Mysore
27
scattered clouds

Social Media

ಮಂಗಳವಾರ, 16 ಡಿಸೆಂಬರ್ 2025
Light
Dark

ಕೊಟ್ಟ ಮಾತಿನಂತೆ ಹೋರಾಟ ನಡೆಸಿದ್ದೇನೆ : ಸುಮಲತಾ

ಸಕ್ಕರೆ ಕಾರ್ಖಾನೆ ಆರಂಭ, ಕಲ್ಲು ಗಣಿಗಾರಿಕೆ ಸ್ಥಗಿತ

ಪಾಂಡವಪುರ: ಕೊಟ್ಟ ಮಾತಿನಂತೆ ಜಿಲ್ಲೆಯ ಎರಡು ಸಕ್ಕರೆ ಕಾರ್ಖಾನೆಗಳ ಆರಂಭ ಹಾಗೂ ಅಕ್ರಮ ಕಲ್ಲು ಗಣಿಗಾರಿಕೆಯನ್ನು ಸ್ಥಗಿತಗೊಳಿಸಲು ಹೋರಾಟ ನಡೆಸಿದ್ದೇನೆ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದರು.

ಪಟ್ಟಣದ ಟಿಎಪಿಸಿಎಂಎಸ್ ರೈತ ಸಭಾಂಗಣದಲ್ಲಿ ಮಂಗಳವಾರ ರಾತ್ರಿ ನಡೆದ ರೈತ ಸಂಘದ ಕಾರ್ಯಕರ್ತರ ಸಮಾಲೋಚನ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೆಆರ್‌ಎಸ್ ಅಣೆಕಟ್ಟೆಯ ಉಳಿವಿಗಾಗಿ ಅಕ್ರಮ ಕಲ್ಲುಗಣಿಗಾರಿಕೆಯ ವಿರುದ್ಧ ಹೋರಾಟ ನಡೆಸುತ್ತಿದ್ದೇನೆ. ಕಲ್ಲು ಗಣಿಗಾರಿಕೆ ನಡೆಸಿರುವ ಸಾಕಷ್ಟು ಗಣಿ ಮಾಲೀಕರು ಸರ್ಕಾರಕ್ಕೆ ಕೋಟ್ಯಂತರ ರೂ.

ರಾಯಲ್ಟಿಯನ್ನೇ ಕಟ್ಟದೆ ವಂಚಿಸಿದ್ದಾರೆ. ಅಕ್ರಮ ಕಲ್ಲುಗಣಿಗಾರಿಕೆಯಲ್ಲಿ ಸಾಕಷ್ಟು ಮಂದಿ ಅಧಿಕಾರಿಗಳು ಸಹ ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.

ಲೋಕಸಭಾ ಚುನಾವಣೆಯ ಗೆಲುವಿನಲ್ಲಿ ಜಿಲ್ಲೆಯ ರೈತ ಸಂಘದ ಕಾರ್ಯಕರ್ತರ ಪಾತ್ರ ಪ್ರಮುಖವಾಗಿದೆ. ಹಾಗಾಗಿ ರೈತರ ಋಣ ತೀರಿಸಬೇಕು ಎಂಬ ಉದ್ದೇಶದಿಂದ ರೈತ ಸಂಘದವರು ಒತ್ತಾಯಿಸಿದ ಜಿಲ್ಲೆಯ ಎರಡು ಕಾರ್ಖಾನೆಗಳ ಆರಂಭ ಹಾಗೂ ಅಕ್ರಮ ಕಲ್ಲು ಗಣಿಗಾರಿಕೆಯ ವಿರುದ್ದ ಸಂಸತ್ತಿನಲ್ಲಿ ಚರ್ಚಿದ್ದೇನೆ. ಅದರಂತೆ ಜಿಲ್ಲೆಯ ಎರಡು ಸಕ್ಕರೆ ಕಾರ್ಖಾನೆಗಳು ಆರಂಭಗೊಂಡಿವೆ. ಮೈಶುಗರ್ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲಿಯೇ ನಡೆಸಬೇಕು ಎನ್ನುವ ರೈತರ ಒತ್ತಾಯದಂತೆ ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ಒತ್ತಾಯಿಸಿ, ಸರ್ಕಾರದ ಸ್ವಾಮ್ಯದಲ್ಲಿಯೇ ಕಾರ್ಖಾನೆಯನ್ನು ಆರಂಭಿಸಲಾಗಿದೆ. ಆ ಮೂಲಕ ಜಿಲ್ಲೆಯ ರೈತರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇನೆ ಎನ್ನುವ ಸವಾಧಾನ, ನೆಮ್ಮದಿ ನನಗಿದೆ ಎಂದು ಹೇಳಿದರು.

