Mysore
24
broken clouds

Social Media

ಗುರುವಾರ, 15 ಜನವರಿ 2026
Light
Dark

ಎಡೆಬಿಡದೆ ಸುರಿದ ಮಳೆಗೆ ತತ್ತರಿಸಿದ ಪ್ರವಾಸಿ ನಗರ

ಮೈಸೂರು: ನಗರದಲ್ಲಿ ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆಗೆ ಸರಣಿ ಅವಘಡಗಳು ಸಂಭವಿಸಿದ್ದು, ದಸರೆ ವೇಳೆ ಡಾಂಬರೀಕರಣದ ಭಾಗ್ಯ ಕಂಡ ರಸ್ತೆಗಳು ಮತ್ತೆ ಗುಂಡಿ ಬಿದ್ದು ನಿಜ ರೂಪ ತೋರಿಸುತ್ತಿವೆ.

ಸತತ ಮಳೆಗೆ ಅರಮನೆ ಕೋಟೆಯ ಗೋಡೆ ಕುಸಿದು ಬಿದ್ದ ಬೆನ್ನಿಗೇ, ನಗರದ ಜೆಎಲ್ ಬಿ ರಸ್ತೆಯಲ್ಲಿರುವ ಮಹಾರಾಣಿ ವಿಜ್ಞಾನ ಕಾಲೇಜಿನ ಪಾರಂಪರಿಕ ಕಟ್ಟಡದ ಗೋಡೆ ಕುಸಿದು ಬಿದ್ದಿದೆ. ನೂರಾರು ವಿದ್ಯಾರ್ಥಿಗಳು, ಶಿಕ್ಷಕರ ಸಮ್ಮುಖದಲ್ಲೇ 106 ವರ್ಷಗಳ ಇತಿಹಾಸವಿರುವ ಕಟ್ಟಡದ ಗೋಡೆ ನೆಲಕಚ್ಚಿದೆ. ಆದರೆ ಅನಾಹುತದ ಮುನ್ಸೂಚನೆ ಸಿಕ್ಕಿದ್ದರಿಂದ ದೊಡ್ಡ ದುರಂತ ಸ್ವಲ್ಪದರಲ್ಲೇ ತಪ್ಪಿದೆ. ರಸಾಯನ ವಿಜ್ಞಾನ ಮತ್ತು ಪ್ರಾಣಿ ವಿಜ್ಞಾನ ವಿಭಾಗದ ಪ್ರಯೋಗಾಲಯದ ಪರಿಕರಗಳೆಲ್ಲವೂ ಮಣ್ಣಿನಡಿ ಸೇರಿದ್ದು ಸುಮಾರು 40 ಲಕ್ಷರೂ. ನಷ್ಟ ಅಂದಾಜಿಸಲಾಗಿದೆ.


ಅರಮನೆ ಕೋಟೆಯ ಗೋಡೆ
ಮೊನ್ನೆಯಷ್ಟೇ ನಗರದ ಐತಿಹಾಸಿಕ ಹಿನ್ನೆಲೆಯುಳ್ಳ ಅರಮನೆಯ ಕೋಟೆ ಮಾರಮ್ಮ ದೇಗುಲ ಹಾಗೂ ಜಯಮಾರ್ತಾಂಡ ದ್ವಾರದ ನಡುವೆ ಕೋಟೆಯ ಗೋಡೆ ಕುಸಿದಿತ್ತು. ಮೈಸೂರು ಅರಮನೆಯ ಸುತ್ತಲೂ ನಿರ್ಮಾಣ ಮಾಡಿರುವ ಈ ಕೋಟೆಗೆ ದೊಡ್ಡ ಇತಿಹಾಸವಿದೆ.

