Mysore
17
clear sky

Social Media

ಶುಕ್ರವಾರ, 16 ಜನವರಿ 2026
Light
Dark

ಸೋಮವಾರಪೇಟೆ : ಗ್ರಾಮೀಣ ಭಾಗದಲ್ಲಿ ಮೈ ನವಿರೇಳಿಸುವ ಜೀಪ್ ಆಫ್‌ರೋಡ್ ರ‍್ಯಾಲಿ!

ಸೋಮವಾರಪೇಟೆ: ಟೀಮ್ ೧೨ ಆಫ್ ರೋಡರ್ಸ್ ಮತ್ತು ವೈಟ್ ಲೋಟಸ್ ಎಂಟರ್‌ಟ್ರೈನರ್ ವತಿಯಿಂದ ತಾಲ್ಲೂಕಿನ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿಯ ಗ್ರಾಮೀಣ ಭಾಗದಲ್ಲಿ ನಡೆದ ಜೀಪ್ ಆಫ್‌ರೋಡ್ ರ‍್ಯಾಲಿ ಗ್ರಾಮೀಣ ಜನರನ್ನು ರಂಜಿಸಿತು. ಬೆಂಕಳ್ಳಿ ಗ್ರಾಮದಲ್ಲಿ ಹೊಳೆಯೊಳಗೆ ವಾಹನ ಚಾಲನೆಯನ್ನು ಗ್ರಾಮದ ಮಹಿಳೆ, ಪುರುಷರು, ಮಕ್ಕಳು, ವೃದ್ದರು ಕಣ್ತಂಬಿಕೊಂಡು ಸಂಭ್ರಮಿಸಿದರು. ಅತೀ ಹೆಚ್ಚು ಮಳೆಬೀಳುವ ಕುಡಿಗಾಣ ಗ್ರಾಮದ ಕೊಂಕಿನಬೆಟ್ಟವೇರುವುದು ಚಾಲಕರಿಗೆ ಸವಾಲಾಗಿ ಪರಿಣಮಿಸಿತು. ಕೆಸಿನ ಹಡ್ಲು ಎಂಬ ಸ್ಥಳದಲ್ಲಿ ಬಹುತೇಕ ವಾಹನಗಳು ಹೂತುಕೊಂಡವು. ನಂತರ ಟ್ರಾಕ್ಟರ್ ಮತ್ತು ಕ್ರೇನ್ ಬಳಸಿ ವಾಹನಗಳನ್ನು ಟ್ರ್ಯಾಕ್‌ಗಳಿಗೆ ತರಲಾಯಿತು.
ಕೆಲವರು ಕೆಸರಿನ ನೀರಲ್ಲಿ ಒದ್ದಾಡಿ, ಮೇಲೆ ಬರಲು ಹರಸಾಹಸ ಪಟ್ಟಿದ್ದಾರೆ. ಕೆಲ ವಾಹನಗಳು ಕೆಟ್ಟು ನಿಂತು ಸವಾರರು ಪರದಾಡುವಂತಾಯಿತು. ರಾಜ್ಯದ ವಿವಿಧ ಭಾಗಗಳಿಂದ ೧೧೦ ವಾಹನಗಳಲ್ಲಿ ೨೫೦ ರಷ್ಟು ಸ್ಪರ್ಧಿಗಳು ಭಾಗವಹಿಸಿದ್ದರು. ಗ್ರಾಮೀಣ ಭಾಗದಲ್ಲಿ ನಡೆದ ಆಫ್‌ರೋಡ್ ರ‍್ಯಾಲಿ ಸಾಹಸ ಪ್ರಿಯರಿಗೆ ಖುಷಿಕೊಟ್ಟಿತು.
ಕೊಡಗಿನ ಗಡಿಭಾಗ ಕೂಡುರಸ್ತೆಯಲ್ಲಿ ಆಫ್‌ರೋಡ್ ರ‍್ಯಾಲಿಗೆ ರಾಜ್ಯ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಹರಪಳ್ಳಿ ರವೀಂದ್ರ, ಕಾಫಿ ಬೆಳೆಗಾರರಾದ ಡಾ.ಮಂಥರ್‌ಗೌಡ ಚಾಲನೆ ನೀಡಿದರು. ಕೊಡಗಿನ ಪ್ರಕೃತಿಯ ಸೌಂದರ್ಯವನ್ನು ಹೊರ ರಾಜ್ಯ ಹಾಗೂ ಜಿಲ್ಲೆಯ ರ‍್ಯಾಲಿ ಪಟುಗಳು ಸವಿಯಲು ಈ ರ‍್ಯಾಲಿಯನ್ನು ಆಯೋಜಿಸಲಾಗಿದೆ. ಪ್ರಕೃತಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಎಲ್ಲಾ ಮುನ್ನೆಚ್ಚೆರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ರವೀಂದ್ರ ಹೇಳಿದರು. ವಣಗೂರು ಕೂಡುರಸ್ತೆ ಗ್ರಾಮ ಪಂಚಾಯತಿ ಅಧ್ಯಕ್ಷ ಸತೀಶ್, ರ‍್ಯಾಲಿ ಪ್ರಾಯೋಜಕರಾದ ಪಿ.ಕೆ.ರವಿ, ಮಂಜೂರು ತಮ್ಮಣಿ, ಬಿ.ಜೆ.ದೀಪಕ್, ಅರುಣ್ ಕೊತ್ನಳ್ಳಿ, ಗಿರೀಶ್ ಮಲ್ಲಪ್ಪ, ಉದಯ್ ಹಿರಿಕರ ಮತ್ತಿತರರು ಇದ್ದರು. ಬೆಂಕಳ್ಳಿ ಗ್ರಾಮಕ್ಕೆ ಶಾಸಕ ಅಪ್ಪಚ್ಚು ರಂಜನ್ ಆಗಮಿಸಿ ರ‍್ಯಾಲಿ ಸ್ಪರ್ಧಿಗಳಿಗೆ ಶುಭಾಶಯ ಕೋರಿದರು.

ಕಠಿಣ ರಸ್ತೆಯಲ್ಲಿ ಜೀಪು ಓಡಿಸುವುದು ಚಾಲೆಂಜಿಂಗ್ ಆಗಿತ್ತು. ಕೊಡಗಿನ ಪ್ರಕೃತಿಯನ್ನು ಕಣ್ತುಂಬಿಕೊಳ್ಳುವುದೇ ಒಂದು ಸಂಭ್ರಮ. ಕುಟುಂಬ ಸಮೇತ ಬಂದಿದ್ದೇವೆ. ಬೆಂಗಳೂರಿನಿಂದ ಹೆಚ್ಚಿನ ಸ್ನೇಹಿತರು ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಕೊಡಗಿನ ಪ್ರಕೃತಿ ರಕ್ಷಣೆ ಆಗಬೇಕು. ಪ್ರವಾಸೋದ್ಯಮಕ್ಕೆ ಹೆಚ್ಚಿನ ಅದ್ಯತೆ ನೀಡಬೇಕು. ಒಮ್ಮೆ ಬಂದು ಪ್ರಕೃತಿ ಸೌಂದರ್ಯ ನೋಡಿದವರು ಮುಂದೆಂದೂ ಮರೆಯಲು ಸಾಧ್ಯವಿಲ್ಲ ಎಂದು ಬೆಂಗಳೂರಿನ ರ‍್ಯಾಲಿ ಪಟು ವಿಜಯ್ ಅವರು ಆಂದೋಲನದೊಟ್ಟಿಗೆ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!