ಮೈಸೂರು : ಚೀನಿ ಎಂದೇ ನಾಡಿನಾದ್ಯಂತ ಹೆಸರುವಾಸಿಯಾಗಿದ್ದ ಪ್ರಖ್ಯಾತ ರಂಗ ಸಂಗೀತ ನಿರ್ದೇಶಕ ಶ್ರೀನಿವಾಸ ಭಟ್ (63) ಹೃದಯಾಘಾತದಿಂದ ಬುಧವಾರ ರಾತ್ರಿ ಮೈಸೂರಿನಲ್ಲಿ ನಿಧನರಾದರು.
ಉಡುಪಿ ಜಿಲ್ಲೆಯಲ್ಲಿ ಜನಿಸಿದ ಶ್ರೀನಿವಾಸ ಭಟ್ ಬಾಲ್ಯದಲ್ಲಿಯೇ ಸಂಗೀತದಲ್ಲಿ ಆಸಕ್ತಿ ಹೊಂದಿದ್ದರು. ಸುಮಾರು 30 ವರ್ಷಗಳ ಕಾಲ ರಂಗ ಸಂಗೀತದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಹಲವಾರು ತಂಡಗಳ ನಾಟಕಗಳಿಗೆ ಸಂಗೀತ ನಿರ್ದೇಶನ ನೀಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ರಂಗಾಯಣಕ್ಕೆ ಬರುವ ಮೊದಲು ಉಡುಪಿಯಲ್ಲಿ ರಥಬೀದಿ ಗೆಳೆಯರ ನಾಟಕಗಳಿಗೆ ರಂಗ ಸಂಗೀತ ನೀಡುತ್ತಿದ್ದರು.
ಬಿವಿ ಕಾರಂತರ ಮೆಚ್ಚಿನ ಶಿಷ್ಯರಾಗಿದ್ದ ಚೀನಿಯವರು ‘ಕಾರಂತ ಸಂಗೀತ’ ಮಾದರಿಯನ್ನು ರಂಗಭೂಮಿಯಲ್ಲಿ ಮುಂದುವರಿಸಿದ್ದರು. ನೀನಾಸಂನಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದರು. ಗಿಟಾರ್, ಹಾರ್ಮೊನಿಯಂ ಹಾಗೂ ತಾಳವಾದ್ಯಗಳಲ್ಲಿ ಇವರನ್ನು ಮೀರಿಸುವವರು ಯಾರು ಇರಲಿಲ್ಲ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ತಮ್ಮ ಸಂಗೀತದ ಮೂಲಕ ರಂಗಭೂಮಿಗೆ ಕಳೆ ತುಂಬಿದ್ದ ಚೀನಿಯವರ ಅಗಲಿಕೆ ಅಪಾರ ರಂಗಭೂಮಿ ಕಲಾವಿದರಿಗೆ ನೋವುಂಟು ಮಾಡಿದೆ.