ನನ್ನ ಚುನಾವಣೆಯಲ್ಲಿ ರೈತ ಸಂಘದ ಕಾರ್ಯಕರ್ತರು ಹೇಗೆ ನನ್ನೊಡನೆ ನಿಂತು ಶ್ರಮಿಸಿದರೊ ಅದೇ ರೀತಿ ದರ್ಶನ್ ಪುಟ್ಟಣ್ಣೆಯ್ಯವರ ಚುನಾವಣೆಯಲ್ಲೂ ನಿಂತು ದರ್ಶನ್ ಅವರ ಗೆಲುವಿಗೆ ಶ್ರಮಿಸುತ್ತೇನೆ. ಅದೇ ರೀತಿ ರೈತನಾಯಕ ಕೆ.ಎಸ್.ಪುಟ್ಟಣ್ಣಯ್ಯ ಸಹ ನಿರ್ಮಿಸುವುದು ನನಗೆ ಹೆಮ್ಮೆಯ  ವಿಷಯವಾಗಿದೆ ಎಂದು ಭರವಸೆ ನೀಡಿದರು.

ಸುನೀತ ಪುಟ್ಟಣ್ಣಯ್ಯ ಮಾತನಾಡಿ, ಯಾರು ಒಳ್ಳೆಯ ಕೆಲಸ ಮಾಡುತ್ತಾರೋ ಅವರೊಟ್ಟಿಗೆ ರೈತಸಂಘ ಇರುತ್ತದೆ. ಸುಮಲತಾ ಅಂಬರೀಶ್ ಅವರು ಚುನಾವಣೆಯಲ್ಲಿ ರೈತ ಸಂಘದ ಪ್ರತಿಯೊಬ್ಬ ಕಾರ್ಯಕರ್ತರು   ಶ್ರಮಿಸಿದ್ದಾರೆ. ಅದೇ ರೀತಿ ಸಂಸದರು ರೈತರ ಕಾರ್ಯಕರ್ತರ ಸಮಸ್ಯೆಗೆ  ಸ್ಪಂದಿಸುವ ಕೆಲಸ ಮಾಡುತ್ತಾರೆ. ಮುಂದಿನ ದಿನಗಳಲ್ಲೂ ಇದೇ ರೀತಿ ಸ್ಪಂದನೆ ನೀಡಬೇಕು ಎಂದರು.

ಬಳಿಕ ರೈತ ಸಂಘದ  ಕಾರ್ಯಕರ್ತರೊಂದಿಗೆ ಸಂವಾದ ನಡೆಯಿತು.

ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ತಾಲ್ಲೂಕು ಅಧ್ಯಕ್ಷ ಚಿಕ್ಕಾಡೆ ಹರೀಶ್, ವಿಜಯ್‌ ಕುಮಾರ್‌, ಶಶಿಧರ್, ಪುರಸಭೆ ಸದಸ್ಯ ಪಾರ್ಥಸಾರಥಿ, ಲಕ್ಷೆ ಲಕ್ಮೀ, ಸ್ವಾಮೀಗೌಡ ಮತ್ತಿತರರು ಹಾಜರಿದ್ದರು.

ನನಗೆ ರಾಜಕೀಯದಲ್ಲಿ ಸಾಕಷ್ಟು ಅನುಭವವಿಲ್ಲ, ನನಗೆ ರಾಜಕೀಯದ ಅನಿವಾರ್ತೆಯೂ ಇರಲಿಲ್ಲ. ಅಂಬರೀಶ್ ಮತ್ತು ನಾನು ಸುವಾರು ೪೦ ವರ್ಷಗಳ ಕಾಲ ಚಿತ್ರರಂಗದಲ್ಲಿ ದುಡಿದು ನಮಗೆ ಬೇಕಾದಷ್ಟು ಸಂಪಾದನೆ ಮಾಡಿಕೊಂಡಿದ್ದೇನೆ. ರಾಜಕೀಯದಲ್ಲಿ ಹಣ ಮಾಡಬೇಕು ಎಂಬ ಆಸೆಯಿಂದಲೂ ನಾನು ರಾಜಕೀಯಕ್ಕೆ ಬಂದಿಲ್ಲ. ಜನರ ಸೇವೆ ಮಾಡಬೇಕು ಎಂಬ ಮನೋಭಾವದಿಂದ ರಾಜಕೀಯಕ್ಕೆ ಬಂದಿದ್ದೇನೆ.

ಸುಮಲತಾ ಅಂಬರೀಶ್, ಸಂಸದರು

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!