ಮೈಸೂರು: ನನ್ನಿಂದ ರಿಯಲ್ ಎಸ್ಟೇಟ್ ಮಾಡುವವರಿಗೆ ಅನುಕೂಲವಾಗಿದೆ. ಆದರೆ, ನಾನು ರಿಯಲ್ ಎಸ್ಟೇಟ್ ಮಾಡಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ಎಜುಕೇರ್ ಐಟಿಇಎಸ್, ವುಮೆನ್ ಕ್ಯಾನ್ ಫೌಂಡೇಶನ್ ಮತ್ತು ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಸಹಯೋಗದಲ್ಲಿ ಕಾಲೇಜಿನಲ್ಲಿ ಶುಕ್ರವಾರ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಮಹಿಳಾ ಉದ್ಯೋಗ ಮೇಳ ಮತ್ತು ಮಹಿಳೆಯರು ಉತ್ಪಾದಿಸಿದ ವಸ್ತುಗಳ ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರತಿಭಾವಂತ, ವಿದ್ಯಾವಂತ ಯುವ ಸಮುದಾಯಕ್ಕೆ ಉದ್ಯೋಗ ಸಿಗಬೇಕು. ಇದಕ್ಕೆ ಪೂರಕವಾಗಿ ಮೈಸೂರಿಗೆ ಕಂಪನಿಗಳು, ಕೈಗಾರಿಕೆಗಳು ಬರಬೇಕು ಎಂಬ ಉದ್ದೇಶದಿಂದ ಮೈಸೂರಿನಲ್ಲಿ ಉದ್ಯಮ ಸ್ಥಾಪನೆ, ಬೆಳವಣಿಗೆಗೆ ಪೂರಕವಾದ ವಾತಾವರಣವನ್ನು ನಿರ್ಮಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದರು.
೨ನೇ ಕ್ಲಾಸ್, ೪ನೇ ಕ್ಲಾಸ್ ಓದಿರುವವರು ರಿಯಲ್ ಎಸ್ಟೇಟ್ ಮಾಡ್ತಿದ್ದಾರೆ. ನಾನು ಮಾಸ್ಟರ್ ಡಿಗ್ರಿ ಮಾಡಿ ಬಂದಿದ್ದೀನಿ. ನಾನು ಮಾಡಬಹುದಿತ್ತು. ಮೈಸೂರು ಜನ ನಾನು ಇಲ್ಲಿಗೆ ಬಂದಾಗ ಪ್ರೀತಿಯಿಂದ ನನ್ನನ್ನು ಗೆಲ್ಲಿಸಿ ಕಳುಹಿಸಿಕೊಟ್ಟಿದ್ದಾರೆ. ಅವರ ಸೇವೆಯನ್ನು ಮಾಡಬೇಕು ಅನ್ನುವ ಕಾರಣಕ್ಕೆ ನಾನು ಬೆಂಗಳೂರು ಮತ್ತು ಮೈಸೂರು ೧೦ ಲೈನ್ ಹೈವೆ ತಂದಿದ್ದೀನಿ. ಹೈವೆ ಬಂದ್ರೆ ಕೈಗಾರಿಕೆಗಳು, ಕಂಪನಿಗಳು ಬರುತ್ತವೆ. ಯುವ ಸಮುದಾಯಕ್ಕೆ ಕೆಲಸ ಸಿಗಲಿದೆ ಎಂಬುದು ನನ್ನ ಉದ್ದೇಶ. ನನ್ನಿಂದ ರಿಯಲ್ ಎಸ್ಟೇಟ್ ಅವರಿಗೆ ಅನುಕೂಲವಾಗಿದೆ. ಆದರೆ, ನಾನು ರಿಯಲ್ ಎಸ್ಟೇಟ್ ಮಾಡಿಲ್ಲ ಎಂದರು.
ಮೈಸೂರು ವಿವಿ ಕೆಟ್ಟು ಹೋಗಿದೆ : ಮೈಸೂರು ವಿವಿ ಎಷ್ಟು ಕೆಟ್ಟು ಹೋಗಿದೆ ಎಂದರೆ, ಇವತ್ತು ಮಾಸ್ಟರ್ ಡಿಗ್ರಿ ಮಾಡಿದ ೧೩೦೦ ಮಂದಿ ಮೈಸೂರು ವಿವಿಯಲ್ಲಿ ಡಿ ಗ್ರೂಪ್ ನೌಕರರಾಗಿ ಇದ್ದಾರೆ. ೧೨ ಸಾವಿರ ರೂ. ಸಂಬಳಕ್ಕೆ ಲಂಚ ಕೊಟ್ಟು ಒಳಗೆ ಸೇರಿಕೊಳ್ಳುತ್ತಾರೆ. ಪ್ರತಿಯೊಂದರಲ್ಲೂ ಭ್ರಷ್ಟಚಾರ ಇದೆ. ಕೆ-ಸೆಟ್ ಪರೀಕ್ಷೆ ಮಾಡ್ತಾರೆ, ೪ ರಿಂದ ೬ ಲಕ್ಷ ರೂ.ತೆಗೆದುಕೊಂಡು ಪಾಸ್ ಮಾಡಿಕೊಡ್ತಾರೆ. ಇದನ್ನು ಕೂಡ ಯುಜಿಸಿ ಜಗದೀಶ್ ಕುಮಾರ್ ಹತ್ತಿರ ಪ್ರಸ್ತಾಪಿಸಿ ಒಂದೂವರೆ ವರ್ಷದಿಂದ ಕೆ-ಸೆಟ್ ಪರೀಕ್ಷೆ ಆಗದಂತೆ ತಡೆದಿದ್ದೇನೆ. ನಿಜವಾದ ಪ್ರತಿಭಾವಂತ ಮಕ್ಕಳಿಗೆ ಮೋಸ ಆಗಬಾರದು, ಆದ್ಯತೆ ಸಿಗಬೇಕು ಎಂಬುದು ನನ್ನ ಉದ್ದೇಶ ಎಂದರು.





