ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಮುತ್ತಿನಮುಳಸೋಗೆ ಗ್ರಾಮದ ಸಮೀಪ ಕಾವೇರಿ ನದಿಯಿಂದ ನೀರೆತ್ತಿ ಕೆರೆ ಕಟ್ಟೆಗಳನ್ನು ಭರ್ತಿ ಮಾಡುವ ಮಹತ್ವದ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ( ಜನವರಿ 24 ) ಚಾಲನೆ ನೀಡಿದ್ದಾರೆ.
79 ಗ್ರಾಮಗಳ 150 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇದಾಗಿದ್ದು, ಸುತ್ತಮುತ್ತಲಿನ ಗ್ರಾಮಗಳ ರೈತರು ಹಾಗೂ ಜಾನುವಾರುಗಳಿಗೆ ಈ ಯೋಜನೆಯಿಂದ ಭಾರೀ ಅನುಕೂಲವಾಗಲಿದೆ. ಇನ್ನು ಚಾಲನೆ ನೀಡಿದ ಬಳಿಕ ಮಾತನಾಡಿದ ಸಿದ್ದರಾಮಯ್ಯ ಪಿರಿಯಾಪಟ್ಟಣ ತಾಲೂಕಿನ 150 ಕೆರೆ ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಗೆ 2017ರಲ್ಲಿ ನಾನೇ ಶಂಕುಸ್ಥಾಪನೆ ನೆರವೇರಿಸಿದ್ದೆ. ಮಂಜೂರು ಮಾಡಿದ್ದು ಕೂಡ ನಮ್ಮ ಸರ್ಕಾರವೇ ಹೊರತು ಇದು ಬಿಜೆಪಿಯ ಕೊಡುಗೆಯಲ್ಲ, ಯೋಜನೆ ಮಂಜೂರಾಗಲು ಶಾಸಕರಾಗಿದ್ದ ಕೆ. ವೆಂಕಟೇಶ್ ಕಾರಣ ಎಂದು ಹೇಳಿಕೆ ನೀಡಿದರು.
ಕುಡಿಯುವ ನೀರು ಒದಗಿಸಲು ಹಾಗೂ ಅಂತರ್ಜಲ ಪ್ರಮಾಣವನ್ನು ಹೆಚ್ಚಿಸಲು ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುತ್ತಿದ್ದೇವೆ. ಇದರಿಂದ 79 ಹಳ್ಳಿಗಳ 93000 ಜನರಿಗೆ ಅನುಕೂಲವಾಗಲಿದೆ. ನೀರಾವರಿಗೆ ಪ್ರತಿ ವರ್ಷ 10 ಸಾವಿರ ಕೋಟಿ ಖರ್ಚು ಮಾಡುತ್ತೇವೆ ಎಂದು ಹೇಳಿದ್ದೆವು, 56 ಸಾವಿರ ಕೋಟಿ ಖರ್ಚು ಮಾಡಿದೆವು. ನುಡಿದಂತೆ ನಡೆದಿದ್ದೇವೆ. ಆದರೆ ಬಿಜೆಪಿಯವರು ಒಂದು ಲಕ್ಷ ಕೋಟಿ ರೂಪಾಯಿ ಖರ್ಚು ಮಾಡುತ್ತೇವೆ ಎಂದು ಹೇಳಿ ಮಾಡಲಿಲ್ಲ ಎಂದೂ ಸಹ ಸಿದ್ದರಾಮಯ್ಯ ಹೇಳಿದರು.




