Mysore
25
haze

Social Media

ಶನಿವಾರ, 13 ಡಿಸೆಂಬರ್ 2025
Light
Dark

ಅತ್ಯಾಚಾರ ಸಂತ್ರಸ್ತೆ ಪೋಷಕರಿಗೆ ಹಣದ ಆಮಿಷ: ತನಿಖೆಗೆ ಒಡನಾಡಿ ಒತ್ತಾಯ

ಮೈಸೂರು: ಅಪ್ರಾಪ್ತ ಬಾಲಕಿಯ ಮೇಲೆ ನಡೆದಿರುವ ಅತ್ಯಾಚಾರ ಸಂಬಂದ ಸ್ವಾಮೀಜಿಗಳು ಸಂತ್ರಸ್ತ ಬಲಕಿಯೊಬ್ಬಳ ತಂದೆಗೆ ಹಣ ನೀಡಿರುವ ವಿಚಾರವನ್ನು ಮತ್ತೊಬ್ಬ ಸಂತ್ರಸ್ತೆ ತಿಳಿಸಿರುವ ಹಿನ್ನೆಲೆಯಲ್ಲಿ ಒಡನಾಡಿ ಸೇವಾ ಸಂಸ್ಥೆಯ ವತಿಯಿಂದ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಿಗೆ ಪತ್ರ ಬರೆದು ಸಮಗ್ರ ತನಿಖೆಗೆ ಒತ್ತಾಯಿಸಲಾಗಿದೆ.
ಈ ಸಂಬಂದ ಒಡನಾಡಿ ಸೇವಾ ಸಂಸ್ಥೆಯ ನಿರ್ದೇಶಕ ಸ್ಟ್ಯಾನ್ಲಿ ಅವರು ಪತ್ರ ಬರೆದಿದ್ದು, ಚಿತ್ರದುರ್ಗದ ಮುರುಘಾ ಮಠದ ಡಾ.ಶಿವಮೂರ್ತಿ ಶರಣರಿಂದ ಸತತ ಅತ್ಯಾಚಾರಕ್ಕೊಳಪಟ್ಟು ಸದ್ಯ ಮೈಸೂರಿನ ಒಡನಾಡಿ ಸೇವಾ ಸಂಸ್ಥೆಯಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತ ಬಾಲಕಿಯು ಇಂದು ಆಪ್ತ ಸಮಾಲೋಚನೆಯ ಸಂದರ್ಭದಲ್ಲಿ ಗುರುತರವಾದ ಮಾಹಿತಿಯನ್ನು ನಮ್ಮ ಮುಂದೆ ಹಂಚಿಕೊಂಡಿರುತ್ತಾಳೆ.
ಈ ಹಿಂದೆ ಚಿತ್ರದುರ್ಗದ ಮಕ್ಕಳ ಕಲ್ಯಾಣ ಸಮಿತಿಯ ಸುಪರ್ದಿಯಲ್ಲಿ ಇದ್ದಂತಹ ಸಂದರ್ಭದಲ್ಲಿ ತನ್ನ ಜೊತೆಗಾರ್ತಿ ಹಾಗೂ ಮುರುಘಾ ಶರಣರಿಂದ ದೌರ್ಜನ್ಯಕ್ಕೊಳಪಟ್ಟ ಬಾಲಕಿಗೆ ಒಂದು ದಿನ ಮುಸ್ಸಂಜೆಯ ಹೊತ್ತು ಆಕೆಯ ತಂದೆಯು ಬಾಲ ಭವನದ ದೂರವಾಣಿಗೆ ಕರೆ ಮಾಡಿದ್ದರು ಎಂದು ಹೇಳಿರುತ್ತಾಳೆ.
ಕರೆ ಬಂದಾಗ ಅದನ್ನು ಸ್ವೀಕರಿಸಿದ ಬಾಲ ಭವನದ ಸಿಬ್ಬಂದಿ ಲೌಡ್ ಸ್ಪೀಕರನ್ನು ಆನ್ ಮಾಡಿ ಮಾತನಾಡಿಸಿದರು. ಅಲ್ಲಿ ಇಬ್ಬರು ಮಹಿಳಾ ಸಿಬ್ಬಂದಿಗಳು ಇದ್ದರು. ನಾನು ಜೊತೆಗಿದ್ದೆ. ಆ ಕಡೆಯಿಂದ ಕರೆ ಮಾಡಿದ್ದ ನನ್ನ ಗೆಳತಿಯ ತಂದೆ ಸ್ವಾಮಿಗಳು ನಮ್ಮನ್ನು ನೋಡಿಕೊಂಡಿದ್ದಾರೆ. ಹಣವನ್ನು ಕೊಟ್ಟಿದ್ದಾರೆ. ನೀನು ಯಾವ ಕೇಸನ್ನು ಮುಂದುವರಿಸುವುದು ಬೇಡ. ದೂರನ್ನು ವಾಪಾಸು ತೆಗೆದುಕೊಂಡು ನನ್ನ ಜೊತೆ ಬರಲು ನೋಡು ಎಂದು ಹೇಳುತ್ತಿದ್ದನ್ನು ತಾನು ಕಿವಿಯಾರೆ ಕೇಳಿರುವುದಾಗಿ ಹೇಳಿದ್ದಾಳೆ.
