ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿರುವ ಸ್ಯಾಂಟ್ರೋ ರವಿಯನ್ನು ಸಿಐಡಿ ತನಿಖಾಧಿಕಾರಿಗಳು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಮಧುಮೇಹದಿಂದ ಬಳಲುತ್ತಿದ್ದ ಆರೋಪಿಯ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದ್ದು ಗುರುವಾರ ರಾತ್ರಿ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಬಳಿಕ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದು ಶುಕ್ರವಾರ ರವಿಯನ್ನು ಸಿಐಡಿ ತನಿಖಾಧಿಕಾರಿಗಳು ವಶಕ್ಕೆ ಪಡೆದಿದ್ದರು. ಜ.30ರ ತನಕ ತಮ್ಮ ಕಸ್ಟಡಿಗೆ ಪಡೆದಿದ್ದ ಸಿಐಡಿ ಇದೀಗ ಎರಡು ದಿನ ಮೊದಲೇ, ಅಂದರೆ ಜ.28 ರಂದೇ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವುದಾಗಿ ಸಿಐಡಿ ಮೂಲಗಳು ತಿಳಿಸಿವೆ. 2ನೇ ಪತ್ನಿಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿರುವ ಆರೋಪದಡಿ ಮೈಸೂರಿನ ವಿಜಯನಗರ ಠಾಣೆಯಲ್ಲಿ ಸ್ಯಾಂಟ್ರೋ ರವಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಬಳಿಕ ಸಿಐಡಿಗೆ ವರ್ಗಾವಣೆಯಾಗಿತ್ತು.
ಸ್ಯಾಂಟ್ರೋ ರವಿ ಪತ್ನಿ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿಕೊಂಡಿದ್ದ ಆರೋಪವಿದ್ದು ಅಮಾನತುಗೊಂಡಿರುವ ಕಾಟನ್‌ಪೇಟೆ ಇನ್ಸ್ಪೆಕ್ಟರ್ ಆಗಿದ್ದ ಪ್ರವೀಣ್ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಈ ಸಂಬಂಧ ತನಿಖೆ ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲಿ ವರದಿ ಸಲ್ಲಿಸುವುದಾಗಿ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಜ.27ರಂದು ಮಾಹಿತಿ ನೀಡಿದ್ದರು.





