ಮೈಸೂರು: ಮೇಕೆದಾಟು ಅಣೆಕಟ್ಟು ನಿರ್ಮಾಣ ಸಂಬಂಧ ತಮಿಳುನಾಡು ಸರ್ಕಾರ ಆಕ್ಷೇಪಣೆ ತೆಗೆದಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೂಡಲೇ ಸುಪ್ರಿಂ ಕೋರ್ಟ್‌ಗೆ ಅಫಿಡೆವಿಟ್ ಸಲ್ಲಿಸದಿದ್ದರೆ ತಡೆಯಾಜ್ಞೆ ಹೊರಬೀಳುವ ಸಾಧ್ಯತೆ ಹೆಚ್ಚಿದೆ. ಮುಖ್ಯಮಂತ್ರಿಯವರು ರಾಜಕೀಯ ಬಿಟ್ಟು ಸರ್ವಪಕ್ಷ ಸಭೆ ಕರೆದು ಅಗತ್ಯ ಕ್ರಮಕೈಗೊಳ್ಳಲು ಮುಂದಾಗಬೇಕು ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಆಗ್ರಹಿಸಿದರು.
ನಗರ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಪ್ರಿಂ ಕೋರ್ಟ್‌ನ ನೀರು ಹಂಚಿಕೆ ತೀರ್ಪಿನಂತೆ ಕುಡಿಯುವ ನೀರಿಗಾಗಿ ನಾವು ಯಾವುದೇ ಯೋಜನೆಯನ್ನೂ ರಾಜ್ಯವ್ಯಾಪ್ತಿಯಲ್ಲಿ ಕೈಗೆತ್ತಿಕೊಳ್ಳಬಹುದು. ಅದರಂತೆ ಬಿಳಿಗುಂಡ್ಲು ಬಳಿ ಅಣೆಕಟ್ಟೆ ಕಟ್ಟಲು ನಮಗೆ ಹಕ್ಕಿದೆ. ಆದರೆ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮಿಳುನಾಡು ಸರ್ಕಾರದ ಅನುಮತಿ ಕೇಳಿ ಪತ್ರ ಬರೆದು ತಮ್ಮ ಅಜ್ಞಾನ ಪ್ರದರ್ಶಿಸಿದ್ದಾರೆ. ಈ ಪತ್ರದ ಆಧಾರದ ಮೇಲೆ ಸುಪ್ರಿಂ ಕೋರ್ಟ್ ಮೆಟ್ಟಿಲೇರಿರುವ ತಮಿಳುನಾಡು ಸರ್ಕಾರ ಮೇಕೆದಾಟು ಯೋಜನೆ ನಿರಾಕರಿಸುವಂತೆ ಸಲ್ಲಿಸಿದ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿದ್ದು, ಇದಕ್ಕೆ ಉತ್ತರ ನೀಡಲು ಕರ್ನಾಟಕ ಸರ್ಕಾರಕ್ಕೆ ಗಡುವು ನೀಡಿದ್ದು, ಈಗಾಗಲೇ ೭ ದಿನ ಮುಗಿದಿದೆ. ಆದರೆ, ಮುಖ್ಯಮಂತ್ರಿಗಳು ಜನ ಸಂಕಲ್ಪ ಯಾತ್ರೆ ಹೆಸರಿನಲ್ಲಿ ರಾಹುಲ್ ಗಾಂಧಿ, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರನ್ನು ಬೈಯುವುದರಲ್ಲಿ ನಿರತರಾಗಿದ್ದಾರೆ ಎಂದು ಕಿಡಿ ಕಾರಿದರು.
ಮೈಸೂರು ಜಿಲ್ಲೆಗೆ ಹೊಸದಾಗಿ ಇವಿಎಂ ಯಂತ್ರಗಳು ಬಂದಿದ್ದು, ಇವುಗಳ ನಿರ್ವಹಣೆಯನ್ನು ಖಾಸಗಿ ಸಂಸ್ಥೆ ನೀಡಿದ್ದಾರೆ. ಆದ್ದರಿಂದ ಎಲ್ಲಾ ಪಕ್ಷದ ಮುಖಂಡರನ್ನು ಕರೆದು ಅವರ ಸಮ್ಮುಖದಲ್ಲಿ ಅವುಗಳ ಕಾರ್ಯವಿಧಾನವನ್ನು ತೋರಿಸಬೇಕು ಎಂದು ಅವರು ಆಗ್ರಹಿಸಿದರು.
ಮುಡಾ ಅಧ್ಯಕ್ಷ ಸ್ಥಾನದಲ್ಲಿದ್ದ ಎಚ್.ವಿ.ರಾಜೀವ್ ಅವಧಿ ಮುಗಿದ ಬಳಿಕ ಈವರೆಗೂ ಒಂದು ಸಭೆುಂನ್ನೂ ನಡೆಸಿಲ್ಲ. ಜಿಲ್ಲಾಧಿಕಾರಿಗೆ ಅದರ ಅಧಿಕಾರ ನೀಡದೆ ಆಯುಕ್ತರನ್ನು ಇಟ್ಟುಕೊಂಡು ಸಚಿವರು, ಶಾಸಕರುಗಳು ರಿಯಲ್‌ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದಾರೆ. ದಸರಾ ಮುಗಿದ ಮೇಲೆ ಸಚಿವರು ನಾಪತ್ತೆಯಾಗಿದ್ದು, ಇದರ ವಿರುದ್ಧ ಕಾಂಗ್ರೆಸ್ ಚಳವಳಿ ನಡೆಸಲಿದೆ ಎಂದರು.
ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್, ವಕ್ತಾರ ಮಹೇಶ್,ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಎಲ್.ಗೌಡ ಮೊದಲಾದವರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.





