ಚಾಮರಾಜನಗರ : ಜಿಲ್ಲೆಯ ನಿವಾಸಿ ಜಾನಪದ ಗಾಯಕ ಹಾಗೂ ರಂಗಕರ್ಮಿ ಸಿಎಂ ನರಸಿಂಹಮೂರ್ತಿ ಅವರು ಪ್ರತಿಷ್ಠಿತ ಶಂಕರ್ ನಾಗ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಇದೇ ತಿಂಗಳ 26ರಂದು ಸಂಜೆ 6 ಗಂಟೆಗೆ ಬೆಂಗಳೂರಿನ ರಂಗ ಪಯಣ ತಂಡದವರು ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿರುವ ರಾಜ್ಯಮಟ್ಟದ ಶಂಕರ್ ನಾಗ್ ನಾಟಕೋತ್ಸವದಲ್ಲಿ ಇವರಿಗೆ ಚಿತ್ರ ನಟರಾದ ರಮೇಶ್ ಭಟ್ ಮತ್ತು ಮಂಡ್ಯ ರಮೇಶ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಚಾಮರಾಜನಗರ ಗಡಿ ಜಿಲ್ಲೆಯ ನಿವಾಸಿಯಾಗಿರುವ ಇವರಿಗೆ ಈ ಹಿಂದೆಯೂ ಕೂಡ ಅಮೆರಿಕಾದ ಅಕ್ಕ ಒಕ್ಕೂಟ ನಡೆಸುವ ವಿಶ್ವಕನ್ನಡ ಸಮ್ಮೇಳನ ಸೇರಿದಂತೆ ನೂರಾರು ಅಂತರಾಷ್ಟ್ರೀಯ ರಾಷ್ಟ್ರೀಯ ರಾಜ್ಯ ಮತ್ತು ಸ್ಥಳೀಯ ಸಾಹಿತ್ಯ ಸಮ್ಮೇಳನಗಳು ಮತ್ತು ಸಾಂಸ್ಕೃತಿಕ ಉತ್ಸವಗಳಲ್ಲಿ ಭಾಗವಹಿಸಿ ಜನ ಮೆಚ್ಚುಗೆ ಗಳಿಸಿದ್ದಾರೆ. ಪ್ರತಿವರ್ಷ ಕನ್ನಡ ಸಾಹಿತ್ಯ ಸಂಗೀತ ಜಾನಪದ ರಂಗಭೂಮಿಗೆ ಸಂಬಂಧಿಸಿದಂತೆ ಉತ್ಸವಗಳನ್ನು ನಡೆಸುತ್ತಾರೆ. ಕನ್ನಡ ಜಾನಪದ ಸಾಹಿತ್ಯ ರಂಗಭೂಮಿ ಕ್ಷೇತ್ರಗಳಿಗೆ ತಮ್ಮದೇ ಕೊಡುಗೆ ನೀಡುತ್ತಾ ಬಂದಿದ್ದಾರೆ. ಇವರಿಗೆ ಕರ್ನಾಟಕ ಸರ್ಕಾರದ ರಾಜ್ಯ ಯುವ ಪ್ರಶಸ್ತಿ ಕರ್ನಾಟಕ ನಾಟಕ ಅಕಾಡೆಮಿ ಸಿಜಿಕೆ ಪ್ರಶಸ್ತಿ, ಮಂಟೇಸ್ವಾಮಿ ಪ್ರಶಸ್ತಿ, ದೂರದರ್ಶನ ಚಂದನ ಪ್ರಶಸ್ತಿ , ಎಸ್ ಕೆ ಕರೀಮ್ ಖಾನ್ ಪ್ರಶಸ್ತಿ, ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಲಭಿಸಿದೆ. ಕರ್ನಾಟಕ ಸುಗಮ ಸಂಗೀತ ಪರಿಷತ್ತು ,ಕರ್ನಾಟಕ ರಂಗ ಪರಿಷತ್ತು ,ಕರ್ನಾಟಕ ಜಾನಪದ ಪರಿಷತ್ತು, ಭಾರತ ಯಾತ್ರ ಕೇಂದ್ರ ರಂಗವಾಹಿನಿ ಸಂಸ್ಥೆಗಳು ಇವರನ್ನು ಅಭಿನಂದಿಸಿವೆ.





