Mysore
26
overcast clouds

Social Media

ಶುಕ್ರವಾರ, 12 ಡಿಸೆಂಬರ್ 2025
Light
Dark

ರಾಗಿ ವಾಸನೆ ಹಿಡಿದು ನ್ಯಾಯಬೆಲೆ ಅಂಗಡಿಗೆ ಬಂದ ಕಾಡಾನೆಗಳು ಮಾಡಿದ್ದೇನು ಗೊತ್ತಾ…

ನ್ಯಾಯಬೆಲೆ ಅಂಗಡಿ ಶೆಟರ್ ಮುರಿದು ನುಗ್ಗಿ ರಾಗಿ ತಿಂದು ಬಿಸಾಡಿದ ಗಜಗಳು

ಸರಗೂರು: ತಾಲ್ಲೂಕಿನ ಮನುಗನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮನುಗನಹಳ್ಳಿ ಗ್ರಾಮದಲ್ಲಿನ ನ್ಯಾಯಬೆಲೆ ಅಂಗಡಿ ಮೇಲೆ ಕಾಡಾನೆ ಹಿಂಡು ಏಕಾಏಕಿ ದಾಳಿ ನಡೆಸಿ ಅಂಗಡಿ ಬಾಗಿಲು ಮುರಿದು ರಾಗಿ ತಿಂದು ಬಿಸಾಡಿರುವ ಘಟನೆ ನಡೆದಿದೆ. ಇದಲ್ಲದೆ ಗ್ರಾಮದ ಬಾಳೆ ತೋಟಕ್ಕೂ ನುಗ್ಗಿ, ಬಾಳೆ ಗಿಡಗಳನ್ನು ತಿಂದು ತುಳಿದಿವೆ. ಇದರಿಂದ ಲಕ್ಷಾಂತರ ರೂ.ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.


ಮನುಗನಹಳ್ಳಿ ಗ್ರಾಮದ ಎಚ್‌ಎಚ್‌ಆರ್ ಪದ್ಮಾಂಬ ಎಂಬವರಿಗೆ ಸೇರಿದ ನ್ಯಾಯಬೆಲೆ ಅಂಗಡಿಗೆ ಸಮೀಪದ ಚಿಕ್ಕದೇವಮ್ಮನ ಬೆಟ್ಟಕ್ಕೆ ಹೊಂದಿಕೊಂಡಂತಿರುವ ಕಾಡಿನಿಂದ ಹೊರಬಂದ ಮೂರು ಆನೆಗಳು ಸೋಮವಾರ ರಾತ್ರಿ ಅಂಗಡಿ ಒಳಗಡೆ ಸುರಿದ ರಾಗಿಯ ವಾಸನೆ ಜಾಡು ಹಿಡಿದು ಅಂಗಡಿ ಬಾಗಿಲು ಮುರಿದು ಸುಮಾರು ೨೦ಕ್ಕೂ ಹೆಚ್ಚು ರಾಗಿ ಚೀಲಗಳನ್ನು ಹೊರಗೆಳೆದು ತಿಂದು ಬಿಸಾಡಿವೆ. ಇದಲ್ಲದೆ ರೋಲಿಂಗ್ ಶೆಟರ್‌ನ್ನು ಮುರಿದು ಹಾಕಿವೆ. ಇದರಿಂದ ಅಂಗಡಿ ಮಾಲೀಕರು ಭಯಗೊಂಡಿದ್ದರೆ. ಚೀಲದಲ್ಲಿನ ರಾಗಿ, ಟೇಬಲ್, ಕಂಪ್ಯೂಟರ್ ಲ್ಯಾಪ್‌ಟಾಪ್, ತೂಕದ ಯಂತ್ರ ಸೇರಿದಂತೆ ಇನ್ನಿತರ ಪರಿಕರಗಳು ಜಖಂಗೊಂಡಿವೆ.


ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಶಿರಸ್ತೇದಾರ್ ಎಂ.ಎಸ್.ಅನಸೂಯ, ಆಹಾರ ನಿರೀಕ್ಷಕ ವೇದಮೂರ್ತಿ, ಸರಗೂರು ಠಾಣೆಯ ಪೊಲೀಸ್ ಸಿಬ್ಬಂದಿ ನಂದೀಶ್ ಸ್ಥಳಕ್ಕೆ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿ, ವರದಿ ತರಿಸಿದರು.
ಬಾಳೆ ತೋಟಕ್ಕೂ ಹಾನಿ: ಕಾಡಿನಿಂದ ಹೊರಬಂದ ಕಾಡಾನೆ ಹಿಂಡು ಸಮೀಪದ ಬಾಳೆ ತೋಟಕ್ಕೂ ನುಗ್ಗಿ ಬಾಳೆ ಗಿಡಗಳನ್ನು ತಿಂದು ತುಳಿದು ನಾಶಗೊಳಿಸಿವೆ. ಇದರಿಂದ ಕಂಗಲಾದ ರೈತರು ಅರಣ್ಯ ಇಲಾಖೆ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದ ರೈತ ಮಹೇಶ್, ರಾಜೇಂದ್ರಬಾಬು ಎಂಬವರ ಬಾಳೆತೋಟಕ್ಕೆ ಏಕಾಏಕಿ ದಾಳಿ ನಡೆಸಿದ ಕಾಡಾನೆ ಹಿಂಡು ಕಟಾವಿಗೆ ಬಂದಿದ್ದ ಬಾಳೆ ಗಿಡಗಳನ್ನು ತಿಂದಿವೆ. ಇದಲ್ಲದೆ ರೈತರೊಬ್ಬರ ಮುಸುಕಿನಜೋಳವನ್ನೂ ಸಂಪೂರ್ಣವಾಗಿ ತಿಂದು ನಾಶಗೊಳಿಸಿವೆ. ಆಕ್ರೋಶಗೊಂಡ ರೈತರು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಪ್ರತಿಭಟಿಸಿದರು. ಅರಣ್ಯ ಇಲಾಖೆಯವರು ಕಾಡಿನೊಳಗಡೆ ಓಡಿಸುತ್ತಿಲ್ಲ. ಆನೆಗಳ ಹಿಂಡು ಅಲ್ಲಲ್ಲಿ ಅಂದರೆ ಚಿಕ್ಕದೇವಮ್ಮನ ಬೆಟ್ಟದ ಆಜುಬಾಜಿನಲ್ಲಿ ಅಲೆದಾಡುತ್ತಿವೆ ಎಂದು ದೂರಿದರು.
ಗ್ರಾಮಸ್ಥರಾದ ಸುಂದರ್‌ರಾಜ್, ಜಲೇಂದ್ರ, ವಾಜಿ ಗೌಡಿಕೆ ಮಹದೇವಸ್ವಾಮಿ, ವೀರಭದ್ರಪ್ಪ, ಶಿವರುದ್ರಪ್ಪ, ಅಂಗಡಿ ಮಹದೇವಸ್ವಾಮಿ, ಎಂ.ಶಿವಣ್ಣ, ರಾಜೇಂದ್ರಬಾಬು, ಮಂಜುನಾಥ್ ಮುಂತಾದವರು ಹಾಜರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!