Mysore
20
overcast clouds
Light
Dark

ಸಿದ್ದಾಪುರ: ಎರಡು ಕಾಡಾನೆ ಸೆರೆಗೆ ಕಾರ್ಯಾಚರಣೆ

ಆತಂಕ ಸೃಷ್ಟಿಸಿರುವ ಆನೆಗಳ ಸೆರೆಗೆ ದುಬಾರೆ, ಮತ್ತಿಗೋಡು ಶಿಬಿರದ ಸಾಕಾನೆಗಳ ಸಾಥ್

ಸಿದ್ದಾಪುರ: ಕಾರ್ಮಿಕರ ಮೇಲೆ ದಾಳಿ, ಬೆಳೆ ನಾಶದ ಮೂಲಕ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿ ಮಾಡುತ್ತಿದ್ದ ಎರಡು ಕಾಡಾನೆಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಮುಂದಾಗಿದೆ. ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರ ಸುತ್ತಮುತ್ತಲ ಪ್ರದೇಶಗಳಲ್ಲಿ ಉಪಟಳ ನೀಡುತ್ತಿರುವ ಎರಡು ಆನೆಗಳನ್ನು ಸೆರೆಹಿಡಿಯಲು ದುಬಾರೆ ಹಾಗೂ ಮತ್ತಿಗೋಡು ಶಿಬಿರದ ೫ ಸಾಕಾನೆಗಳಾದ ಅಭಿಮನ್ಯು, ಧನಂಜಯ, ಭೀಮ, ಪ್ರಶಾಂತ್, ಭೀಷ್ಮ ಸಾಕಾನೆಗಳ ಸಹಕಾರದೊಂದಿಗೆ ಸೆರೆ ಹಿಡಿಯುವ ಕಾರ್ಯ ಚುರುಕುಗೊಂಡಿದೆ.

ಐವತ್ತಕ್ಕೂ ಹೆಚ್ಚು ಸಿಬ್ಬಂದಿಗಳೊಂದಿಗೆ ಅಧಿಕಾರಿಗಳ ತಂಡ ಕರಡಿಗೋಡು ಗ್ರಾಮದಲ್ಲಿ ಠಿಕಾಣೆ ಹೂಡಿದ್ದಾರೆ. ಸಿದ್ದಾಪುರದ, ಕರಡಿಗೋಡು, ಇಂಜಿಲಗೆರೆ, ಗುಹ್ಯ, ಮಾಲ್ದಾರೆ, ಬಾಡಗ ಬಾಣಂಗಲ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಬೀಡು ಬಿಟ್ಟು ದಾಂಧಲೆ ನಡೆಸುತ್ತಿದ್ದ ಹಾಗೂ ಮಾನವನ ಮೇಲೆ ದಾಳಿ ನಡೆಸಿ ಪ್ರಾಣ ಹಾನಿ ಮಾಡುತ್ತಿರುವ ಎರಡು ಕಾಡಾನೆಗಳನ್ನು ಸೆರೆ ಹಿಡಿಯಲು ಸರ್ಕಾರ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಗೆ ಮುಂದಾಗಿದ್ದಾರೆ.

