ಹನೂರು: ತಾಲೂಕಿನ ದೊಡ್ಡಿಂದವಾಡಿ ಗ್ರಾಮದ ಮಠದ ಬಳಿಯ ಹಾಲ್ಕೆರೆ ಕೋಡಿ ಬಿದ್ದು ಅಂಗನವಾಡಿ ಎರಡನೇ ಕೇಂದ್ರಕ್ಕೆ ನೀರು ನುಗ್ಗಿದ ಪರಿಣಾಮ ಅಂಗನವಾಡಿಯಲ್ಲಿದ್ದ ಆಹಾರ ಪದಾರ್ಥಗಳು ನೀರು ಪಾಲಾಗಿದೆ.
ಅಂಗನವಾಡಿ ಕಾರ್ಯಕರ್ತರು ಹಾಗೂ ಸಿಬ್ಬಂದಿಯವರು ಅಂಗನವಾಡಿ ಒಳಗೆ ತುಂಬಿದ ನೀರನ್ನು ತೆರವುಗೊಳಿಸುತ್ತಿದ್ದಾರೆ.

ಕೋಡಿ ಬಿದ್ದ ನೀರಿನಲ್ಲಿ ಮೀನು ಹಿಡಿಯುತ್ತಿರುವ ಮಕ್ಕಳು: ಭಾರಿ ಮಳೆಯಾದ ಪರಿಣಾಮ ಅಪರೂಪಕ್ಕೆ ಒಮ್ಮೆಯಂತೆ ಹಾಲ್ಕೆರೆ ಕೋಡಿ ಬಿದ್ದ ನೀರಿನಲ್ಲಿ ಬರುತ್ತಿರುವ ಮೀನುಗಳನ್ನು ಮಕ್ಕಳು ಹಿಡಿಯುವಲ್ಲಿ ಉತ್ಸುಕರಾಗಿರುವುದು ಕಂಡು ಬಂದಿತು. ನೀರಿನ ಮೂಲಕ ಹಾವುಗಳ ಕೂಡ ಪ್ರತ್ಯಕ್ಷವಾಗಿರುವುದು ಕಂಡು ಬಂದಿದೆ.
ಗ್ರಾ.ಪಂ. ತುರ್ತು ಕಾರ್ಯ: ಕೆರೆ ನೀರು ಕೋಡಿ ಬಿದ್ದ ಹಿನ್ನೆಲೆಯಲ್ಲಿ ನೀರು ಗ್ರಾಮದ ಒಳಗಡೆ ಹೋಗುತ್ತಿರುವುದನ್ನು ಮನಗಂಡು ಗ್ರಾಮ ಪಂಚಾಯಿತಿ ವತಿಯಿಂದ ಕೆರೆಯ ನೀರಿನ ಮೂಲವಾದ ತಾತ್ಕಾಲಿಕವಾಗಿ ಕಾಲುವೆಯನ್ನು ಮುಚ್ಚಿಸುವ ಮೂಲಕ ಕೋಡಿ ಬಿದ್ದ ನೀರಿನಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮವಹಿಸಲಾಗಿದೆ.
40 ವರ್ಷಗಳ ಬಳಿಕ ಕೋಡಿ ಬಿದ್ದ ಕೆರೆ: ಶಾಸಕ ಆರ್. ನರೇಂದ್ರ ಅವರ ಸ್ವಗ್ರಾಮದ ಕೆರೆ ಕಳೆದ 40 ವರ್ಷಗಳಿಂದ ತುಂಬಿ ಕೋಡಿ ಬಿದ್ದಿರಲಿಲ್ಲ ಎಂದು ಸ್ಥಳೀಯರು ಮಾಹಿತಿ ನೀಡಿ ಕೆರೆ ತುಂಬಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.





