ಮೈಸೂರು: ಜಾರ್ಖಂಡ್ ರಾಜ್ಯ ಗಿರಿಡಿ ಜಿಲ್ಲೆಯಲ್ಲಿರುವ ಜೈನರ ಪವಿತ್ರ ಪ್ರಾಚೀನ ತೀರ್ಥಂಕರರ ಮೋಕ್ಷ ತಾಣ ಶ್ರೀ ಸಮ್ಮೇದ ಶಿಖರ್ಜಿಯಲ್ಲಿ ಪ್ರವಾಸೋದ್ಯಮ ಇಲಾಖೆಯು ಪ್ರವಾಸಿತಾಣಕ್ಕೆ ಅನುಮತಿ ನೀಡಿರುವುದನ್ನು ವಿರೋಧಿಸಿ ಎಂದು ದಿಗಂಬರ ಜೈನ ಸಮಾಜದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಜಮಾವಣೆಗೊಂಡ ಜೈನ ಸಮಾಜದ ಮುಖಂಡರು ಕೂಡಲೇ ಪ್ರವಾಸಿ ತಾಣದ ಅನುಮತಿಯನ್ನು ರದ್ದು ಮಾಡಬೇಕು ಎಂದು ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು. ಇದಕ್ಕೂ ಮುನ್ನ ನಗರದ ಗಾಂಧಿ ವೃತ್ತದಿಂದ ಮೌನ ಮೆರವಣಿಗೆ ಆರಂಭಿಸಿದ ಸಮಾಜದ ಮುಖಂಡರು ಅಶೋಕ ರಸ್ತೆ, ಇರ್ವಿನ್ ರಸ್ತೆ, ಜೆಎಲ್‌ಬಿ ರಸ್ತೆ ಮಾರ್ಗವಾಗಿ ಸಾಗಿ ಜಿಲ್ಲಾಧಿಕಾರಿ ಕಚೇರಿ ಬಳಿ ಮೆರವಣಿಗೆ ಅಂತ್ಯಗೊಳಿಸಿದರು.
ಪ್ರತಿಭಟನೆಯಲ್ಲಿ ದಿಗಂಬರ ಜೈನ ಸಮಾಜದ ಅಧ್ಯಕ್ಷ ಎಸ್.ಡಿ.ಮಹೇಶ್ ಪ್ರಸಾದ್, ಉಪಾಧ್ಯಕ್ಷ ಬಿ.ಭರತ್ ರಾಜ್, ಕೋಶಾಧ್ಯಕ್ಷ ಜ್ವಾಲೇಂದ್ರ ಪ್ರಸಾದ್, ಕಾರ್ಯದರ್ಶಿ ಎಂ.ಆರ್.ಸುನಿಲ್ ಕುಮಾರ್, ಸಹ ಕಾರ್ಯದರ್ಶಿ ಪಿ.ಎಸ್. ಲಕ್ಷ್ಮೀಶ್ ಬಾಬು, ಎ.ಎನ್.ಧರಣೇಂದ್ರನ್, ಕೆ.ಚಂದ್ರಶೇಖರ್ ಆರಿಗ, ಅಶೋಕ್ ಪಾಟೀಲ್, ವಿ.ಭರತ್, ಎಸ್.ಪಿ.ಶ್ರೀಕಾಂತ್, ವಸುಪಾಲ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.





