವಾದ ಮಂಡಿಸಿದ ವಕೀಲರು ರೋಹಿಣಿ ಸಿಂಧೂರಿ ಅವರು ಪುರುಷ ಅಧಿಕಾರಿಗಳಿಗೆ ತಮ್ಮ ಫೋಟೊಗಳನ್ನು ಕಳುಹಿಸುತ್ತಾರೆ ಎಂದು ಆರೋಪಿಸಿದರು.
ಈ ವೇಳೆ ಮಧ್ಯ ಪ್ರವೇಶಿಸಿದ ಸುಪ್ರೀಂ ಕೋರ್ಟ್ ಈ ರೀತಿಯ ವಾದಗಳನ್ನು ಆಲಿಸಿ ನಾವು ನಿಮ್ಮ ಅರ್ಜಿಯನ್ನು ಪರಿಗಣಿಸುತ್ತೇವೆ ಎಂದು ಭಾವಿಸಬೇಡಿ ಎಂದಿದೆ. ನಾವು ಇಲ್ಲಿ ಸರ್ಕಾರ ನಡೆಸುತ್ತಿಲ್ಲ ಹಾಗೂ ನ್ಯಾಯಾಲಯದಲ್ಲಿ ಭಾವನೆಗಳಿಗೆ ಬೆಲೆಯಿಲ್ಲ ಎಂಬುದನ್ನು ಇಬ್ಬರೂ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿತು.
ಬಳಿಕ ತನ್ನ ತೀರ್ಮಾನವನ್ನು ಪ್ರಕಟಿಸಿದ ಸುಪ್ರೀಂ ನಾಳೆ ಒಳಗೆ ರೋಹಿಣಿ ಸಿಂಧೂರಿ ಕುರಿತು ಪ್ರಕಟಿಸಿರುವ ಪೋಸ್ಟ್ ಡಿಲೀಟ್ ಮಾಡಿ, ಪೋಸ್ಟ್ ಡಿಲೀಟ್ ಮಾಡಲು ಇಷ್ಟವಿಲ್ಲವಾದರೆ ಪೋಸ್ಟ್ ಹಿಂಪಡೆಯಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಪ್ರಕಟಿಸಬಹುದು ಎಂದು ತಿಳಿಸಿದರು.
ಏನಿದು ಆಕ್ಷೇಪಾರ್ಹ ಪೋಸ್ಟ್?
ಇದೇ ವರ್ಷದ ಫೆಬ್ರವರಿ 14 ಹಾಗೂ 16ರಂದು ಐಪಿಎಸ್ ಅಧಿಕಾರಿ ಡಿ ರೂಪಾ ಅವರು ತಮ್ಮ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ರೋಹಿಣಿ ಸಿಂಧೂರಿ ಅವರ ಫೋಟೊಗಳನ್ನು ಹಂಚಿಕೊಂಡು ಹಲವು ಆರೋಪಗಳನ್ನು ಮಾಡಿದ್ದರು. ಈ ಆರೋಪಗಳು ತುಂಬಾ ಕೀಳು ಮಟ್ಟದಲ್ಲಿವೆ ಎಂದು ಆಕ್ರೋಶ ಹೊರಹಾಕಿದ್ದ ರೋಹಿಣಿ ಸಿಂಧೂರಿ ಕ್ರಿಮಿನಲ್ ಮೊಕದ್ದಮೆ ಹೂಡಿದ್ದರು.