ಆ ಬಾಲಕಿಯು ತನ್ನ ಮೇಲೆ ಆಗಿದ್ದ ದೌರ್ಜನ್ಯವನ್ನು ಪ್ರಬಲವಾಗಿ ಪ್ರತಿಭಟಿಸುತ್ತಲೇ ಬಂದಿದ್ದಳು. ತನ್ನನ್ನು ಯಾವುದೇ ರೀತಿಯಲ್ಲಿ ನೋಡಿಕೊಳ್ಳದೆ ತೊಂದರೆಗೊಳಪಡಿಸುತ್ತಿದ್ದ ಕುಡುಕ ತಂದೆ ಹಾಗೂ ಚಿಕ್ಕಪ್ಪನ ವಿರುದ್ಧ ಬಹಿರಂಗವಾಗಿಯೇ ತನ್ನ ಅಸಮಾಧಾನವನ್ನು ವ್ಯಕ್ತಪಡಿಸುತ್ತಲೇ ಇದ್ದಳು.
ಒಂದು ಹಂತದಲ್ಲಿ ಅವರ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲೂ ದೂರನ್ನು ದಾಖಲಿಸಿರುತ್ತಾಳೆ. ನನ್ನನ್ನು ದಯಮಾಡಿ ಮೈಸೂರಿನ ಒಡನಾಡಿ ಸಂಸ್ಥೆಗಾದರೂ ಕಳುಹಿಸಿಕೊಡಿ. ಆದರೆ ನನ್ನ ತಂದೆ ಅಥವಾ ಚಿಕ್ಕಪ್ಪನೊಂದಿಗೆ ಕಳುಹಿಸಬೇಡಿ ಎಂದು ದೂರಿನಲ್ಲಿ ವಿನಂತಿಸಿಕೊಂಡಿದ್ದಳು.
ಆದಾಗಿಯೂ, ಬಾಲ ನ್ಯಾಯ ಕಾಯ್ದೆಯ ವಿರುದ್ಧ, ಮಗುವಿನ ಇಚ್ಛೆ ಹಾಗೂ ಹಿತಾಸಕ್ತಿಯನ್ನು ತಿರಸ್ಕರಿಸಿ ಆರೋಪಿಯ ಪರ ನಿಂತಿದ್ದ ಚಿಕ್ಕಪ್ಪ ಹಾಗೂ ತಂದೆಯೊಡನೆ ಚಿತ್ರದುರ್ಗದ ಸಿಡಬ್ಲ್ಯೂಸಿ ವತಿಯಿಂದ ಮಗುವನ್ನು ಕಳುಹಿಸಿ ಕೊಟ್ಟಿದ್ದು ಅನುಮಾನಾಸ್ಪದವಾಗಿದ. ಇವರ ಈ ಹೆಜ್ಜೆಗೆ ಮತ್ತೊರ್ವ ಬಾಲಕಿ ನೀಡಿರುವ ಹೇಳಿಕೆಯು ಪೂರಕವಾಗಿ ನಿಂತಿದೆ.
ಮಕ್ಕಳ ಮೇಲೆ ನಡೆದಿರುವ ಹೀನತಿಹೀನ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಹಣದ ಆಮಿಷ ಒಡ್ಡಿ ಮುಚ್ಚಿ ಹಾಕಲು ಆರೋಪಿಗಳು ಪ್ರಯತ್ನಿಸುತ್ತಿರುವುದು ಇದರಿಂದ ಸ್ಪಷ್ಟವಾಗುತ್ತಿದೆ. ಆದುದರಿಂದ ಈ ಪತ್ರವನ್ನು ದಯಮಾಡಿ ಗಂಭೀರವಾಗಿ ಪರಿಗಣಿಸಿ ಆಯೋಗದ ಮೂಲಕ ಒಂದು ವಿಶೇಷ ತನಿಖಾ ಸಮಿತಿಯನ್ನು ರಚಿಸಿ ಚಿತ್ರದುರ್ಗ ಸಿಡಬ್ಲ್ಯೂಸಿಯ ಅಧ್ಯಕ್ಷರನ್ನು, ಸಿಬ್ಬಂದಿಗಳನ್ನು, ಶೋಷಣೆಗಳ ಪಟ್ಟ ಮಕ್ಕಳನ್ನು ಹಾಗೂ ಆ ಹುಡುಗಿಯ ತಂದೆ ಹಾಗೂ ಚಿಕ್ಕಪ್ಪನನ್ನು ವಿಚಾರಣೆಗೊಳಪಡಿಸಬೇಕಾಗಿ ಸಾಮಾಜಿಕ ಕಾಳಜಿಯೊಡನೆ ಕೇಳಿಕೊಳ್ಳುತ್ತಿದ್ದೇನೆ ಎಂದು ಸ್ಟ್ಯಾನ್ಲಿ ಅವರು ಕೋರಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!