ಎರಡು ದಿನಗಳಿಂದ ಅರಣ್ಯ ಇಲಾಖೆ ಸಿಬ್ಬಂದಿಗಳು ಕಾಡಾನೆಗಳ ಚಲನವಲನವನ್ನು ಕಂಡು ಹಿಡಿದಿದ್ದಾರೆ. ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎನ್ ಮೂರ್ತಿರವರ ಮಾರ್ಗದರ್ಶನದಲ್ಲಿ ಮಡಿಕೇರಿ ವಿಭಾಗದ ಉಪ ಸಂರಕ್ಷಣಾಧಿಕಾರಿ ಪೂವಯ್ಯ, ವಿರಾಜಪೇಟೆ ಅರಣ್ಯ ವಿಭಾಗದ ಉಪ ಸಂರಕ್ಷಣಾಧಿಕಾರಿ ಚಕ್ರಪಾಣಿ, ಸಹಾಯಕ ಸಂರಕ್ಷಣಾಧಿಕಾರಿ ಕೊಚ್ಚೆರ ನೆಹರು ನೇತೃತ್ವದಲ್ಲಿ ವಲಯ ಅರಣ್ಯಾಧಿಕಾರಿ ಕಳ್ಳಿರ ದೇವಯ್ಯ, ಉಪವಲಯ ಅರಣ್ಯಾಧಿಕಾರಿ ಸಂಜೀತ್ ಸೋಮಯ್ಯ, ಶೂಟರ್ ಅಕ್ರಂ, ಕನ್ನಂಡ ರಂಜನ್, ವನ್ಯಜೀವಿ ವೈದ್ಯಾಧಿಕಾರಿಗಳಾದ ಡಾಣ ಚೆಟ್ಟಿಯಪ್ಪ, ರಮೇಶ್ ಸೇರಿದಂತೆ 50 ಕ್ಕೊ ಹೆಚ್ಚು ಸಿಬ್ಬಂದಿಗಳು ಹಾಗೂ ಮಾವುತರು, ಕಾವಾಡಿಗರು ಕಾರ್ಯಚರಣೆಗೆ ಇಳಿದಿದ್ದಾರೆ.

ವೀರಾಜಪೇಟೆ ಅರಣ್ಯ ವಲಯದ ಅಮ್ಮತ್ತಿ ಸಿದ್ದಾಪುರ, ಕರಡಿಗೋಡು, ಇಂಜಲಗೆರೆ, ಆನಂದಪುರ, ಗುಹ್ಯ, ಮಾಲ್ದಾರೆ, ಬಿಬಿಟಿಸಿ ಆಲಿತೋಪು ತೋಟ ಸುತ್ತಮುತ್ತ ಸಾರ್ವಜನಿಕರಿಗೆ ಉಪಟಳ ನೀಡುತ್ತಿರುವ ಕಾಡಾನೆಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆ ನಡೆಯುವುದರಿಂದ ಕಾಫಿ ತೋಟದಲ್ಲಿ ಕೆಲಸ ನಿರ್ವಹಿಸುವ ಕೂಲಿ ಕಾರ್ಮಿಕರು, ಸಾರ್ವಜನಿಕರು ಮತ್ತು ಶಾಲಾ ಮಕ್ಕಳು ಮುನ್ನೆಚ್ಚರಿಕೆಯಿಂದ ಇರಬೇಕೆಂದು ಅರಣ್ಯ ಇಲಾಖೆ ಪ್ರಕಟಣೆ ಹೊರಡಿಸಿದೆ.

ಕಾಡಾನೆ ಹಾವಳಿ ತಡೆಗಟ್ಟಲು ಒತ್ತಾಯಿಸಿ ಇತ್ತೀಚೆಗೆ ಕೊಡಗು ರೈತ ಸಂಘ ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಗಡುವು ನೀಡಿತ್ತು

ಘೀಳಿಟ್ಟ ಆನೆ; ಬೆದರಿದ ಸಿಬ್ಬಂದಿ

ಕಾಡಾನೆ ಸೆರೆಯ ಕಾರ್ಯಾಚರಣೆ ವೇಳೆ ಮಂಗಳವಾರ ಕಾಡಾನೆಯೊಂದು ಘೀಳಿಟ್ಟ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಬೆದರಿ ಹಿಂದಕ್ಕೆ ಓಡಿದ ಘಟನೆ ವರದಿಯಾಗಿದೆ. ಆನೆ ಸೆರೆ ಕಾರ್ಯಾಚರಣೆಯಲ್ಲಿ ನಿರತರಾಗಿದ್ದ ಎಲ್ಲರೂ ಗಾಬರಿಗೊಂಡಿದ್ದಾರೆ. ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ನಂತರ ಕಾರ್ಯಾಚರಣೆ ಮುಂದುವರಿಸಲಾಯಿತು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