ಬೆಟ್ಟದಲ್ಲೂ ಭೂ ಕುಸಿತ:

ಭಾರಿ ಮಳೆಯ ಪರಿಣಾಮ ಆಗಾಗ್ಗೆ ಚಾಮುಂಡಿಬೆಟ್ಟದಲ್ಲಿನ ನಂದಿ ವಿಗ್ರಹಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕುಸಿದಿತ್ತು. ಜಿಲ್ಲಾಡಳಿತ ಕುಸಿದ ರಸ್ತೆಯನ್ನು ಭಾಗಶಃ ದುರಸ್ತಿಗೊಳಿಸಿದ್ದರೆ, ಇದೀಗ ಬೀಳುತ್ತಿರುವ ಮಳೆಗೆ ಅದೇ ರಸ್ತೆುಯಲ್ಲಿನ ವೀಕ್ಷಣಾ ಗೋಪುರದ ಬಳಿ ರಸ್ತೆ ಕುಸಿದಿದೆ. ಇಲ್ಲಿ ಬ್ಯಾರಿಕೇಡ್ ಅಳವಡಿಸಿ, ಜನ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಭರ್ಜರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದರೆ, ಬೃಹತ್ ಮರಗಳು, ಶಿಥಿಲ ಕಟ್ಟಡಗಳು ಧರೆಗೆ ಉರುಳುತ್ತಿದ್ದು, ರಸ್ತೆಗಳು ಕುಸಿಯುತ್ತಿರುವುದರಿಂದ ಅಪಾಯದ ಭೀತಿ ಎದುರಾಗಿದೆ.
ಹಗಲು-ರಾತ್ರಿ ಎನ್ನದೆ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಜನರು ಹೈರಾಣಾಗಿದ್ದರೆ, ಭಾರೀ ಮಳೆಯ ಪರಿಣಾಮ ಹಲವು ರಸ್ತೆಗಳಲ್ಲಿನ ಬೃಹತ್ ಮರಗಳು, ವಿದ್ಯುತ್ ಕಂಬಗಳು ಧರೆಗೆ ಉರುಳಿವೆ. ನಗರದ ಹಲವು ರಸ್ತೆಗಳಲ್ಲಿ ಡಾಂಬರು ಕೊಚ್ಚಿ ಹೋಗಿ ರಸ್ತೆಗಳು ಗುಂಡಿಮಯವಾಗಿವೆ. ಜೊತೆಗೆ ಮಳೆ ಬಂದ ಸಮಯದಲ್ಲಿ ನಗರದ ಪ್ರಮುಖ ರಸ್ತೆಗಳ ಇಕ್ಕೆಲಗಳಲ್ಲಿ ನೀರು ನಿಂತು ವಾಹನ ಸವಾರರು ಜೀವ ಭಯದಲ್ಲೇ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಕುಕ್ಕರಹಳ್ಳಿ ರಸ್ತೆ, ವಿಜಯನಗರ, ಒಂದನೇ ಹಂತ, ಕಾಳಿದಾಸ ರಸ್ತೆ, 3ನೇ ಕ್ರಾಸ್, ಜಯ ಲಕ್ಷ್ಮಿಪುರಂ, 5ನೇ ಮುಖ್ಯರಸ್ತೆ,ಈಜಿ ಡೇ ಮಾಲ್ ನ ಮುಂಭಾಗ ಸೇರಿದಂತೆ ಹಲವೆಡೆ ಮಳೆಯ ಅಬ್ಬರಕ್ಕೆ ಮರಗಳು ಧರೆಗುರುಳಿವೆ.
ಗುರುವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ನಗರದ ಹಲವು ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿ ಜನರು ರಾತ್ರಿ ವೇಳೆ ಜಾಗರಣೆ ವಾಡುವ ಸ್ಥಿತಿ ನಿರ್ಮಾಣವಾಗಿದ್ದರೆ, ಮಳೆಗೆ ಹಲವು ಕಟ್ಟಡಗಳು ಶಿಥಿಲಗೊಂಡು ಕುಸಿುಯುತ್ತಿರುವುದರಿಂದ ಜನರು ಜೀವ ಭಯದಲ್ಲಿ ವಾಸಿಸುವಂತಾಗಿದೆ.

ಕುಸಿದ ಕೋಟೆ, ನೆಲಕಚ್ಚಿದ ಗೋಡೆ, ರಸ್ತೆಗಳು ಮತ್ತೆ ಗಂಡಾಗುಂಡಿ

ಕುಕ್ಕರಹಳ್ಳಿ ಕೆರೆಗೆ ಹೆಚ್ಚಿನ ನೀರು:

ಕುಕ್ಕರಹಳ್ಳಿ ಕೆರೆಗೆ ಹೆಚ್ಚಿನ ಪ್ರವಾಣದಲ್ಲಿ ನೀರು ಹರಿದು ಬರುತ್ತಿರುವ ಪರಿಣಾಮ ಕೆರೆಯ ಬಂಡು ಒಡೆಯುವ ಭೀತಿ ಎದುರಾಗಿದೆ. ಹೆಚ್ಚುವರಿ ನೀರನ್ನು ಹೊರಹಾಕಲು ಜಿಲ್ಲಾಡಳಿತ ಕಾರ್ಯೋನ್ಮುಖವಾಗಿರುವಾಗಲೇ ಕೆರೆಗೆ ಇನ್ನೂ ಹೆಚ್ಚು ನೀರು ಹರಿದು ಬರುತ್ತಿರುವುದು ಆತಂಕ ಹೆಚ್ಚಿಸಿದೆ.


ಪಾರಂಪರಿಕ ಕಟ್ಟಡಗಳ ಕುಸಿತ:

ಕಳೆದ ಕೆಲ ವರ್ಷಗಳಿಂದ ಭಾರೀ ಮಳೆಗೆ ನಗರದ ಪಾರಂಪರಿಕ ಕಟ್ಟಡಗಳಾದ ಲ್ಯಾನ್ಸ್ ಡೌನ್ ಕಟ್ಟಡ, ದೇವರಾಜ ಮಾರುಕಟ್ಟೆ ಒಂದು ಭಾಗ, ಸರಸ್ವತಿಪುರಂನ ಅಗ್ನಿಶಾಮಕ ಠಾಣೆಯ ಒಂದು ಭಾಗ, ಮಹಾರಾಜ ಕಾಲೇಜಿನ ಮೇಲ್ಚಾವಣಿ, ಅರಮನೆ ಕೋಟೆ ಮಾರಮ್ಮನ ದೇವಸ್ಥಾನಕ್ಕೆ ಹೊಂದಿಕೊಂಡ ಗೋಡೆ ಕುಸಿದಿತ್ತು. ಇದೀಗ ಮಹಾರಾಣಿ ಕಾಲೇಜಿನ ಕಟ್ಟಡ ಕುಸಿದು ಬಿದ್ದಿರುವುದು ಜನರನ್ನುಬೆಚ್ಚಿ ಬೀಳಿಸಿದೆ. ಹೀಗೆ ಮುಂದುವರಿದರೆ ಮುಂದೊಂದು ದಿನ ಪಾರಂಪರಿಕ ನಗರ ಎಂಬ ಬಿರುದೂ ಮಣ್ಣುಪಾಲಾಗಲಿದೆ ಎಂದು ನಾಗರಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.


ನ. 3ರವರೆಗೂ ಮಳೆ ಬಿಡಲ್ಲ

ಮೈಸೂರು ನಗರ ಸೇರಿದಂತೆ ಜಿಲ್ಲಾದ್ಯಂತ ಅ.26ರವರೆಗೆ ಮೋಡ ಕವಿದ ವಾತಾವರಣವಿದ್ದು, ತುಂತುರುವಿನಿಂದ ಕೂಡಿದ ಸಾಧಾರಣ ಮಳೆ ಬರುವ ಸಾಧ್ಯತೆ ಇದೆ ಎಂದು ಹವಾವಾನ ಇಲಾಖೆ ಮುನ್ಸೂಚನೆ ನೀಡಿದೆ. ಜತೆಗೆ ದೀರ್ಘಾವಧಿ ಹವಾವಾನ ಮುನ್ಸೂಚನೆಯ ಪ್ರಕಾರ ಅ.28ರಿಂದ ನ.3ರವರೆಗೆ ಸರಾಸರಿ ಮಳೆಯಾಗುವ ಸಂಭವವಿದೆ ಎಂದು ಭಾರತೀಯ ಹವಾವಾನ ಇಲಾಖೆ ಮುನ್ಸೂಚನೆ ನೀಡಿದೆ ಎಂದು ನಾಗನಹಳ್ಳಿ ಗ್ರಾಮೀಣ ಕೃಷಿ ಹವಾಮಾನ ಸೇವಾ ವಿಭಾಗದ ಹಿರಿಯ ಕ್ಷೇತ್ರ ಅಧೀಕ್ಷಕ ಡಾ.ಪಿ.ಪ್ರಕಾಶ್ ತಿಳಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!